ಶುಕ್ರವಾರ, ಅಕ್ಟೋಬರ್ 18, 2019
24 °C

ಎಳೆಯನ ಬರಹ | ಪುಟ್ಟ ಕಂಗಳಲ್ಲಿ ಭೂತಕೋಲ

Published:
Updated:
Prajavani

ತುಳುನಾಡಿನ ಒಂದು ವಿಶಿಷ್ಟ ಸಾಂಪ್ರದಾಯಿಕ ಆಚರಣೆ ಭೂತಕೋಲ. ತನ್ನ ಕುತೂಹಲಗಳಿಗೆ ಉತ್ತರ ಹುಡುಕಲು ಅಂತಹ ಉತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬನ ಟಿಪ್ಪಣಿಗಳು ಇಲ್ಲಿ ನುಡಿಚಿತ್ರವಾಗಿ ಹರಳುಗಟ್ಟಿವೆ...

***

ನಾನು ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಲ ಗ್ರಾಮದಲ್ಲಿರುವ ನನ್ನ ಅಜ್ಜನ ಮನೆಗೆ ರಜಾ ಕಳೆಯಲು ಹೋಗಿದ್ದೆ. ಅಂದು ಹುಣ್ಣಿಮೆಯ ಚಂದಿರ ಮೇಲೆ ಬಂದಿದ್ದ. ಬೆಳಕು ಹಾಗೂ ಶಬ್ದಮಾಲಿನ್ಯವಿಲ್ಲದ ಈ ಊರಿನಲ್ಲಿ ರಾತ್ರಿ 8 ಗಂಟೆಯ ಹೊತ್ತಿಗೆ ಬಾವಲಿ ಹಾಗೂ ಜೀರುಂಡೆಯ ಶಬ್ದವಷ್ಟೆ ಕೇಳುತ್ತಿತ್ತು. ನಾನು ಮಲಗಲು ಹೊರಟೆ. ಆಗ ಸ್ವಲ್ಪ ದೂರದಿಂದ ವಾಲಗ ಹಾಗೂ ಡೋಲಿನ ಶಬ್ದ ಗಾಳಿಯಲ್ಲಿ ಮೆಲ್ಲನೆ ತೇಲಿ ಬರುತ್ತಿತ್ತು. 

ಕುತೂಹಲದಿಂದ ನನ್ನ ಅಜ್ಜನಿಗೆ ಅದು ಏನು ಎಂದು ಕೇಳಿದೆ. ‘ಒಂದು ಕಿ.ಮೀ. ದೂರದಲ್ಲಿರುವ ಕೊಮ್ಮುಂಜೆ ಮನೆಯಲ್ಲಿ ಮುಂಜಾವಿನ ಮೂರು ಗಂಟೆಗೆ ಭೂತಕೋಲ ಇದೆ. ಅದರ ತಯಾರಿ’ ಎಂದರು.

ನಾನು ಅದಕ್ಕೂ ಮೊದಲು ಒಂದು ಭೂತಕೋಲವನ್ನು ನೋಡಿದ್ದರಿಂದ ಅದರ ಬಗ್ಗೆ ಸ್ವಲ್ಪ ಮಾಹಿತಿ ಇತ್ತು. ಭೂತಕೋಲ ತುಳುನಾಡಿನ ಪ್ರಸಿದ್ಧ ಸಾಂಪ್ರದಾಯಿಕ ಆಚರಣೆ. ಹಲವಾರು ಶತಮಾನಗಳ ಇತಿಹಾಸವಿರುವ ಇದು ಕೇರಳದ ತೈಯ್ಯಂನೊಂದಿಗೆ ಸಾಮ್ಯತೆ ಹೊಂದಿದೆ. ತುಳುನಾಡಿನಲ್ಲಿ ನೂರಕ್ಕೂ ಹೆಚ್ಚು ದೈವಗಳನ್ನು ಆರಾಧಿಸುತ್ತಾರೆ. ಪ್ರತಿ ಗ್ರಾಮದಲ್ಲೂ ದೈವಸ್ಥಾನ ಇರುತ್ತದೆ.

ಭೂತಕೋಲಗಳು ವರ್ಣಮಯವಾಗಿರುತ್ತವೆ. ಹಾಗೆಯೇ ಸಂಗೀತಮಯವೂ ಆಗಿರುತ್ತವೆ. ಭೂತಕ್ಕನುಸಾರವಾಗಿ ಬಗೆ ಬಗೆಯ ಆಚರಣಾ ಶೈಲಿ, ಅಲಂಕಾರ ಹಾಗೂ ವೈಶಿಷ್ಟ್ಯ ಇರುತ್ತದೆ. ಕೆಂಡಸೇವೆ ಮಾಡುವ ಭೂತ, ಸಸ್ಯಹಾರಿ ಭೂತ, ಮಾತನಾಡದ ಭೂತ ಹೀಗೆ ಹತ್ತಾರು ಅಪರೂಪದ ಭೂತಗಳು ಇವೆ. ಹಾಗೆಯೇ ವಿವಿಧ ಭೂತಗಳ ಕೋಲವನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಧೂಮಾವತಿ ಮೆಚ್ಚಿ, ಪಂಜುರ್ಲಿ ನೇಮ, ಜಟಾಧಾರಿ ಮಹಿಮೆ ಇತ್ಯಾದಿ.

ಅಂದು ಇದ್ದುದು ಕೊಮ್ಮುಂಜೆ ಮನೆಗೆ ಸಂಬಂಧಿಸಿದ ಜಟಾಧಾರಿ ಭೂತದ ಮಹಿಮೆ. ನನಗೆ ಅಜ್ಜನ ಜತೆ ಹೋಗಿ ಈ ಭೂತಕೋಲವನ್ನು ಹತ್ತಿರದಿಂದ ನೋಡಿ ಅದರ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸುವ ಆಸೆ ಇತ್ತು. ಮರುದಿನ ನಸುಕಿಗೂ ಮುಂಚೆ ಗರ್ನಾಲ್ (ಒಂದು ಬಗೆಯ ಪಟಾಕಿ) ಶಬ್ದವೂ ನನ್ನನ್ನು ಎಚ್ಚರಿಸಿತು. ಒಂದು ಗ್ಲಾಸ್ ಬಿಸಿ ಕಾಫಿ ಕುಡಿದು ಅಜ್ಜನೊಂದಿಗೆ ನಾನು ಭೂತಕೋಲಕ್ಕೆ ಹೊರಟೆ. ಉತ್ಸಾಹದಿಂದ ಬೈಕಿನಲ್ಲಿ ಕುಳಿತಿದ್ದರೂ ನನಗೆ ನಿದ್ದೆ ಕಾಡುತ್ತಿತ್ತು. ಕೆಲವು ನಿಮಿಷಗಳ ನಂತರ ನಾವು ಬೈಕಿನಿಂದ ಇಳಿದು ತೋಟದ ಮಧ್ಯೆ ನಡೆಯಲಾರಂಭಿಸಿದೆವು. ಹಲವಾರು ಭತ್ತದ ಗದ್ದೆ ಹಾಗೂ ಅಡಿಕೆ ಮರಗಳ ನಂತರ ದೂರದಲ್ಲಿ ಹೊಳೆಯುತ್ತಿದ್ದ ಬಲ್ಬೊಂದು ಕಂಡಿತು.

ಅಲ್ಲಿಗೆ ಹೋದಾಗ ವಿಶಾಲವಾದ ಗದ್ದೆಯಲ್ಲೊಂದರಲ್ಲಿ ತಳಿರುತೋರಣವಿತ್ತು. ಅದರೊಳಗೆ ನಡೆದಾಗ ನೂರಾರು ಜನ ಕಂಡರು. ಅಲ್ಲಿಂದ ಮುಂದೆ ನಡೆದರೆ ಭೂತಕೋಲವಾಗುವ ಸ್ಥಳ ಕಂಡಿತು. ಸುತ್ತಲೂ ಜನ. ಸಣ್ಣ ಮಕ್ಕಳಿಂದ ಹಿಡಿದು ಊರಿನ ಹಿರಿಯರು ಹಾಗೂ ಕೊಮ್ಮುಂಜೆ ಕುಟುಂಬದ ಸದಸ್ಯರು ಬಹಳ ಕಾತರದಿಂದ ಕುಳಿತಿದ್ದರು.

ಭೂತ ಕಟ್ಟುವವರು (ಪಾತ್ರಿ) ಹಾಗೂ ಅವರ ಸಹಾಯಕರು ಪೆಂಡಾಲಿನ ಕೆಳಗೆ ಭೂತಕೋಲಕ್ಕೆ ತಯಾರಿ ನಡೆಸುತ್ತಿದ್ದರು. ಪಾತ್ರಿ ಕೈಯಲ್ಲಿ ಕನ್ನಡಿ ಹಿಡಿದು ತಮ್ಮ ಮುಖಕ್ಕೆ ಕೆಂಪು, ಕಪ್ಪು ಸೇರಿದಂತೆ ವಿವಿಧ ಬಣ್ಣಗಳನ್ನು ಬಳಿಯುತ್ತಿದ್ದರು. ಅವರ ಮಕ್ಕಳು ಭೂತ ತೊಡಲು ಎಳೆಯ ತೆಂಗಿನ ಗರಿಯಿಂದ ‘ಅಣಿ’ ಸಿದ್ಧಪಡಿಸುತ್ತಿದ್ದರು. ಇತ್ತ ಭೂತಕ್ಕೆ ಸಂಬಂಧಿಸಿದ ಆಯುಧ, ಪೂಜಾ ಸಾಮಗ್ರಿ ಹಾಗೂ ಬಹುಮುಖ್ಯವಾದ ಗಗ್ಗರವು (ಕಾಲಿನ ಗೆಜ್ಜೆ) ಸಿದ್ಧವಾಗಿತ್ತು. ಕೆಲ ಸಮಯದ ನಂತರ ಪಾತ್ರಿಯು ಎದ್ದು ನಿಂತು ಪ್ರಶ್ನೋತ್ತರ ರೂಪದಲ್ಲಿ ಪಾಡ್ದನವನ್ನು ಶುರು ಮಾಡಿದರು. ಅದನ್ನು ಕೇಳುತ್ತಿದ್ದರೆ ತುಳು ಭಾಷೆ ಅದೆಷ್ಟು ಚೆನ್ನಾಗಿದೆ ಎನಿಸುತ್ತಿತ್ತು. ಬಹುಶಃ ಇಂತಹ ಆಚರಣೆಗಳಿಂದಲೇ ತುಳು ಭಾಷೆ ಅಷ್ಟೊಂದು ಗಟ್ಟಿಯಾಗಿ ಜನರ ಮನದಲ್ಲಿ ಉಳಿಯಲು ಕಾರಣವೇನೋ.

ಪ್ರತಿಯೊಂದು ಭೂತಕೋಲದ ಮೊದಲು ಪಾತ್ರಿಯು ಆ ಭೂತದ ಹಿನ್ನೆಲೆ ಹಾಗೂ ಅದಕ್ಕೆ ಸಂಬಂಧಿಸಿದಂತಹ ಕಥೆಗಳನ್ನು ರಾಗವಾಗಿ ತುಳುವಿನಲ್ಲಿ ಹೇಳುತ್ತಾರೆ. ಜಟಾಧಾರಿ ಭೂತವು ಶಿವ ದೇವರ ಅಂಶ. ಈ ಭೂತ ಸಸ್ಯಾಹಾರಿ. ಉಳಿದಂತೆ ದೈವಗಳು ಮಾಂಸ ಸೇವಿಸುವುದು ಸಾಮಾನ್ಯ. ಜಟಾಧಾರಿಗೂ ಇನ್ನಿತರ ದೈವಗಳಿಗೂ ಇರುವ ಇನ್ನೊಂದು ವ್ಯತ್ಯಾಸವೆಂದರೆ– ಈ ಭೂತವನ್ನು ಯಾರೂ ಮುಟ್ಟುವ ಹಾಗಿಲ್ಲ.

ಪಾಡ್ದನ ಮುಗಿದ ಕೂಡಲೇ ವಾದ್ಯದವರು ಜೋರಾಗಿ ತಮ್ಮ ಮೌರಿ, ಶ್ರುತಿ (ಗಾಳಿ ವಾದ್ಯಗಳು) ಹಾಗೂ ತಾಸೆ (ಚರ್ಮ ವಾದ್ಯ) ನುಡಿಸಲು ಶುರು ಮಾಡಿದರು. ಅರ್ಧ ನಿದ್ದೆಯಲ್ಲಿದ್ದ ಸುಮಾರು ಜನರು ಎಚ್ಚರಗೊಂಡು ಮತ್ತೆ ಆಚರಣೆಯನ್ನು ಗಮನವಿಟ್ಟು ನೋಡಲಾರಂಭಿಸಿದರು. ಅದಾದ ಮೇಲೆ ಒಂದು ಕ್ಷಣದಲ್ಲಿ ಪಾತ್ರಿಯ ಮೇಲೆ ದೈವದ ಆವಾಹನೆಯಾಗಿ ಅವರು ಕುಣಿಯಲಾರಂಭಿಸಿದರು. ವಾದ್ಯದವರು ವೇಗವಾಗಿ ನುಡಿಸಲಾರಂಭಿಸಿದರು. ಆಗ ಬೆಳಗಿನ ಜಾವ ಮೂರೂವರೆಯಾಗಿತ್ತು. ಅಲ್ಲಿ ಸಣ್ಣ ಮಕ್ಕಳು ಆಶ್ಚರ್ಯ ಹಾಗೂ ಸ್ವಲ್ಪ ಭಯದಿಂದ ದೈವದ ಆರ್ಭಟ ನೋಡುತ್ತಿದ್ದರು. ದೈವವು ವಾದ್ಯಕ್ಕೆ ಸರಿಸಾಟಿಯಾಗಿ ತನ್ನ ಕಾಲನ್ನು ಹಾಗೇ ಕೈಯಲ್ಲಿದ್ದ ತ್ರಿಶೂಲ ಹಾಗೂ ಚಾಮರವನ್ನು ಮುಂದಕ್ಕೆ, ಹಿಂದಕ್ಕೆ ಹಾಗೇ ನಾಲ್ಕೂ ದಿಕ್ಕಿನಲ್ಲಿ ಜನರಲ್ಲಿ ಅದಕ್ಕಾಗಿ ಗೌರವ ಜೊತೆ ಜೊತೆಗೆ ಭಯವನ್ನೂ ಹುಟ್ಟಿಸುವ ಹಾಗೆ ಕುಣಿಯಿತು.

ನಾನು ನನ್ನ ಕ್ಯಾಮೆರಾ ಹಿಡಿದುಕೊಂಡು ಭೂತದ ಹಲವು ಮುಖಭಾವಗಳನ್ನು ಸೆರೆ ಹಿಡಿಯುತ್ತಾ ಇದ್ದೆ. ಮೊನ್ನೆಯಷ್ಟೆ ಪೇಪರಿನಲ್ಲಿ ಓದಿದ ವರದಿ ನೆನಪಾಯಿತು. ಭೂತಕೋಲವನ್ನು ಒಬ್ಬರು ಕ್ಯಾಮೆರಾದಲ್ಲಿ ಕ್ಲಿಕ್ಕಿಸುವಾಗ ದೈವಕ್ಕೆ ಅಡಚಣೆಯುಂಟಾದ ಪರಿಣಾಮ ನೆಲಕ್ಕೆ ಬಿದ್ದು ಅವರ ಕ್ಯಾಮೆರಾ ಒಡೆದು ಹೋಯಿತಂತೆ. ಆ ಬಗ್ಗೆ ಯೋಚಿಸುತ್ತಾ ಸುತ್ತಮುತ್ತ ಓಡಾಡುತ್ತಿದ್ದ ನನಗೆ ಪಾತ್ರಿ ಅಚಾನಕ್ಕಾಗಿ ಬೆಂಕಿ ಕುಂಡವನ್ನು ಎತ್ತಿ ಹಿಡಿದು ಊದಲಾರಂಭಿಸಿದ್ದು ಕಂಡಿತು. ಆಗ ನನಗೆ ಆಶ್ಚರ್ಯ, ಗಾಬರಿಯೂ ಆಯಿತು. ಆ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಹೊರಟ ನಾನು ಜನಜಂಗುಳಿಯನ್ನು ದಾಟಿ ತೀರಾ ಪಾತ್ರಿಯ ಬಳಿಯೇ ಹೋದೆ.

ಇನ್ನೊಂದಷ್ಟು ನಿಮಿಷವಾದ ಮೇಲೆ ದೈವದ ರೋಷ ಸ್ವಲ್ಪ ತಣ್ಣಗಾದ ಹಾಗಾಯಿತು. ವಾದ್ಯದವರು ತಕ್ಷಣ ನುಡಿಸಾಣಿಕೆ ನಿಲ್ಲಿಸಿ ಅಲ್ಲೇ ನಿದ್ರಾವಶರಾದರು. ಪಾತ್ರಿ ಶಿವ ದೇವರಿಗೆ ಪೂಜೆ ಮಾಡಿ ಗ್ರಾಮಸ್ಥರೊಂದಿಗೆ ಸಂಭಾಷಿಸಲು ಶುರು ಮಾಡಿದರು. ನನಗೆ ತುಳು ಬರುವುದಿಲ್ಲ. ಸಾಧ್ಯವಾದಷ್ಟೂ ಅಜ್ಜ ಅರ್ಥ ಮಾಡಿಸಿದರು. ಕೊಮ್ಮುಂಜೆ ಕುಟುಂಬದವರು ಹಾಗೂ ಗ್ರಾಮದವರನ್ನು ಹಾರೈಸಿ, ಪಾತ್ರಿ ಭತ್ತದ ಹೊದಲು, ಎಳನೀರು ಇತ್ಯಾದಿ ಆಹಾರವನ್ನು ಸಾಂಕೇತಿಕವಾಗಿ ಸೇವಿಸಿ ಗಂಧ ಪ್ರಸಾದ ಹಂಚಲಾರಂಭಿಸಿದರು. ನೆರೆದಿದ್ದವರೆಲ್ಲ ದೈವದ ಆಶೀರ್ವಾದ ಪಡೆದು ತಮ್ಮ ತಮ್ಮ ಮನೆಗೆ ಹೊರಟರು.

ಸೂರ್ಯ ಬಾನಂಚಿನಲ್ಲಿ ಮೂಡಲಾರಂಭಿಸಿದ. ಕೊನೆಗೊಂದು ಸಲ ಪಾತ್ರಿ ಸ್ವಲ್ಪ ನೃತ್ಯ ಮಾಡಿ ಭೂತಕೋಲ ಮುಗಿದ ಸೂಚನೆ ನೀಡಿದರು. ಭೂತ ಕಟ್ಟುವವರಿಗೆ ಕೆಲಸವಿನ್ನೂ ಮುಗಿದಿರಲಿಲ್ಲ. ಬೆಳಿಗ್ಗೆ ಹತ್ತು ಗಂಟೆಗೆ ಧೂಮಾವತಿ ದೈವದ ಮೆಚ್ಚಿ ಇತ್ತು. ಅವರು ವಿರಾಮ ತೆಗೆದುಕೊಂಡು ಮತ್ತೆ ತಯಾರಿ ಆರಂಭಿಸಿದರು. ಭೂತಕೋಲವು ದೀಪಾವಳಿ ಆದ ಮೇಲೆ ಶುರು ಆಗಿ ಮೇ ತಿಂಗಳ ಕೊನೆಯವರೆಗೆ ಜರುಗುತ್ತದೆ. ಭೂತ ಕಟ್ಟುವವರು ಹೆಚ್ಚಾಗಿ ನಲಿಕೆ, ಪಂಬದ, ಪರವರು ಪಂಗಡದವರು. ಅವರು ಈ ಋತುವಿನಲ್ಲಿ ಭೂತ ಕಟ್ಟಿದರೆ ಇನ್ನಷ್ಟು ತಿಂಗಳುಗಳಲ್ಲಿ ಕೃಷಿ, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಾರೆ. 

ಭೂಮಾವತಿ ಮೆಚ್ಚಿಯ ತಯಾರಿ ನೋಡುತ್ತಿದ್ದಂತೆ ಎರಡು ದಿನದ ಹಿಂದೆ ನೋಡಿದ್ದ ಅಣ್ಣಪ್ಪ- ಪಂಜುರ್ಲಿ ನೇಮದ ನೆನಪಾಯಿತು. ಆ ದಿನ ನಾನು ಭೂತ ಕಟ್ಟುವವರನ್ನು ಮಾತನಾಡಿಸಿದ್ದೆ. ಅವರು, ‘ಭೂತ ಕಟ್ಟುವ ಋತುವಿನಲ್ಲಿ ಸರಿಯಾಗಿ ಊಟ ಹಾಗೂ ವಸತಿ ಸಿಗುವುದಿಲ್ಲ. ಹಾಗೆಯೇ ಹೆಚ್ಚಿನ ಕೋಲಗಳು ರಾತ್ರಿಯ ವೇಳೆ ನಡೆಯುವುದರಿಂದ ವಾರಗಟ್ಟಲೆ ನಿದ್ದೆ ಇರುವುದಿಲ್ಲ’ ಎಂದಿದ್ದರು. ಅವರ ಮಕ್ಕಳೂ ಭೂತ ಕಟ್ಟುತ್ತಿದ್ದು ಸುಮಾರು ತಲೆಮಾರುಗಳಿಂದ ಈ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆಯಂತೆ.

ಅವರು ಹೇಳಿದ ಪ್ರಕಾರ ಭೂತಕೋಲಗಳನ್ನು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸಂಪ್ರದಾಯಕ್ಕನುಗುಣವಾಗಿ ಆಚರಿಸಬೇಕು. ‘ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಒಳಗೊಂಡ ಪ್ರದೇಶವನ್ನು ಪರಶುರಾಮ ಸೃಷ್ಟಿ ಎನ್ನುತ್ತಾರೆ. ಈ ಪ್ರದೇಶವನ್ನು ರಕ್ಷಿಸಲು ಹಾಗೂ ಇಲ್ಲಿನ ಜನರಿಗೆ ಒಳಿತು ಮಾಡಲಿಕ್ಕಾಗಿ ದೈವಗಳು ಇದ್ದಾವೆ. ನಾನು ಈ ಭೂತ ಕಟ್ಟುವ ಪುಣ್ಯಕಾರ್ಯವನ್ನು 15 ವರ್ಷದಿಂದ ನಿರ್ವಹಿಸುತ್ತಾ ಬಂದಿದ್ದೇನೆ. ಈ ಆಚರಣೆ ಎಂದಿಗೂ ಹಿನ್ನೆಲೆಗೆ ಸರಿಯಬಾರದು’ ಎಂದು ಅವರು ಹೇಳಿದ್ದರು.

ಸರಿಯಾದ ನಿದ್ದೆ, ಆಹಾರ ಇಲ್ಲದಿರುವುದು ಹಾಗೂ ಗಂಟೆಗಟ್ಟಲೆ ಕುಣಿಯುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿಲ್ಲವೇ ಎಂಬ ನನ್ನ ಪ್ರಶ್ನೆಗೆ ಅವರು, ‘ದೈವದ ಅನುಗ್ರಹದಿಂದ ನನಗೆ ಸುಸ್ತಾಗುವುದಿಲ್ಲ. ಆದರೆ ವಯಸ್ಸಾದ ಹಾಗೆ ಶಕ್ತಿ ಕಡಿಮೆಯಾಗುತ್ತಿದೆ. ಆದರೂ ನಾನು ನನ್ನ ಕುಟುಂಬ ನಡೆಸಲು ಈ ಸಮಯದಲ್ಲಿ ವಾರಕ್ಕೆ ನಾಲ್ಕರಿಂದ ಏಳು ಭೂತ ಕಟ್ಟುತ್ತೇನೆ’ ಎಂದು ಉತ್ತರಿಸಿದ್ದರು.

ಅಷ್ಟು ಹೊತ್ತಿಗೆ ಸೂರ್ಯ ಮೇಲಕ್ಕೇರಿದ. ಧೂಮಾವತಿ ಮೆಚ್ಚಿಗೆ ತಯಾರಿ ಮುಗಿದಿತ್ತು. ಪಾತ್ರಿ ನಿದ್ದೆ ಇಲ್ಲದೆ ಭೂತಕಟ್ಟಲು ನಿಂತರು. ಅವರಿಗೆ ಒಂಬತ್ತು ಗಂಟೆಗಳಿಂದ ಯಾವುದೇ ವಿರಾಮವಿರಲಿಲ್ಲ. ಆ ಸುಸ್ತು ಅವರ ಮುಖದಲ್ಲಿ ಕಾಣಿಸುತ್ತಿರಲಿಲ್ಲ. ನನಗಂತೂ ಒಮ್ಮೆ ಮನೆಗೆ ಹೋಗಿ ಮಲಗಿದರೆ ಸಾಕು ಎಂದೆನಿಸುತ್ತಿತ್ತು. ಧೂಮಾವತಿ ಹೆಣ್ಣು ದೈವ ಹಾಗೂ ಮಾಂಸಾಹಾರಿ. ಹಗಲು ಹೊತ್ತು ನಡೆಯುವ ಕೋಲವಾದುದರಿಂದ ಆಚರಣಾ ಶೈಲಿ ವಿಶಿಷ್ಟವಾಗಿತ್ತು. ಮಧ್ಯಾಹ್ನ ಒಂದು ಗಂಟೆಗೆ ಆಚರಣೆ ಮುಗಿಯಿತು. ಸುತ್ತಲೂ ಜಾತ್ರೆಯ ವಾತಾವರಣ. ಅಲ್ಲಿಯೇ ಎಲ್ಲರೂ ಊಟ ಮುಗಿಸಿ ಮನೆಗೆ ಹೊರಟರು. ನಾನು ವಾಪಸ್ ಗದ್ದೆಗಳ ಮಧ್ಯೆ ನಡೆದುಕೊಂಡು ಹೋಗುತ್ತಾ ಹಿಂದಿನ ದಿನವನ್ನು ನೆನೆಪಿಸಿಕೊಂಡೆ. ಅದು ಬೇರೆಯದೇ ಅನುಭವ.

ಯಕ್ಷಗಾನದಂತಹ ಕುಣಿತ, ವಾದ್ಯಗಳ ಸಂಗೀತ, ದೈವದ ಮಾತಿನ ಮೋಡಿ, ಮುಖದ ಹಾವಭಾವ, ಧರಿಸುವ ಪೋಷಾಕು ಹಾಗೆಯೇ ಜನರು ಅವರಿಗೆ ನೀಡುವ ಗೌರವ ಹೊಸ ಅನುಭವ ನೀಡಿತು. ಇಡೀ ಊರನ್ನೇ ಒಂದು ಮಾಡುವ ಶಕ್ತಿಯಿರುವ ಭೂತಕೋಲದ ನೆನಪೇ ರೋಮಾಂಚನ ಉಂಟು ಮಾಡುತ್ತದೆ. ಆ ನಂತರ ನನಗೆ ಇತರ ಕೆಲವು ಭೂತಕೋಲಗಳನ್ನು ನೋಡುವ ಅವಕಾಶವೂ ದೊರೆಯಿತು. ಬೆಂಗಳೂರಿಗೆ ಬಂದ ಮೇಲೂ ಭೂತಕೋಲದ ಗುಂಗು ಇನ್ನೂ ಇದೆ. ಇನ್ನಷ್ಟು ವಿಧದ ಆಚರಣೆಗಳನ್ನು ನೋಡಲು ಮುಂದಿನ ವರ್ಷದ ಬೇಸಿಗೆ ರಜೆಗಾಗಿ ಕಾಯುತ್ತಾ ಇದ್ದೇನೆ. 

Post Comments (+)