ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಜಿದ್ದಾಜಿದ್ದಿ ಚುನಾವಣೆಗೆ ಸೀಮಿತ

ನಗರಸಭೆ ಸದಸ್ಯರ ಸಭೆಯಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ
Last Updated 13 ಜೂನ್ 2018, 11:30 IST
ಅಕ್ಷರ ಗಾತ್ರ

ಕೋಲಾರ: ‘ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಇರಬಾರದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ನಗರಸಭೆಗೆ ಮಂಗಳವಾರ ಭೇಟಿ ನೀಡಿ ಸದಸ್ಯರ ಸಭೆ ನಡೆಸಿದ ಅವರು, ‘ಶಾಸಕನಾಗಿ ಆಯ್ಕೆಯಾದ ನಂತರ ನಗರಸಭೆಗೆ ಭೇಟಿ ಕೊಡಬೇಕೆಂಬ ಉದ್ದೇಶವಿತ್ತು. ಆದರೆ, ನಗರಸಭೆಯ ಸಾಮಾನ್ಯ ಸಭೆ ಯಾವಾಗ ಇದೆ ಎಂಬುದು ಗೊತ್ತಿಲ್ಲ. ನಗರದ ಸಮಸ್ಯೆ ತಿಳಿಯುವ ಉದ್ದೇಶದಿಂದ ಸದಸ್ಯರ ಸಭೆಗೆ ಬಂದಿದ್ದೇನೆ’ ಎಂದರು.

‘ಕ್ಷೇತ್ರ ಹಾಗೂ ನಗರದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದೇ ದಾರಿಯಲ್ಲಿ ಸಾಗೋಣ. ಮುಂದಿನ 6 ತಿಂಗಳೊಳಗೆ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡೋಣ. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಶೀಘ್ರವೇ ದುರಸ್ತಿ ಕಾರ್ಯ ಆಗಬೇಕು. ಇದಕ್ಕೆ ಸದಸ್ಯರ ಸಹಕಾರ ಅಗತ್ಯ’ ಎಂದು ತಿಳಿಸಿದರು.

ವರ್ತುಲ ರಸ್ತೆ: ‘ನಗರದ ಸುತ್ತ ವರ್ತುಲ ರಸ್ತೆ ನಿರ್ಮಾಣವಾದರೆ ನಗರದೊಳಗೆ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ವರ್ತುಲ ರಸ್ತೆ ಸಂಬಂಧ 10 ವರ್ಷಗಳ ಹಿಂದೆ ನಾನೇ ಯೋಜನೆ ರೂಪಿಸಿದ್ದೆ. ಆದರೆ, ನನ್ನ ನಂತರ ಶಾಸಕರಾದವರು ಅದಕ್ಕೆ ಆದ್ಯತೆ ನೀಡಲಿಲ್ಲ. ವರ್ತುಲ ರಸ್ತೆ ನಿರ್ಮಾಣದ ಕನಸ್ಸನ್ನು ಸಾಕಾರಗೊಳಿಸುತ್ತೇನೆ. ನಗರದ ಸುತ್ತಮುತ್ತಲಿನ ರೈತರು ವರ್ತುಲ ರಸ್ತೆಗೆ ಜಮೀನು ಬಿಟ್ಟುಕೊಟ್ಟು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ನಗರವಾಸಿಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಈ ಹಿಂದೆ ನಗರದ ಒಳಚರಂಡಿ ಸೌಲಭ್ಯಕ್ಕಾಗಿ ವಿಧಾನಸೌಧದಲ್ಲಿ ಒಂಟಿ ಕಾಲಲ್ಲಿ ನಿಂತು ಧರಣಿ ಮಾಡಿ ಅನುದಾನ ಮಂಜೂರು ಮಾಡಿಸಿದ್ದೆ. ಆದರೆ, ಇಂದಿಗೂ ಎಲ್ಲಾ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣವಾಗದಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ಸಹಕಾರ ಅಗತ್ಯ: ‘ನಗರಸಭೆಯ ಪ್ರಭಾರ ಆಯುಕ್ತ ಶ್ರೀನಾಥ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಮಾದರಿ ನಗರ ನಿರ್ಮಾಣಕ್ಕೆ ಸದಸ್ಯರು, ಅಧಿಕಾರಿಗಳು ಹಾಗೂ ಜನರ ಸಹಕಾರ ಅಗತ್ಯ’ ಎಂದರು.

‘ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಆದ ಕಾರಣ ಕುಡಿಯುವ ನೀರಿನ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೆ.ಸಿ ವ್ಯಾಲಿ ಯೋಜನೆ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಬೇಕು. ನಗರದಲ್ಲಿ ಬಡವರಿಗೆ ನಿವೇಶನ ಒದಗಿಸಬೇಕು’ ಎಂದು ಸದಸ್ಯ ನಾರಾಯಣಸ್ವಾಮಿ ಕೋರಿದರು.

‘ಹಳೆ ಬಸ್ ನಿಲ್ದಾಣದ ಬಳಿ ವಾಣಿಜ್ಯ ಸಮುಚ್ಚಯ ನಿರ್ಮಿಸಬೇಕು. ನಗರಸಭೆಗೆ 450 ಪೌರ ಕಾರ್ಮಿಕರ ಅಗತ್ಯವಿದ್ದು, ಸದ್ಯ 250 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಕಸದ ಸಮಸ್ಯೆ ಉಲ್ಬಣಿಸಿದೆ. ಆದ ಕಾರಣ ಹೆಚ್ಚಿನ ಪೌರ ಕಾರ್ಮಿಕರ ನೇಮಕಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಸದಸ್ಯ ಅಫ್ರೋಜ್‌ ಪಾಷಾ ಹೇಳಿದರು.

ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಅವರು ಶಾಸಕರನ್ನು ಸನ್ಮಾನಿಸಿದರು. ಸದಸ್ಯರಾದ ಪ್ರಸಾದ್‌ಬಾಬು, ಸಲಾವುದ್ದೀನ್ ಬಾಬು, ನಾರಾಯಣಮ್ಮ, ಮೋಹನ್‌ಬಾಬು, ಆಯುಕ್ತ ಶ್ರೀನಾಥ್‌, ವ್ಯವಸ್ಥಾಪಕ ತ್ಯಾಗರಾಜ್ ಹಾಜರಿದ್ದರು.

ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಕಾಯಂ ಆಯುಕ್ತರು ಇಲ್ಲವೆಂದರೆ ನಾಚಿಕೆಯಾ<br/>ಗುತ್ತದೆ. ಜನಪ್ರತಿನಿಧಿಗಳು ಪರಿಸ್ಥಿತಿ<br/>ಯನ್ನು ಸರಿಯಾಗಿ ನಿಭಾಯಿಸಬೇಕು 
–ಕೆ.ಶ್ರೀನಿವಾಸಗೌಡ, ಶಾಸಕ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT