ನೀವು ಬಿಡಿ, ಮಕ್ಕಳೂ ಬಿಡ್ತಾರೆ...

7

ನೀವು ಬಿಡಿ, ಮಕ್ಕಳೂ ಬಿಡ್ತಾರೆ...

Published:
Updated:

ಅಂತರ್ಜಾಲ ಲೋಕದಲ್ಲಿ ವಿಹರಿಸುವ ಮಕ್ಕಳ ಸಂಖ್ಯೆ, ಸಮಯ ಎರಡೂ ಲಂಗು ಲಗಾಮಿಲ್ಲದೆ ಹೆಚ್ಚುತ್ತಿದೆ. ಸ್ಕ್ರೀನ್‌ ಮುಂದೆ ಕಣ್ಣು ನೆಟ್ಟು ಕೂರುವ ಮಕ್ಕಳನ್ನು ದೂರುವ ಪೋಷಕರು, ತಂತ್ರಜ್ಞಾನವನ್ನು ಟೀಕಿಸುವ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ. ಇದಕ್ಕೆಲ್ಲ ಕಾರಣ ಮಕ್ಕಳಿಗೆ ಅಂತರ್ಜಾಲದ, ಗ್ಯಾಡ್ಜೆಟ್‌ಗಳು ಸುಲಭವಾಗಿ ಲಭ್ಯ ಇರುವುದು.

ಸಮಸ್ಯೆ ಇದೇ ಅಂತ ಅರಿವಾದ ನಂತರ ಪಾಲಕರು ಮಾಡುವ ಮೊದಲ ತಪ್ಪು, ಗ್ಯಾಡ್ಜೆಟ್ಸ್‌ಗಳನ್ನು ಕಸಿದಿಡುವುದು. ಮಕ್ಕಳನ್ನು ದೂಷಿಸುವುದು, ಇಷ್ಟು ಅಂಕ ತೆಗೆದರೆ ಕೊಡುತ್ತೇವೆ ಎಂಬ ಅಮಿಷ ಒಡ್ಡುವುದು. ಈ ಮೂರೂ ಯತ್ನಗಳು ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತವೆ.

ಇಷ್ಟಕ್ಕೂ ಮಕ್ಕಳೇಲೆ ಈ ವರ್ಚುವಲ್‌ ಮಾಧ್ಯಮಗಳಿಗೆ ಮೊರೆ ಹೋಗುತ್ತಿದ್ದಾರೆ? ಒಮ್ಮೆ ಯೋಚಿಸಿ, ದಿನದಲ್ಲಿ ಅದೆಷ್ಟು ಸಲ ನಾವು ನಮ್ಮ ಮಕ್ಕಳನ್ನು ಹೊಗಳುತ್ತೇವೆ? ಮೆಚ್ಚಿಕೊಳ್ಳುತ್ತೇವೆ? ಯಾವುದೇ ಬಗೆಯ ವೈಫಲ್ಯಗಳಿಗೆ ‘ಪರವಾ ಇಲ್ಲ, ಇನ್ನೊಮ್ಮೆ ಯತ್ನಿಸು’ ಎಂದು ಉತ್ಸಾಹ ತುಂಬುವ ಧ್ವನಿಯಲ್ಲಿ ಹೇಳುತ್ತೇವೆ?

ಬೆರಳೆಣಿಕೆಯಷ್ಟೂ ಇಲ್ಲ. ಮಕ್ಕಳಿಗೆ ಬೇಕಿರುವುದು ಈ ಮೂರು ಮುಖ್ಯ ವಿಷಯಗಳು. ಒಂದು ಮೆಚ್ಚುಗೆ. ಇನ್ನೊಂದು ಹೊಗಳಿಕೆ, ಮತ್ತೊಂದು ಗುರುತಿಸುವಿಕೆ ಹಾಗೂ ಮರಳಿ ಯತ್ನವ ಮಾಡು ಎಂಬ ಪ್ರೋತ್ಸಾಹ. ಪಾಲಕರು, ಶಿಕ್ಷಕರು  ಇದರ ವಿರುದ್ಧ ದಿಕ್ಕಿನಲ್ಲಿ ವರ್ತಿಸುತ್ತೇವೆ. ಪ್ರತಿಯೊಂದನ್ನೂ ಆದೇಶದ ಧ್ವನಿಯಲ್ಲಿ ಹೇಳುತ್ತೇವೆ. ನಿರ್ದೇಶಿಸುತ್ತೇವೆ. ಹೀಗಳೆಯುತ್ತೇವೆ. ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ.

ಇವುಗಳಿಂದ ರೋಸಿಹೋಗುವ ಪುಟ್ಟ ಜೀವ, ಸ್ಕ್ರೀನ್‌ಗೆ ಅಂಟಿಕೊಳ್ಳುತ್ತವೆ. ಅಲ್ಲಿ ಉಳಿದವರಿಗಿಂತ ಮುಂದಿರುತ್ತೇವೆ ಎಂಬ ಗುರುತಿಸುವಿಕೆ ಇರುತ್ತದೆ. ಪ್ರತಿ ಆಟಗಳಲ್ಲಿಯೂ ವೆಲ್‌ಡನ್‌ ಎಂಬ ಉತ್ಸಾಹದಾಯಕ ಮಾತುಗಳಿರುತ್ತವೆ. ಟ್ರೈ ಅಗೇನ್‌ ಎಂಬ ಪ್ರೋತ್ಸಾಹವಿರುತ್ತದೆ. ಆ ಮಗು ಅದೇ ಲೋಕದಲ್ಲಿರಲು ಇಷ್ಟ ಪಡುತ್ತದೆ. ಬಹುತೇಕ ಮೆಚ್ಚುಗೆಗಳನ್ನು ಪಡೆಯುವ ಹುಕಿ ಹುಟ್ಟುತ್ತದೆ. ನಂತರ ಸೆಲ್ಫಿ ಪರ್ವ, ಟೀಕೆ, ಟಿಪ್ಪಣಿಗಳ ಪರ್ವ, ಆಮೇಲೆ ಅದಕ್ಕೇನು ಪ್ರತಿಕ್ರಿಯೆಗಳು ಬಂದವು ಎಂದು ಗಮನಿಸುವ ಪರ್ವ. ಹೀಗೆ ಹುಡುಗಾಟಕ್ಕೆ ಆರಂಭವಾದ ಚಟ, ಆ ವರ್ಚುವಲ್‌ ಲೋಕದಲ್ಲಿ ಮಕ್ಕಳು ಕಳೆದುಹೋಗುವಂತೆ ಮಾಡುತ್ತದೆ ಅಷ್ಟೆ! ಈ ಮೆಚ್ಚುಗೆಯ ಮಹಾಪೂರದಲ್ಲಿ ತೇಲಾಡಲು ಆರಂಭಿಸುತ್ತಾರೆ. ಅವರ ಸುತ್ತಲೂ ಒಂದು ಭ್ರಾಮಕ ಪ್ರಭಾವಳಿ ಸೃಷ್ಟಿಯಾಗುತ್ತದೆ.

ಇನ್ನು ಸ್ನೇಹಿತರ ಒತ್ತಡವೂ ಅಷ್ಟಿಷ್ಟಿರುವುದಿಲ್ಲ. ನಾನು ಅದನ್ನು ನೋಡಿದೆ, ಗೇಮ್‌ನಲ್ಲಿ ಈ ಹಂತವನ್ನು ದಾಟಿದೆ, ಅದರಲ್ಲಿ ಇನ್ನೆಷ್ಟೋ ಅಂಕಗಳನ್ನು ಗಳಿಸಿದೆ. ಇಲ್ಲಿಯೂ ಗುರುತಿಸಿಕೊಳ್ಳುವ ಹುಕಿಯಿಂದಾಗಿ ಅದೇ ಲೋಕದಲ್ಲಿ ಇನ್ನಷ್ಟು ಮುಳುಗಲು ಆರಂಭಿಸುತ್ತಾರೆ.

ಇದರಿಂದಾಚೆ ಬರುವುದು ಹೇಗೆ?

ಸ್ಕ್ರೀನ್‌ಗೆ ಅಂಟಿಕೊಂಡಿರುವಾಗ ಪ್ರತಿ ಅರ್ಧ ಗಂಟೆಗೆ ಒಮ್ಮೆ ಕತ್ತನ್ನು ಅತ್ತಿತ್ತ ಐದರಿಂದ ಹತ್ತು ಸಲ ತಿರುಗಿಸಲು ಹೇಳಿ.

ಹತ್ತರಿಂದ 15 ಸಲ ಕಣ್ರೆಪ್ಪೆ ಬಡಿಯಲು ತಿಳಿಸಿ. ಅವರ ಮುಂಗೈಗಳನ್ನು ಪ್ರದಕ್ಷಿಣಾಕಾರ, ಅಪ್ರದಕ್ಷಿಣಾಕಾರವಾಗಿ ತಿರುಗಿಸಲು ತಿಳಿಸಿ. ಸಾಧ್ಯವಾದಷ್ಟು ದೂರು ನಿರುಕಿಸಲು ತಿಳಿಸಿ.

ಇದೆಲ್ಲವನ್ನೂ ಅವರು ಮಾಡಲಾರಂಭಿಸಿದರೆ ಪ್ರತಿ ಅರ್ಧಗಂಟೆಗೆ ಒಮ್ಮೆ ಅವರು ಬ್ರೇಕ್‌ ತೆಗೆದುಕೊಂಡಂತೆ ಆಗುತ್ತದೆ. ಇದರೊಂದಿಗೆ ಅವರು ತಮ್ಮ ಮೇಲೆ ತಾವೇ ಹಿಡಿತ ಸಾಧಿಸಿದಂತಾಗುತ್ತದೆ. ಹಾಗೆಯೇ ಗಂಟೆಗೆ ಒಮ್ಮೆ ಓಡಾಡಲು ಹೇಳಿ.

ಅಂತರ್ಜಾಲದ ಚಟ ಬಿಡಿಸಲು ಬಹುತೇಕ ಪಾಲಕರು, ಬೇರೆಬೇರೆ ತರಗತಿಗಳಿಗೆ ಕಳುಹಿಸುತ್ತಾರೆ. ಅದು ಅವರ ಮೇಲೆ ಮತ್ತೊಂದು ಬಗೆಯ ಒತ್ತಡವೇ ಹೇರಿದಂತಾಗುತ್ತದೆ. ಅದರ ಬದಲು ಪಾಲಕರೂ ಮಕ್ಕಳನ್ನು ಒಳಗೊಂಡಂತೆ ಏನಾದರೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮಕ್ಕಳನ್ನು ಮೆಚ್ಚುಗೆ ಸೂಸಲು ಆರಂಭಿಸಿ. ಆಗ ಸಂವಹನದ ಮಾರ್ಗ ಸರಾಗವಾಗುತ್ತದೆ. ಮಕ್ಕಳೂ ಸ್ನೇಹಿತರ ವಲಯದಲ್ಲಿ ಬರಲಾರಂಭಿಸುತ್ತಾರೆ.

ಮಕ್ಕಳು ವರ್ಚುವಲ್‌ ಲೋಕ ಪ್ರವೇಶಿಸುವುದೇ ಪಾಲಕರಿಂದ ಸಮಯ ಸಿಗದೇ ಇರುವುದರಿಂದ. ಮಕ್ಕಳ ಕೈಗೆ ಗ್ಯಾಡ್ಜೆಟ್‌ಗಳು ಸಿಗುವುದೇ ಪಾಲಕರಿಗೆ ಅಗತ್ಯವಿರುವ ಸಮಯ ಹೊಂದಿಸುವುದರಿಂದ. ಈ ಚಟದಿಂದಾಚೆ ಬರಲು ನೀಡಬೇಕಿರುವುದು ನಿಮ್ಮ ಸಮಯ, ಸಂಯಮ ಹಾಗೂ ಸಹಾನುಭೂತಿ. ಮಕ್ಕಳನ್ನು ಮಕ್ಕಳಂತೆಯೇ ಕಾಣಿ. ನಿಮ್ಮ ಯಶಸ್ಸಿನ ಅಳತೆಗೋಲು, ನಿಮ್ಮ ಮಕ್ಕಳ ಅಂಕಗಳಾಗದಿರಲಿ; ಅವರ ಯಶಸ್ಸು ಆಗದಿರಲಿ.

ಅವರ ಬಾಲ್ಯವನ್ನು ಅವರೂ ಅನುಭವಿಸಲಿ. ನೀವೂ ಅನುಭವಿಸಿ. 

 ಡಾ. ಮನೋಜ್‌ ಕುಮಾರ್ ಶರ್ಮಾ

ಲೇಖಕರು: ಬೆಂಗಳೂರಿನಲ್ಲಿ ಅಂತರ್ಜಾಲ ಡಿಆ್ಯಕ್ಟಿವೇಷನ್‌ ಕೇಂದ್ರ ಶಟ್‌ ಕ್ಲಿನಿಕ್‌ ಆರಂಭಿಸಿದ ತಜ್ಞ ವೈದ್ಯರು

ಇವನ್ನೂ ಓದಿ...

ಮಕ್ಕಳೊಟ್ಟಿಗೆ ನೀವು ನೋಡಿ ಇಂತಹ ಸಿನಿಮಾ!​
ಮಕ್ಕಳಿಗಿಲ್ಲಿದೆ ‘ಟರ್ನಿಂಗ್ ಪಾಯಿಂಟ್’
ವಂಡರ್ ಕಿಡ್ಸ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !