ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಗ್ಯಾಲರಿ: ನೋಡೋದಷ್ಟೇ ಅಲ್ಲ... ಓದಿ ಈ ಚಿತ್ರ!

Last Updated 9 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಯಾವುದೋ ಕೆಲಸಕ್ಕೆಂದು ದೆಹಲಿಗೆ ಬಂದಿದ್ದೆ. ವಧೇರಾ ಚಿತ್ರಕಲಾ ಗ್ಯಾಲರಿಯಲ್ಲಿ ಕಲಾವಿದ ಹರ್ಷ ಅವರ ಕಲಾಕೃತಿಗಳ ಪ್ರದರ್ಶನವಿತ್ತು, ನೋಡಿದೆ. ಹಾಗೆ ನೋಡಿದರೆ, ಅಲ್ಲಿ ಪ್ರದರ್ಶಿತವಾಗಿದ್ದ ಕೆಲವು ಕೃತಿಗಳನ್ನು ಅವುಗಳ ರಚನೆಯ ಸಂದರ್ಭದಲ್ಲಿಯೇ ಮೈಸೂರಿನ ಅವರ ಸ್ಟುಡಿಯೊದಲ್ಲಿ ನೋಡಿದ್ದೆ. ಆದರೆ ಗ್ಯಾಲರಿಯಲ್ಲಿ ನಿಂತು, ಕುಳಿತು, ನಿರಾಳವಾಗಿ, ಕೃತಿಗಳನ್ನು ನೋಡುವ ಅನುಭವವೇ ಬೇರೆ.

ಇತ್ತೀಚಿನ ದಶಕಗಳಲ್ಲಿ ಹರ್ಷ ತಮ್ಮ ಖ್ಯಾತಿಯನ್ನು ಕರ್ನಾಟಕದಾಚೆಗೂ ವಿಸ್ತರಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಅವರು ಹೆಸರು ಮಾಡಿದ್ದಾರೆ. ಅವರ ಕೃತಿಗಳಿಗೆ ಅಪಾರ ಬೇಡಿಕೆಯೂ ಬಂದಿದೆ. ಆದರೆ ಹರ್ಷ ಅವರ ಕೃತಿಗಳ ಬಗ್ಗೆ ಬರೆಯಲಿಕ್ಕೆ ಈಗ ನನಗಿರುವ ಒತ್ತಾಸೆ ಅವರು ಗಳಿಸುತ್ತಿರುವ ಹೆಸರನದ್ದೂ ಅಲ್ಲ ಅಥವಾ ಹಣದ್ದೂ ಅಲ್ಲ, ಅವರು ತಳೆದಿರುವ ಆರೋಗ್ಯಕರ ನಿಲುವಿನದ್ದು.

ಆಧುನಿಕ ಕಲೆ ತೀವ್ರ ಬಿಕ್ಕಟ್ಟಿನಲ್ಲಿದೆ. ತನ್ನ ಹಾದಿಯ ಡೆಡ್‌ಎಂಡ್ ತಲುಪಿದೆ. ಹಿಂದಕ್ಕೂ ತಿರುಗಲಾಗದೆ ಮುಂದಕ್ಕೂ ಹೋಗಲಾಗದೆ ವ್ಯಗ್ರವಾಗತೊಡಗಿದೆ. ವ್ಯಗ್ರತೆ, ಖಿನ್ನತೆ ಹಾಗೂ ಒಂಟಿತನ ಅದರ ಸ್ಥಾಯೀಭಾವವೇನೋ ಎಂದೆನ್ನಿಸತೊಡಗಿದೆ. ಹಾಗಂತ, ಎಲ್ಲ ಕಲಾವಿದರು ಕೈ ಕಟ್ಟಿಕೊಂಡು ಕುಳಿತಿದ್ದಾರೆಂದು ನನ್ನ ಮಾತಿನ ಅರ್ಥವಲ್ಲ ಅಥವಾ ಮಾರುಕಟ್ಟೆಯ ತೇಜಿಯಿಂದ ಉಬ್ಬಿ ಸುಮ್ಮನಿದ್ದಾರೆ ಎಂದು ಕೂಡ ನನ್ನ ಅರ್ಥವಲ್ಲ. ಹಾಲಿ ಬಿಕ್ಕಟ್ಟನ್ನು ಮೀರುವ ಹಲವು ಧೀರೋದ್ಧಾತ ಪ್ರಯತ್ನಗಳು ಚಿತ್ರಕಲೆಯಲ್ಲಿ ನಡೆದಿವೆ. ಮಾತ್ರವಲ್ಲ, ಅಂತಹ ಪ್ರಯತ್ನದಿಂದಾಗಿ ಭಾರತೀಯ ಚಿತ್ರಕಲೆಯು, ಕೌಶಲ ಹಾಗೂ ವಸ್ತುಸಂಯೋಜನಾ ಚಾತುರ‍್ಯದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಕಂಡಿದೆ. ಇತರೆ ಹಿರಿಯರಂತೆ ಹರ್ಷ ಅವರೂ ಡೆಡ್‌ಎಂಡ್ ತೆರವುಗೊಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರಾಯಶಃ, ಇತರೆಲ್ಲರಿಗಿಂತ ಸರಳವಾಗಿ, ಸಹಜವಾಗಿ, ಆದರೆ ಅಷ್ಟೇ ಪರಿಣಾಮಕಾರಿಯಾಗಿ, ಬಿಕ್ಕಟ್ಟನ್ನು ನಿರ್ವಹಿಸಿದ್ದಾರೆ ಎಂದು ನನಗನ್ನಿಸುತ್ತದೆ. ವಿವರಿಸುತ್ತೇನೆ.

ಆಧುನಿಕ ಕಲೆಯು ಪಾರಂಪರಿಕ ಕಲೆಗಳಿಗಿಂತ ಹಲವು ರೀತಿಯಲ್ಲಿ ಭಿನ್ನವಾಗಿದೆ, ಹಲವು ಸಂಗತಿಗಳನ್ನು ಅದು ತಿರಸ್ಕರಿಸಿದೆ. ಹಾಗೆ ತಿರಸ್ಕರಿಸಲಾದ ಕೆಲವು ಸಂಗತಿಗಳು ತಿರಸ್ಕಾರಕ್ಕೆ ಯೋಗ್ಯವಾದದ್ದೇ ಆದರೂ ಅದು ತಿರಸ್ಕರಿಸಿದ ಕಥನ ಕೌಶಲವು, ನನ್ನ ಪ್ರಕಾರ, ತಿರಸ್ಕರಿಸಬಾರದ ಸಂಗತಿಯಾಗಿತ್ತು. ಕ್ರಮೇಣ ಇದು ಕಲಾವಿದರಿಗೆ ಅರಿವಾಯಿತು ಕೂಡ. ಕಳೆದ ಶತಮಾನದಲ್ಲಿ ಹಲವು ಭಾರತೀಯ ಕಲಾವಿದರು – ಈ ಕ್ಷಣದಲ್ಲಿ ನನ್ನ ನೆನಪಿಗೆ ಬರುತ್ತಿರುವರು, ಕೆ.ಜಿ. ಸುಬ್ರಹ್ಮಣ್ಯಂ ಹಾಗೂ ಗುಲಾಮ್ ಶೇಖ್, ಈ ತಪ್ಪನ್ನು ತಿದ್ದುವ ಗಂಭೀರ ಪ್ರಯತ್ನ ಮಾಡಿದರು ಹಾಗೂ ಗಮನಾರ್ಹ ಪ್ರಗತಿ ಸಾಧಿಸಿದರು. ಅವರ ನಂತರದ ಪೀಳಿಗೆಯವರಾದ ಹರ್ಷ ತಮ್ಮ ಕೃತಿಗಳಲ್ಲಿ ಕಥನಕೌಶಲವನ್ನು ಅಳವಡಿಸಿಕೊಂಡಿರುವ ರೀತಿ ಅನನ್ಯವಾದದ್ದು.

ಆಧುನಿಕತೆಯು ಕಥನವನ್ನು ಕೀಳಾಗಿ ಕಂಡಿತು. ಚಿತ್ರಗಳು ಕಥೆಯನ್ನೇಕೆ ಹೇಳಬೇಕು ಎಂಬ, ಕೊಂಚ ಒರಟಾದ ಧೋರಣೆ ತಳೆದಿತ್ತು ಅದು. ಆದರೆ ಕಥನವೆಂದರೆ ಅರ್ಥವಾಗುವಂತೆ ಕತೆ ಹೇಳುವುದಷ್ಟೇ ಅಲ್ಲ. ಅಥವಾ, ಯಾರಿಗೂ ಅರ್ಥವೇ ಆಗದಂತೆ ಚಿತ್ರಬಿಡಿಸುವ ಕೆಲವರ ಪರಿ, ಹೆಮ್ಮೆಯ ಸಂಗತಿಯೂ ಅಲ್ಲ. ಒಳ್ಳೆಯ ಚಿತ್ರಗಳು ಸಾಮಾನ್ಯರಿಗೆ ಸಾಮಾನ್ಯ ಸ್ತರದಲ್ಲಿಯೂ, ಪರಿಣಿತರಿಗೆ ಪರಿಣಿತ ಸ್ತರದಲ್ಲಿಯೂ ಅರ್ಥವಾಗಿಸುವ ಶಕ್ತಿಹೊಂದಿರುತ್ತವೆ. ತಾನು ಬದುಕಿರುವ ಸಮುದಾಯದ ಜೊತೆ ಸಂವಹನ ಸಾಧಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿರುತ್ತದೆ ಅದು. ಕಥನಕೌಶಲವೆಂಬುದು ಬರಿದೆ ಕೌಶಲವಲ್ಲ, ಒಂದು ಸಮಗ್ರ ಜೀವನ ದೃಷ್ಟಿ ಅದು, ಸಾವಯವವಾದದ್ದು ಅದು. ಸಹಜ ಪ್ರಕೃತಿಯೊಟ್ಟಿಗೆ ಹಾಗೂ ಸಾಮಾನ್ಯ ಜನತೆಯೊಟ್ಟಿಗೆ ಸಂಬಂಧ ಸಾಧಿಸಬಲ್ಲಂತಹದ್ದು ಅದು.

ಅತಿರೇಕಕ್ಕೆ ತಲುಪಿದಾಗ ಆಧುನಿಕತೆಯ ವ್ಯಕ್ತಿನಿಷ್ಠೆಯ ರೋಗಕ್ಕೆ ಪಕ್ಕಾಯಿತು. ತಾನು ಬದುಕಿರುವ ತನ್ನ ಸಮುದಾಯದಿಂದಲೇ ದೂರಗೊಂಡು ಪರಕೀಯವಾಯಿತು. ಗ್ಯಾಲರಿಗಳಲ್ಲಿ ಶ್ರೀಮಂತರಿಗೆ ಹಾಗೂ ಲಂಪಟರಿಗೆ ಸಿದ್ಧಪಡಿಸಿದ ಔತಣ ಚಿತ್ರಕಲೆ ಎಂಬ ಅನಗತ್ಯ ಅಪವಾದಕ್ಕೆ ಅದು ಗುರಿಯಾಯಿತು, ಒಂಟಿಯಾಯಿತು.

ಹರ್ಷ ಅವರ ಚಿತ್ರಗಳು ಮೇಲ್ನೋಟಕ್ಕೆ ಸರಳವಾಗಿ ಕಾಣಿಸುತ್ತವೆ. ಆಧುನಿಕತೆಯ ಅತಿರೇಕಗಳಿಗೆ ಒಗ್ಗಿಕೊಂಡವರಿಗಂತೂ, ಅವು, ಅತಿ ಸರಳವಾಗಿ ಕಾಣಿಸುತ್ತವೆ. ಮಗ್ಗಿ ಪುಸ್ತಕಕ್ಕೆಂದು ರಚಿಸಲಾದ ನೀರಸವಾದ ಏಕತಾನತೆಯಂತೆ ಕಾಣುತ್ತವೆ. ಮೊದಲನೋಟಕ್ಕೆ ಅವರ ಚಿತ್ರಗಳು ‘ಇದೆಂಥದ್ದು ಮಾರಾಯ.....!’ ಎಂದು ಉದ್ಗಾರ ತೆಗೆದು, ಮುಂದೆ ನಡೆದುಬಿಡೋಣವೆಂದು ನೀವು ನಿರ್ಧರಿಸುವಷ್ಟರಲ್ಲಿ ‘ಇಲ್ಲ, ಇಲ್ಲೇನೋ ವಿವರಗಳು ಮುಲುಕಾಡುತ್ತಿವೆ!’ ಎಂದೆನ್ನಿಸಿ ಹತ್ತಿರ ಸರಿಯುತ್ತೀರಿ. ಮಗ್ಗಿ ಪುಸ್ತಕದ ಅಪ್ರಬುದ್ಧ ರಚನೆಗಳಡಿಯಲ್ಲಿ ವ್ಯಕ್ತಿಗಳು ಗೋಚರಿಸಿತೊಡಗುತ್ತಾರೆ. ಅವರೂ ಸಾಮಾನ್ಯರೇ, ನೀರಸರೇ. ಆದರೆ ಅವರ ಸಾಮಾನ್ಯತೆ ಹಾಗೂ ನೀರಸತನದಲ್ಲಿ ನೂರಾರು ಬಗೆಗಳಿವೆ ಅನ್ನಿಸತೊಡಗುತ್ತದೆ. ‘ಅರೆ, ಇವರ ಸಾಮಾನ್ಯತೆ ಹಾಗೂ ನೀರಸತನಗಳು ತೀರ ಕಳಪೆಯೇನಲ್ಲವಲ್ಲ!’ ಎಂಬ ಅರಿವಾಗುತ್ತದೆ. ಹೌದು ಸಾಮಾನ್ಯತೆ ನೀರಸವಲ್ಲ, ದಿನವೂ ಹುಟ್ಟುವ ಸೂರ್ಯ, ದಿನವೂ ಅರಳುವ ಹೂವು ನೀರಸವಲ್ಲ ಎಂಬ, ನವೋದಯ ಚಳವಳಿಯ ಘೋಷವಾಕ್ಯ ನೆನಪಾಗುತ್ತದೆ. ಚಿತ್ರಗಳಲ್ಲಿ ಸಾಮಾನ್ಯರು ಇತರೆ ಸಾಮಾನ್ಯರ ಜೊತೆ ಬೆರೆತು ಸಂವಹನ ಸಾಧಿಸತೊಡಗುತ್ತಾರೆ, ತುಂಟಾಟ ಮಾಡತೊಡಗುತ್ತಾರೆ, ಪಿಸುಮಾತು ಬಿಸಿಯುಸಿರು ಕೇಳಿಸತೊಡಗುತ್ತದೆ ನಿಮಗೆ. ಮನುಷ್ಯ ವ್ಯಕ್ತಿಗಳಷ್ಟೇ ಅಲ್ಲದೆ ಪ್ರಾಣಿ ವ್ಯಕ್ತಿಗಳು, ಪಕ್ಷಿ ವ್ಯಕ್ತಿಗಳು, ದೆವ್ವ ಭೂತಗಳು, ಭ್ರಮೆಗಳು, ಕಲ್ಪನೆಗಳು ಕಣ್ಣಮುಂದೆ ಕುಣಿಯ ತೊಡಗುತ್ತವೆ. ಒಂದು ಸಮಗ್ರ ಕಥಾಸರಿತ್ಸಾಗರವೇ ರೂಪಿತವಾಗಿ ಬಿಡುತ್ತದೆ ನಿಮ್ಮ ಕಣ್ಣ ಮುಂದೆ.

ದೆಹಲಿಯ ಹೆಸರಾಂತ ಕಲಾವಿಮರ್ಶಕಿ ಗಾಯತ್ರಿ ಸಿನ್ಹ, ಹರ್ಷ ಅವರ ಚಿತ್ರಗಳ ಬಗ್ಗೆ ಬರೆಯುತ್ತ, ‘ಈತನ ಚಿತ್ರಗಳನ್ನು ನೋಡುವುದೆಂದರೆ ಓದಿನ ಅನುಭವ ಅದು, ಎಡದಿಂದ ಬಲಕ್ಕೆ ವ್ಯಾಕರಣ ಬದ್ಧವಾಗಿ ಓದುವ ಅನುಭವ ಇದ್ದಂತೆ' ಎನ್ನುತ್ತಾರೆ. ಓದುವುದೆಂದರೇನೇ ಕಥನ, ಓದುವುದೆಂದರೇನೇ ಪೋಣಿಸುವಿಕೆ. ಮೊಗ್ಗಿನ ಹಾರ ಪೊಣಿಸಿದಂತೆ ಹರ್ಷ ಅವರ ರಚನಾಶೈಲಿ. ಹರ್ಷ ಅವರ ಹೆಸರು ಮಾಡಿದ ಮೊದಲ ಚಿತ್ರ, ಮದುವೆಮನೆಯ ಪಂಕ್ತಿ ಊಟದ್ದು. ಸಾಲುಸಾಲಾಗಿ ಬಡಿಸಿದ ಬಾಳೆಲೆ, ಬಾಳೆಲೆಯ ಮುಂದೆ ಸಾಲಾಗಿ ಕುಳಿತ ಸಾಮಾನ್ಯ ಮಂದಿ, ತಿಂದುಬಿಟ್ಟ ಅಥವಾ ತಿನ್ನುತ್ತಿರುವ, ಅನ್ನ ಪಲ್ಯ ಮಜ್ಜಿಗೆ ಪಾಯಸ. ಇವಿಷ್ಟು ಮೊದಲ ನೋಟಕ್ಕೆ ಕಂಡರೆ, ನಂತರ ಕಾಣುತ್ತದೆ, ‘ಅರೆ!’ ಒಬ್ಬರಂತಿನೊಬ್ಬರಿಲ್ಲವಲ್ಲ, ಒಬ್ಬರ ಕತೆ ಇನ್ನೊಬ್ಬರ ಕತೆಯಂತಿಲ್ಲವಲ್ಲ, ಮದುವೆ ಮನೆಗೆ ಬಂದಿರುವುದು ಇಡೀ ಮನುಕುಲವೇ ಆಗಿದೆಯಲ್ಲ! ಎಲಾ! ಮಕ್ಕಳು ಮುದುಕರು ಪಾಪಿಗಳು ಪ್ರಿಯಕರರು ಎಲ್ಲರೂ ಜಮಾಯಿಸಿದ್ದಾರಲ್ಲ ಇಲ್ಲಿ ಊಟಕ್ಕೆಂದು!’ ಎಂದು ಉದ್ಗರಿಸುತ್ತೀರಿ.

ಹರ್ಷ ಅವರಿಗೆ ಏಕತಾನತೆ ಹಾಗೂ ಸಾಮಾನ್ಯತೆ ಒಂದು ತಂತ್ರ ಅಷ್ಟೆ. ಅವರ ಚಿತ್ರಗಳಲ್ಲಿ ಕೌಶಲ ಅಡಗಿದೆ. ಕುಸುರಿಕೆಲಸ ಅಡಗಿದೆ. ಮೈಬಗ್ಗಿಸಿ ಮಾಡುತ್ತಾರೆ ಚಿತ್ರ ಬರೆಯುವ ಕಸುಬನ್ನು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT