ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದೊಂದಿಗೆ ಅಕ್ಷರಮಾಲೆ: ಇದು ಬಾದಲ್‌ ಕಲೆ

Last Updated 28 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
"ಬಾದಲ್ ನಂಜುಂಡಸ್ವಾಮಿ"

ಕನ್ನಡ ಅಕ್ಷರಮಾಲೆ ಚಾರ್ಟ್‌ನಲ್ಲಿ ಸಾಮಾನ್ಯವಾಗಿ ಅಕ್ಷರ ಹಾಗೂ ಚಿತ್ರಗಳು ಬೇರೆಬೇರೆಯಾಗಿ ಇರುತ್ತವೆ. ಆದರೆ, ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರು ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಅಕ್ಷರಗಳಲ್ಲಿಯೇ ಚಿತ್ರಕಲೆಯನ್ನು ಮೂಡಿಸಿದ್ದಾರೆ.

ಬಾದಲ್‌ ನಂಜುಂಡಸ್ವಾಮಿ

‘ಅ’ ಸ್ವರದಲ್ಲಿ ಅಳಿಲು, ‘ಆ’ ದೊಂದಿಗೆ ಆನೆಯ ತಲೆ, ‘ಇ’ ಯಲ್ಲಿ ಇಲಿ, ‘ಈ’ ಯೊಂದಿಗೆ ಈರುಳ್ಳಿ... ಹೀಗೆ ‘ಅ’ ದಿಂದ ‘ಳ’ ವರೆಗೆ ಮಕ್ಕಳು ಸುಲಭವಾಗಿ ಗುರ್ತಿಸುವಂಥ ವಿವಿಧ ಚಿತ್ರಗಳನ್ನು ಬಿಡಿಸಿದ್ದಾರೆ.

ಬೆಂಗಳೂರಿನ ಮುಖ್ಯರಸ್ತೆಗಳಲ್ಲಿ ಗುಂಡಿ ಬಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೆ, ಮ್ಯಾನ್‌ಹೋಲ್‌ ಬಾಯ್ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೆ ಮೈಸೂರು ಮೂಲದ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರು ಅಲ್ಲಿಗೆ ಹೋಗಿ ಚಿತ್ರಬಿಡಿಸಿ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಕಲೆಯ ಮೂಲಕ ಸ್ಪಂದಿಸಿದ್ದಾರೆ.

ಇದೀಗ ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ (ಆಯಿಷ್‌) ಮಕ್ಕಳಿಗಾಗಿ ವಿಶಿಷ್ಟ ರೀತಿಯ ಅಕ್ಷರಮಾಲೆಯನ್ನು ಚಿತ್ರಿಸಿ ಗಮನ ಸೆಳೆದಿದ್ದಾರೆ.

‘ಮಾತು ಮತ್ತು ಶ್ರವಣ ದೋಷದ ಮಕ್ಕಳು ಅತ್ಯಂತ ಸುಲಭವಾಗಿ ವರ್ಣಮಾಲೆ ಕಲಿಯಲು ಸಹಾಯವಾಗಲೆಂದು ಈ ರೀತಿ ಮಾಡಿದ್ದೇವೆ. ಆಯಿಷ್‌ ಕ್ಯಾಂಪಸ್‌ನ ಗೋಡೆಯ ಮೇಲೆ ವಾಟರ್‌ ಕಲರ್‌ ಬಳಸಿ ಅಕ್ಷರಮಾಲೆ ಬರೆದಿದ್ದೇನೆ. ಇದು ಕಲಿಕೆಯ ಹಂತದ ಎಲ್ಲಾ ಮಕ್ಕಳಿಗೂ ನೆರವಾಗುತ್ತದೆ. ಅಕ್ಷರ ಹಾಗೂ ಚಿತ್ರ ಗುರ್ತಿಸಲು ತೊಡಕಾಗದಂತೆ ಬರೆದಿದ್ದೇನೆ’ ಎನ್ನುತ್ತಾರೆ ಬಾದಲ್‌ ನಂಜುಂಡಸ್ವಾಮಿ.

‘10 ರಿಂದ 15 ದಿನಗಳ ಕಾಲ ಸಮಯ ತೆಗೆದುಕೊಂಡು ಅಕ್ಷರಮಾಲೆ ಬರೆದಿದ್ದೇನೆ. ನನ್ನ ಪ್ರಕಾರ ಇದೂ ಒಂದು ಕಲೆ. ಮಾತಿನ ಸಮಸ್ಯೆಯಿರುವ ಮಕ್ಕಳು ಚಿತ್ರವನ್ನು ನೋಡಿದ ತಕ್ಷಣ ಹೇಳಲು ಸಹಾಯವಾಗುತ್ತದೆ’ ಎಂದು ಹೇಳುತ್ತಾರೆ ಅವರು.

ಪುಸ್ತಕ ಮಾಡಿಸುವ ಯೋಜನೆ: ‘ಓದಲು ಹಾಗೂ ಬರೆಯಲು ತೊಂದರೆ ಇರುವ ಮಕ್ಕಳಿಗೆ ಈ ವಿಧಾನ ಹೆಚ್ಚು ಅನುಕೂಲವಾಗುತ್ತದೆ. 1993ರಲ್ಲಿ ಸಂಶೋಧನೆ ಮಾಡಿದ ಪ್ರಕಾರ ಬುದ್ಧಿಶಕ್ತಿ ಕಡಿಮೆ ಇರುವ ಮಕ್ಕಳಿಗೆ ಕಲಿಸುವುದಕ್ಕೆ ಚಿತ್ರಸಹಿತ ಅಕ್ಷರಗಳು ಹೆಚ್ಚು ನೆರವಾಗುತ್ತವೆ. ಈ ವಿಧಾನವನ್ನೇ ‘ತಾರೆ ಜಮೀನ್‌ ಪರ್‌’ ಹಿಂದಿ ಸಿನಿಮಾದಲ್ಲೂ ಪ್ರಯೋಗಿಸಿದ್ದಾರೆ. ಪದೇಪದೆ ಗೋಡೆ ಮೇಲೆ ನೋಡುತ್ತಿದ್ದರೆ ಮಕ್ಕಳ ಮನಸ್ಸಿನಲ್ಲಿ ಸದಾ ಕಾಲ ಉಳಿಯುತ್ತವೆ. ಅಮ್ಮ, ಆನೆ, ಅಳಿಲು, ಇಲಿ, ಏಣಿ... ಹೀಗೆ ಸರಳವಾದ ಪದಗಳನ್ನು ಬಳಕೆ ಮಾಡಲಾಗಿದೆ. ಬಾದಲ್‌ ನಂಜುಂಡಸ್ವಾಮಿ ಸುಂದರವಾಗಿ ಚಿತ್ರಿಸಿದ್ದಾರೆ’ ಎಂದು ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ. ಪುಷ್ಪಾವತಿ ಮಾಹಿತಿ ನೀಡಿದರು.

‘ಈಗ ಕಪ್ಪು ಬಿಳುಪಿನಲ್ಲಿ ಅಕ್ಷರಮಾಲೆ ಬರೆಸಿದ್ದೇವೆ, ಮುಂದಿನ ದಿನಗಳಲ್ಲಿ ಬಣ್ಣಗಳನ್ನು ಬಳಸಲಾಗುವುದು. ಚಿಕ್ಕದೊಂದು ಪುಸ್ತಕ ರೂಪದಲ್ಲಿ ಈ ಕಲ್ಪನೆಯನ್ನು ಸಾಕಾರಗೊಳಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT