ಕಲಾರಾಧಕನ ಕೈಗಳಲ್ಲಿ ಅರಳಿದ ಶಿಲ್ಪ

7
ಹೂವಿನಹಡಗಲಿಯಲ್ಲಿ ಶಿಲ್ಪಕಲಾ ಶಿಬಿರ; ಅಂತಿಮ ಸ್ಪರ್ಶ ನೀಡುತ್ತಿರುವ ಶಿಲ್ಪಿಗಳು

ಕಲಾರಾಧಕನ ಕೈಗಳಲ್ಲಿ ಅರಳಿದ ಶಿಲ್ಪ

Published:
Updated:
Deccan Herald

ಹೂವಿನಹಡಗಲಿ: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್ ಅವರ ಸಮಾಧಿಯ ಅಂಗಳದಲ್ಲಿ ಶಿಲ್ಪಕಲಾ ಜಗತ್ತು ಅರಳಿದೆ. ವಾರದ ಹಿಂದೆ ಅಲ್ಲಿ ಬಿದ್ದಿದ್ದ ಹೆಬ್ಬಂಡೆಗಳು ಇದೀಗ ಶಿಲ್ಪಿಗಳ ಸ್ಪರ್ಶದಿಂದ ಸುಂದರ ಕಲಾಕೃತಿಗಳಾಗಿ ರೂಪುಗೊಂಡಿವೆ.

ಆವರಣ ಪ್ರವೇಶಿಸುತ್ತಿದ್ದಂತೆ ಮಂದಸ್ಮಿತ ಬುದ್ದ, ಹಂಪಿಯ ಪ್ರಮುಖ ಸ್ಮಾರಕಗಳು, ಬಾದಾಮಿಯ ಗುಹಾಂತರ ದೇವಾಲಯಗಳು, ಅಭಿವೃದ್ಧಿಯ ಸಂಕೇತದ ಕಲಾಕೃತಿಗಳು ಸೇರಿದಂತೆ ಹಲವು ಶಿಲ್ಪಗಳು ಕಣ್ಮನ ಸೆಳೆಯುತ್ತಿವೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಸ್ಥಳೀಯ ರಂಗಭಾರತಿ ಸಹಯೋಗದಲ್ಲಿ ಜು. 20ರಿಂದ ಪಟ್ಟಣದಲ್ಲಿ 14 ದಿನಗಳ ರಾಜ್ಯ ಮಟ್ಟದ ಸಮಕಾಲೀನ ಶಿಲಾ ಶಿಲ್ಪಕಲಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿಲ್ಪಿ ಚಂದ್ರಶೇಖರ ನಾಯ್ಕ ನಿರ್ದೇಶನದಲ್ಲಿ ರಾಜ್ಯದ 10 ಜನ ಮುಖ್ಯ ಶಿಲ್ಪಿಗಳು, 10 ಜನ ಸಹಾಯಕ ಶಿಲ್ಪಿಗಳು ಅಹೋರಾತ್ರಿ ಬಿಡುವಿಲ್ಲದೇ ಕಲಾಕೃತಿಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಈಗ ಬರೀ ಉಳಿ, ಸುತ್ತಿಗೆ, ಚಾಣಗಳ ಸದ್ದು ಕಿವಿಗೆ ಕೇಳಿಸುತ್ತಿದೆ.
ಹೂವಿನಹಡಗಲಿ ಕ್ಷೇತ್ರವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಎಂ.ಪಿ.ಪ್ರಕಾಶ್ ಅವರು ಬರೀ ರಾಜಕಾರಣಿ ಮಾತ್ರ ಆಗಿರಲಿಲ್ಲ. ಶ್ರೇಷ್ಠ ಕಲಾರಾಧಕರೂ ಆಗಿದ್ದರು. ಸಾಹಿತ್ಯ, ಸಂಗೀತ, ಕಲೆ, ರಂಗಭೂಮಿಯ ಬಗ್ಗೆ ಅಸಾಧಾರಣ ಒಲವು ಹೊಂದಿದ್ದರು.

ಪ್ರಕಾಶ್ ಅವರು ಕಾಲವಾದ ಬಳಿಕವೂ ಕುಟುಂಬ ವರ್ಗದವರು ಅವರ ಕಲಾಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಲೇ ಬಂದಿದ್ದಾರೆ. ಈ ಶಿಲ್ಪಕಲಾ ಶಿಬಿರದಲ್ಲಿ ಪ್ರಕಾಶ್‌ ಅವರ ಆಸಕ್ತಿದಾಯಕ ವಿಷಯಗಳನ್ನೇ ಕೇಂದ್ರೀಕರಿಸಿ ಕಲಾಕೃತಿಗಳ ಕೆತ್ತನೆಗೆ ಆದ್ಯತೆ ನೀಡಿರುವುದು ವಿಶೇಷ.ರಾಮನಗರದ ಶಿಲ್ಪಿ ಶಿವಪ್ರಸಾದ್ ಅವರು ಬುದ್ದ ಮತ್ತು ಅಶೋಕ ಸ್ತಂಭದ ಕಲಾಕೃತಿಯನ್ನು ವಿಶಿಷ್ಟವಾಗಿ ಕೆತ್ತಿದ್ದಾರೆ. ಮಂಡ್ಯದ ಸಂದೀಪ, ದಾವಣಗೆರೆಯ ಪ್ರಕಾಶ್ ಆಚಾರ್ಯ ಅವರು ಹಂಪಿಯ ಸ್ಮಾರಕಗಳನ್ನು ಏಕಶಿಲೆಯಲ್ಲೇ ಅದ್ಭುತವಾಗಿ ಕೆತ್ತಿದ್ದಾರೆ. ವಿಜಯಪುರದ ಡಾ.ಮಹಾಂತೇಶ ಎಂ.ಪಲದಿನ್ನಿ, ವೆಂಕಪ್ಪ ಆರ್.ಕೋಳಿ ಅವರ ಕೈ ಚಳಕದಲ್ಲಿ ಮೂಡಿರುವ ಚಾಲುಕ್ಯರ ಕಾಲದ ಗುಹಾಂತರ ದೇವಾಲಯ, ಬಾದಾಮಿ–ಐಹೊಳೆಯ ಸ್ಮಾರಕಗಳು, ಮಾಲಗಿತ್ತಿ ಶಿವಾಲಯದ ಕಲಾಕೃತಿ ಆಕರ್ಷಣೀಯವಾಗಿದೆ.

ಮೈಸೂರಿನ ಶಿಲ್ಪಿ ಮಹಾದೇವ ಅವರ ಹಂಪಿ ಕಲ್ಲಿನ ರಥ, ಬಳ್ಳಾರಿಯ ಮೌನೇಶ್ ಆಚಾರ್ಯರ ಅಭಿವೃದ್ಧಿಯ ಸಂಕೇತದ ಆಮೆ, ಭೂಮಿ, ಪುಸ್ತಕದ ಶಿಲ್ಪ, ಮೈಸೂರಿನ ಟಿ.ಆರ್.ಪುನೀತ್, ರಾಮಮೂರ್ತಿ ಆಫ್ಘಾನಿಸ್ತಾನದ ಬಾಮಿಯಾನ ಬುದ್ದ ವಿಗ್ರಹ, ಮೈಸೂರಿನ ದೀಪಕ್, ಹಡಗಲಿಯ ಗಿರೀಶ್ ಬಡಿಗೇರ್ ಅವರು ಸಿಂಹ, ಆನೆ, ನವಿಲು, ಮೀನು, ಗರುಡ ಒಳಗೊಂಡ ಕಲಾಕೃತಿ, ಚಿಕ್ಕಮಗಳೂರಿನ ಪ್ರಸನ್ನಕುಮಾರ್, ಹಡಗಲಿಯ ದೇವೇಂದ್ರ ಕಮ್ಮಾರ್ ಶಿಕ್ಷಣದ ಬೆಳವಣಿಗೆಯ ಸಂಕೇತವನ್ನು ತೋರಿಸುವ ಎಲೆಯ ಕಲಾಕೃತಿ ಗಮನ ಸೆಳೆಯುತ್ತಿವೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !