ಗುರುವಾರ , ನವೆಂಬರ್ 21, 2019
20 °C

ಗ್ರೇಟಾ ಎಂಬ ಕಣ್ಮಣಿ

Published:
Updated:
Prajavani

‘ಪ್ರಶಸ್ತಿಗಳಿಂದ ಪರಿಸರ ಉಳಿಯದು’ ಎಂದು ತನಗೆ ಬಂದ ದೊಡ್ಡ ಪ್ರಶಸ್ತಿಯೊಂದನ್ನು (ಪ್ರಶಸ್ತಿ ಮೊತ್ತ ₹ 39 ಲಕ್ಷ) ನಿರಾಕರಿಸಿದ ಗ್ರೇಟಾ ಟುನ್‌ಬರ್ಗ್‌ ಎಂಬ ಜಗತ್ತಿನ ಕಣ್ಮಣಿ ಹುಡುಗಿಯೊಬ್ಬಳ ಕಥೆ ಗೊತ್ತಾ?

ಒಂದು ವರ್ಷದ ಹಿಂದೆ ಸ್ವೀಡನ್ ದೇಶದ ಸಂಸತ್ತಿನ ಮುಂದೆ ಒಬ್ಬಳು ಶಾಲಾ ಬಾಲಕಿ ಪ್ರತಿ ಶುಕ್ರವಾರ school strike for climate ಎಂಬ ಭಿತ್ತಿಪತ್ರ ಹಿಡಿದುಕೊಂಡು ಕುಳಿತಿರುತ್ತಿದ್ದಳು. Friday for Future ಎಂಬ ಅವಳ ಘೋಷಣೆ ದಿನೇ ದಿನೇ ಜನಪ್ರಿಯಗೊಳ್ಳುತ್ತಾ ಹೋಯಿತು. ಕೆಲವೇ ವಾರಗಳಲ್ಲಿ ಗ್ರೇಟಾ ಟುನ್‌ಬರ್ಗ್‌ ಎಂಬ ಹದಿನಾರರ ಹುಡುಗಿ ಜಗತ್ತಿನ ಮಕ್ಕಳಿಗೆಲ್ಲ ಐಕಾನ್‌ ಆಗಿಬಿಟ್ಟಳು. ಈ ನವೆಂಬರ್ 8ಕ್ಕೆ ಗ್ರೇಟಾಳ ಚಳವಳಿಗೆ 63 ವಾರಗಳು.

ಯಾಕೆ ಗ್ರೇಟಾ ಶುಕ್ರವಾರ ಶಾಲೆಗೆ ಹೋಗಲ್ಲ?
2003ರ ಜನವರಿ 3ರಂದು ಹುಟ್ಟಿದ ಗ್ರೇಟಾ ತನ್ನ ಎಂಟನೆಯ ವಯಸ್ಸಿಗೇ ಹವಾಮಾನ ಬದಲಾವಣೆ ಕುರಿತು ಆತಂಕಗೊಂಡು ಖಿನ್ನತೆಗೆ ಒಳಗಾಗಿ ಊಟ, ತಿಂಡಿಯನ್ನೆಲ್ಲಾ ಬಿಟ್ಟು ಎರಡು ತಿಂಗಳ ಕಾಲ ಚಿಕಿತ್ಸೆಗೂ ಒಳಗಾಗಿದ್ದಳು. ಅಲ್ಲಿಂದ ಮುಂದೆ ಹವಾಮಾನ ಬದಲಾವಣೆ ಕುರಿತು ತಿಳಿದುಕೊಳ್ಳುತ್ತಾ ಬಂದಳು. ಪರಿಸರ ಸಂರಕ್ಷಣೆಯ ಕಾಳಜಿಯನ್ನು ಬರೀ ಬಾಯಿ ಮಾತಿಗೆ ಸೀಮಿತಗೊಳಿಸಿದ ಸರ್ಕಾರಗಳ ವಿರುದ್ಧ ಕಿಡಿಕಾರುವ ಗ್ರೇಟಾ, ನಾನು ದೊಡ್ಡವಳಾದ ಮೇಲೆ ಬದುಕಲು ಯೋಗ್ಯವಾದ ಪರಿಸರ ಇರುವುದಿಲ್ಲವೆಂದ ಮೇಲೆ ನಾನ್ಯಾಕೆ ಶಾಲೆಗೆ ಹೋಗಬೇಕು ಎಂದು ಪ್ರಶ್ನಿಸಿದಳು.

ನಾನು ಒಂಟಿಯಾಗಿಯಾದರೂ ಸರಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲೇಬೇಕು. ನನ್ನ ಪೀಳಿಗೆಯ ಮಕ್ಕಳು, ಅವರ ನಂತರವೂ ಈ ಪರಿಸರ ಉಳಿಯಬೇಕು ಎಂದು ಪ್ರತಿಪಾದಿಸಿದಳು. 2018ರ ಆಗಸ್ಟ್ ತಿಂಗಳಲ್ಲಿ ಸ್ವೀಡಿಸ್ ಸಂಸತ್ತಿನ ಮುಂದೆ ಒಬ್ಬಂಟಿಯಾಗಿ ಪ್ರತಿಭಟನೆಗೆ ಕೂತೇ ಬಿಟ್ಟಳು. ಗ್ರೇಟಾಳ ತಂದೆ, ಶಾಲೆಯ ಶಿಕ್ಷಕರು ಅವಳ ಮನಸ್ಸನ್ನು ಬದಲಾಯಿಸಲು ಯತ್ನಿಸಿದರೂ ಕೇಳಲಿಲ್ಲ.

ಸಾಮಾಜಿಕ ಜಾಲ ತಾಣಗಳ ಈ ಆಧುನಿಕ ಯುಗದಲ್ಲಿ ಗ್ರೇಟಾಳ Friday for Future ಚಳವಳಿ ಬಹುಬೇಗ ಜಗತ್ತಿನ ಮಕ್ಕಳ, ಪರಿಸರಪ್ರಿಯರ ಗಮನ ಸೆಳೆಯಿತು. 2019ರ ಮಾರ್ಚ್‌ 22ರಂದು ವಿಶ್ವ ಜಲದಿನದಂದು ಗ್ರೇಟಾ, ವಿಶ್ವದ ಮಕ್ಕಳಿಗೆ ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿಯಲು ಕರೆಕೊಟ್ಟಳು.

ಅಂದು ಜಗತ್ತಿನ 110 ದೇಶಗಳ ಮಕ್ಕಳು ಹವಾಮಾನ ಬದಲಾವಣೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದರು. ನಮ್ಮ ದೇಶ, ನಮ್ಮ ನಾಡಲ್ಲೂ ಮಕ್ಕಳು ಬೀದಿಗಿಳಿದರು. ಅಲ್ಲಿಂದ ಗ್ರೇಟಾಳ ಚಳವಳಿ ಯುರೋಪಿನ ಸರ್ಕಾರಗಳ, ರಾಜಕಾರಣಿಗಳ ನಿದ್ದೆಗೆಡಿಸಿತು. ಸ್ಕಾಟ್ಲೆಂಡ್ ಜಗತ್ತಲ್ಲೇ ಮೊದಲ ಬಾರಿಗೆ ‘ಕ್ಲೈಮೇಟ್ ಎಮರ್ಜೆನ್ಸಿ’ಯನ್ನು ಘೋಷಿಸಿತು.

ಪ್ರಖ್ಯಾತ ವನ್ಯಜೀವಿ ಚಿತ್ರ ನಿರ್ಮಾಪಕ ಸರ್ ಡೇವಿಡ್ ಅಟೆನ್‌ಬರೋ, ಹಾಲಿವುಡ್ ನಟರಾದ ಅರ್ನಾಲ್ಡ್ ಶ್ವಾಜ್‌ನೇಗರ್, ಲಿಯಾನಾರ್ಡೊ ಡಿಕಾಪ್ರಿಯೊ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಗ್ರೇಟಾಳಿಗೆ ಬೆಂಬಲವಾಗಿ ನಿಂತರು. ಹೀಗೆ ಗ್ರೇಟಾ ಎಂಬ ಶಾಲಾ ಬಾಲಕಿ ಈ ಪರಿಸರ ಉಳಿಸುವ ದೊಡ್ಡ ಹೋರಾಟವೊಂದರ ನೇತೃತ್ವವಹಿಸಿಕೊಂಡಳು.

14 ದಿನಗಳ ದೋಣಿ ಪ್ರಯಾಣ
2015ರ ಪ್ಯಾರಿಸ್ ಒಪ್ಪಂದದಂತೆ ಯಾವ ದೇಶವೂ (ಮುಖ್ಯವಾಗಿ ಅಮೆರಿಕ) Co2 ಪ್ರಮಾಣವನ್ನು ಕಡಿತಗೊಳಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗದೆ ಇರುವುದೂ ಗ್ರೇಟಾಳ ಆಕ್ರೋಶಕ್ಕೆ ಕಾರಣ.

ನಾವು ಈಗಿನಂತೆ ಪಳೆಯುಳಿಕೆ ಇಂಧನಗಳನ್ನು ದಹಿಸುವುದನ್ನು ಮುಂದುವರಿಸಿದರೆ, ಹಸಿರುಮನೆ ಅನಿಲಗಳ ಬಿಡುಗಡೆಯ ಮೇಲೆ ನಿಯಂತ್ರಣ ಸಾಧಿಸದಿದ್ದರೆ ಇನ್ನು ಹತ್ತು ವರ್ಷಗಳಲ್ಲಿ ಈ ಪರಿಸರ ವ್ಯವಸ್ಥೆ ಮಾನವನ ನಿಯಂತ್ರಣವನ್ನು ಮೀರಿ ಹೋಗುತ್ತದೆ ಎಂಬ ವಿಜ್ಞಾನಿಗಳ ಹೇಳಿಕೆಗಳನ್ನು ತಾನು ಮಾತನಾಡುವ ವೇದಿಕೆಗಳಲ್ಲಿ ಹೇಳುತ್ತಾ ಬಂದ ಗ್ರೇಟಾಳಿಗೆ ಈ ಬಾರಿ ಮಾತನಾಡಲು ಸಿಕ್ಕಿದ್ದು ಅತಿದೊಡ್ಡ ವೇದಿಕೆ ‘ಗ್ಲೋಬಲ್ ಕ್ಲೈಮೇಟ್ ಆ್ಯಕ್ಷನ್ ಮೀಟ್‌ 2019’.

ಸದಾ ತನ್ನ ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುವ ಗ್ರೇಟಾ, ಸ್ವೀಡನ್‌ನಿಂದ ನ್ಯೂಯರ್ಕ್‌ಗೆ (ಸುಮಾರು 6316 ಕಿ.ಮೀ) ಪ್ರಯಾಣಿಸಲು ಆಯ್ಕೆ ಮಾಡಿಕೊಂಡದ್ದು ದೋಣಿಯನ್ನು. Co2ವನ್ನು ಹೊರಸೂಸದ ಸೋಲಾರ್ ಮತ್ತು ಹೈಡ್ರೋಜನ್‌ ಶಕ್ತಿಯ ಸಹಾಯ ಪಡೆದು ಚಲಿಸುವ ದೋಣಿಯಲ್ಲಿ 14 ದಿನಗಳ ಪ್ರಯಾಣ ಮಾಡಿ ಅಮೆರಿಕವನ್ನು ತಲುಪಿದಳು. ಇಡೀ ಜಗತ್ತು ಈ ಪ್ರಯಾಣವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿತು ಮತ್ತು ಸಂಭ್ರಮಿಸಿತು(ಲೇಖನವನ್ನು ಬರೆಯುವ ಹೊತ್ತಿಗೆ ಗ್ರೇಟಾ ಅಮೆರಿಕ, ಕೆನಡಾ, ಚಿಲಿ ಪ್ರವಾಸ ಮುಗಿಸಿ ಮತ್ತೆ ದೋಣಿಯಲ್ಲಿ ಸ್ವೀಡನ್‌ನತ್ತ ಪ್ರಯಾಣ ಆರಂಭಿಸಿದ್ದಳು).

ಅಮೆರಿಕದಲ್ಲಿ ನಡೆದ ಈ ಶೃಂಗಸಭೆಗೆ ಹೋಗುವ ಮುನ್ನ ಶೃಂಗಸಭೆ ನಡೆಯುವ ವಾರ ಪೂರ್ತಿ ಜಗತ್ತಿನಾದ್ಯಂತ ಪ್ರತಿಭಟನೆ ನಡೆಸಲು ಕರೆಕೊಟ್ಟಳು. ಹವಾಮಾನ ಬದಲಾವಣೆ ವಿರುದ್ಧ ಸೆಪ್ಟೆಂಬರ್ 20ರಿಂದ 27ರವರೆಗೆ ನಡೆದ ಪ್ರತಿಭಟನೆಯಲ್ಲಿ 70 ಲಕ್ಷ ಜನ ಭಾಗವಹಿಸಿದ್ದರು. ಸೆಪ್ಟೆಂಬರ್ 27ರಂದು ಒಂದೇ ದಿನ ಪ್ರಪಂಚದ 6500 ಜಾಗಗಳಲ್ಲಿ ಮಕ್ಕಳು, ಪರಿಸರ ಪ್ರಿಯರು ಬೀದಿಗಿಳಿದು ಪ್ರತಿಭಟಿಸಿದರು.

ಸೆಪ್ಟೆಂಬರ್ 23ರಂದು ಶೃಂಗಸಭೆಯಲ್ಲಿ ಗ್ರೇಟಾ ಇಡೀ ಜಗತ್ತಿನ ಮಕ್ಕಳ ದನಿಯಾಗಿ ಗುಡುಗಿದಳು. ಹದಿನಾರು ವರ್ಷದ ಹುಡುಗಿಯ ಸಿಡಿಗುಂಡಿನಂತಹ ಮಾತುಗಳಿಗೆ ವಿಶ್ವನಾಯಕರು ಬೆರಗಾದರು.

‘ನಿಮಗೆಷ್ಟು ಧೈರ್ಯ? ನಿಮ್ಮ ಖಾಲಿ ಮಾತುಗಳಿಂದ ನಮ್ಮ ಕನಸು, ಬಾಲ್ಯವನ್ನು ನಾಶ ಮಾಡಿದ್ದೀರಿ. ಜನರು ಸಂಕಷ್ಟದಲ್ಲಿದ್ದಾರೆ, ಸಾಯುತ್ತಿದ್ದಾರೆ, ಇಡೀ ಪರಿಸರ ವ್ಯವಸ್ಥೆ ಹಾಳಾಗುತ್ತಿದೆ. ಆದರೆ, ನೀವೆಲ್ಲ ಹಣದ ಬಗ್ಗೆ ಆರ್ಥಿಕ ಪ್ರಗತಿಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೀರಿ, ನಿಮಗೆಷ್ಟು ಧೈರ್ಯ’ ಎಂದು ಕೇಳಿದಳು.

ಅವಳ ಅಂದಿನ ನಾಲ್ಕು ನಿಮಿಷದ ಮಾತುಗಳು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದುರುಗುಟ್ಟಿಕೊಂಡು ನೋಡಿದ ದೃಶ್ಯ ತುಣುಕು ದಿನ ಬೆಳಗಾಗುವುದರೊಳಗೆ ಜಗತ್ತಿನ ಮೂಲೆ ಮೂಲೆಯನ್ನು ತಲುಪಿದವು. ಗ್ರೇಟಾ ಎಂಬ ಪುಟ್ಟ ಹುಡುಗಿಯೊಬ್ಬಳು ಜಗದ ಜನರ ಕಣ್ಮಣಿಯಾದಳು.

ಅಮೆರಿಕದಿಂದ ಕೆನಡಾ, ಮೆಕ್ಸಿಕೋ, ಚಿಲಿ ದೇಶಗಳಿಗೂ ಆಕೆ ಭೇಟಿ ನೀಡಿದಳು. ಗ್ರೇಟಾ ಹೋದಲ್ಲಿ ಲಕ್ಷ ಲಕ್ಷ ಜನರು ಸೇರುತ್ತಿರುವುದು, ಜನ ಅವಳ ಕಾಳಜಿಯನ್ನು ಅರ್ಥಮಾಡಿಕೊಂಡು ತಾವೂ ಪರಿಸರ ಕಾರ್ಯಕರ್ತರಾಗುತ್ತಿರುವುದು ಈಗಿನ ವಿದ್ಯಮಾನ. ತನ್ನೆಲ್ಲಾ ಚಟುವಟಿಕೆಗಳನ್ನು Greta Thunberg ಫೇಸ್‌ಬುಕ್ ಪುಟದಲ್ಲಿ ಬರೆದುಕೊಳ್ಳುವ ಗ್ರೇಟಾ ನಮ್ಮ ದೇಶದ ಮಕ್ಕಳನ್ನೂ ಪ್ರಭಾವಿಸಿದವಳು. ದೇಶದ ಯಾವುದಾದರೂ ಒಂದು ಶಾಲೆಯಲ್ಲಿ ಪ್ರತೀ ಶುಕ್ರವಾರ Friday for Future ಎಂದು ಮಕ್ಕಳು ಹವಾಮಾನ ಬದಲಾವಣೆ ವಿರುದ್ಧ ಪ್ರತಿಭಟಿಸುತ್ತಿರುವುದು ಈಗ ಮಾಮೂಲು.

ನಮ್ಮದು ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢಶಾಲೆ. ನಾವು ಕಳೆದ ಒಂಬತ್ತು ತಿಂಗಳಿಂದ ಗ್ರೇಟಾಳ ಚಳವಳಿಯನ್ನು ಅನುಸರಿಸುತ್ತಾ ನಡೆದಿದ್ದೇವೆ. ನಮ್ಮ ಮಕ್ಕಳು ಪ್ಲಾಸ್ಟಿಕ್ ಕಸಗಳನ್ನು ಆಯ್ದು ತಂದು ಆಯಾಯ ಕಂಪನಿಗಳಿಗೆ ಪತ್ರ ಬರೆದು, ನಿಮ್ಮ ಕಸವನ್ನು ನೀವೇ ತೆಗೆದುಕೊಳ್ಳಿ ಎಂದು ಅವರ ಕಂಪನಿಯ ಕಸವನ್ನು ಅವರಿಗೇ ಕಳಿಸುತ್ತಾ ಬಂದಿದ್ದಾರೆ. ‘ನಿಮ್ಮ ಕಸ ನಿಮಗೆ‌’ ಎಂಬ ಅಭಿಯಾನ ಗ್ರೇಟಾ ಮತ್ತು ಬಾಲಿಯ ಮೆಲಾತಿ ಮತ್ತು ಇಸಾಬೆಲ್ ಎಂಬ ಅಕ್ಕ–ತಂಗಿಯರ ಪ್ರೇರಣೆಯಿಂದ ಹುಟ್ಟಿಕೊಂಡದ್ದು.

ಮಕ್ಕಳೇ ನಾವೆಲ್ಲ ಪರಿಸರ ಕಾರ್ಯಕರ್ತರಾಗಬೇಕಿದೆ. ನಮ್ಮ ನಾಳೆಗಳು ಅತ್ಯಂತ ಕಷ್ಟದ ದಿನಗಳಾಗುವ ಮೊದಲೇ ನಾವೆಲ್ಲ ಎಚ್ಚೆತ್ತುಕೊಂಡು ಈ ಪರಿಸರವನ್ನು ಉಳಿಸಿಕೊಳ್ಳಬೇಕಿದೆ. ಒಂದೇ ವರ್ಷದಲ್ಲಿ ಒಬ್ಬ ಹೆಣ್ಣುಮಗಳು ಇಡೀ ಜಗತ್ತಿನ ಮಕ್ಕಳನ್ನ ಹುರಿದುಂಬಿಸಿದ್ದಾಳೆ ಎಂದರೆ ಇನ್ನು ಜಗದ ಮಕ್ಕಳೆಲ್ಲಾ ಒಂದಾದರೆ ಬದಲಾವಣೆ ಖಂಡಿತಾ ಸಾಧ್ಯ. ಗ್ರೇಟಾ ಪದೇ ಪದೇ ಹೇಳುವಂತೆ ‘ನಾವೆಲ್ಲ ವಿಜ್ಞಾನವನ್ನು ನಂಬಿ ನಡೆಯೋಣ’.

ಪ್ರತಿಕ್ರಿಯಿಸಿ (+)