ಶ್ರಾವಣ ‘ಸೀರೆ’ ಸಡಗರ

7

ಶ್ರಾವಣ ‘ಸೀರೆ’ ಸಡಗರ

Published:
Updated:

ಜಿ ಟಿಜಿಟಿ ಹನಿಯುವ ಮಳೆ, ಭರ್ರೋ ಬೀಸುವ ಸುಳಿಗಾಳಿ, ಶ್ರಾವಣಿ ನಸುನಗುತ್ತ ಕಾಲಿಟ್ಟಿದ್ದಾಯ್ತು. ಅಷ್ಟರೊಳಗೆ ಮನೆ ಸ್ವಚ್ಛಮಾಡಿ, ಪಾತ್ರೆ–ಪಗಡೆ ತೊಳೆದಿಟ್ಟು, ದೇವರ ಸಾಮಾನುಗಳನ್ನೂ ಓರಣ ಮಾಡಿ, ಪೂಜಾ ಸಾಮಗ್ರಿಗಳನ್ನ ಜೋಡಿಸಿಕೊಂಡಿದ್ದೂ ಆಯ್ತು. ಅರರೆ…! ಅದಕ್ಕೂ ಮುನ್ನ ಆಗಲೇಬೇಕಿರುವುದು ಸೀರೆ ಖರೀದಿ. ಅದನ್ನ ಹೇಗೆ ಮರೆಯಲಾದೀತು!‌

ಅಷ್ಟಕ್ಕೂ ಸೀರೆ ಅಂದರೆ ಅದು ಬರೀ ಒಂದು ದಿರಿಸಲ್ಲ. ಭಾವ–ಬಂಧನದ ಬೆಸುಗೆ. ನಮ್ಮ ಆಸಕ್ತಿ–ಅಭಿರುಚಿಯ ಕೈಗನ್ನಡಿ. ವ್ಯಕ್ತಿತ್ವದ ಪ್ರತೀಕ. ಒಂದೊಂದು ಸೀರೆಯ ಹಿಂದೆಯೂ ಒಂದೊಂದು ಕತೆ. ಮಡಚಿ ಬೀರುವಿನಲ್ಲಿಟ್ಟ ಸೀರೆಯನ್ನು ಹೊರಗೆಳೆದಾಗೊಮ್ಮೆ ಹೊಸದೇ ರೀತಿಯಲ್ಲಿ ಅಮರಿಕೊಳ್ಳುವ ಸೀರೆಯೊಂದಿಗಿನ ನೆನಪುಗಳು, ಗರಿಗೆದರುವ ಪುಳಕಗಳು....

ಮದುವೆಯಾದ ಮೇಲೆ ಅಮ್ಮ ಕೊಟ್ಟ ಮೊದಲ ಸೀರೆ, ಸೀಮಂತದ ಹಸಿರು ಸೀರೆ, ಅಕ್ಕನ ಬೀರುವಿನಲ್ಲಿ ತಡಕಾಡಿ ಕಿತ್ತುಕೊಂಡ ಕಡುನೀಲಿ ಸೀರೆ... ನಾದಿನಿಯಿಂದ ಕೇಳಿ ಪಡಕೊಂಡಿದ್ದು, ಗಂಡನಿಂದ ಹಟ ಮಾಡಿ ಕೊಡಿಸಿಕೊಂಡಿದ್ದು, ಅತ್ತೆಯಿಂದ ಬಯಸದೇ ಬಂದಿದ್ದು... ಸೇಲ್‌ನಲ್ಲಿ ಖರೀದಿಸಿದ್ದು… ಹೀಗೆ ಪ್ರತಿ ಸೀರೆಯೊಂದಿಗೆ ಅದರದೇ ಆದ ಭಾವಬೆಸುಗೆಗಳಿರುತ್ತವೆ.

ಹೌದು, ಶ್ರಾವಣ ಮುಂದಿರುವಾಗ ಹೆಣ್ಮಕ್ಕಳ ಮನದೊಳಗೆ ಸೀರೆಯ ಸಡಗರ ರಿಂಗಣಿಸಲು ಶುರುವಾಗುತ್ತದೆ. ಮಂಗಳ ಗೌರಿ ಪೂಜೆ, ವರಮಹಾಲಕ್ಷ್ಮೀ ಪೂಜೆ... ವಾರಕ್ಕೊಂದು ಸಂಭ್ರಮ, ಸಂಭ್ರಮಕ್ಕೊಂದು ಸೀರೆ.

ಇದನ್ನರಿತ ಸೀರೆ ವ್ಯಾಪಾರಿಗಳೂ ಸಗಟು ಅಂಗಡಿಗಳಿಂದ ಹಿಡಿದು, ಚಿಲ್ಲರೆ ಮಳಿಗೆ, ಸೇಲ್‌ಗಳು, ಡಿಸೈನರ್‌ ಶಾಪ್‌ಗಳಲ್ಲೆಲ್ಲ ಈಗ ಸೀರೆಗಳದ್ದೇ ಸರಭರ ಸದ್ದು. ‘ಅರ್ಧಬೆಲೆ’ಯ ರೋಮಾಂಚನ ಒಂದೆಡೆ. ಶೇ 80ರಷ್ಟು ಆಫರ್‌ಗಳಿಗೆ ಮುಗಿ ಬೀಳುವವರದೇ ಒಂದು ವರ್ಗ. ‘ಒಂದು ಕೊಂಡರೆ ಒಂದು ಉಚಿತ’, ‘ಒಂದು ಕೊಂಡರೆ ಎರಡು ಫ್ರೀ’ ಎನ್ನುವ ಜಾಹೀರಾತು ಪುಟಗಳನ್ನು ಬ್ಯಾಗಲ್ಲಿಟ್ಟುಕೊಂಡು ಓಡುವವರ ಸಾಲೂ ಇದೆ.

‘ಒಂದು ಕೊಂಡರೆ ಒಂದು ಫ್ರೀ ಕೊಡುತ್ತಾರೊ, ನಾಲಕ್ಕು ಫ್ರೀ ಕೊಡುತ್ತಾರೊ… ನಾನಂತೂ ಅಂಥದ್ದಕ್ಕೆಲ್ಲ ಮಾರು ಹೋಗುವುದಿಲ್ಲ. ನಿರ್ದಿಷ್ಟ ಅಂಗಡಿಗಳಿಗೆ ಹೋಗಿ ಸೀರೆ ಕೊಳ್ಳುತ್ತೇನೆ. ಇನ್ನು ಗಿಫ್ಟ್‌ ಕೊಡುವವರಿಗೂ ಅಷ್ಟೇ, ಎಂಥದೊ ಸೀರೆ ಕೊಡುವುದಿಲ್ಲ. ಅವರ ಆಸಕ್ತಿ, ಅಭಿರುಚಿ, ವಯಸ್ಸು ನೋಡಿ ಅವರಿಗೆ ಇಷ್ಟವಾಗುವಂಥದ್ದನ್ನೇ ಗಿಫ್ಟ್‌ ಕೊಡುತ್ತೇನೆ’ ಎನ್ನುವುದು ಜಮುನಾ ಪುರುಷೋತ್ತಮ್ ಅವರ ನೇರ ನುಡಿಗಳು.

‘ಈಗ ಇರುವಷ್ಟು ಆಫರ್‌ಗಳು ದೀಪಾವಳಿಗೂ ಇರುವುದಿಲ್ಲ ಎನ್ನಿ. ಅದಕ್ಕೇ ನಾನು ಪ್ರತಿವರ್ಷ ಆಷಾಢದಲ್ಲೇ ಒಳ್ಳೊಳ್ಳೆ ಸೀರೆಗಳನ್ನು ಖರೀದಿಸುತ್ತೇನೆ. ದೀಪಾವಳಿಗೂ, ಗಣೇಶ ಹಬ್ಬಕ್ಕೂ, ವರಮಹಾಲಕ್ಷ್ಮೀ ಹಬ್ಬಕ್ಕೂ ಒಟ್ಟಿಗೇ ಖರೀದಿಯಾಗುತ್ತದೆ. ನಾಲ್ಕಾರು ಕಡೆ ನೋಡಿ, ಹೋಲಿಸಿ ಒಂದು ಕಡೆ ಸೀರೆ ಆಯ್ದುಕೊಳ್ಳುತ್ತೇನೆ. ಸೀರೆ ಕೊಳ್ಳುವುದು ವರ್ಷಕ್ಕೊಂದೇ ಬಾರಿ. ಅದು ಮನಸ್ಸಿಗೊಪ್ಪುವಂತಿರಬೇಕು. ಬೆಲೆಯೂ ತೃಪ್ತಿದಾಯಕವಾಗಿರಬೇಕು ಎನ್ನುವುದು ನನ್ನ ಆದ್ಯತೆ’ ಎನ್ನುತ್ತಾರೆ ರೂಪಾ ನಿರ್ಮಲ್‌.

***

‘ನಮ್ಮಲ್ಲಿ ಯಾವಾಗಲೂ ಆಫರ್‌, ಸೇಲ್‌ಗಳ ಗೊಡವೆಯೇ ಇಲ್ಲ. ಈ ವರ್ಷದ ತಾಜಾ ತಾಜಾ ಸೀರೆಗಳನ್ನು, ಚಾಲ್ತಿಯಲ್ಲಿರುವ ಟ್ರೆಂಡಿ ಡಿಸೈನ್‌ಗಳನ್ನು, ನೈಜ ಬೆಲೆಯಲ್ಲಿ ಮಾರುತ್ತೇವೆ. ಈ ಬಾರಿ ಆರತಿ, ಕಲ್ಪನಾ ಕಾಲದ ಸೀರೆಗಳಿಗೆಲ್ಲ ಬಹಳ ಬೇಡಿಕೆ ಬಂದಿದೆ. ರವಿಕೆ ವಿನ್ಯಾಸವೂ ಅದೇ ಮಾದರಿಯದು. ಅಲ್ಲದೆ, ಬಾಡರ್‌ ಇಲ್ಲದ ಸೀರೆಗಳು ಈ ಬಾರಿಯ ಹೈಲೈಟ್‌. ಬನಾರಸಿ ಕಾಟನ್‌ ಸೀರೆಗಳನ್ನು ಹೆಚ್ಚು ಜನ ಕೇಳುತ್ತಿದ್ದಾರೆ. ಇನ್ನು ಬೆಲೆಯ ಬಗ್ಗೆ ಹೇಳುವುದಾದರೆ ಎರಡೂವರೆ ಸಾವಿರ ರೂಪಾಯಿಯಿಂದ ಹನ್ನೆರಡು ಸಾವಿರ ರೂಪಾಯಿ ಮೌಲ್ಯದ ಸೀರೆಗಳು ಹೆಚ್ಚಾಗಿ ಮಾರಾಟವಾಗುತ್ತಿವೆ’ ಎನ್ನುತ್ತಾರೆ ದೇವತಾ ಮಾರ್ಕೆಟ್‌ನಲ್ಲಿರುವ ಅಂಬಿಕಾ ಸಿಲ್ಕ್ಸ್‌ ಮಾಲೀಕ ಎಂ. ಲೋಕೇಶ್.

*********

ಸೀರೆಗಳ ಟ್ರೆಂಡ್‌ ವರ್ಷ–ವರ್ಷವೂ ಬದಲಾಗುತ್ತಿತ್ತು. ಈಗ ಕಳೆದ ವಾರದ ಟ್ರೆಂಡ್ ಈ ವಾರ ಇರಲ್ಲ. ಜನ ಹೊಸದನ್ನೇ ಬಯಸುತ್ತಾರೆ. ಹೀಗಾಗಿ ನಮ್ಮಲ್ಲಿ ವಾರವಾರವೂ ಹೊಸ ಸ್ಟಾಕ್‌ ಬರುತ್ತದೆ. ಈ ಸೇಲ್‌ನಲ್ಲಿಯೂ ಅಷ್ಟೆ. ಹಳೆಯ ಸ್ಟಾಕ್‌ ಇಟ್ಟರೆ ನಡೆಯಲ್ಲ. ಹೊಸದೇ ಬೇಕು. ಇಂದಿನ ಮಹಿಳೆಯರ ಆದ್ಯತೆ ಬದಲಾಗಿದೆ. ಬೆಲೆಗಿಂತಲೂ ಹೆಚ್ಚಾಗಿ ಗುಣಮಟ್ಟ ಮತ್ತು ಹೊಸತನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ.

ಅಖಿಲ್‌, ಕಳಾಮಂದಿರ್

************

ದೀಪಂ ಸೇಲ್‌: ದೀಪಂ ತನ್ನ ಗ್ರಾಹಕರಿಗಾಗಿ ಸಾಂಪ್ರದಾಯಿಕ ಕಾಂಜೀವರಂ ಸಿಲ್ಕ್‌ ಸೀರೆಗಳು, ಸಲ್ವಾರ್‌ ಕಮೀಜ್‌, ಕುರ್ತಾ, ಲೆಹೆಂಗಾ, ಮಕ್ಕಳ ಉಡುಗೆಗಳು ಹಾಗೂ ಎಲ್ಲಾ ರೀತಿಯ ದಿರಿಸಿನ ಮೇಲೆ ಶೇ 40 ರಿಯಾಯಿತಿ ಘೋಷಿಸಿದೆ. ರಿಯಾಯಿತಿ ಮಾರಾಟವು ಜಯನಗರದ ದೀಪಮ್‌ ಸಿಲ್ಕ್ಸ್‌ ಅಂಗಡಿಯಲ್ಲಿ ಮಾತ್ರ ನಡೆಯುತ್ತಿದೆ ಇದೇ 26ರಂದು ಕೊನೆಗೊಳ್ಳಲಿದೆ.

****************

ಸಮಾಜಮುಖಿ ಅಂಗಡಿ ಹೌಸ್‌

ನಗರದ ಪ್ರತಿಷ್ಠಿತ ’ಅಂಗಡಿ ಹೌಸ್‌ ಹಾಗೂ ಅಂಗಡಿ ಗ್ಯಾಲರಿಯಾ’ ಕೈ ಮಗ್ಗದ ವಸ್ತ್ರಮೇಳವನ್ನು ಹಮ್ಮಿಕೊಂಡಿದೆ. ಒಂದು ವಾರದ ಈ ಮೇಳದಲ್ಲಿ ಸಂಗ್ರಹವಾದ ಆದಾಯದಿಂದ ಒಂದಷ್ಟು ಭಾಗವನ್ನು ಸೌಲಭ್ಯ ವಂಚಿತ ಹೆಣ್ಮಕ್ಕಳ ನೆರವಿಗೆ ನೀಡಲಿದೆ. ಇಂದು ಸಂಜೆ 5.30ಕ್ಕೆ ಸದಾಶಿವನಗರದಲ್ಲಿರುವ ಅಂಗಡಿ ಗ್ಯಾಲರಿಯಾದಲ್ಲಿ ಈ ಪ್ರದರ್ಶನ ಮತ್ತು ಮಾರಾಟವನ್ನು ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಉದ್ಘಾಟಿಸಲಿದ್ದಾರೆ.

– ಕೆ.ರಾಧಾರಮಣ್, ದಿ ಹೌಸ್‌ಆಫ್‌ಅಂಗಡಿ ಸಂಸ್ಥಾಪಕ, ಸಿಇಒ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !