ಬಿದಿರಿನಲ್ಲಿ ಅರಳಿದ ಕುಸುರಿ ಕಲೆ!

7

ಬಿದಿರಿನಲ್ಲಿ ಅರಳಿದ ಕುಸುರಿ ಕಲೆ!

Published:
Updated:

‘ನಿಮಗೆ ಹ್ಯಾಂಗ್ ಬೇಕು ಕೇಳ್ರಿ.. ಹಂಗೆ ರೆಡಿ ಮಾಡಿಕೊಡ್ತೀನಿ’ – ಕೊಪ್ಪಳದ ಬಿದಿರು ಕಲಾಕೃತಿಗಳ ತಯಾರಕ ಪ್ರಕಾಶ್ ಮೇದಾರ ಹೀಗೆ ವಿಶ್ವಾಸದಿಂದ ಮಾತನಾಡುತ್ತಾರೆ. ನೋಡಿದ್ದನ್ನು ನೋಡಿದ ಹಾಗೆಯೇ ಕಲಾಕೃತಿ ಸಿದ್ಧಪಡಿಸುವುದು ಅವರಿಗೆ ಸಿದ್ಧಿಸಿದ ಕಲೆ. ಇಲ್ಲಿವರೆಗೂ 70ಕ್ಕೂ ಹೆಚ್ಚು ಬಗೆ ಬಗೆಯ ವಸ್ತುಗಳನ್ನು ತಯಾರಿಸಿದ್ದಾರೆ. ಅದರಲ್ಲಿ ಆಲಂಕಾರಿಕ ವಸ್ತುಗಳೂ ಇವೆ. ಗೃಹ ಬಳಕೆ ಪರಿಕರಗಳೂ ಇವೆ. ಒಟ್ಟಾರೆ  ಗ್ರಾಹಕರ ಅಭಿರುಚಿಗೆ ತಕ್ಕಂತೆ, ಬೇಡಿಕೆಗೆ ಅನುಗುಣವಾಗಿ ಕಲಾಕೃತಿಗಳನ್ನು ಅವರು ಸಿದ್ಧಪಡಿಸಿಕೊಡುತ್ತಾರೆ !

ಬಡತನದ ಕಾರಣಕ್ಕೆ ಪ್ರಕಾಶ್ 10ನೇ ತರಗತಿಗೆ ಓದು ನಿಲ್ಲಿಸಿದರು. ನಂತರ ಕಾಡಿದ ನಿರುದ್ಯೋಗಕ್ಕೆ ಪರಿಹಾರ ಹುಡುತ್ತಾ ಹೊರಟಾಗ, ಅವರಿಗೆ ಆಸರೆಯಾಗಿದ್ದು ಅಮ್ಮ ಮಾಡುತ್ತಿದ್ದ ಬಿದಿರಿನ ಕರಕುಶಲ ಕಲೆ. ಆ ಕಲೆಯನ್ನು ದುಡಿಮೆಗೆ ದಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಧಾರವಾಡ, ಬೆಂಗಳೂರಿನಲ್ಲಿ ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿ ಪಡೆದಿದ್ದಾರೆ.

ನಾಲ್ಕೈದು ವರ್ಷ ಬೆಂಗಳೂರಿನಲ್ಲೇ ಇದ್ದು, ಕುಸುರಿ ಕ್ಷೇತ್ರದ ಅನುಭವವನ್ನು ವಿಸ್ತರಿಸಿಕೊಂಡರು. ಐದಾರು ತಿಂಗಳ ಹಿಂದೆ ಅರಣ್ಯ ಇಲಾಖೆಯಿಂದ ಬಿದಿರು ಉತ್ಪನ್ನಗಳ ಮಾರಾಟಕ್ಕೆ ಮಾನ್ಯತೆ ಪಡೆದು, ಕೊಪ್ಪಳಕ್ಕೆ ಹಿಂತಿರುಗಿದ್ದಾರೆ. ಇಲ್ಲಿನ ಗವಿಸಿದ್ದೇಶ್ವರ ಮಠದ ಬಳಿಯ ಕೇತೇಶ್ವರ ಕಲ್ಯಾಣ ಮಂಟಪದ ಹಿಂಬಾಗದ ಮಲಿಯಮ್ಮನ ದೇವಸ್ಥಾನದ ಆವರಣದಲ್ಲಿ ಕರಕುಶಲ ವಸ್ತುಗಳ ತಯಾರಿಕಾ ಘಟಕ ಆರಂಭಿಸಿದ್ದಾರೆ.

ಏನೇನು ತಯಾರಿಸುತ್ತಾರೆ?

ಒಮ್ಮೆ ಬೆಂಗಳೂರಿನ ವಾಸ್ತುತಜ್ಞರೊಬ್ಬರು ಮನೆಯೊಂದರ ನೀಲನಕ್ಷೆ ಕೊಟ್ಟು, ‘ಇದಕ್ಕೊಂದು ಮಾದರಿ ಮಾಡಿಕೊಡಿ’ ಎಂದು ಹೇಳಿದರು. ಆ ನಕ್ಷೆಯನ್ನಿಟ್ಟುಕೊಂಡು ಸುಂದರವಾದ ಮೂರು ಅಂತಸ್ತಿನ ಮಾದರಿ ಮನೆಯನ್ನು ತಯಾರಿಸಿದರು ಪ್ರಕಾಶ್. ಪ್ಯಾರಿಸ್‌ನ ಐಫೆಲ್ ಟವರ್ ಪ್ರತಿಕೃತಿ, ಶಿವಲಿಂಗದಂತಹ ಮಾದರಿಗಳು ಅವರ ಕೈಯಲ್ಲಿ ಅಷ್ಟೇ ಸುಂದರವಾಗಿ ಮೂಡಿದೆ. ಇದರೊಂದಿಗೆ ವಾಲ್ ಕೀಚೈನ್, ಲೆಟರ್ ಬಾಕ್ಸ್ ಸ್ಮಾಲ್, ಲೆಟರ್ ಸ್ಟ್ಯಾಂಡ್, ಮಡಿಸುವ ಬಿಸಣಿಕೆ, ಬಾಗಿಲ ಪ್ಲವರ್ ಸೈಲ್, ಟಿವಿ ಪ್ಲವರ್ ಸೈಲ್, ಹಡಗುಗಳು, ಪೆನ್‌ಬಾಕ್ಸ್, ಟಿಪಾಯ್, ಪೂಜಾ ಬುಟ್ಟಿ, ಪತ್ರೆಗಳಿಡುವ ಬುಟ್ಟಿ, ವಿಭೂತಿಬುಟ್ಟಿ, ರೊಟ್ಟಿ ಬುಟ್ಟಿ, ಬುತ್ತಿಬುಟ್ಟಿ, ತರಕಾರಿ ಬುಟ್ಟಿ, ಹಣ್ಣಿನಬುಟ್ಟಿ, ಕೇರುವ ಮರ, ಕಸದ ಬುಟ್ಟಿಗಳು, ಲೈಟ್ ಲ್ಯಾಂಪ್, ಫೋಟೊ ಪ್ರೇಮ್, ಟೇಬಲ್, ಕುರ್ಚಿ, ಬರ್ಡ್ಸ್ ಬಾಕ್ಸ್, ಪಕ್ಷಿಗಳು ಗೂಡು ಕಟ್ಟುವ ಹಾಗೂ ಕಾಳು, ನೀರು ಕುಡಿಯುವ ಬಾಕ್ಸ್‌ಗಳು... ಹೀಗೆ ಪಟ್ಟಿ ಮಾಡುತ್ತಿದ್ದರೆ, ಅದು ಬೆಳೆಯುತ್ತಲೇ ಇರುತ್ತದೆ.

‘ಒಂದು ತಾಸಿಗೆ ಒಂದು ಶಿವಲಿಂಗ, ದಿನಕ್ಕೆ ನಾಲ್ಕೈದು ತರಕಾರಿ ಸ್ಟ್ಯಾಂಡ್ ತಯಾರಿಸುತ್ತೇನೆ. ಅರ್ಧಗಂಟೆಗೆ ಒಂದು ಬುಟ್ಟಿ, ಹತ್ತು ನಿಮಿಷಕ್ಕೆ ಪೆನ್ ಸ್ಟ್ಯಾಂಡ್.. ಹೀಗೆ ಎಲ್ಲ ಕಲಾಕೃತಿಗಳನ್ನೂ ಬೇಗ ಬೇಗ ತಯಾರಿಸುತ್ತೇನೆ. ಹೊಸ ವಿನ್ಯಾಸಕ್ಕಾಗಿ ಇಂಟರ್‌ನೆಟ್ ಹುಡುಕುತ್ತೇನೆ’ ಎನ್ನುತ್ತಾರೆ ಪ್ರಕಾಶ್. ಬಹುತೇಕ ವಸ್ತುಗಳು ಕೈಯಿಂದಲೇ ಸಿದ್ಧಪಡಿಸುತ್ತಾರೆ. ತುಂಬಾ ಸೂಕ್ಷ್ಮದ ಕೆಲಸಗಳಿಗೆ ಯಂತ್ರ ಬಳಸುತ್ತಾರೆ. ಗ್ರಾಹಕರಿಂದ ಬೇಡಿಕೆ ಹೆಚ್ಚಿದಾಗ, ಕಲಾಕೃತಿಗಳ ತಯಾರಿಕೆಗೆ ಪ್ರಕಾಶ್‌ ರೊಂದಿಗೆ ಅವರ ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆಯವರು ಕೈ ಜೋಡಿಸುತ್ತಾರೆ.


ಬಿದಿರಿನ ಕಲಾಕೃತಿಗಳು

ಬಿದಿರಿನೊಂದಿಗೆ ಪರಿಸರ ಕಾಳಜಿ

ಬಿದಿರಿನ ಉತ್ಪನ್ನಗಳನ್ನು ತಮ್ಮ ಜಿಲ್ಲೆಯಲ್ಲೇ ನಡೆಯುವ ಜಾತ್ರೆ, ಉತ್ಸವ, ಮೇಳಗಳಲ್ಲಿ ಪ್ರದರ್ಶನಕ್ಕಿಡುತ್ತಾರೆ. ಪ್ರದರ್ಶನಕ್ಕಿಟ್ಟ ಮಳಿಗೆಗಳಲ್ಲಿ ‘ಪ್ಲಾಸ್ಟಿಕ್ ನಿಷೇಧಿಸಿ, ಬಿದಿರಿನ ಉತ್ಪನ್ನಗಳ ಬಳಸಿ’ ಎಂಬ ಬ್ಯಾನರ್ ತೂಗು ಹಾಕುತ್ತಾರೆ. ಪ್ಲಾಸ್ಟಿಕ್‌ನಿಂದಾಗುವ ಪರಿಸರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಈ ಬಗ್ಗೆ ಕರಪತ್ರಗಳನ್ನು ಹಂಚುತ್ತಲೇ, ಬಿದಿರಿನ ವಸ್ತುಗಳ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

‘ಬಿದಿರಿನ ಆಟಿಕೆಗಳು, ಕಲಾಕೃತಿಗಳ ಬಳಕೆ ಹೆಚ್ಚಾದರೆ, ಚೀನಾ ಉತ್ಪನ್ನಗಳ ಬೇಡಿಕೆ ಕಡಿಮೆಯಾಗುತ್ತದೆ. ಸರ್ಕಾರ ಕೂಡ, ಅವುಗಳನ್ನು ನಿಷೇಧಿಸಿ, ಇಂತಹ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು’ ಎಂದು ಪ್ರಕಾಶ್ ಮನವಿ ಮಾಡುತ್ತಾರೆ.

ನಾಡಿನ ಹಲವು ವಿಶ್ವವಿದ್ಯಾಲಯಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಕಾರ್ಯಕ್ರಮಕ್ಕೆ ಅಗತ್ಯವಿರುವ ಕಲಾಕೃತಿಗಳನ್ನು ಆರ್ಡರ್ ಕೊಟ್ಟು ಮಾಡಿಸಿಕೊಳ್ಳುತ್ತಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿನ ಕೆಲ ಇಲಾಖೆಗಳು ಅಥವಾ ಸಂಸ್ಥೆಗಳ ಆಹ್ವಾನದ ಮೇರೆಗೆ ಬ್ಯಾಂಬೂ ಮೇಳಗಳಲ್ಲಿ ಭಾಗವಹಿಸುವ ಅವರು ಹೊಸ ಕಲಾವಿದರಿಗೆ, ಕರಕುಶಲ ಕಲೆಯ ತರಬೇತಿ ನೀಡುತ್ತಿದ್ದಾರೆ.

ಬಿದಿರಿನ ಕಲೆ ಕುರಿತ ಮಾಹಿತಿಗಾಗಿ: 9980515559

ಸಿನಿಮಾ, ಧಾರಾವಾಹಿ ಸೆಟ್‌ಗೂ ಬಿದಿರು

ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಪ್ರಕಾಶ್, ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್‌ಗಳಿಗೂ ಸೆಟ್ ಹಾಕಿಕೊಟ್ಟಿದ್ದಾರೆ. ಪ್ರಮುಖ ಗುತ್ತಿಗೆದಾರರೊಬ್ಬರು, ಇವರಿಗೆ ಸಬ್ ಕಾಂಟ್ರಾಕ್ಟ್‌ ಕೊಡುತ್ತಾರೆ. ನಾಲ್ಕೈದು ಮಂದಿ ಕರೆದುಕೊಂಡು ಹೋಗಿ ಶೂಟಿಂಗ್ ಜಾಗದಲ್ಲೇ ಸೆಟ್ ಹಾಕುತ್ತಾರೆ. ಆದರೆ, ಯಾವ ಸಿನಿಮಾ, ಹೀರೊ ಯಾರು, ಡೈರೆಕ್ಟರ್‌ ಯಾರು ಅಂತ ಅಂತ ಗೊತ್ತಾಗುವುದಿಲ್ಲ ಎನ್ನುತ್ತಾರೆ ಅವರು.

ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಹಂಪಿಗೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಅವರಿಗೆ ವಸತಿಗಾಗಿ ಬಿದಿರಿನ ರೆಸಿಡೆಂಟ್ ಟೆಂಟ್‌ಗಳ ನಿರ್ಮಾಣದಲ್ಲೂ ಪ್ರಕಾಶ್ ತೊಡಗುತ್ತಾರೆ. ಇದೇ ರೀತಿ ನವೆಂಬರ್‌–ಡಿಸೆಂಬರ್ ತಿಂಗಳುಗಳಲ್ಲಿ ಗೋವಾದ ಕಡಲ ತೀರದಲ್ಲಿ ಇಂಥದ್ದೇ ‘ರೆಸಿಡೆಂಟ್ ಟೆಂಟ್‌ಗಳ’ ನಿರ್ಮಾಣಕ್ಕಾಗಿ ಅಲ್ಲಿಗೆ ಹೋಗುತ್ತಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !