ಶುಕ್ರವಾರ, ಡಿಸೆಂಬರ್ 9, 2022
20 °C

ಕಲಾ ಕುಸುರಿ: ಚಿತ್ರಕಲಾ ಪರಿಷತ್ತಿನಲ್ಲಿ ಮೈಸೂರು ಶೈಲಿ ಚಿತ್ರಕಲೆ

ಎನ್‌. ಜಗನ್ನಾಥ ಪ್ರಕಾಶ್ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದ ಸಾಂಪ್ರದಾಯಿಕ ಚಿತ್ರಗಳೆಂದರೆ ತಂಜಾವೂರು ಶೈಲಿ ಎಂದೇ ಕಲಾಪ್ರೇಮಿಗಳು ಭಾವಿಸಿದ್ದ ಪರಿಸ್ಥಿತಿ ಇತ್ತು. ಆದರೆ ಮೈಸೂರು ಶೈಲಿ ಸಾಂಪ್ರದಾಯಿಕ ಚಿತ್ರಕಲೆಯೂ ಇದೆ ಎಂಬುದು ಇತ್ತೀಚೆಗೆ ಮನವರಿಕೆಯಾಗುತ್ತಿದೆ.

ವಿಜಯನಗರದ ಅರಸರ ಕಾಲದಿಂದಲೇ ನಮ್ಮದೇ ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಅಸ್ತಿತ್ವದಲ್ಲಿತ್ತು. ಆರಂಭದಲ್ಲಿ ಗೋಡೆಗಳ ಮೇಲೆ ಅರಳುತ್ತಿದ್ದ ಈ ಚಿತ್ರಕಲೆ ನಂತರ ಮರದ ಹಲಗೆಗೆ ವರ್ಗವಾಯಿತು. ತರುವಾಯ ಕಾಗದ, ಆಮೇಲೆ ಬಟ್ಟೆ ಮೇಲೂ ಚಿತ್ರಿಸಲ್ಪಡುತ್ತಿತ್ತು.

ಮೈಸೂರು ಶೈಲಿ ಚಿತ್ರಗಳು ಕಾಲಕಾಲಕ್ಕೆ ಬದಲಾವಣೆ ಕಂಡಿವೆ. ದೇವಾನುದೇವತೆಗಳು, ಖನಿಜ ವರ್ಣಗಳಿಂದ ರೂಪುಗೊಳ್ಳಲು ಶುರುವಾದ ನಂತರದ ಹಂತದಲ್ಲಿ ಕನ್ನಡ ನಾಡಿನ ಜನ ಜೀವನ ಸಂಸ್ಕೃತಿಯು ಚಿತ್ರಗಳಲ್ಲಿ ಪ್ರತಿಬಿಂಬಿತವಾಗಿವೆ.

ವಿಜಯನಗರ ಸಾಮ್ರಾಜ್ಯದ ಅಂತ್ಯದ ಬಳಿಕೆ ಈ ವಿಶಿಷ್ಟ ಚಿತ್ರಕಲೆ ಮತ್ತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಮೈಸೂರು ಒಡೆಯರ ಆಳ್ವಿಕೆಯ ಕಾಲದಲ್ಲಿ. 

ಮುಮ್ಮಡಿ ಕೃಷ್ಣರಾಜ ಒಡೆಯರ್ ಆಡಳಿತ ಕಾಲದಲ್ಲಿ ಈ ಕಲೆಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿತು. ಹೀಗಾಗಿ ಮೈಸೂರು ಶೈಲಿ ಚಿತ್ರಗಳು ಅರಮನೆಗಳಲ್ಲಿ, ದೇವಾಲಯಗಳಲ್ಲಿ ನಾಗರಿಕರ ಮನೆಗಳಲ್ಲಿ ಕಂಡುಬರಲು ಸಾಧ್ಯವಾಯಿತು.

18 ಮತ್ತು 19ನೇ ಶತಮಾನಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದ ಮೈಸೂರು ಶೈಲಿ ಚಿತ್ರಕಲೆ 20ನೇ ಶತಮಾನದ ಪೂರ್ವಾರ್ಧದಲ್ಲಿ ಕ್ಷೀಣಿಸತೊಡಗಿತು. ಇದಕ್ಕೆ ಬಹುಮುಖ್ಯ ಕಾರಣ ಬ್ರಿಟಿಷ್‌ ಮಾದರಿಯ ಚಿತ್ರಕಲೆಯ ಪ್ರಭಾವ. ಬ್ರಿಟಿಷರು  ಸ್ಥಾಪಿಸಿದ್ದ ಕಲಾಶಾಲೆಗಳಲ್ಲಿ ಆಂಗ್ಲ ಮಾದರಿ ಚಿತ್ರಕಲೆಗೆ ಹೆಚ್ಚಿನ ಒತ್ತು ಸಿಕ್ಕಿದ್ದರಿಂದ ನಮ್ಮ ಕಲಾವಿದರು ಅದನ್ನೇ ಕಲಿತಿದ್ದರಿಂದ, ನಮ್ಮ ನೆಲದ ಸಾಂಪ್ರದಾಯಿಕ ಕಲೆ, ಕಲೆಗಾರರು ಹಿಂದೆ ಸರಿಯಬೇಕಾದ ಪರಿಸ್ಥಿತಿ ಉಂಟಾಯಿತು.

ಕೊನೆಗೆ, ಮೈಸೂರು ಅರಮನೆ, ಕೆಲವು ಖಾಸಗಿ ಮನೆಗಳಲ್ಲಿ ಭಜನಾಮಂದಿರಗಳಲ್ಲಿ ಮಾತ್ರ ಈ ಸಾಂಪ್ರದಾಯಿಕ ಶೈಲಿಯ ಚಿತ್ರಗಳು ಉಳಿದುಕೊಂಡವು. ಹೊಸದಾಗಿ ಈ ಚಿತ್ರಗಳ ರಚನೆಗೆ ಅವಕಾಶಗಳೂ ಕಡಿಮೆ ಯಾದವು. ಯಾರೂ ಅದರತ್ತ ಗಮನ ನೀಡದಂತಹ ವಾತಾ ವರಣವೂ ಇದ್ದಿದ್ದರಿಂದ, ನಮ್ಮ ಶೈಲಿ ತೆರೆಮರೆಗೆ ಸರಿಯಿತು.

ಸರಳ ರೇಖೆಗಳನ್ನು ಸೃಜಿಸಿ ಸೂಕ್ಷ್ಮವಿನ್ಯಾಸದಿಂದ ಚಿತ್ರಗ ಳನ್ನು ಅಲಂಕಾರಗೊಳಿಸುವ ಪ್ರಾವೀಣ್ಯವುಳ್ಳ ಕಲಾವಿದರೂ ಕೆಲಸವಿಲ್ಲದೇ ಪ್ರೋತ್ಸಾಹವೂ ಇಲ್ಲದೇ ಕೈಕಟ್ಟಿ ಕೂತಿದ್ದರಿಂದ ಮೈಸೂರು ಶೈಲಿ ಚಿತ್ರಕಲೆಯ ಚಟುವಟಿಕೆಗಳು ಮಸುಕಾದವು.

ಕಲಾಕೃತಿಗಳ ಸಂಗ್ರಹ
ಕರ್ನಾಟಕ ಚಿತ್ರಕಲಾ ಪರಿಷತ್ತು ಸ್ಥಾಪನೆಗೊಂಡ ಮೇಲೆ ನಮ್ಮ ನೆಲದ ನೈಜ ಕಲೆಯತ್ತ ಗಮನ ಹರಿಯಲು ಸಾಧ್ಯವಾಯಿತು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳು ಕಲಾವಿದರೂ ಆಗಿದ್ದ ಎಂ.ಎಸ್. ನಂಜುಂಡರಾಯರು ಮೈಸೂರು ಪ್ರಾಂತ್ಯದುದ್ದಕ್ಕೂ ಚದುರಿಹೋಗಿದ್ದ ಕಲಾಕೃತಿಗಳನ್ನು ತಮ್ಮ ಸಹಕಲಾವಿದರೊಂದಿಗೆ ಪತ್ತೆ ಹಚ್ಚಿ ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದರು.

ಸಿರಿಮನೆ ಗುರುಮನೆಗಳಲ್ಲಿದ್ದ ಮೈಸೂರು ಶೈಲಿಯ ಚಿತ್ರ ಕೃತಿಗಳನ್ನು ಒಟ್ಟು ಮಾಡಿ, ಚಿತ್ರಕಲಾ ಪರಿಷತ್ತಿನ ಸಮುಚ್ಛಯದಲ್ಲಿ ಸಾಂಪ್ರದಾಯಿಕ ಕಲಾಕೃತಿಗಳಿಗೆಂದು ಶಾಶ್ವತ ಗ್ಯಾಲರಿಯನ್ನು ಪ್ರಾರಂಭಿಸಿದ ಪರಿಣಾಮ. ದೇಶವಿದೇಶಗಳ ಕಲಾವಿದ ಕಲಾಸಕ್ತರು, ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ಚಿತ್ರಕಲಾ ಪರಿಷತ್ತಿಗೆ ಬರುವಂತಾಗಿದೆ.

ಮೈಸೂರು ಶೈಲಿಯ ಕಲೆಯ ಪುನರುಜ್ಜೀವನಕ್ಕೆಂದು ಹೆಸರಾಂತ ಸಾಂಪ್ರದಾಯದ ಕಲಾವಿದ ವೈ. ಸುಬ್ರಮಣ್ಯರಾಜು ಅವರ ಮುಂದಾಳುತ್ವದಲ್ಲಿ ಆಸಕ್ತರಿಗೆ ತರಬೇತಿ ನೀಡುವುದನ್ನು ಚಿತ್ರಕಲಾ ಪರಿಷತ್ತು ಶುರು ಮಾಡಿತು.

ಚಿತ್ರಕಲಾ ಪರಿಷತ್ತಿನಲ್ಲಿ
ಮೈಸೂರು ಶೈಲಿ ಚಿತ್ರಕೃತಿಗಳನ್ನು ಒಪ್ಪ ಓರಣವಾಗಿ ಇಟ್ಟಿರುವ ಚಿತ್ರಕಲಾ ಪರಿಷತ್ತಿನ ಮ್ಯೂಸಿಯಂನಲ್ಲಿ ನೂರಕ್ಕೂ ಹೆಚ್ಚು ಆಕರ್ಷಕ ಕೃತಿಗಳಿವೆ.

ದೇವಾನುದೇವತೆಗಳ ಚಿತ್ರಗಳು, ರಾಜವಂಶ ಪ್ರಮುಖರ ಚಿತ್ರಗಳು, ಮೈಸೂರು ಒಡೆಯರ ವಂಶಾವಳಿ ಕೃತಿಗಳು ಮೈಸೂರು ಚಿತ್ರಶೈಲಿಯ ಪ್ರಾತಿನಿಧಿಕ ಚಿತ್ರಗಳು ಇಲ್ಲಿವೆ.

19ನೇ ಶತಮಾನದಲ್ಲಿ ರಚಿಸಲಾದ ಪುರಾಣ – ಇತಿಹಾಸ ಒಳಗೊಂಡ 109 ಬೃಹತ್ ಕೃತಿಗಳು ಎರಡು ಗ್ಯಾಲರಿಗಳಲ್ಲಿವೆ. ಆಸಕ್ತರಿಗೆ ಅಧ್ಯಯನ ಕೈಗೊಳ್ಳುವವರಿಗೆ ಅಮೂಲ್ಯವೆನಿಸುವ ಈ ಕೃತಿಗಳಿರುವ ಚಿತ್ರಕಲಾ ಪರಿಷತ್ತಿಗೆ ಯುನೆಸ್ಕೊ ‘ಶೈಕ್ಷಣಿಕ ತಾಣ’ದ ಮಾನ್ಯತೆ ನೀಡಿದೆ.

ಚಿತ್ರಕಲಾಪರಿಷತ್ತಿನ ಗ್ಯಾಲರಿಯಲ್ಲಿ ಕಾಣಸಿಗುವ ಬಹುತೇಕ ಎಲ್ಲಾ ಕೃತಿಗಳು ವಿಶೇಷವಾಗಿ ಸಂಸ್ಕರಿಸಲಾದ ಕಾಗದದ ಮೇಲೆ ಖನಿಜ ಬಣ್ಣಗಳು, ಸಸ್ಯಜನ್ಯ ಬಣ್ಣಗಳನ್ನು ಬಳಸಿ ಕೃತಿಗಳನ್ನು ರಚಿಸಲಾಗಿದೆ. ಇದರಲ್ಲಿ ಬಂಗಾರದ ಪುಡಿಯನ್ನು ಉಪಯೋಗಿಸಿರುವುದು ಉಲ್ಲೇಖಾರ್ಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು