ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಎಲ್ಲೆ ಮೀರಿ, ಅಂಧರ ಸಂಗೀತೋತ್ಸವ

‘ಬೀಯಿಂಗ್‌ ಲಿಮಿಟ್‌ಲೆಸ್‌’ ಅಂಧರ ಸಂಗೀತೋತ್ಸವ
Last Updated 19 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

‘ಲಾರೆನ್ಸ್‌ ಅಂಡ್‌ ಮಯೋ’ ಹೆಸರಾಂತ ಕನ್ನಡಕ ಕಂಪೆನಿ. ಈ ಕಂಪೆನಿಯ ಸ್ಥಾಪಕ ವಿವೇಕ್‌ ಜಿ. ಮೆಂಡೋನ್ಸಾ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡವರು. ಇದಕ್ಕಾಗಿಯೇ ಮುಂಬೈನಲ್ಲಿ ಅವರು ‘ಮೆಂಡೋನ್ಸಾ ಫೌಂಡೇಷನ್‌’ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆ ವಿಶೇಷವಾಗಿ ಅಂಧರ ಶ್ರೇಯೋಭಿವೃದ್ಧಿಗೆ ತೊಡಗಿಕೊಂಡಿದೆ. ಅಂಧರಲ್ಲಿರುವ ಪ್ರತಿಭೆಯನ್ನು ಜಗತ್ತಿಗೆ ಕಾಣಿಸಬೇಕು ಎಂಬುದು ಅವರ ಉದ್ದೇಶ. ಇದಕ್ಕಾಗಿ ಮುಂಬೈನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಂಧರ ಸಂಗೀತ –ನೃತ್ಯೋತ್ಸವ ನಡೆಸಿ ಸಂಗ್ರಹವಾದ ಹಣವನ್ನು ಅಂಧರ ಅಭಿವೃದ್ಧಿಗೆ ಮೀಸಲಿರುವ ಸಂಸ್ಥೆಗಳಿಗೆ ನೀಡುತ್ತಾ ಬಂದಿದ್ದಾರೆ.

ಲಾರೆನ್ಸ್‌ ಅಂಡ್‌ ಮಯೋ ಕಂಪೆನಿ ಕಾರ್ಯನಿರ್ವಹಿಸುವ ನಗರಗಳಲ್ಲೆಲ್ಲ ಈ ಸೇವಾ ಕಾರ್ಯ ಮುಂದುವರಿಸಲು ವಿವೇಕ್ ಅವರು ಮುಂದಾಗಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಸಂಸ್ಥೆಯ ಮೊದಲ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ 27ರಂದು ರಿಚ್‌ಮಂಡ್‌ ಟೌನ್‌ನಲ್ಲಿರುವ ಗುಡ್‌ಶೆಫರ್ಡ್‌ ಸಭಾಂಗಣದಲ್ಲಿ ಮೆಗಾ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ನಡೆಯಲಿದೆ.

‘ಬೀಯಿಂಗ್‌ ಲಿಮಿಟ್‌ಲೆಸ್‌’ ಎಂಬುದು ಈ ಕಾರ್ಯಕ್ರಮದ ಹೆಸರು. ಬೆಂಗಳೂರಿನಲ್ಲಿರುವ ರಮಣ ಮಹರ್ಷಿ ಅಂಧರ ಅಕಾಡೆಮಿ, ಪಂಡಿತ್‌ ಪುಟ್ಟರಾಜ ಗವಾಯಿ ದಿವ್ಯಾಂಗ ಟ್ರಸ್ಟ್‌ ಮತ್ತು ಮುಂಬೈಯ ಉದಾನ್‌ ಫೌಂಡೇಷನ್‌ನ ಅಂಧ ಕಲಾವಿದರು ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಬೆಂಗಳೂರಿನ ಪುಟ್ಟರಾಜ ಗವಾಯಿ ದಿವ್ಯಾಂಗ ಟ್ರಸ್ಟ್‌ನ ವಿದ್ಯಾರ್ಥಿಗಳು ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅದರ ಧ್ಯಕ್ಷ ದೇವ ರೆಡ್ಡಿ ಸ್ವತಃ ಸಂಗೀತ ಗುರು. ಇನ್ನು, ರಮಣ ಮಹರ್ಷಿ ಅಂಧರ ಅಕಾಡೆಮಿಯ ವಿದ್ಯಾರ್ಥಿಗಳು ಸಾಮಾನ್ಯರನ್ನೂ ಮೀರಿಸುವಂತೆ ನೃತ್ಯ ತಂಡ ಕಟ್ಟಿಕೊಂಡು ಕಾರ್ಯಕ್ರಮ ನೀಡುತ್ತಿದ್ದಾರೆ. ಮುಂಬೈಯ ಉದಾನ್‌ ಫೌಂಡೇಷನ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ. ಈ ಮೂರೂ ಸಂಸ್ಥೆಗಳ ಅಸಾಮಾನ್ಯರು ಸೇರಿ ಸಂಗೀತ– ನೃತ್ಯದ ಹೊನಲು ಹರಿಸಲಿದ್ದಾರೆ.

‘40ಕ್ಕೂ ಹೆಚ್ಚು ಅಂಧ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ವಿವಿಧ ಬಗೆಯ ದಿವ್ಯಾಂಗರು ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನಿಧಿ ಸಂಗ್ರಹ ಕಾರ್ಯಕ್ರಮವಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂಧರ ಸಂಸ್ಥೆಗಳು ಆರ್ಥಿಕ ಸಮಸ್ಯೆಯಿಂದ ತೊಂದರೆಗೆ ಸಿಲುಕಿವೆ. ಒಂದೆರಡು ಮಕ್ಕಳಿಂದ ಆರಂಭಗೊಂಡಿದ್ದ ಸಂಸ್ಥೆಗಳಲ್ಲಿ ಈಗ ಐವತ್ತಕ್ಕೂ ಹೆಚ್ಚು ಮಕ್ಕಳಿದ್ದಾರೆ. ಕೆಲವರು ಶಿಕ್ಷಣ ಪಡೆಯುತ್ತಿದ್ದರೆ, ಕೆಲವರು ಚಿಕ್ಕಪುಟ್ಟ ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಸಂಸ್ಥೆಗಳಿಗೆ ಶಕ್ತಿ ತುಂಬುವ ಕೆಲಸಕ್ಕೆ ಮೆಂಡೋನ್ಸಾ ಫೌಂಡೇಷನ್‌ ತೊಡಗಿಕೊಂಡಿದೆ. ಸಂಗ್ರಹವಾದ ನಿಧಿಯನ್ನು ಈ ಮೂರೂ ಸಂಸ್ಥೆಗಳಿಗೆ ಹಂಚಲಾಗುತ್ತದೆ’ ಎಂದು ಮೆಂಡೋನ್ಸಾ ಪೌಂಡೇಷನ್‌ನ ಬೆಂಗಳೂರು ಪ್ರತಿನಿಧಿ ಎನ್‌.ಎನ್‌. ಪ್ರವೀಣ್‌ ಕುಮಾರ್‌ ತಿಳಿಸಿದ್ದಾರೆ.

ಅಂಧರ ಸಂಸ್ಥೆಗಳ ಸಹಾಯಾರ್ಥ ನಡೆಯುವ ಈ ಕಾರ್ಯಕ್ರಮಕ್ಕೆ ಟಿಕೆಟ್‌ ಇರುತ್ತದೆ. ಹಾಗಾಗಿ ಮನರಂಜನೆಯ ಜೊತೆಗೆ ನ್ಯೂನತೆ ಇರುವ ಮಕ್ಕಳ ಅಭಿವೃದ್ಧಿಗೆ ಕಿಂಚಿತ್‌ ಸಹಾಯ ಮಾಡಿದ ತೃಪ್ತಿಯೂ ಸಿಗಲಿದೆ. ಇನ್ನೇಕೆ ತಡ, ನಿಮ್ಮ ಕ್ಯಾಲೆಂಡರಿನಲ್ಲಿ ಇಂದೇ ಗುರುತು ಹಾಕಿಕೊಳ್ಳಿ.27ನೇ ತಾರೀಖು ಸಂಜೆ 6ರಿಂದ 9ರವರೆಗೆ ಗುಡ್‌ ಶೆಫರ್ಡ್‌ ಸಭಾಂಗಣದ ಸೀಟುಗಳಲ್ಲಿ ಆಸೀನರಾಗಿ. ಪಾಸ್‌ಗಳು Book my showದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ: 98867 16010 ಸಂಖ್ಯೆಗೆ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT