ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಂಚಬ್ರಹ್ಮ’ ಬಿ.ಕೆ.ಎಸ್‌. ವರ್ಮಾ- ವಿಶೇಷ ಲೇಖನ

Last Updated 7 ಫೆಬ್ರುವರಿ 2023, 1:15 IST
ಅಕ್ಷರ ಗಾತ್ರ

ನಮ್ಮ ಕಾಲದ ರವಿವರ್ಮಾ ಎಂಬುದಾಗಿಯೇ ಖ್ಯಾತರಾದವರು ಚಿತ್ರಕಲಾವಿದ ಬಿ. ಕೆ. ಎಸ್‌. ವರ್ಮಾ. ಅವರ ದಿಟವಾದ ಹೆಸರು ಶ್ರೀನಿವಾಸ; ಪೂರ್ಣ ಹೆಸರು ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ. ಆದರೆ ಎಳವೆಯಿಂದಲೇ ಅವರಿಗೆ ರಾಜ ರವಿವರ್ಮನ ಚಿತ್ರಗಳೆಂದರೆ ಆಕರ್ಷಣೆ; ಹೀಗಾಗಿ ತಮ್ಮ ಹೆಸರಿಗೆ ‘ವರ್ಮಾ‘ ಎಂದು ಸೇರಿಸಿಕೊಂಡರು; ಅದಕ್ಕೆ ತಕ್ಕಂತೆ ಜನಪ್ರೀತಿಯನ್ನೂ ಕೀರ್ತಿಯನ್ನೂ ಸಂಪಾದಿಸಿಕೊಂಡರು.

ಬಿ. ಕೆ. ಎಸ್‌. ವರ್ಮಾ (1949–2023) ಚಿತ್ರಕಲೆಯನ್ನು ಯಾವುದೇ ಕಲಾಶಾಲೆಯಲ್ಲಿ ಕಲಿತವರಲ್ಲ; ಅದು ಅವರಿಗೆ ಸಹಜವಾಗಿಯೇ ದಕ್ಕಿದ್ದ ಕೊಡುಗೆ. ಅವರ ತಾಯಿ ಜಯಲಕ್ಷ್ಮಿ ಕಲಾವಿದೆ; ಬಾಟಿಕ್‌ ಕಲೆಯಲ್ಲಿ ಪರಿಣತರು. ವರ್ಮಾ ಅವರ ಚಿಕ್ಕಪ್ಪ ಹನುಮಂತಾಚಾರ್‌ ಖ್ಯಾತ ಶಿಲ್ಪಿ. ಹೀಗೆ ಮನೆಯ ವಾತಾವರಣದಲ್ಲಿ ಕಲೆಯ ಬೆಳಕು ಇತ್ತು. ಜೊತೆಗೆ ಅವರ ಆಸಕ್ತಿ–ಆರಾಧನೆಗಳೂ ಸೇರಿಕೊಂಡವು. ಶಾಲಾಶಿಕ್ಷಣದಲ್ಲಿ ಅವರಿಗೇನೂ ರುಚಿ ಇರಲಿಲ್ಲ; ಲೋಕಶಿಕ್ಷಣದ ಹಾದಿಯನ್ನು ಹಿಡಿದರು. ಬಾಲ್ಯದಲ್ಲಿಯೇ ಮನೆಯನ್ನು ಬಿಟ್ಟರು; ಕಲೆಯ ಮರ್ಮಗಳನ್ನು ಅರಿಯಲು ಅಲೆದಾಡಿದರು. ಕೊನೆಯವರಿಗೂ ಅವರು ಈ ಸ್ವಾತಂತ್ರ್ಯವನ್ನು ಜೀವನದಲ್ಲೂ ಕಲಾಭಿವ್ಯಕ್ತಿಯಲ್ಲೂ ಉಳಿಸಿಕೊಂಡರು. ಅವರ ಚಿತ್ರಗಳಲ್ಲಿ ಅವರದ್ದೇ ವಿಶೇಷ ಛಾಪು ಮೂಡಿರುವುದು ಎದ್ದುಕಾಣುತ್ತದೆ. ಅ. ನ. ಸುಬ್ಬರಾಯರ ಕಲಾಮಂದಿರದಲ್ಲಿ ಸ್ವಲ್ಪ ಸಮಯ ವ್ಯಾಸಂಗ ಮಾಡಿದರು; ಆದರೆ ಅವರ ಕುಂಚ ಮಾತ್ರ ಸ್ವತಂತ್ರವಾಗಿಯೇ ಉಳಿಯಿತು!

ವರ್ಮಾ ಅವರು ಬ್ರಷ್‌ಗಳಿಂದ ಮಾತ್ರವೇ ಚಿತ್ರಗಳನ್ನು ಬರೆಯುತ್ತಿರಲಿಲ್ಲ; ದಾರದಿಂದಲೂ ರಚಿಸುತ್ತಿದ್ದ ಅವರ ಕಲಾಕೌಶಲ ಸಹೃದಯರನ್ನು ಆಕರ್ಷಿಸುತ್ತಿತ್ತು. ತಮ್ಮ ಉಗುರುಗಳಿಂದಲೂ ಅವರು ಕಾಗದದ ಮೇಲೆ ಉಬ್ಬುಚಿತ್ರಗಳನ್ನು ಮೂಡಿಸುತ್ತಿದ್ದರು. ಹೀಗೆ ಅವರು ಎಳವೆಯಲ್ಲೊಮ್ಮೆ ಜಯಚಾಮರಾಜೇಂದ್ರ ಒಡೆಯರ್‌ ಅವರ ಚಿತ್ರವನ್ನು ಉಗುರಿನಲ್ಲಿ ಮೂಡಿಸಿ ಅವರಿಂದ ಬಹುಮಾನವನ್ನೂ ಸಂಪಾದಿಸಿದ್ದರಂತೆ. ಶತಾವಧಾನಿ ಆರ್‌. ಗಣೇಶ್‌ ಅವರೊಂದಿಗೆ ವರ್ಮಾ ಅವರು ನಡೆಸಿಕೊಡುತ್ತಿದ್ದ ‘ಕಾವ್ಯ ಚಿತ್ರ’ ಎಂಬ ವಿಶಿಷ್ಟ ಕಾರ್ಯಕ್ರಮ ಅಪಾರ ಜನಾದರಣೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮ ಒಮ್ಮೆ ಸತತವಾಗಿ ಇಪ್ಪತ್ತನಾಲ್ಕು ಗಂಟೆಗಳ ಕಾಲ ನಡೆದದ್ದು ಅಪರೂಪವೇ ಸರಿ.

ವರ್ಮಾ ಅವರ ಚಿತ್ರಗಳಿಗೆ ಸಾವಿರಾರು ಸಹೃದಯರು ಮನಸೋತಿದ್ದಾರೆ. ಭಾರತಮಾತೆ, ಶ್ರೀಕೃಷ್ಣ–ರಾಧಾ, ಗಣೇಶ, ದೇವಿ, ಈಶ್ವರ, ಸರಸ್ವತಿ, ರಾಘವೇಂದ್ರಸ್ವಾಮಿ – ಹೀಗೆ ಅವರ ಹತ್ತು ಹಲವು ಚಿತ್ರಗಳು ಹಲವರ ದೇವರಮನೆಗಳನ್ನೂ ಸೇರಿವೆ. ಕನ್ನಡ ಸಾಹಿತ್ಯ ಪರಿಷತ್‌ ಬಳಸುತ್ತಿರುವ ಭುವನೇಶ್ವರಿಯ ಚಿತ್ರ ಕೂಡ ಅವರ ಸೃಷ್ಟಿಯೇ. ಕಲಾವಿದ ರೋರಿಚ್‌, ಸಾಹಿತಿಗಳಾದ ಕುವೆಂಪು, ಶಿವರಾಮ ಕಾರಂತ, ಚಿತ್ರನಟರಾದ ರಾಜಕುಮಾರ್‌, ರಜನಿಕಾಂತ್‌ – ಹೀಗೆ ಹಲವರು ಗಣ್ಯರು ಅವರ ಕಲೆಯ ಅಭಿಮಾನಿಗಳು. ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರಿಗೆ ಇತ್ತೀಚೆಗಷ್ಟೆ ಭಾರಿಗಾತ್ರದ ವೆಂಕಟೇಶ್ವರನ ಚಿತ್ರವನ್ನು ರಚಿಸಿಕೊಟ್ಟಿದ್ದು ದೊಡ್ಡ ಸುದ್ದಿಯೂ ಆಗಿತ್ತು. ಪರಿಸರವನ್ನು ಕುರಿತ ಅವರ ಚಿತ್ರಗಳನ್ನು ಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದು. ಬಂಗಾರದ ಜಿಂಕೆ, ದೀಪ ಮುಂತಾದ ಹಲವು ಚಲನಚಿತ್ರಗಳಿಗೂ ತಮ್ಮ ಕಲೆಯ ಕಾಣ್ಕೆಯನ್ನು ನೀಡಿದ್ದರು. ಉತ್ಥಾನ, ಪ್ರಜಾಮತ, ಮಂಗಳ ಮುಂತಾದ ಪತ್ರಿಕೆಗಳಿಗೂ ಅವರ ಕಲಾಪ್ರತಿಭೆ ಸಂದಿದೆ. ‘ಪ್ರಜಾವಾಣಿ’
ಯಲ್ಲಿ ಅಂಕಣವೊಂದಕ್ಕೆ ಸುಮಾರು ಐವತ್ತು ಚಿತ್ರಗಳನ್ನು ರಚಿಸಿದ್ದರು.

‘ಅರ್ಟಿಸ್ಟ್‌ ಆದರೆ ಮಾತ್ರ ಸಾಲದು; ಅವನು ಹಾರ್ಟಿಸ್ಟ್‌ ಕೂಡ ಆಗಬೇಕು’ ಎಂಬುದು ವರ್ಮಾ ಅವರ ಸೂತ್ರವೇ. ಇದಕ್ಕೆ ಅವರ ಜೀವನವೇ ಭಾಷ್ಯವಾಗಿತ್ತು. ಕೀರ್ತಿ–ಹೊಗಳಿಕೆಗಳ ನಡುವೆಯೂ ಅವರು ಸರಳವಾಗಿಯೇ ಇದ್ದರು; ಎಲ್ಲರೊಂದಿಗೂ ಸುಲಭವಾಗಿ ಬೆರೆಯುತ್ತಿದ್ದರು; ಯಾವುದೇ ಹೊರೆಗಳಿಲ್ಲದೆ, ತಮ್ಮ ಸುತ್ತಲಿನ ಪರಿಸರವನ್ನು ಸಜ್ಜನಿಕೆ–ಪ್ರೀತಿಗಳ ಸೌಂದರ್ಯದಿಂದ ಅಲಂಕರಿಸುತ್ತಿದ್ದ ಭಾವಜೀವಿ.

ಪ್ರತಿಭೆ ಗಣಿಯ ವಜ್ರದಂತೆ;

ಸಾಣೆ ಹಿಡಿಯುವುದೇ ರಸತಪಸ್ಯೆ.

ಸ್ವಾರ್ಥಿಗಳ ಕ್ಷಣಿಕ ಪ್ರಶಂಸೆಗೆ ಮಾರುಹೋಗಬೇಡಿ;

ನಿಮ್ಮ ಕಲೆ ಪೂಜೆಗೆತ್ತಿದ ಆರತಿಯಾಗಿ ನಿರಂತರ ಬೆಳಗಲಿ.

– ಇವು ಕುವೆಂಪು ಅವರು 1964ರಲ್ಲಿ ವರ್ಮಾ ಅವರಿಗೆ ಬರೆದಿದ್ದ ಪತ್ರದ ಸಾಲುಗಳು. ಹೌದು, ವರ್ಮಾ ಅವರ ಕಲೆಯ ಬೆಳಕು ಹಲವರ ಮನೆ–ಮನಗಳಲ್ಲಿ ಪೂಜೆಗೆತ್ತಿದ ಆರತಿಯಾಗಿ ನಿತ್ಯವೂ ಬೆಳಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT