ಮಂಗಳವಾರ, ನವೆಂಬರ್ 12, 2019
28 °C

ಪುಟಾಣಿಯ ಕೈಚಳಕ

Published:
Updated:
Prajavani

ನಾಲ್ಕು ವರ್ಷದ ಈ ಹುಡುಗನ ಕಲ್ಪನೆಗೆ ಜಗತ್ತಿನಲ್ಲಿ ಬೆರಗುಗೊಳ್ಳದವರೇ ಇಲ್ಲ. ಕುಂಚ ಮತ್ತು ಕ್ಯಾನ್ವಾಸ್‌ ಎರಡು ಸಿಕ್ಕರೆ ಸಾಕು, ತನ್ನ ಕಲಾ ಜಗತ್ತಿನೊಳಗೆ ಆತ ಮುಳುಗಿ ಹೋಗುತ್ತಾನೆ. ವರ್ಣ ಸಂಯೋಜನೆಯಲ್ಲಿ ಆತನಿಗೆ ಅದ್ಭುತವಾದ ಕೈಚಳಕ ಸಿದ್ಧಿಸಿದೆ. ಅಂದಹಾಗೆ ಈ ಪುಟಾಣಿಯ ಹೆಸರು ಅದ್ವೈತ ಕೋಲಾರ್ಕರ್‌ ಎಂದು.

ಪುಣೆಯಲ್ಲಿ ವಾಸವಾಗಿರುವ ಅಮಿತ್‌ ಕೋಲಾರ್ಕರ್‌ ಮತ್ತು ಶ್ರುತಿ ದಂಪತಿಯ ಪುತ್ರನೀತ. ಅದ್ವೈತನ ಮನೆಯ ಎಲ್ಲ ಗೋಡೆಗಳು ಆತನ ಕಲಾಕೃತಿಗಳಿಂದ ತುಂಬಿಹೋಗಿವೆ. ಆತ ಮೂರು ತಿಂಗಳ ಕೂಸಾಗಿದ್ದಾಗಲೇ ಅಮ್ಮ ಶ್ರುತಿ (ಅವರೂ ಕಲಾವಿದೆ) ಆತನ ಕೈಗೆ ಕುಂಚವನ್ನು ಕೊಟ್ಟರಂತೆ. ಅದ್ವೈತ ಬೆಳೆಯುತ್ತಾ ಹೋದಂತೆ ಆತನ ಕಲಾಜಗತ್ತು ಸಹ ಬೆಳೆಯುತ್ತಾ ಹೋಯಿತು.

ಡ್ರ್ಯಾಗನ್‌ಗಳು, ನಕ್ಷತ್ರ ಪುಂಜಗಳು, ಸಮುದ್ರದ ಜೀವಿಗಳು, ಡೈನೋಸಾರ್‌ಗಳು, ಪಕ್ಷಿಗಳು, ಹೂವುಗಳು ಆತನ ಕುಂಚದಿಂದ ಯಾವುವೂ ತಪ್ಪಿಸಿಕೊಳ್ಳಲಿಲ್ಲ. ಕೆಲವು ಕಲಾಕೃತಿಗಳನ್ನು ಹತ್ತು ನಿಮಿಷಗಳಲ್ಲೇ ಪೂರೈಸುವ ಆತ, ಇನ್ನು ಕೆಲವು ಚಿತ್ರಗಳನ್ನು ಪೂರ್ಣಗೊಳಿಸಲು ದಿನಗಟ್ಟಲೆ ಸಮಯ ತೆಗೆದುಕೊಳ್ಳುತ್ತಾನಂತೆ. ಜಗತ್ತಿನ ಹಲವು ನಗರಗಳಲ್ಲಿ ಆತನ ಕಲಾಕೃತಿಗಳ ಪ್ರದರ್ಶನ ನಡೆದಿದೆ. ಅದ್ವೈತ ಚಿತ್ರ ತೆಗೆದೊಡನೆ ಅವು ಮಾರಾಟವಾಗಿ ಬಿಡುತ್ತವೆ. ಆತನ ಕಲಾಕೃತಿಗಳಿಗೆ ಅಷ್ಟೊಂದು ಬೇಡಿಕೆ. ಬಿಬಿಸಿಯಲ್ಲಿ ಈತನ ವಿಷಯವಾಗಿ ವಿಶೇಷ ಕಾರ್ಯಕ್ರಮ ಬಿತ್ತರಗೊಂಡಿದೆ. 

ಪ್ರತಿಕ್ರಿಯಿಸಿ (+)