ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕಳಿಪುರದ 3 ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

Last Updated 1 ಮಾರ್ಚ್ 2018, 19:29 IST
ಅಕ್ಷರ ಗಾತ್ರ

ಬೆಂಗಳೂರು: ಓಕಳಿಪುರ ಜಂಕ್ಷನ್‌ನಿಂದ ಫೌಂಟೇನ್‌ ವೃತ್ತದವರೆಗಿನ ಅಷ್ಟಪಥ ಕಾರಿಡಾರ್‌ನ ಮೊದಲ ಹಂತದಲ್ಲಿ ಪೂರ್ಣಗೊಂಡಿರುವ ಮೇಲ್ಸೇತುವೆ ಮತ್ತು ರೈಲ್ವೆ ಕೆಳ ಸೇತುವೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.

ಮೇಲ್ಸೇತುವೆಗಳಲ್ಲಿ ಮಧ್ಯಾಹ್ನದಿಂದಲೇ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ಆರಂಭವಾಯಿತು. ಇದರಿಂದ ಶೇ 60ರಷ್ಟು ವಾಹನ ದಟ್ಟಣೆ ತಗ್ಗಿದೆ. ಕೆಳ ಸೇತುವೆಗಳಲ್ಲಿ ನೀರು ಹರಿದು ಹೋಗುವ ಜಾಗದಲ್ಲಿ ಅಳವಡಿಸಿರುವ ಗ್ರೇಟರ್‌ಗಳ ಸಿಮೆಂಟ್‌ ಕಾಂಕ್ರೀಟ್‌ ಕ್ಯೂರಿಂಗ್‌ ಆಗಬೇಕಿದೆ. ಹಾಗಾಗಿ 2–3 ದಿನ ಬಿಟ್ಟು ಕೆಳ ಸೇತುವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಸೇವೆಗೆ ಮುಕ್ತಗೊಂಡ ರಸ್ತೆಗಳು

* ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರದ ಕಡೆಗೆ ಸಂಚರಿಸುವ ವಾಹನಗಳಿಗೆ 430 ಮೀಟರ್‌ ಉದ್ದದ ಮೇಲ್ಸೇತುವೆ (ಲೂಪ್‌)

* ರೈಲ್ವೆ ನಿಲ್ದಾಣದಿಂದ ರಾಜಾಜಿನಗರದ ಕಡೆಗೆ ಕೆಳಸೇತುವೆ ಮೂಲಕ ಹೋಗುವ ಎರಡು ಪಥದ 180 ಮೀಟರ ಉದ್ದ ಏಕಮುಖ ರಸ್ತೆ

* ಮಲ್ಲೇಶ್ವರ ಕಡೆಯಿಂದ ರಾಜಾಜಿನಗರದ ಕಡೆಗೆ ಹೋಗುವ ವಾಹನಗಳಿಗೆ ಎರಡು ಪಥದ ಏಕಮುಖ ಸಂಚಾರದ 272 ಮೀಟರ್‌ ಉದ್ದದ ಕೆಳ ಸೇತುವೆ

*5 ರೈಲ್ವೆ ಕೆಳ ಸೇತುವೆಗಳು

* ಒಂದು ರೈಲ್ವೆ ಕೆಳಸೇತುವೆ ಪಾದಚಾರಿ ಮಾರ್ಗ

ಬಾಕಿ ಇರುವ ಕಾಮಗಾರಿ

* ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ

* ರೈಲ್ವೆ ನಿಲ್ದಾಣದಿಂದ ಮೆಜೆಸ್ಟಿಕ್‌ ಕಡೆಗೆ ಹೋಗುವ ಮೇಲ್ಸೇತುವೆ

* ರಾಜಾಜಿನಗರದ ಕಡೆಯಿಂದ ರೈಲ್ವೆ ನಿಲ್ದಾಣದ ಒಳಭಾಗಕ್ಕೆ ಹೋಗುವ ಮೇಲ್ಸೇತುವೆ

* 3 ರೈಲ್ವೆ ಕೆಳ ಸೇತುವೆಗಳು

* ಪಾದಚಾರಿಗಳಿಗೆ ಒಂದು ರೈಲ್ವೆ ಕೆಳಸೇತುವೆ ಮಾರ್ಗ

–––––––––––––––––

ಷಟ್ಪಥಗಳ ರಸ್ತೆ ಕಾರಿಡಾರ್‌ ಯೋಜನೆ ವಿವರ

ಒಟ್ಟು ಯೋಜನಾ ವೆಚ್ಚ: ₹353.21 ಕೋಟಿ

ಗುತ್ತಿಗೆ ಮೊತ್ತ: ₹102.83 ಕೋಟಿ

ಜಲಮಂಡಳಿ, ಬೆಸ್ಕಾಂ ಲೈನ್‌ ಸ್ಥಳಾಂತರ ವೆಚ್ಚ: ₹4.58 ಕೋಟಿ

ಆರ್‌ಯುಬಿ ನಿರ್ಮಾಣಕ್ಕೆ ರೈಲ್ವೆಗೆ ಠೇವಣಿ: ₹87.67 ಕೋಟಿ

ಎಸ್‌.ವಿ.ಗ್ಲೋಬಲ್‌ ಆಯಿಲ್‌ ಮಿಲ್‌ನಿಂದ ಪಡೆದ 3.16 ಎಕರೆಗೆ ಭೂಸ್ವಾಧೀನ ವೆಚ್ಚ: ₹158.20 ಕೋಟಿ

ಕಾಮಗಾರಿ ಪ್ರಾರಂಭಿಸಿದ ದಿನ: 2015ರ ಜುಲೈ 15

ಕಾಮಗಾರಿ ಅವಧಿ: 18 ತಿಂಗಳು

ಖಾಸಗಿ ಭೂಸ್ವಾಧೀನ ವಿಸ್ತೀರ್ಣ: 384.416 ಚದರ ಮೀಟರ್‌

ವಾಹನ ದಟ್ಟಣೆ ಪರಿಹಾರ: ಶೇ 75

ಸಮಯ ಉಳಿತಾಯ: ವಾಹನ ದಟ್ಟಣೆ ಅವಧಿಯಲ್ಲಿ 30 ನಿಮಿಷ

--------------

ಸ್ವಾತಂತ್ರ್ಯ ಉದ್ಯಾನದಲ್ಲಿನ ಬಹುಹಂತದ ವಾಹನ ನಿಲುಗಡೆ ಸಂಕೀರ್ಣ

ಗುತ್ತಿಗೆ ಮೊತ್ತ: ₹79.81 ಕೋಟಿ

ಯೋಜನೆಗೆ ಅನುಮೋದನೆ: 2014

ಕಾಮಗಾರಿ ಅವಧಿ: 24 ತಿಂಗಳು

ಪಾರ್ಕಿಂಗ್‌ ಸಾಮರ್ಥ್ಯ: 580 ಕಾರುಗಳು ಮತ್ತು 500 ಬೈಕ್‌ (ಶೇ 30ರಷ್ಟು ಮಹಿಳೆಯರಿಗೆ ಮೀಸಲು)

ಸದ್ಯದ ಸೌಲಭ್ಯ: 36 ಕಾರು ಮತ್ತು 40 ಬೈಕ್‌ ನಿಲುಗಡೆ

ಬಾಕಿ ಕಾಮಗಾರಿ ಡಿಸೆಂಬರ್‌ಗೆ ಪೂರ್ಣ

ಇದುವರೆಗೆ ಶೇ 65ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ (ಯೋಜನೆ) ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ತಿಳಿಸಿದರು.

‘3 ಎಕರೆ 16 ಗುಂಟೆ ಭೂಮಿಯನ್ನು ರೈಲ್ವೆ ಇಲಾಖೆ 2016ರ ಜುಲೈನಲ್ಲಿ ಮತ್ತು ಇನ್ನೊಂದು ಎಕರೆ ಭೂಮಿಯನ್ನು ಇತ್ತೀಚೆಗಷ್ಟೆ ಹಸ್ತಾಂತರಿಸಿದೆ. ಅಗತ್ಯ ಭೂಮಿಯನ್ನು ರೈಲ್ವೆ ಇಲಾಖೆ ಹಸ್ತಾಂತರಿಸುವುದು ವಿಳಂಬವಾಗಿದ್ದರಿಂದ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ರೈಲ್ವೆ ಇಲಾಖೆಯ ಸಮನ್ವಯದಲ್ಲಿ ಕಾಮಗಾರಿ ನಡೆಸಬೇಕಿದೆ’ ಎಂದರು.

ಚರ್ಚ್‌ಸ್ಟ್ರೀಟ್‌ ರಸ್ತೆ ಸಂಚಾರಕ್ಕೆ ಮುಕ್ತ

₹14 ಕೋಟಿ ವೆಚ್ಚದಲ್ಲಿ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವ ಚರ್ಚ್‌ ಸ್ಟ್ರೀಟ್‌ ಅನ್ನು ಸಿದ್ದರಾಮಯ್ಯ ಗುರುವಾರ ಸಂಚಾರಕ್ಕೆ ಮುಕ್ತಗೊಳಿಸಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್‌ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಚರ್ಚ್‌ ಸ್ಟ್ರೀಟ್‌ ತುದಿಯಿಂದ ಅಡಿಗಾಸ್‌ ಹೋಟೆಲ್‌ ವೃತ್ತದವರೆಗೆ ವಾಯುವಜ್ರ ಬಸ್‌ನಲ್ಲಿ ಪ್ರಯಾಣ ಮಾಡಿದರು. ಚರ್ಚ್‌ ಸ್ಟ್ರೀಟ್‌ನಲ್ಲಿ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದ ವೇದಿಕೆಗೆ ಹೋಗದ ಅವರು, ಪಾವಗಡದಲ್ಲಿ ಸೋಲಾರ್‌ ಪಾರ್ಕ್‌ ಉದ್ಘಾಟನೆಗೆ ಡಿ.ಕೆ.ಶಿವಕುಮಾರ್‌ ಜತೆಗೆ ತೆರಳಿದರು.

ಚರ್ಚ್‌ಸ್ಟ್ರೀಟ್‌ ಮತ್ತು ಅನಿಲ್‌ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ ಅಭಿವೃದ್ಧಿಪಡಿಸಿರುವ ಪಾದಚಾರಿ ಮಾರ್ಗವನ್ನು ಜಾರ್ಜ್‌ ಉದ್ಘಾಟಿಸಿದರು.

ಬೆಂಗಳೂರು ಟೈಮ್ಸ್‌ ಸ್ಕ್ವೇರ್‌

ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ ಮಾದರಿಯಲ್ಲೇ ಬ್ರಿಗೇಡ್‌ ರಸ್ತೆ ಪ್ರವೇಶ ದ್ವಾರದಲ್ಲಿ ‘ಬೆಂಗಳೂರು ಟೈಮ್ಸ್‌ ಸ್ಕ್ವೇರ್‌’ ನಿರ್ಮಿಸಲು ನಿರ್ಧರಿಸಲಾಗಿದೆ. ವಿನ್ಯಾಸ ಮತ್ತು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಜನಾಗ್ರಹ ಸಂಸ್ಥೆಯ ಸ್ವಾತಿ ರಾಮನಾಥನ್‌ ರೂಪಿಸಲಿದ್ದಾರೆ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

‘ಚರ್ಚ್‌ ಸ್ಟ್ರೀಟ್‌ ಅನ್ನು ‘ವಾಕಿಂಗ್‌ ಸ್ಟ್ರೀಟ್‌’ಗೆ ಮೀಸಲಿಡುವಂತೆ ಸಾರ್ವಜನಿರು ಸಾಕಷ್ಟು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಚಿವ ಕೆ.ಜೆ.ಜಾರ್ಜ್‌ ಚರ್ಚಿಸಿ ತೀರ್ಮಾನಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT