ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಪೆಗಳ ‘ಲೀಲಾ’ಜಾಲ

Last Updated 4 ಜುಲೈ 2018, 10:02 IST
ಅಕ್ಷರ ಗಾತ್ರ

ಏಕಾಂತವ ಆನಂದಿಸಲು ಹೂ ತೋಟ, ಸುಂದರ ಪರಿಸರದಲ್ಲಿ ರೂಪುಗೊಂಡ ಪುಟ್ಟ ಗ್ರಾಮ, ಸಮುದ್ರದ ಮಧ್ಯದಲ್ಲೊಂದು ಅಂದದ ಅರಮನೆ, ಸ್ವಚ್ಛಂದ ಸ್ವಾತಂತ್ರ್ಯವನ್ನು ಆಸ್ವಾದಿಸುತ್ತಿರುವ ಹಕ್ಕಿಗಳು, ಪ್ರಾಣಿ ಪಕ್ಷಿಗಳು ಕೂಡಿ ಬಾಳುತ್ತಿರುವ ದೃಶ್ಯಗಳು!

ಇದಾವುದು ಕಲ್ಪನೆಯಲ್ಲ. ಲೀಲಾ ಚೆರಿಯನ್‌ ಅವರ ಕೈಚಳಕದಲ್ಲಿ ಬಟ್ಟೆಯ ಮೇಲೆ ಮೂಡಿರುವ ಕಲಾತ್ಮಕ ಚಿತ್ರಗಳು. ಬಣ್ಣ ಬಣ್ಣದ ತರಹೇವಾರಿ ಬಟ್ಟೆಗಳು, ದಾರ, ಹೊಲಿಗೆಯಂತ್ರದ ಮೂಲಕ ಮನದಾಳದ ಕಲ್ಪನೆಗಳಿಗೆ ರಚನಾತ್ಮಕ ರೂಪ ನೀಡುವುದರ ಮೂಲಕ ತನ್ನ ಕನಸುಗಳಿಗೆ ಬಣ್ಣಗಳಿಂದ ಭಾವ ತುಂಬಿ, ಜೀವಂತವಾಗಿಸುವ ವಿಭಿನ್ನ ಶೈಲಿಯೊಂದನ್ನು ಪರಿಚಯಿಸಿ, ಅದರಲ್ಲೆ ಮಗ್ನರಾಗಿದ್ದಾರೆ.

ಅಲ್ಲಲ್ಲಿ ಚದುರಿ ಹೋದ ಬಟ್ಟೆಗಳಲ್ಲಿ ಮೋಡ ತಳೆಯುವ ಆಕಾರದಂತೆ ಕತ್ತರಿಸಿ, ಅವನ್ನೇ ಒಪ್ಪವಾಗಿಸಿ, ಓರಣ ಮಾಡಿ, ತೇಪೆ ಹಾಕುತ್ತಲೇ ಕಲಾಕೃತಿ ರಚಿಸುವುದು ಲೀಲಾ ಅವರಿಗೆ ಲೀಲಾಜಾಲವಾಗಿ ಒಲಿದಿದೆ. ಓದಿದ್ದು ತತ್ವಶಾಸ್ತ್ರ..

ವಿವಿಧ ಬಣ್ಣದ ಚಿಂದಿ ಬಟ್ಟೆಗಳನ್ನು ತಮಗೆ ಅಗತ್ಯವಿರುವ ವಿನ್ಯಾಸದಲ್ಲಿ ಬಟ್ಟೆಯನ್ನು ಕತ್ತರಿಸಿಕೊಂಡು ಹೊಲಿಗೆ ಯಂತ್ರದ ಮೂಲಕ ಚಿತ್ರವನ್ನು ಸಿದ್ಧಪಡಿಸಿಕೊಂಡು ಅಚ್ಚುಕಟ್ಟಾಗಿ ತೇಪೆ ಹಾಕುತ್ತಲೇ ಕಲಾಕೃತಿಗಳನ್ನು ರಚಿಸುತ್ತಾರೆ. ಈ ಮೂಲಕ ಮನೆ, ಪಕ್ಷಿ, ಪರಿಸರ, ಹಳ್ಳಿ, ವ್ಯಕ್ತಿಗಳು ಹೀಗೆ ಅವ್ಯಕ್ತ ಭಾವನೆಗಳಿಗೆ ಜೀವ ತುಂಬಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡುತ್ತಾರೆ.

‘ಗರ್ಭಿಣಿಯಾಗಿದ್ದಾಗ ಮನೆಯ ಕೆಲಸಗಳೆಲ್ಲಾ ಮುಗಿದಾದ ಮೇಲೆ ಉಳಿದ ಸಮಯದಲ್ಲಿ ಹುಟ್ಟುವ ಮಗುವಿಗಾಗಿ ಬಣ್ಣದ ಬಟ್ಟೆಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದೆ. ಆ ಸಮಯದಲ್ಲಿ ನನಗೆ ಪರಿಚಯವಾಗಿದ್ದು ಕಸೂತಿ ಕಲೆ. ಈ ಕಲೆಯ ಬಗ್ಗೆ ಅಷ್ಟೇನು ತಿಳಿವಳಿಕೆ ನನಗಿರಲಿಲ್ಲ. ನಾನು ಕಲಿಯುತ್ತಿದ್ದ ಸಮಯದಲ್ಲಿ ಮಾಹಿತಿ ದೊರಕುವುದು ಕಷ್ಟವಾಗಿತ್ತು. ಪುಸ್ತಕಗಳೇ ನನ್ನ ಗುರು. ಪುಸ್ತಕಗಳಲ್ಲಿನ ವಿನ್ಯಾಸಗಳನ್ನು ಗಮನಿಸುತ್ತಾ ಅದನ್ನು ಪ್ರಾಯೋಗಿಕವಾಗಿ ಬಟ್ಟೆಯ ಮೇಲೆ ತುಂಡು ಬಟ್ಟೆಗಳ ಸಹಾಯದಿಂದ ಹೆಣೆಯಲು ಆರಂಭಿಸಿದೆ. ಮೊದಲೆಲ್ಲಾ ಕಷ್ಟವಾಗುತ್ತಿತ್ತು. ಆದರೆ ಈ ಕಲೆಯ ಬಗ್ಗೆ ನನಗಿದ್ದ ಆಸಕ್ತಿ ಮತ್ತು ಪ್ರೀತಿ ನನ್ನಲ್ಲಿ ಹುಮ್ಮಸ್ಸು ತುಂಬಿತು. ಈ ಕಲೆಯನ್ನು ಕಲಿಯಲೂ ವಿಶೇಷ ತರಬೇತಿಯನ್ನು ಪಡೆದಿಲ್ಲ. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಕೈಬೆರಳಿಗೆ ಮಾಹಿತಿ ದೊರಕುವಂತಾಗಿದೆ. ಅಂತರ್ಜಾಲವನ್ನು ಈ ಕಲೆಯ ಕಲಿಕೆಗಾಗಿ ಬಳಸಬಹುದಾಗಿದೆ. ಈ ಕಲೆಯು ತಾಳ್ಮೆಯನ್ನು ಕಲಿಸುತ್ತದೆ. ಯಾವುದೇ ಚಿತ್ರವನ್ನು ರೂಪಿಸಲು ತಾಳ್ಮೆ ಅತ್ಯಗತ್ಯ ಹಾಗಾಗಿ ಈ ಕಲೆ ಒಂದು ರೀತಿಯ ತಪಸ್ಸು’ ಎನ್ನುತ್ತಾರೆ ಚೆರಿಯನ್‌.

‘ಈ ಕಲೆ ಕಲಿತ ಹೊಸತರಲ್ಲಿ ತುಂಬಾ ಸರಳವಾದ ಕಸೂತಿ ಕೆಲಸವೂ ಹೆಚ್ಚು ಸಮಯ ಹಿಡಿಸುತ್ತಿತ್ತು. ಯಾವ ಬಣ್ಣದ ಬಟ್ಟೆ ಬಳಸಬೇಕು? ಯಾವ ಚಿತ್ರ ಬಿಡಿಸಲಿ? ಹೀಗೆ ನಾನಾ ಗೊಂದಲಗಳು ಕಾಡುತ್ತಿದ್ದವು. ಹೀಗೆ ಕಲಿಯುತ್ತಾ, ನನ್ನದೇ ಆದ ಕಲ್ಪನೆಯಲ್ಲಿ ಚಿತ್ರ ಬಿಡಿಸಲು ಆರಂಭಿಸಿದೆ.ಯಾವುದೇ ಒಂದು ಚಿತ್ರವನ್ನು ರಚಿಸಲು ಅದರದ್ದೇ ಆದ ಸಮಯ ಬೇಕಾಗುತ್ತದೆ.ನನ್ನ ಕಲ್ಪನೆಯ ಹಳ್ಳಿಯನ್ನು ರೂಪಿಸಲು ಎರಡು ವಾರಗಳೇ ಬೇಕಾಯಿತು. ಅದರಲ್ಲಿನ ಪ್ರತಿ ಚಿತ್ರವನ್ನು ಕಲ್ಪಿಸಿಕೊಂಡು ರೂಪುಕೊಡುವುದು, ಅದಕ್ಕೆ ತಕ್ಕುದಾದ ಬಣ್ಣದ ಬಟ್ಟೆಗಳ ಹೊಂದಿಕೆ, ಕೈ ಕಸೂತಿ ಕೆಲಸ ಇವೆಲ್ಲವೂ ಏಕಾಗ್ರತೆಯನ್ನು ಬಯಸುತ್ತಿತ್ತು. ಎಷ್ಟೋ ಸಮಯ ಪದೇ ಪದೇ ಬಣ್ಣದ ಬಟ್ಟೆಗಳನ್ನು ಬದಲಿಸುತ್ತಿದ್ದೆ’ ಎನ್ನುತ್ತಾರೆ ಅವರು.

‘ಕುಟುಂಬದವರು, ಸ್ನೇಹಿತರು ಈ ಕಲೆಯನ್ನು ಇಷ್ಟ ಪಡುವುದರ ಜೊತೆಗೆ ಇದನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದ್ದಾರೆ. ಆಸಕ್ತಿ ಮತ್ತು ಉತ್ಸಾಹವಿದ್ದಲ್ಲಿ ಯಾವ ಕಲೆಯಾದರೂ ಸುಂದರವಾಗಿ ರೂಪುಗೊಳ್ಳುತ್ತದೆ. ಕಸೂತಿ ಕಲೆಯ ಬಗ್ಗೆ ನನಗಿದ್ದ ಆಸಕ್ತಿಯೇ ನನನ್ನು ಗುರುತಿಸಿಕೊಳ್ಳುವಂತೆ ಮಾಡಿದೆ’ ಎಂದರು.

ಇವರು ರಚಿಸಿರುವ ಈ ಕಲಾಕೃತಿಗಳು ಅಮೆರಿಕ, ಬೆಂಗಳೂರಿನಲ್ಲಿ ಪ್ರದರ್ಶನಗೊಂಡಿವೆ.

ಫೇಸ್‌ಬುಕ್‌ ಕೊಂಡಿ: cherian design

ಸಂಪರ್ಕಕ್ಕಾಗಿ: 9886037663

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT