ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಕೃತಿ’ಯ ಸಚಿನ್‌: ಚಿಕ್ಕಬಳ್ಳಾಪುರದ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ

Last Updated 4 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕೆಲವರಿಗೆ ಚಾಕ್‌ಪೀಸ್‌ ಸಿಕ್ಕರೆ ಗೋಡೆಮೇಲೆ, ಕಪ್ಪು ಹಲಗೆಯ ಮೇಲೆ ಅಕ್ಷರಗಳನ್ನು ಬರೆಯುತ್ತಾರೆ. ಕಲಾವಿದರಿಗೆ ಪೆನ್ಸಿಲ್‌ ಸಿಕ್ಕರೆ, ಅದರಿಂದಲೇ ಅಂದದ ಚಿತ್ರ ಬಿಡಿಸುತ್ತಾರೆ. ಆದರೆ, ಸಚಿನ್‌ ಸಂಘೆಗೆ ಚಾಕ್‌ಪೀಸ್ ಸಿಕ್ಕರೆ, ಕೆಲವು ಕ್ಷಣಗಳಲ್ಲಿ ಅದನ್ನೇ ಕೊರೆದು ಕಲಾಕೃತಿಯೊಂದನ್ನು ಸೃಷ್ಟಿಸುತ್ತಾರೆ. ಪೆನ್ಸಿಲ್‌ ಕೊಟ್ಟರೆ ಅದರ ಲೆಡ್‌ನಲ್ಲೇ ಸೂಕ್ಷ್ಮ ಕಲಾಕೃತಿಗಳನ್ನು ಬಿಡಿಸುತ್ತಾರೆ..!

ಹೌದು. ಸಚಿನ್ ಅವರ ಕೈಚಳಕದಲ್ಲಿ ವಾಜಪೇಯಿ, ನರೇಂದ್ರ ಮೋದಿಯವರಂತಹ ಮಹಾನ್‌ ನಾಯಕರು, ಕುವೆಂಪು, ಬೇಂದ್ರೆಯವರಂತಹ ಸಾಹಿತ್ಯ ಸಾರ್ವಭೌಮರ ಪ್ರತಿಕೃತಿಗಳು ಸೃಷ್ಟಿಯಾಗಿವೆ. ಹಂಪಿಯ ಕಲ್ಲಿನ ರಥ, ತಾಜ್‌ಮಹಲ್‌, ದಂಡಿಸತ್ಯಾಗ್ರಹದ ಪ್ರತಿಮೆಗಳು ಸಿದ್ಧವಾಗಿವೆ. ಮಾತ್ರವಲ್ಲ, ಯೋಗಾಸನದ ಭಂಗಿಯ ಶಿಲ್ಪಗಳು ತಯಾರಾಗಿವೆ. ಬಾಲ ಸಚಿನ್‌ ತೆಂಡೋಲ್ಕರ್‌ ಕ್ರಿಕೆಟ್‌ ಆಡುತ್ತಿದ್ದ ಭಂಗಿ, ವಿಶ್ವಕಪ್‌ ಟ್ರೋಫಿಯಂತಹ ಕಲಾಕೃತಿಗಳು ಸೃಷ್ಟಿಯಾಗಿವೆ. ಪೆನ್ಸಿಲ್‌ನ ಒಂದೇ ಲೆಡ್‌ನಲ್ಲಿ ತ್ರಿಶೂಲ, ಡಮರುಗ, ಸರ್ಪ ಮೂರು ಇರುವಂತಹ ಆಕೃತಿಯನ್ನು ಕೆತ್ತಿದ್ದಾರೆ. ಒಂದೊಂದು ಕಲಾಕೃತಿಯೂ ಅಂದವಾಗಿದೆ. ನೋಡುಗರನ್ನು ಬೆರಗಾಗಿಸುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಸಚಿನ್‌ ಮೂಲತಃ ಕಲಾವಿದರಲ್ಲ. ಅವರೊಬ್ಬ ಸಾಫ್ಟ್‌ವೇರ್‌ ಎಂಜಿನಿಯರ್‌. ಬೆಂಗಳೂರಿನ ಸಿಸ್ಕೊ ಸಿಸ್ಟಮ್ಸ್‌ ಕಂಪನಿಯಲ್ಲಿ ಕ್ವಾಲಿಟಿ ಅಶ್ಯೂರೆನ್ಸ್‌ ಎಂಜಿನಿಯರ್‌ ಆಗಿದ್ದಾರೆ. ತಂದೆ ಎಂ.ಜೆ.ಜಯಕೀರ್ತಿ, ಚಂದ್ರಕಲಾ. ಇವರದ್ದು ಕೃಷಿ ಕುಟುಂಬ.

ಹೈಸ್ಕೂಲಿನಿಂದಲೇ ಆರಂಭ...

ಹೈಸ್ಕೂಲಿನಲ್ಲಿದ್ದಾಗ ಸಚಿನ್‌ ತುಂಬಾ ದುಂಡಾಗಿ ಆಕ್ಷರಗಳನ್ನು ಬರೆಯುತ್ತಿದ್ದರಂತೆ. ಜತೆಗೆ ಚಿತ್ರಕಲೆಯೂ ಹವ್ಯಾಸವಾಗಿತ್ತು. ಇವರ ಕ್ರಿಯಾಶೀಲತೆಯನ್ನು ಗುರುತಿಸಿದ ಶಿಕ್ಷಕರು, ಕಪ್ಪುಹಲಗೆಯ ಮೇಲೆ ಚಾಕ್‌ಪೀಸ್‌ನಿಂದ ಅಕ್ಷರಗಳನ್ನು ಬರೆಯಲು ಸೂಚಿಸುತ್ತಿದ್ದರು. ಆದರೆ ಚಾಕ್‌ಪೀಸ್‌ನಲ್ಲಿ ಹೀಗೆಲ್ಲ ಕಲಾಕೃತಿಗಳನ್ನು ಕೆತ್ತಬಹುದೆಂದು ಅವರಿಗೆ ಗೊತ್ತಿರಲಿಲ್ಲ.

ಒಮ್ಮೆ ಹೀಗಾಯಿತು: ಅಕ್ಷರ ದುಂಡಾಗಿ ಬರೆಯುತ್ತಿದ್ದ ಸಚಿನ್‌ಗೆ ಒಮ್ಮೆ, ಚಾಕ್‌ಪೀಸ್‌ ಮೇಲೆ ಸ್ನೇಹಿತನೊಬ್ಬರ ಹೆಸರು ಬರೆದುಕೊಡಲು ಪ್ರಯತ್ನಿಸಿದರು. ಮೊದಲ ಹಂತದಲ್ಲೇ ಅದು ಯಶಸ್ವಿಯಾಯಿತು. ‘ಚಾಕ್‌ಪೀಸ್‌ನಿಂದ ಹೀಗೆಲ್ಲ ಮಾಡಬಹುದಲ್ಲ’ ಎಂದು ತಿಳಿದು ಅವರಿಗೆ ಖುಷಿಯಾಯಿತು.

ಹೆಸರಿನಿಂದ ಕಲಾಕೃತಿವರೆಗೆ..

ಆರಂಭದಲ್ಲಿ ಚಾಕ್‌ಪೀಸ್‌ ಮೇಲೆ ಹೆಸರು ಕೆತ್ತುತ್ತಿದ್ದರು. ಹಂತ ಹಂತವಾಗಿ ಮಹಾನ್ ನಾಯಕರ ಮುಖಗಳನ್ನು ಕೆತ್ತಲು ಆರಂಭಿಸಿದರು. ಕ್ರಮೇಣ ಕುಸುರಿ ಕಲೆಯಲ್ಲಿ ಹಿಡಿತ ಸಿಕ್ಕಿತು. ಮೊದಲು ಒಂದು ಚಾಕ್‌ಪೀಸ್‌ ಮಾತ್ರ ಬಳಸಿ ಕಲಾಕೃತಿ ರಚಿಸುತ್ತಿದ್ದವರು, ನಂತರದಲ್ಲಿ ಮೂರು ನಾಲ್ಕು ಚಾಕ್‌ಪೀಸ್‌ಗಳನ್ನು ಬಳಸಿ ವಿಭಿನ್ನ ಪ್ರತಿಕೃತಿಗಳನ್ನು ತಯಾರಿಸುವಲ್ಲಿ ಯಶಸ್ವಿಯಾದರು.

ವಿದ್ಯಾಭ್ಯಾಸದ ಅವಧಿಯಲ್ಲಿ ಕೆಲ ಕಾಲ ಈ ಕಲೆಯಿಂದ ದೂರ ಉಳಿದಿದ್ದರು. ಪದವಿ ಪೂರ್ಣಗೊಂಡ ಮೇಲೆ ಪುನಃ ಚಾಕ್‌ಪೀಸ್ ಕೆತ್ತನೆ ಕಲೆ ಆರಂಭಿಸಿದರು. ಸುಮಾರು 2 ದಶಕಗಳಿಂದ ಕಲಾಕೃತಿ ಕೆತ್ತನೆ ಕೆಲಸವನ್ನು ಹವ್ಯಾಸವಾಗಿಯೇ ಮುಂದುವರಿಸಿದ್ದಾರೆ. ಈ ಕಲೆಗೆ ಅವರೇ ಇಟ್ಟ ಹೆಸರು ‘ಚಾಕೃತಿ’.

ಚಾಕ್‌ಪೀಸ್‌ನಲ್ಲಿ ಮಹಾನ್ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಕನ್ನಡದ ಕವಿ-ಲೇಖಕರು, ಐತಿಹಾಸಿಕ ಘಟನೆಗಳು, ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವ ಚಿತ್ರಗಳನ್ನು ಕೆತ್ತಿದ್ದಾರೆ. ಪೆನ್ಸಿಲ್‌ನಿಂದ ಜೈನ ತೀರ್ಥಂಕರರು, ಗಣೇಶ, ರಾಷ್ಟ್ರಲಾಂಚನ, ವಿಶ್ವಟ್ರೋಫಿಗಳು ಹೀಗೆ 450ಕ್ಕೂ ಹೆಚ್ಚು ಕಲಾಕೃತಿಗಳನ್ನು ಕೆತ್ತಿದ್ದಾರೆ.

ಮೊದಲು ಮೆಂಡರ್ ಬ್ಲೇಡ್ ಬಳಸಿ ಕಲಾಕೃತಿ ರಚಿಸುತ್ತಿದ್ದರು. ನಂತರದಲ್ಲಿ ಅದನ್ನು ಬಿಟ್ಟು ಪ್ರಯೋಗಾಲಯದಲ್ಲಿ ಬಳಸುವ ಡಿಸಕ್ಷನ್ ನೀಡಲ್ (ಸೂಜಿ) ಬಳಸುತ್ತಿದ್ದಾರೆ. ಯಾವುದೇ ಲೆನ್ಸ್‌ಗಳನ್ನು ಬಳಸುವುದಿಲ್ಲ.

ಸೂಕ್ಷ್ಮ ಹಂತಕ್ಕೆ ಬಂದಾಗಲೆಲ್ಲ ಹೆಚ್ಚೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಣ್ಣ ಮೂರ್ತಿಗಳಿಗೆ ಆರರಿಂದ ಎಂಟು ಗಂಟೆಯಷ್ಟು ಸಮಯ ಹಿಡಿಯುತ್ತದೆ. ದೊಡ್ಡ ಕಲಾಕೃತಿಗಳಿಗೆ, ಅಂದರೆ ತಾಜ್‌ಮಹಲ್, ಹಂಪೆಯ ಸ್ಮಾರಕಗಳಂತಹ ಚಿತ್ರಗಳನ್ನು ಕೆತ್ತುವಾಗಿ 80 ರಿಂದ 90 ಗಂಟೆಗಳು ಹಿಡಿಯುತ್ತವಂತೆ. ಮಹಾನ್‌ ನಾಯಕರ ಭೇಟಿಯ ಖುಷಿ.

ಚಾಕೃತಿ ಕಲೆಯ ಹವ್ಯಾಸ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಕಲ್ಪಿಸಿದೆ. ನಾಲ್ಕು ವರ್ಷಗಳ ಹಿಂದೆ ಕಂಡ ಈ ಕನಸು, ಈಗ ನನಸಾಗಿದೆ. ಪ್ರಧಾನಿ ಅವರನ್ನು ಭೇಟಿಯಾದಾಗ ತಾವು ಕಟೆದ ಪ್ರತಿಕೃತಿಗಳನ್ನು ಉಡುಗೊರೆಯಾಗಿ ನೀಡಿ, ಅವರಿಂದ ಸನ್ಮಾನಿತರಾಗಿದ್ದಾರೆ.

ಪ್ರಧಾನಿಯವರಷ್ಟೇ ಅಲ್ಲ, ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಪುನೀತ್ ರಾಜಕುಮಾರ್, ಸುದೀಪ್, ದರ್ಶನ್ ತೂಗುದೀಪ, ಯೋಗರಾಜ್ ಭಟ್ ಅವರಿಗೂ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಿಸ್ಕೊ ಸಂಸ್ಥೆಯ ಚೇರ್ಮನ್ ಜಾನ್ ಚೆಂಬರ್ಸ್ ಹಾಗೂ ಸಿ.ಇ.ಓ ಚಕ್ ರಾಬೀನ್ಸ್ ಅವರಿಗೆ ಉಡುಗೊರೆ ಕೊಟ್ಟು, ಮೆಚ್ಚುಗೆ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT