ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲಾ,ಲೋಹದ ಕಲಾಲೋಕ

Last Updated 29 ಜುಲೈ 2019, 19:30 IST
ಅಕ್ಷರ ಗಾತ್ರ

ಚಿಕ್ಕೋಡಿಯ ವಿಠಲ ದೇವಾಲಯದಲ್ಲಿರುವ ಮೂರ್ತಿ ಇವರೇ ಕಡೆದಿದ್ದು. ಬಾಡದ ಕನಕ ದೇಗುಲದಲ್ಲಿರುವ ರೇವಣ ಸಿದ್ದೇಶ್ವರರ ಪ್ರತಿಮೆ ಕೂಡ ಈ ಕುಟುಂಬದವರ ಕುಸುರಿಯ ಫಲ. ಹರಿಹರದಲ್ಲಿರುವ ಊರಮ್ಮದೇವಿ, ಕಾಗಿನೆಲೆಯ ಪುಣ್ಯಕೋಟಿ ಹಾಗೂ ಬಾಳೆಹೊನ್ನೂರಿನ ಗಂಗಾಧರ ಸ್ವಾಮೀಜಿ, ಬೀರಲಿಂಗೇಶ್ವರ ಮೂರ್ತಿಗಳೆಲ್ಲ ಈ ಶಿಲ್ಪಕಲಾ ಕುಟುಂಬಗಳ ಕೈಚಳಕದಿಂದಲೇ ಅರಳಿವೆ. ಅಷ್ಟೇ ಏಕೆ, ದೂರದ ಮಹಾರಾಷ್ಟ್ರದಲ್ಲೂ ಕೆತ್ತಿರುವ ಬಸವಣ್ಣನವರ ಮೂರ್ತಿಯೂ ಇವರ ಹೆಸರೇ ಹೇಳುತ್ತದೆ..!

ಇಷ್ಟೆಲ್ಲ ಶಿಲ್ಪಗಳನ್ನು ಕೆತ್ತಿರುವ ಈ ಶಿಲ್ಪಿಗಳ ಕುಟುಂಬ ಯಾವುದು? ಎಲ್ಲಿದ್ದಾರೆ ಈ ಕುಟುಂಬದ ಸದಸ್ಯರು? ಎನ್ನುತ್ತೀರಾ. ಹಾಗಿದ್ದರೆ, ಒಮ್ಮೆ ನೀವು ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣಕ್ಕೆ ಬನ್ನಿ. ಅಲ್ಲಿನ ಜೀಜಾಮಾತಾ ಕಾಲೊನಿಯ ಹರಪನಹಳ್ಳಿ ರಸ್ತೆಯಲ್ಲಿರುವ ಶ್ರೀಗಾಯತ್ರಿ ಶಿಲಾ ಶಿಲ್ಪಕಲಾ ಕೇಂದ್ರಕ್ಕೆ ಭೇಟಿ ಕೊಡಿ. ಆ ಕೇಂದ್ರಕ್ಕೆ ಪ್ರವೇಶಿಸಿದರೆ, ಮೂವರು ಶಿಲ್ಪಗಳ ಕೆತ್ತನೆಯಲ್ಲಿ ತಲ್ಲೀನರಾಗಿರುತ್ತಾರೆ. ಅವರೇ ಬಿ.ಅಣ್ಣಪ್ಪಾಚಾರ್‌, ನಾಗರಾಜ ಬಡಿಗೇರ್ ಹಾಗೂ ಸಂತೋಷಾಚಾರ್.

ಶಿಲಾ ಶಿಲ್ಪಿ, ಲೋಹ ಶಿಲ್ಪಿ

ಈ ಮೂವರು ಸಹೋದರರು. ಇವರ ತಂದೆ ಜಯಣ್ಣಾಚಾರ್ ಮೂಲತಃ ಬಡಗಿ. ಕಷ್ಟಪಟ್ಟು ದುಡಿದು ಮಕ್ಕಳನ್ನು ಚೆನ್ನಾಗಿ ಸಾಕಿ ಸಲಹಿದರು. ಆದರೆ ಮಕ್ಕಳು ತಂದೆಯ ಹಾದಿ ಹಿಡಿಯಲಿಲ್ಲ. ಬದಲಾಗಿ ಶಿಲ್ಪಕಲಾ ವೃತ್ತಿಯನ್ನು ಆರಿಸಿಕೊಂಡರು. ತನ್ನ ಮಕ್ಕಳು ಶಿಲ್ಪಿಗಳಾಗಬೇಕೆಂಬುದು ತಾಯಿ ಕಾಳಮ್ಮ ಅವರ ಅಪೇಕ್ಷೆಯಾಗಿತ್ತು.

ಅದರಂತೆ ಎಸ್ಸೆಸ್ಸೆಲ್ಸಿವರೆಗೂ ಕಲಿತ ಅಣ್ಣಪ್ಪಾಚಾರ್‌ 1995ರಲ್ಲಿ ತರಬೇತಿ ಪಡೆದು ಶಿಲಾ ಶಿಲ್ಪಿ ವೃತ್ತಿ ಆರಂಭಿಸಿದರು. ಇನ್ನು ಉಳಿದ ನಾಗರಾಜ ಬಡಿಗೇರ್‌ ಲೋಹ ಶಿಲ್ಪದಲ್ಲಿ ಸಿದ್ಧಹಸ್ತರಾದರೆ, ಇವರಿಬ್ಬರ ಕೆಲಸಕ್ಕೂ ಸಹೋದರ ಸಂತೋಷಾಚಾರ್ ನೆರವಾಗುತ್ತಿದ್ದಾರೆ. ಮೂವರು ಸೇರಿ ಶಿಲ್ಪ ಕಲಾ ಕೇಂದ್ರ ನಡೆಸುತ್ತಿದ್ದಾರೆ.

ಶಿಲಾ ಶಿಲ್ಪಿ ಅಣ್ಣಪ್ಪಾಚಾರ್ ಮಹಾನ್ ಸಂತರಾದ ಬಸವಣ್ಣ, ಕನಕದಾಸರು, ಸಂತ ಸೇವಾಲಾಲ್‌, ಅಕ್ಕಮಹಾದೇವಿಯಂತಹ ಪ್ರತಿಮೆಗಳನ್ನು ಕೆತ್ತಿದ್ದಾರೆ. ಮಾತ್ರವಲ್ಲ, ಮೌನೇಶ್ವರ, ದತ್ರಾತ್ರೇಯ, ಬಳ್ಳಾರಿ ಸಿದ್ದಮ್ಮ, ಗೌತಮ ಬುದ್ಧರ ವಿಗ್ರಹಗಳನ್ನೂ ಮನಮೋಹಕವಾಗಿ ಕೆತ್ತಿದ್ದಾರೆ. ನಂದಿ ವಿಗ್ರಹ, ಕೃಷ್ಣ, ಗಣೇಶ, ಆನೆ, ಶಿವ, ಚೌಡೇಶ್ವರಿ, ದುರ್ಗಾದೇವಿ, ರೇಣುಕ ಯಲ್ಲಮ್ಮ, ಗರ್ಭಗುಡಿ ವಿನ್ಯಾಸ, ಕಾಗಿನೆಲೆ ಪಾದುಕೆ ಸೇರಿ 2 ಸಾವಿರಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳು ಈ ಶಿಲ್ಪಿ ಕುಟುಂಬದ ಕಲಾ ಕೌಶಲ್ಯವನ್ನು ಸಾಕ್ಷ್ಯೀಕರಿಸುತ್ತಿವೆ.

ಲೋಹದ ಶಿಲ್ಪ ಪರಿಣತಿ

ಕಾರ್ಕಳದ ಸಿ. ಕಾಮತ್ ಅವರಿಂದ ತರಬೇತಿ ಪಡೆದ ನಾಗರಾಜ್ ಬಡಿಗೇರ್ ಲೋಹ ಕರಗಿಸಿ ಶಿಲ್ಪಗಳನ್ನಾಗಿಸುವುದರಲ್ಲಿ ಪರಿಣತಿ ಪಡೆದಿದ್ದಾರೆ. ರೇಖಾಚಿತ್ರ ಬಿಡಿಸಿ ಅದಕ್ಕೆ ತಕ್ಕಂತೆ ಲೋಹ ಕರಗಿಸಿ ಶಿಲ್ಪ ರಚಿಸುವ ಇವರ ಕಲೆ ನಿಜಕ್ಕೂ ಅದ್ಭುತ. ಹೀಗಾಗಿಯೇ ಇವರು ಲೋಹಶಿಲ್ಪದಲ್ಲಿ ಸಿದ್ಧಹಸ್ತರು.

ವಿಶೇಷವಾಗಿ ದೇವಾಲಯಗಳ ಉತ್ಸವಗಳಿಗೆ ಪಲ್ಲಕ್ಕಿ, ಅಲಂಕಾರ, ಪಂಚಕಳಸ, ನಾಟ್ಯ ವಿಗ್ರಹ, ಕಳಸ, ದೇವಿ ವಿಗ್ರಹಗಳು, ಪ್ರಭಾವಳಿ, ಬಾಗಿಲ ಕವಚಗಳ ತಯಾರಿಕೆಯಲ್ಲಿ ನಾಗರಾಜ್ ಎತ್ತಿದ ಕೈ. ಸ್ವಾಮೀಜಿಗಳಿಗೆ ಕಿರೀಟ, ದೇವರ ಪಾದುಕೆ, ನಂದಿ ವಿಗ್ರಹ, ಆಂಜನೇಯ ವಿಗ್ರಹಗಳನ್ನು ಕೆತ್ತಿದ್ದಾರೆ. ಅಷ್ಟೇ ಏಕೆ ವಿವಿಧ ದೇವಾಲಯಗಳಲ್ಲಿ ಇವರು ಮಾಡಿರುವ ಬಾಗಿಲ ವಿನ್ಯಾಸದ ಕಲೆ ಬೆರಗು ಮೂಡಿಸುವಂತಿದೆ.

ತನ್ಮಯತೆಯ ಕೆಲಸವಿದು

‘ಯಾವುದೇ ಶಿಲ್ಪ ಕೆತ್ತನೆ ಮಾಡುವಾಗ ಶಾಸ್ತ್ರೋಕ್ತವಾಗಿ, ತಾಳಮಾನಬದ್ಧವಾಗಿ ಮಾಡಬೇಕು. ಅದರದೇ ಶ್ಲೋಕ ಪಠನೆ ಮಾಡಿ ವಿಗ್ರಹ ಕೆತ್ತನೆ ಮಾಡುತ್ತೇವೆ. ಇದರಿಂದಾಗಿಯೇ ನಮ್ಮ ಬಳಿಗೆ ಹೆಚ್ಚಿನ ಜನರು ಬರುತ್ತಾರೆ’ ಎಂದು ಹೇಳುತ್ತಾರೆ ಅಣ್ಣಪ್ಪಾಚಾರ್. ‘ಉತ್ತಮ ವಾತಾವರಣ, ಮನೆಯವರ ಪ್ರೋತ್ಸಾಹ, ಸಂಘ ಸಂಸ್ಥೆಗಳ ಹಾಗೂ ಗುರುಗಳ ಪ್ರೇರಣೆಯಿಂದ ಇದೆಲ್ಲಾ ಸಾಧ್ಯವಾಯಿತು. ಸಮಯಕ್ಕೆ ತುಂಬಾ ಬೆಲೆ ಕೊಡುವುದನ್ನು ಕಲಿತಿದ್ದು, ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಅವರು ಸ್ಮರಿಸುತ್ತಾರೆ.

ಶಿಲ್ಪಕಲೆಯಲ್ಲಷ್ಟೇ ಅಲ್ಲದೇ, ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ಈ ಸಹೋದರರು ಸಿದ್ಧ ಹಸ್ತರು. ಇದೇ ಕಾರಣಕ್ಕಾಗಿ ಗೌರಿ–ಗಣೇಶ ಚತುರ್ಥಿ ಸಂದರ್ಭದಲ್ಲಿ ಇವರಿಗೆ ಬಿಡುವಿಲ್ಲದ ಕೆಲಸ. ಶಿಲ್ಪಕಲಾ ಕೇಂದ್ರಕ್ಕೆ ಭೇಟಿ ನೀಡಿದರೆ, ಅಲ್ಲಿ ಮಣ್ಣಿನಿಂದ ತಯಾರಿಸಿರುವ ‘ಸಿಂಹಾಸನದ ಮೇಲೆ ಕುಳಿತಿರುವ ಗಾಯಿತ್ರಿ ದೇವಿ’ ಭಂಗಿಯ ವಿಗ್ರಹವೊಂದು ಗಮನ ಸೆಳೆಯುತ್ತದೆ. ಗಣೇಶ ಚತುರ್ಥಿ ಜತೆಗೆ, ಕಾರ್ತಿಕ ಮಾಸ, ಶ್ರಾವಣ ಮಾಸಗಳಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಮಯಲ್ಲಿ ಬೇಡಿಕೆ ಹೆಚ್ಚು. ಆಷಾಢದಲ್ಲಿ ಸಹಜವಾಗಿ ಕಡಿಮೆ ಇರುತ್ತದೆ.

ಶಿಲ್ಪಕಲಾ ಕೌಶಲ್ಯವನ್ನು ಇತರರಿಗೂ ಕಲಿಸಬೇಕೆಂಬ ಆಸಕ್ತಿ ಈ ಕುಟುಂಬದವರದ್ದು. ಈಗಾಗಲೇ ಆ ಪ್ರಯತ್ನದಲ್ಲಿ ಸಾಗಿದ್ದಾರೆ. ‘ಒಬ್ಬರಿಗೆ ಊಟ, ವಸತಿ ಸೌಕರ್ಯ ಕಲ್ಪಿಸಿ ಕಲೆಯನ್ನು ಕಲಿಸುತ್ತಿದ್ದೇವೆ. ಆಸಕ್ತರಿಗೆ ಈ ಕಲೆ ಕಲಿಸುವ ಉದ್ದೇಶವಿದೆ. ಸರ್ಕಾರದಿಂದ ನಿವೇಶನ ಹಾಗೂ ಪರಿಕರ ಒದಗಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂಬುದು ಶಿಲ್ಪಿ ಕುಟುಂಬದವರ ಮನವಿ.

ಪ್ರಶಸ್ತಿ ಪುರಸ್ಕಾರ

ಅಣ್ಣಪ್ಪ ಅವರ ಕಲೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. 2018–19ನೇ ಸಾಲಿನಲ್ಲಿ ವಿಜಯಪುರದ ಕರ್ಮವೀರ, ಕಲಾ, ಸಾಹಿತ್ಯ ಸಂಸ್ಕೃತಿ ಸಂಸ್ಥೆ ಬಸವಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಆಳ್ವಾಸ್‌ ನುಡಿಸಿರಿ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರಗಳಲ್ಲಿ ಹಾಗೂ 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಗೌರವಿಸಿವೆ.

2018–19ರಲ್ಲಿ ವಿಜಯಪುರದ ಬಸವೇಶ್ವರ, ಕರ್ಮವೀರ, ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ‘ಬಸವಜ್ಯೋತಿ’ ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಆಳ್ವಾಸ್‌ ನುಡಿಸಿರಿ, ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಸೇರಿ 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಚಿತ್ರಗಳು:ಸತೀಶ್ ಬಡಿಗೇರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT