ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ವಾಸ್‌ನಲ್ಲಿ ಋತುಗಳ ಭಾವೋಲ್ಲಾಸ

Last Updated 25 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಚಿತ್ರ ಕಲಾವಿದೆ ವಿದ್ಯಾ ಸುಂದರ್‌ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದೆ. ವಿದ್ವತ್ಪೂರ್ಣ ಪ್ರಭೆಯೊಂದು ಅವರ ಕಲಾಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುವುದು ವಿಶೇಷ. ಪ್ರತಿ ಕಲಾಕೃತಿಯನ್ನೂ ವಸ್ತು ಅಥವಾ ವಿಷಯಾಧರಿತವಾಗಿ ರಚಿಸುವುದು ವಿದ್ಯಾ ಅವರಿಗೆ ಇಷ್ಟ. ಹಾಗೆ ವಸ್ತು/ವಿಷಯಾಧರಿತ ಸರಣಿ ಕಲಾಕೃತಿಗಳು ಬೇರೆ ಬೇರೆ ಆಯಾಮಗಳಲ್ಲಿ ನಮಗೆ ದಕ್ಕುತ್ತವೆ.

ಕಲಾಕೃತಿಯೊಂದು ಬಣ್ಣ ಮತ್ತು ಭಾವವನ್ನು ಮೀರಿ ಇನ್ನೇನೋ ಹೊಳಹು ನೀಡುವುದು ಹೇಗೆ ಸಾಧ್ಯ ಎಂದು ಕೇಳಿದರೆ ವಿದ್ಯಾ ತಮ್ಮ ಓದುವ ಹವ್ಯಾಸದ ಬಗ್ಗೆ ಹೇಳಿಕೊಳ್ಳುತ್ತಾರೆ.

‘ಪುರಾಣ ಮತ್ತು ಇತಿಹಾಸದ ಅನೇಕ ಪುಸ್ತಕಗಳನ್ನು ನಾನು ಓದುತ್ತೇನೆ. ಓದುವುದು ಬಾಲ್ಯದಿಂದಲೂ ನನ್ನ ಹವ್ಯಾಸ. ಎಂಟನೇ ತರಗತಿಯಲ್ಲಿದ್ದಾಗ ಬಿಡಿಸಿದ ಮೊದಲ ಜಲವರ್ಣ ಚಿತ್ರಕ್ಕೆ ಇಡೀ ಶಾಲೆಯೇ ಮೆಚ್ಚುಗೆ ಸೂಚಿಸಿತ್ತು. ಅಂದು ಮಾಡಿದ್ದ ಬುದ್ಧನ ಪಾಠದ ಹಿನ್ನೆಲೆಯಲ್ಲಿ ನಾನು ಆ ಚಿತ್ರ ಬಿಡಿಸಿದ್ದೆ. ಮುಂದೆ, ಶಿಕ್ಷಣ ಮುಂದುವರಿಸಬೇಕಾದ್ದರಿಂದ ಚಿತ್ರಕಲೆಯನ್ನು ಮರೆತೇ ಬಿಟ್ಟಿದ್ದರೂ ಪಠ್ಯೇತರ ಪುಸ್ತಕಗಳ ಓದು ಮುಂದುವರಿದಿತ್ತು. ಮತ್ತೆ ಕುಂಚ ಕೈಗೆತ್ತಿಕೊಂಡದ್ದು ಮದುವೆಯಾದ ಬಳಿಕ’ ಎಂದು ವಿವರಿಸುತ್ತಾರೆ ವಿದ್ಯಾ.

ವಿದ್ಯಾ ತವರು ಕೇರಳದ ಕೊಚ್ಚಿ. ಮದುವೆಯಾಗಿ ಚೆನ್ನೈ ನಿವಾಸಿಯಾಗಿದ್ದಾರೆ. ಒಮ್ಮೆ ಕೊಚ್ಚಿಯಲ್ಲಿ ಗೆಳತಿಯ ಮನೆಗೆ ಭೇಟಿ ನೀಡಿದಾಗ ಆಕೆ ಬಿಡಿಸಿದ್ದ ಕಲಾಕೃತಿಗಳು ಮತ್ತೆ ಚಿತ್ರಕಲೆಯತ್ತ ಸೆಳೆದವು. ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಗೃಹಿಣಿಯಾಗಿ ಇದ್ದ ನಾನು ಅವಳದೇ ಪ್ರೇರಣೆಯಿಂದ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದೆ ಎಂದು ನಗುತ್ತಾರೆ.

ಓದಿನ ಜ್ಞಾನ ತಮ್ಮ ಕಲಾಕೃತಿಗಳಲ್ಲಿ ಯಾವುದೇ ವಿಷಯವನ್ನು ವಿಷುವಲೈಸ್‌ ಮಾಡಲು ನೆರವಾಗುತ್ತದೆ. ಇತರರ ಕಲಾಕೃತಿ ಮತ್ತು ಕೌಶಲಕ್ಕಿಂತ ತಮ್ಮ ಕಲಾಕೃತಿಯನ್ನು ವಿಭಿನ್ನಗೊಳಿಸುವುದೂ ಇದೇ ಓದಿನ ಜ್ಞಾನವೇ ಎಂಬುದು ವಿದ್ಯಾ ಪ್ರತಿಪಾದನೆ.

ರಾಧೆಯ ಸರಣಿ ಕಲಾಕೃತಿಗಳಲ್ಲಿ ಎಲ್ಲಿಯೂ ರಾಧೆಯ ಭೌತಿಕ ಚಿತ್ರಣವಿರುವುದಿಲ್ಲ. ರಾಧೆಯನ್ನು ಬಿಂಬಿಸುವ ಒಂದು ಅಚ್ಚಬಿಳು‍ಪಿನ ಹೂವು, ಅದಕ್ಕೆ ಸುತ್ತಿಕೊಂಡ ಕೊಳಲು ಮತ್ತು ಹಗ್ಗ, ಹುಣ್ಣಿಮೆಯಂತೆ ಹೊಳೆಯುವ ಚಂದ್ರ, ಇವಿಷ್ಟನ್ನೂ ಐದು ಬಣ್ಣಗಳಲ್ಲಿ ಪ್ರತಿನಿಧಿಸಿರುವ ರೀತಿ ರಾಧೆಯ ಸರಣಿಯನ್ನು ಶ್ರೀಮಂತಗೊಳಿಸಿವೆ. ನೋಟು ಅಮಾನ್ಯೀಕರಣದಿಂದಾಗಿ ಆಗರ್ಭ ಶ್ರೀಮಂತರೂ ಕೈಯಲ್ಲಿ ಬಿಡಿಗಾಸಿಲ್ಲದ ಸ್ಥಿತಿ ತಲುಪಿದ್ದನ್ನು ಅವರು ಬಿಂಬಿಸಿರುವ ರೀತಿ ಅಮೋಘವಾಗಿದೆ. ಜೈಲನ್ನು ನೆನಪಿಸುವ ಕಿಟಕಿಯ ಸರಳುಗಳ ಹಿಂದೆ, ಹಾರಲೆತ್ನಿಸುತ್ತಿರುವ ಪಾರಿವಾಳಗಳ ಮೂಲಕ ನೋಟು ಅಮಾನ್ಯೀಕರಣವನ್ನು ಚಿತ್ರಿಸಿದ್ದಾರೆ. ಇಲ್ಲಿ, ಪಾರಿವಾಳಗಳ ವಿಭಿನ್ನ ಭಂಗಿಗಳೇ ರೂಪಕಗಳು. ಬಣ್ಣಗಳು ಸನ್ನಿವೇಶಕ್ಕೆ ಭಾವವನ್ನು ತುಂಬಿವೆ.

ಋತುಗಳ ಸರಣಿ ಕಲಾಕೃತಿಗೆ ಕಾಳಿದಾಸನ ಸಂಸ್ಕೃತ ಕಾವ್ಯಗಳ ಓದು ನೆರವಾಗಿದೆ ಎನ್ನುತ್ತಾರೆ, ವಿದ್ಯಾ. ಜೀವಸಂಕುಲದಲ್ಲಿ ಹೊಸ ಚೈತನ್ಯ ತುಂಬಿರುವ ವಸಂತನನ್ನು ‘ವಸಂತಾವಸರ’ ಕಲಾಕೃತಿ ಸಮರ್ಥವಾಗಿ ತೋರಿಸುತ್ತದೆ. ದಟ್ಟವಾದ ಬಣ್ಣಗಳ ಆಯ್ಕೆ, ವಸಂತನೆಂಬ ಉಲ್ಲಾಸದ, ಹೊಸ ಶಕ್ತಿಯ ದ್ಯೋತಕವೆನಿಸುತ್ತದೆ. ಇದೇ ಸರಣಿಯ ‘ಗ್ರೀಷ್ಮಾಗಮ’ವೂ ಚಿತ್ತಾಕರ್ಷಕವಾಗಿದೆ.

ತಮ್ಮ ಕಲಾಕೃತಿಗಳಿಗೆ ವಿಭಿನ್ನ ಭಾವ ತುಂಬಲು ವಿದ್ಯಾ ಆರಿಸಿಕೊಂಡಿರುವ ಇನ್ನೊಂದು ಮಾಧ್ಯಮ ಸಂಗೀತ. ಹಿಂದೂಸ್ತಾನಿ ಸಂಗೀತದ ಹತ್ತಾರು ರಾಗಗಳಿಂದ ಪ್ರೇರಿತರಾಗಿ ಆಕ್ರಿಲಿಕ್‌ನಲ್ಲಿ ಬಿಡಿಸಿರುವ ಕಲಾಕೃತಿಗಳೂ ಅವರ ಸಂಗೀತದ ಜ್ಞಾನಕ್ಕೆ ಸಾಕ್ಷಿಯಂತಿವೆ. ದಿನದ ವಿವಿಧ ಹೊತ್ತುಗಳಲ್ಲಿ ಹಾಡುವ ರಾಗಗಳನ್ನು ಅವರ ಕಲಾಕೃತಿಗಳು ಪ್ರತಿನಿಧಿಸಿರುವ ಬಗೆಗೆ ತಲೆಬಾಗುವಂತಾಗುತ್ತದೆ.

ಹಲವಾರು ಏಕವ್ಯಕ್ತಿ ಮತ್ತು ಸಮೂಹ ಪ್ರದರ್ಶನಗಳನ್ನು ಏರ್ಪಡಿಸಿರುವ ವಿದ್ಯಾ ಹಲವು ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಪ್ರದರ್ಶನಗಳಲ್ಲಿಯೂ ಇವರ ಕಲಾಕೃತಿಗಳು ಮೆಚ್ಚುಗೆ ಗಳಿಸಿವೆ.

ವಿದ್ಯಾ ಸಂಪರ್ಕಕ್ಕೆ: www.facebook.com/sundarvidyaa

ಇಂದಿನಿಂದ ‘ಟೋನ್ಸ್‌ ಆಫ್‌ ಸೀಸನ್‌’

ಪ್ರದರ್ಶನವು ಅಕ್ಟೋಬರ್‌ 26ರಿಂದ 28ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ. ಆಸಕ್ತರು ಕಲಾಕೃತಿಗಳನ್ನು ಖರೀದಿಸಲೂ ಅವಕಾಶವಿರುತ್ತದೆ. ಸಮಯ–ಬೆಳಿಗ್ಗೆ 11ರಿಂದ ರಾತ್ರಿ 7.

ಸ್ಥಳ– ವಿಸ್ಮಯ ಗ್ಯಾಲರಿ, ರಂಗೋಲಿ ಮೆಟ್ರೊ, ಮಹಾತ್ಮ ಗಾಂಧಿ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT