ಮಂಗಳವಾರ, ಮೇ 26, 2020
27 °C

ಬಾಗಿ ಬಾಗಿ ಸಿಂಗಾರ ತೂಗಿ...

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಗೋಡೆಚಿತ್ರ, ಹಸೆಚಿತ್ರ, ಗ್ಲಾಸ್ ಪೇಂಟಿಂಗ್ ಇವನ್ನೆಲ್ಲ ಗೆರೆ ಎಳೆದಷ್ಟು ಸರಾಗವಾಗಿ ಬಿಡಿಸುವ ಕಲಾವಿದರಿಗೆ ಲೆಕ್ಕವಿಲ್ಲ. ಆನುವಂಶಿಕ ಕಲೆಯ ತಾದಾತ್ಮ್ಯತೆ ಹೊಂದಿರುವ ಈ ಕಲಾವಿದ ಹೊಸತನ್ನು ಹುಡುಕುವ ಹಂಬಲದಲ್ಲಿ ಹೊರಟಾಗ ಅವರ ಕಣ್ಣಿಗೆ ಬಿದ್ದಿದ್ದು ತೆಂಗಿನ ಸಿಂಗಾರದ ಕವಚ.

ಕೃಷಿಕರು ಮತ್ತು ತೋಟದ ನಡುವಿನ ಸಂಬಂಧ ಅದು ಜೀವಾನುಬಂಧ. ದಿನಬೆಳಗಾದರೆ, ನೋಡುವುದೇ ತೋಟದಲ್ಲಿ ಬಿದ್ದಿರುವ ಅಡಿಕೆ ಗರಿ, ತೆಂಗಿನ ಹಾಳೆ ಇತ್ಯಾದಿ. ಇವುಗಳನ್ನೇ ಕಲೆಗೆ ತಳಪಾಯವಾಗಿಸಿಕೊಂಡಿದ್ದಾರೆ ಸಿದ್ದಾಪುರ ತಾಲ್ಲೂಕು ಕಾನಸೂರು ಸಮೀಪ ಜಡ್ಡಿಮನೆಯ ವಿನಾಯಕ.

ಹೂವರಳಿದ ಮೇಲೆ ಮರದಿಂದ ಉದುರಿ ಬೀಳುವ ಸಿಂಗಾರದ ಓಡಿನ (ಹೊಂಬಾಳೆ/ಸಿಂಗಾರದ ಹೊರಕವಚ) ಮೇಲೆ ಇವರು ಚಿತ್ತಾರ ಮೂಡಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಹುಟ್ಟಿದ್ದ ಈ ಸೃಜನಶೀಲ ಯೋಚನೆ, ಕೋವಿಡ್‌ 19 ಲಾಕ್‌ಡೌನ್‌ ಅವಧಿಯಲ್ಲಿ ಇನ್ನಷ್ಟು ಹರವಿಕೊಂಡಿದೆ. ದೇವರಿಂದ ನಿಸರ್ಗದವರೆಗಿನ ಚಿತ್ರಗಳೆಲ್ಲ ಸಿಂಗಾರ ಕವಚದ ಮೇಲೆ ಮೂಡಿ ಬಂದಿವೆ. ಲಂಬಾಕೃತಿಯ ಶಿಲಾಬಾಲಿಕೆಯೂ ಮೈದಳೆದಿದ್ದಾಳೆ.

‘ಗಣೇಶ ಚತುರ್ಥಿಯಲ್ಲಿ ಮಣ್ಣಿನ ಗಣಪತಿ ತಯಾರಿಕೆ ನಮ್ಮ ಕುಟುಂಬ ತಲೆತಲಾಂತರದಿಂದ ರೂಢಿಸಿಕೊಂಡು ಬಂದಿರುವ ಕಲೆ. ಗೋಡೆಯ ಮೇಲೆ ಚಿತ್ರ ಬಿಡಿಸುವ ಹುಚ್ಚು ನನಗೆ ಹಳೆಯದು. ಇವೆಲ್ಲಕ್ಕಿಂತ ಭಿನ್ನವಾಗಿ ಬಣ್ಣ ಗೀಚಲೊಂದು ಹೊಸ ಜಾಗದ ಹುಡುಕಾಟದಲ್ಲಿದ್ದೆ. ಸ್ನೇಹಿತನೊಬ್ಬ ಇಂತಹುದೊಂದು ಐಡಿಯಾ ಕೊಟ್ಟ. ತೆಂಗಿನ ಸಿಂಗಾರ ತರಲು ಪೇಟೆಗೇನೂ ಹೋಗಬೇಕಾಗಿಲ್ಲ, ತೋಟಕ್ಕೆ ಹೋದಾಗ ಕಾಲಿಗೆ ತಡಕುವ ವಸ್ತು ಅದು. ಹೆಕ್ಕಿ ತಂದು, ಅದರ ಮೇಲೆ ರಂಗು ಚೆಲ್ಲಿದೆ. ಹಲವರು ಬೆನ್ನುತಟ್ಟಿದರು’ ಎಂದು ಸಿಂಗಾರದ ಓಡಿಗೆ ಶೋ ಕೇಸ್‌ ಭಾಗ್ಯ ದೊರೆತ ಪರಿಯನ್ನು ವಿನಾಯಕ ಜಡ್ಡಿಮನೆ ಹೇಳಿದ್ದು ಹೀಗೆ.

‘ಮೊದಲು ಮರದಿಂದ ಉದುರಿ ಬೀಳುತ್ತಿದ್ದ ಓಡನ್ನು ಬಳಸಿದೆ. ಆಮೇಲೆ ಗೊತ್ತಾಯಿತು, ಹಸಿಯ ಕವಚವನ್ನು ನೆರಳಿನಲ್ಲಿ ಒಣಗಿಸಿಟ್ಟರೆ ಬಾಳಿಕೆ ಹೆಚ್ಚೆಂದು. ಇದು ಗೋಡೆಯ ಮೇಲೆ ಪೇಂಟ್ ಮಾಡಿದಷ್ಟು ಸುಲಭವಲ್ಲ. ತುಸು ಹೆಚ್ಚು ಎಚ್ಚರಿಕೆ ಬೇಕು. ರೂಢಿಯಾದ ಮೇಲೆ ಕಠಿಣವೇನಲ್ಲ. ಅಕ್ರಾಲಿಕ್ ಕಲರ್‌ನಲ್ಲಿ ತಮ್ಮನ ಮಗನ ಪೋರ್ಟ್ರೇಟ್, 3ಡಿ ಪೇಂಟಿಂಗ್‌ಗಳನ್ನೂ ಮಾಡಿದ್ದೇನೆ. ಇದನ್ನು ಕಂಡ ಸ್ಟಾರ್ ಹೋಟೆಲ್ ಮಾಲೀಕರೊಬ್ಬರು, ಒಂದಿಷ್ಟು ಹೊಸ ಆರ್ಡರ್ ಕೊಟ್ಟು ಹೋದರು. ಲಾಕ್‌ಡೌನ್‌ನಿಂದ ಇವೂ ಇಲ್ಲೇ ಲಾಕ್‌ ಆಗಿವೆ’ ಎಂದು ನಸುನಕ್ಕರು ವಿನಾಯಕ.

ಅವರ ಸಂಪರ್ಕ ಸಂಖ್ಯೆ: 08389–262693, 9663387138. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.