ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

ಲಕ್ಕಂದಿನ್ನಿಯ ಅಂಬೇಡ್ಕರ್ ನಗರ: ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ
Last Updated 20 ಮಾರ್ಚ್ 2018, 11:28 IST
ಅಕ್ಷರ ಗಾತ್ರ

ಸಿರವಾರ: ಸಮೀಪದ ಲಕ್ಕಂದಿನ್ನಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರದ ಜೊತೆಗೆ ಮೂಲ ಸೌಕರ್ಯಗಳ ತೊಂದರೆ ಅನುಭವಿಸುವಂತಾಗಿದೆ.

ಚಾಗಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಂದಿನ್ನಿ ಗ್ರಾಮವು ಸಾವಿರ ಜನಸಂಖ್ಯೆ ಹೊಂದಿದ್ದು, ಗ್ರಾಮದಲ್ಲಿ ಮೂವರು ಪಂಚಾಯಿತಿ ಸದಸ್ಯರನ್ನು ಇದ್ದಾರೆ.

‘ಕುಡಿಯುವ ನೀರಿಗಾಗಿ ಸಿರವಾರ ಪಟ್ಟಣದಿಂದ ಪೈಪ್‌ಲೈನ್ ವ್ಯವಸ್ಥೆ ಇದೆ. ಅಂಬೇಡ್ಕರ್ ನಗರ ಮತ್ತು ಜನತಾ ಕಾಲೊನಿಯ 100ಕ್ಕೂ ಹೆಚ್ಚು ಮನೆಗಳಿಗೆ 50 ಸಾವಿರ ಲೀಟರ್ ಒಂದು ನೀರಿನ ಸಂಗ್ರಹ ತೊಟ್ಟಿ ಇದೆ. ಇದನ್ನು ತುಂಬಿಸಲು 6ರಿಂದ 8 ಗಂಟೆ ಸಮಯ ಬೇಕು. ಕೆಲ ಮನೆಗಳಿಗೆ ಸ್ವಂತ ನಲ್ಲಿಗಳು ಇದ್ದರೆ, ಉಳಿದವರು ಸಾರ್ವಜನಿಕ ನಲ್ಲಿಗಳಿಂದ ನೀರು ಪಡೆಯಬೇಕು. ಸಂಗ್ರಹಿಸಿದ ನೀರನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ನೀರನ್ನು ಸರಬರಾಜು ಮಾಡುತ್ತಿದ್ದು, ಕೇವಲ ಒಂದು ಗಂಟೆಯಲ್ಲಿ ನೀರು ಖಾಲಿಯಾಗುತ್ತದೆ. ಇದರಿಂದ ಬಹಳಷ್ಟು ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುವಂತಾಗಿದೆ’ ಎಂದು ನಿವಾಸಿಗಳು ತಿಳಿಸಿದರು.

‘ತೊಟ್ಟಿಯ ಸುತ್ತಲೂ ನೀರು ಸಂಗ್ರಹವಾಗಿ ಸ್ವಚ್ಛತೆ ಇಲ್ಲದ ಕಾರಣ ರೋಗಾಣುಗಳು ಉತ್ಪತ್ತಿಯಾಗಲು ಕಾರಣವಾಗಿದೆ. ಎರಡು ವರ್ಷಗಳ ಹಿಂದೆ ಅಂಬೇಡ್ಕರ್ ಕಾಲೊನಿಯಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಅದಕ್ಕೆ ಕೊಳವೆ ಬಾವಿಯನ್ನು ಕೊರೆಯಿಸಲಾಗಿತ್ತು. ಕೊಳವೆ ಬಾವಿ ವಿಫಲವಾದ ಕಾರಣ ಅಧಿಕಾರಿಗಳು ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

ಲಕ್ಕಂದಿನ್ನಿ ಗ್ರಾಮದಲ್ಲಿ ಕಳೆದ 2015–16ರಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ವಿದ್ಯುತ್ ತೊಂದರೆಯಿಂದಾಗಿ ಘಟಕವನ್ನು ಸ್ಥಳಾಂತರಿಸಬೇಕು ಎಂದು ಬೇರೆ ಕಡೆ ಕೇವಲ ಕೊಠಡಿಯನ್ನು ಮಾತ್ರ ನಿರ್ಮಿಸಿ ಯಾವುದೇ ಉಪಕರಣಗಳನ್ನು ಕೂರಿಸದೆ ಶುದ್ದೀಕರಿಸಿದ ನೀರು ಮರೀಚಿಕೆಯಾಗಿದೆ.

500ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಕೆಲವರು ಮಾತ್ರ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದು, ಉಳಿದವರಿಗೆ ಸರಿಯಾಗಿ ಸಹಾಯಧನದ ಹಣ ಮಂಜೂರಿಯಾಗದ ಕಾರಣ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನುಳಿದವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿಲ್ಲ.

‘ಗ್ರಾಮದಲ್ಲಿ ಕೆಲವೆಡೆ ಕೇವಲ ಕಾಂಕ್ರೀಟ್ ರಸ್ತೆ ನಿರ್ಮಿಸಿ, ಚರಂಡಿ ನಿರ್ಮಾಣ ಮಾಡದಿರುವುದರಿಂದ ಮನೆಯ ಸುತ್ತಲೂ ಚರಂಡಿ ನೀರು ನಿಲ್ಲುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಜೀವಿಸುವಂತಾಗಿದೆ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
**
ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕುಡಿಯುವ ನೀರಿನ ಪೂರೈಕೆಗೆ ಗಮನ ಹರಿಸಿಲ್ಲ. ಇದರಿಂದ ಆರೋಗ್ಯಕ್ಕೆ ಮಾರಕವಾದ ಅಂಶಗಳಿರುವ ನೀರನ್ನೇ ಕುಡಿಯುವುದು ಅನಿವಾರ್ಯವಾಗಿದೆ.
– ಮಾಳಿಂಗರಾಯ ಸಾಹುಕಾರ, ಗ್ರಾಮಸ್ಥ
**

ಅಂಬೇಡ್ಕರ್ ನಗರ ಮತ್ತು ಜನತಾ ಕಾಲೊನಿಗೆ 1.5 ಲಕ್ಷ ಲೀಟರ್ ಕುಡಿಯುವ ನೀರು ಅವಶ್ಯಕತೆ ಇದ್ದು, ಕೇವಲ 50 ಸಾವಿರ ಲೀಟರ್ ನೀರು ಬರುವುದರಿಂದ ನೀರಿನ ಅಭಾವ ಎದುರಿಸುವತಾಂಗಿದೆ.
– ಮೌನೇಶ ಲಕ್ಕಂದಿನ್ನಿ, ಅಂಬೇಡ್ಕರ್ ಕಾಲೊನಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT