ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದ ಕುಕ್ಕೆ ಜನ್ಮಶತಮಾನೋತ್ಸವ

Last Updated 21 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಭಾವಚಿತ್ರಗಳ ರಚನೆಯಲ್ಲಿ ಸಿದ್ಧಹಸ್ತರಾದ ಕಲಾವಿದ ಎಸ್‌.ಎಸ್‌.ಕುಕ್ಕೆ ಅವರ ಜನ್ಮಶತಮಾನೋತ್ಸವ ಸಂಭ್ರಮ ಫೆ.25ರಂದು ನಡೆಯಲಿದೆ. ಈ ಪ್ರಯುಕ್ತ ಫೆ.23ರಿಂದ 28ರವರೆಗೆ ಕುಕ್ಕೆ ಕಲಾಕೃತಿಗಳ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಹಮ್ಮಿಕೊಂಡಿದೆ.

ಹಲವಾರು ಕಲಾಕೃತಿಗಳನ್ನು ರಚಿಸಿ ಪ್ರಸಿದ್ಧರಾದ ಕುಕ್ಕೆ ಅವರು, ಪ್ರಾಚೀನ ಬೃಹತ್‌ ಕಾವ್ಯಗಳು ಮತ್ತು ಪೌರಾಣಿಕ ಕಥಾನಕಗಳನ್ನು ಒಳಗೊಂಡು ರಚಿಸಿದ ಚಿತ್ರಗಳು ಗಮನ ಸೆಳೆಯುವಂಥವು. ಸುಂದರವಾದ ವರ್ಣ ಸಂಯೋಜನೆ, ನೀಳವಾದ ರೇಖಾಕೃತಿಗಳು ಹಾಗೂ ಅರ್ಥಪೂರ್ಣವಾದ ರಚನೆಗಳನ್ನು ಕುಕ್ಕೆ ಅವರ ಕಲಾಕೃತಿಗಳಲ್ಲಿ ಕಾಣಬಹುದು.

ಎಸ್‌.ಎಸ್‌.ಕುಕ್ಕೆ
ಎಸ್‌.ಎಸ್‌.ಕುಕ್ಕೆ

ತೈಲವರ್ಣ, ಜಲವರ್ಣಗಳನ್ನು ಲೀಲಾಜಾಲವಾಗಿ ಬಳಸಬಲ್ಲ ಚಾಕಚಕ್ಯತೆ ಅವರಲ್ಲಿತ್ತು. ಅವರು ರಚಿಸಿದ ಶೃಂಗೇರಿ ಜಗದ್ಗುರುಗಳ ಭಾವಚಿತ್ರಗಳು ಅವರ ಕ್ರಿಯಾತ್ಮಕತೆ ಮತ್ತು ಶೈಲಿಗೆ ಉತ್ತಮ ಉದಾಹರಣೆ. ತಮ್ಮದೇ ಕಲಾ ಗ್ಯಾಲರಿಯನ್ನು ಸ್ಥಾಪಿಸಿದ್ದ ಅವರು, ಹಲವಾರು ಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದರು.

ಹಲವಾರು ಕಲಾ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಮೈಸೂರು ದಸರಾ ವಸ್ತುಪ್ರದರ್ಶನದ ಪ್ರಶಸ್ತಿಗೆ ಹಲವು ಬಾರಿ ಭಾಜನರಾಗಿದ್ದ ಅವರಿಗೆ 1982ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವವೂ ದೊರೆತಿತ್ತು.

1956–60ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಸುಂದರವಾದ ಮಹಾದ್ವಾರವನ್ನು ನಿರ್ಮಿಸುವಲ್ಲಿ ಕುಕ್ಕೆಯವರ ಪಾತ್ರವಿತ್ತು. ಎಂ. ಆರ್ಯಮೂರ್ತಿ, ಪ್ರೊ. ಎಂ.ಎಸ್‌.ನಂಜುಂಡರಾಯ ಅವರನ್ನೊಳಗೊಂಡ ಚಿತ್ರಕಲಾ ಪರಿಷತ್ತಿನ ಸ್ಥಾಪನೆಯಲ್ಲಿಯೂ ಕುಕ್ಕೆ ಅವರದ್ದು ಪ್ರಮುಖ ಪಾತ್ರ. ಆರಂಭದಲ್ಲಿ ಕೇವಲ ಕಲಾ ಚಟುವಟಿಕೆಗಳ ಸಂಘವಾಗಿ ಪ್ರಾರಂಭವಾಗಿ ನಂತರ ಚಿತ್ರಕಲಾ ವಿದ್ಯಾಲಯವು ಕಲಾ ತರಗತಿಗಳನ್ನು ಪ್ರಾರಂಭಿಸಿದಾಗ ಮೊದಲ ಪ್ರಾಂಶುಪಾಲರಾದದ್ದು ಕುಕ್ಕೆಯವರೆ. ಪರಿಷತ್ತಿನ ಉಪಾಧ್ಯಕ್ಷರಾಗಿ, ಪೊ. ನಂಜುಂಡರಾಯರ ಹೆಗಲಿಗೆ ಹೆಗಲು ಕೊಟ್ಟು ಪರಿಷತ್ತನ್ನು ಕಟ್ಟುವಲ್ಲಿ ಕುಕ್ಕೆ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಕಲಾ ಶಿಕ್ಷಣವನ್ನು ಪಡೆದು ಖ್ಯಾತನಾಮರಾಗಿದ್ದಾರೆ.

ಕಲಾಕೃತಿಗಳ ಪ್ರದರ್ಶನ: ಕುಕ್ಕೆ ಅವರು ರಚಿಸಿರುವ ಕಲಾಕೃತಿಗಳ ಪ್ರದರ್ಶನ (ಫೆ.23ರಿಂದ 28ರವರೆಗೆ). ಫೆ.23ರಂದು ಬೆಳಿಗ್ಗೆ 10.30 ಗಂಟೆಗೆ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳು– ವಿಮರ್ಶಕ ಪ್ರೊ. ಎಂ.ಎಚ್‌.ಕೃಷ್ಣಯ್ಯ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸದಸ್ಯ ಗೋಪಾಲ್‌ ಎಸ್‌. ಕುಕ್ಕೆ. ಅಧ್ಯಕ್ಷತೆ– ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್‌. ಶಂಕರ್‌. ನಿತ್ಯ ಬೆಳಿಗ್ಗೆ 10.30ರಿಂದ ರಾತ್ರಿ 7 ಗಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT