ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರು ಶಿಲ್ಪ ಕಲಾಪ್ರಿಯ

ಬೆಳ್ತಂಗಡಿ ತಾಲ್ಲೂಕು ವೇಣೂರು ಸಮೀಪದ ಕುಕ್ಕೇಡಿ ಗ್ರಾಮದ ಶಂಕರನಾರಾಯಣ ಭಟ್
Last Updated 20 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಯಕ್ಷಾಂಗಣದ ಚೌಕಿಯ ದೇವಮಂಟಪದ ಎದುರು ರಾರಾಜಿಸುವ ಜೋಡಿ ಸಿಂಹಗಳು. ತೆಂಕು ತಿಟ್ಟು ಚೆಂಡೆವಾದಕರ ಕೈಯಲ್ಲಿ ನಾದ ಹೊಮ್ಮಿಸುವ ಚೆಂಡೆ ಕೋಲುಗಳು. ಗುರುಪೀಠದ ಮಂತ್ರಾಕ್ಷತೆ ಇಡುವುದಕ್ಕಾಗಿಯೇ ವಿನ್ಯಾಸಗೊಳಿಸಿದ ಕೂರ್ಮಾಕೃತಿಯ ಎತ್ತರಿಸಿದ ಪೀಠ. ಗುರು ಪಾದುಕೆಗಳು, ದೇವ ನರ್ತನದ ಪ್ರಭಾವಳಿಗಳು- ಇವೆಲ್ಲದರ ಹಿಂದೆ ಕುಶಲಕರ್ಮಿಯೊಬ್ಬರ ಅವಿಶ್ರಾಂತ ದುಡಿಮೆ ಇದೆ. ಕಲ್ಪನೆಯ ಒಳನೋಟವಿದೆ.

ಇವರು ಬೆಳ್ತಂಗಡಿ ತಾಲ್ಲೂಕು ವೇಣೂರು ಸಮೀಪದ ಕುಕ್ಕೇಡಿ ಗ್ರಾಮದ ಶಂಕರನಾರಾಯಣ ಭಟ್. ಆಪ್ತರಿಗೆ ಕೊಂಕಣಾಜೆ ರಮೇಶಣ್ಣ. ‘ಶಾಲಾ ದಿನಗಳಲ್ಲಿ ನನಗೆ ಕಲೆಯಲ್ಲಿ ವಿಶೇಷ ಆಸಕ್ತಿ’ ನೆನಪಿಸುತ್ತಾರೆ ರಮೇಶಣ್ಣ. ಶೋ ಕೇಸಲ್ಲಿ ಇಡುವ ಅಲಂಕಾರಿಕ ವಸ್ತುಗಳನ್ನು ದುಡ್ಡು ಕೊಟ್ಟು ತರುವ ಬದಲು ಸ್ವಂತ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ಮೊದಮೊದಲು ಒಂದೇ ಉಳಿಯಲ್ಲಿ ಮರದ ತುಂಡನ್ನು ಕೆತ್ತುತ್ತಲೇ ಹಲವು ರೂಪಗಳನ್ನು ಕೊಡಲು ಪ್ರಯತ್ನಿಸಿದೆ. ಅನಂತರ ಅವಶ್ಯಕತೆಗೆ ತಕ್ಕಂತೆ ಸಲಕರಣೆಗಳನ್ನು ಜೋಡಿಸಿಕೊಂಡು ಚೆಂಡೆ, ಮದ್ದಳೆ, ಮೃದಂಗ, ನಗಾರಿ, ಕೈಮರಿಗೆ, ಸೌಟು, ಪಿಸ್ತೂಲು, ಆಮೆ, ಕಪ್ಪೆ, ನೊಗ, ನೇಗಿಲು, ದೋಣಿ, ಪಿಟೀಲು, ವೀಣೆ ಹೀಗೆ ಹಲವು ಮಾದರಿಗಳು ಸಿದ್ಧವಾದವು, ಶೋಕೇಸಿನ ತುಂಬೆಲ್ಲ ಆವರಿಸಿಕೊಂಡವು’ ಎನ್ನುತ್ತಾರೆ.

ಕೂರ್ಮರೂಪಿ ಪೇಪರ್ ವೈಟ್, ರೆಕ್ಕೆಯೊಳಗೆ ತಿರುಗುವ ಗೋಳವನ್ನು ಕೆತ್ತಿ ಅಳವಡಿಸಿದ ಬಾತುಕೋಳಿ ಇವರ ಕ್ರಿಯಾಶೀಲ ಸೂಕ್ಷ್ಮಜ್ಞತೆಗೆ ಸಾಕ್ಷಿ. ಪತ್ರಿಕೆಗಳಲ್ಲಿ ಬರುವ ‘ಚಿಟ್ಟೆ’ ಫೋಟೊಗಳು ಇವರಿಗೆ ವಿಶೇಷ ಅನಿಸಲಿಲ್ಲ. ಜೀವಂತ ಚಿಟ್ಟೆಯನ್ನು ನೋವಾಗದಂತೆ ಬಂದಿಯಾಗಿಸಿ ಅದರ ಗಾತ್ರ, ಆಕಾರ ಮತ್ತು ಬಣ್ಣಗಳ ಸೂಕ್ಷ್ಮತೆಗಳೆಲ್ಲವನ್ನೂ ಹಳತಾದ ಮದುವೆ ಆಮಂತ್ರಣ ಪತ್ರಿಕೆಗಳ ಖಾಲಿ ಹಾಳೆಗಳಲ್ಲಿ ಪಡಿ ಮೂಡಿಸಿದಾಗಲೆ ಇವರಿಗೆ ಸಮಾಧಾನ, ಚಿಟ್ಟೆಗೂ ಸ್ವಾತಂತ್ರ್ಯ.

ಇಂಥ ಹತ್ತಾರು ‘ಚಿಟ್ಟೆ ಚಿತ್ರಗಳು’ ಶಾಲಾ ವಸ್ತು ಪ್ರದರ್ಶನ ಸಮಯದಲ್ಲಿ ಸಾವಿರಾರು ಕಣ್ಮನಗಳನ್ನು ಸೂರೆಗೊಂಡು ಅವರಾರದೋ ಬೆಚ್ಚನೆಯ ಕಪಾಟು ಸೇರಿರುವುದು, ಈ ಕಲಾವಿದನಿಗೆ ಸಂದ ಗೌರವವೋ ಇಲ್ಲ ವೀಕ್ಷಕರ ಸಣ್ಣತನವೋ ಎನ್ನುವಾಗ ನೋವಿನ ಹಿಂದೆಯೂ ಅವರ ಹೃದಯ ವೈಶಾಲ್ಯ ಎದ್ದು ಕಾಣುತ್ತದೆ.

ಕೆತ್ತನೆಗೆ ಯಾವ ಜಾತಿಯ ಮರವೂ ಆದೀತು. ಶೇಕಡ 90ರಷ್ಟಾದರೂ ಒಣಗಿರಬೇಕು. ಹಸಿಯಾದರೆ ಒಣಗುವಾಗ ಸಂಕುಚಿತಗೊಂಡು ಬಿರಿಯಬಹುದು, ಬೂಸರೂ ಬರಬಹುದು. ಹಲಸು, ಸಂಪಿಗೆ, ದೇವದಾರು, ಶಿವನೆ, ಮೈರೋಳು ದೇವ ವೃಕ್ಷಗಳೆಂದು ಗುರುತಿಸಲ್ಪಟ್ಟರೆ ತೇಗ, ಬೀಟೆ ಮರಗಳನ್ನೂ ಬಳಸಬಹುದು. ಕರ್ನಾಟಕದ ತೇಗದ ಮರದಲ್ಲಿ ನೈಸರ್ಗಿಕವಾಗಿ ತೈಲದ ಅಂಶ ಹೆಚ್ಚಾಗಿರುವುದರಿಂದ ದೀರ್ಘ ಬಾಳಿಕೆ ಹಾಗೂ ಆಕರ್ಷಕ ಬಣ್ಣವಿರುತ್ತದೆ. ಬಿಳಿ ಭಾಗಕ್ಕಿಂತ ತಿರುಳು ಹೆಚ್ಚು ಸೂಕ್ತ.

ದೇವರ ಕೋಣೆಯ ಮುಂಬಾಗಿಲು, ಮಂಟಪ, ಪ್ರಭಾವಳಿ, ಮಣೆ ಅಲ್ಲದೆ ಮೆಟ್ಟು ಕತ್ತಿ, ಹೆರೆಮಣೆ, ಮೇಜು, ಕುರ್ಚಿ, ಬಾಗಿಲು, ಕಿಟಕಿ, ಚೌಕಟ್ಟು ಹೀಗೆ ಬೇಡಿಕೆಗೆ ಅನುಗುಣವಾಗಿ ಮರದ ಕೆತ್ತನೆಯನ್ನು ರಮೇಶಣ್ಣ ಹೊಸತನದ ಸ್ಪರ್ಶದೊಂದಿಗೆ ಮಾಡಿ ಕೊಡುವುದಿದೆ. ಊಟದ ಮೇಜು ಚೌಕ ಇಲ್ಲವೆ ಆಯತಾಕಾರದಲ್ಲಿದ್ದರೆ 4 ಮೂಲೆಗಳು ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆಂದೇ 41/2 ಅಡಿ ವ್ಯಾಸದ ವೃತ್ತಾಕಾರದ ಗಾಜಿನ ಮೇಲ್ಮೈ ಹೊಂದಿರುವ ಚತುರ್ಭುಜಧಾರಿ ಒಂಟಿಗಂಬದ ಟೇಬಲ್ ವಿನ್ಯಾಸಗೊಳಿಸಿದ್ದಾರೆ. ಇದರಲ್ಲಿ 7-8 ಜನ ಒಟ್ಟಿಗೆ ಕುಳಿತರೆ ಕೈತಾಟುವ ಸಮಸ್ಯೆಯಿಲ್ಲ ಎನ್ನುವುದು ಇದರ ಹೆಚ್ಚುಗಾರಿಕೆ.

ವಯೋವೃದ್ಧರಿಗೆ, ಸೇವಾ ನಿವೃತ್ತರಿಗೆ ಅನುಕೂಲವಾಗಲೆಂದೇ ಕುಳಿತು-ಮಲಗುವ ಆರಾಮಕುರ್ಚಿ ನೋಡಿದರಷ್ಟೇ ಸಾಲದು, ಒಮ್ಮೆ ಕುಳಿತು ನೋಡಿ ಎಂದು ಆಹ್ವಾನವೀಯುವಂತಿದೆ. ಆಕಸ್ಮಿಕವೊಂದರಲ್ಲಿ ಕೈಯೊಂದು ಊನವಾಗಿದ್ದರೂ ಇಬ್ಬರು ಸಹಾಯಕರೊಂದಿಗೆ ರಮೇಶಣ್ಣನ ಕಲ್ಪನೆಯ ಕೆತ್ತನೆ ರೂಪು ಪಡೆಯುತ್ತಿದೆ, ಜಾತಿ ಆಧಾರಿತ ವೃತ್ತಿ ಪರಂಪರೆಯನ್ನು ಮೀರಿದ ಹವ್ಯಾಸವೊಂದು ಇಂದು ಕೃಷಿಯೊಂದಿಗೆ ಪೂರಕ ಪ್ರವೃತ್ತಿಯಾಗಿ ರಮೇಶರ ಕೈಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT