ಮಂಗಳವಾರ, ನವೆಂಬರ್ 19, 2019
28 °C

ಹಳ್ಯಾಗಿನ ಆಟನ ಆಟಾರೀ..

Published:
Updated:
Prajavani

‘ಹಳ್ಳಿ ಜನರ ಊಟ ಚೆಂದ ಪ್ಯಾಟಿ ಜನರ ನೋಟ ಚೆಂದ’ ಇದು ನಮಗ ಎಲ್ಲಾರಿಗೂ ಗೊತ್ತೈತಿ. ಅಷ್ಟ ಅಲ್ಲ, ನಮ್ಮ ಹಳ್ಳಿ ಮಂದಿ ಆಟನೂ ಚೆಂದನss ನೋಡ್ರಿ. ‘ಹೌದ್ರಿ ನಮ ಹಳ್ಯಾಗ ಭಾಳ ಆಟ ಅದಾವ್ರಿ. ಪಗಡೆ, ಗೋಲಿ, ಕಣ್ಣಮುಚಗಿ, ಸರ್ಸಾ, ಜೋಡಬಳಿ, ಗಿಡಮಂಗ್ಯಾ, ಬಗರಿ, ಚಿನ್ನಿಕೋಲು ಹಿಂಗ ಹೇಳಕೋಂತ ಹೋದ್ರ ಭಾಳ ತಾಸ ಬೇಕ್ರಿಪಾ!

ಹಳ್ಳಿಯಂದ್ರ ಹೊಲಗಳಿಂದ ತುಂಬಿದ ಜಾಗಾ ಅಲ್ಲೇನ್ರಿ ಮತ್ತ? ನಾವೆಲ್ಲರೂ ಹೊಲ–ಹೊಲಕ ಜಿಕ್ಕೊಂತ ಮಂಗ್ಯಾನ ಗತಿ ತೊಗರಿ, ಶೇಂಗಾ, ಕಡ್ಲಿ, ಅಲಸಂದಿ, ಹೆಸರಕಾಳ ತಿನ್ನೋದು ಒಂದು ದೊಡ್ಡ ಆಟ ನೋಡ್ರಿ ನಮಗ.

ನಮ್ಮ ಹಳ್ಯಾನ ಆಟ ಅಂದ್ರ ಜಾಗಕ್ಕ ತಕ್ಕಂತ ಆಟ ಅದಾವ್ರಿ. ಅಂದ್ರ ದೊಡ್ಡ ಜಾಗ ಇದ್ರ ಲಗೋರಿ, ಕಳ್ಳಾಪೊಲೀಸ್ಸ‌, ಜೋಡ ಬಳಿರಿ; ಒಂದss ಸ್ವಲ್ಪ ಜಾಗ ಇದ್ರ ಬಗರಿ, ಗುಂಡಾ ಆಡೋದ್ರಿ. ಇನ್ನ ಮನಿ ಒಳಗಂತೂ ಆಡಾಕ ಪಗಡೆ, ಸರ್ಸಾ, ಚದುರಂಗ ಅದಾವ್ರಿ. ಹಳ್ಯಾಗ ಕುಂತ್ರ ಆಟ, ನಿಂತ್ರ ಆಟ. ಹಳ್ಯಾನ ಆಟನss ಆಟ.

ಯಾರ್ದರ ಮನಿ ಮುಂದ ಮದುವಿ ಐತಿ ಅಂತ ತೆಂಗಿನ ಗರಿ ಕಂಬ ನಿಲ್ಸಿದ್ರ ನಾವು ಅದ್ರ ಗರಿ ಕಿತ್ತು ಪೀಪಿ ಮಾಡ್ತೀವ್ರಿ. ಕಡ್ಡಿ ಪಟ್ಟಣ ಖಾಲಿ ಆತು ಅಂತ ಒಗದ್ರ, ಅದನ್ನ ತಗೊಂಡು ಲಾರಿ ಮಾಡ್ತೀವ್ರಿ. ಬಳಸಿ ಒಗೆದ ಮೋಟಾರ್‌ ಗಾಡಿ ಟೈರ್‌ ನಮ್‌ ಎಕ್ಸ್‌ಪ್ರೆಸ್‌ ಗಾಡಿ ಆಕ್ಕೈತಿ. ಕೋಲ ಹಿಡಿದು ಟೈರ್‌ಗೆ ಹೊಡದ್ರ ಅದು ಮುಂದ ಹೊಕ್ಕೈತಿ. ಹಸಿಮಣ್ಣು ತಂದ್ರ ಬಸವಣ್ಣ, ಬಂಡಿ ೆಲ್ಲಾ ರೆಡಿ ಅಕ್ಕಾವು.

ಒಮ್ಮೆ ನಮ್ಮೂರಾಗಿನ ಹಳ್ದಾಗ ಈಜಬೇಕಾದ್ರ ಆಗಿದ್ದ ಘಟನೆ ಮರ‍್ಯಾಕ ಆಗಲ್ರಿ. ಈಜುವಾಗ ಅಂಗಿ, ಚೊಣ್ಣಾ ಕಳ್ದು ಈಜಾಕತ್ತಿದ್ವಿ. ನಮ್ಮ ಊರಿನವನೊಬ್ಬ ನಮ್ಮನ್ನ ಬೈದು, ಅಂಗಿ, ಚೊಣ್ಣಾನ ಒಯ್ದು ಹಳ್ದಾಗ ಒಗದ. ನಾವು ಅತಗೊಂತ ಚೊಣ್ಣಾ ಹಾಕ್ಕೊಂಡ ಅದ ಒನಗಮಟಾ ಅಲ್ಲೇ ನಿಂತು ಒನಗಿಂದಾಗ ಮನಿಗೆ ಹೋದ್ವಿ. ಅಯ್ಯ ಮನ್ಯಾಗ ಗೊತ್ತಾಗಲ್ಲ ಬಿಡ ಅನ್ಕೊಂತ ಹೋದ್ರ, ಅವ ಆಗಲೇ ಎಲ್ಲಾರ ಮನ್ಯಾಗ ಹೇಳೇಬಿಟ್ಟಿದ್ದ. ಎಲ್ಲಾರ ಮನ್ಯಾಗ ಬಾರಕೋಲಿಲೆ ಬಿದ್ದವ್ರಿ. ಆಮೇಲೆ ಎಲ್ಲಾರ ಒಂದಕಡೆ ಗೆಳ್ಯಾರ ಸೇರಿದಿವ್ರಿ. ನಮ್ಮ ಮನ್ಯಾಗ ಹಿಂಗ ಹೊಡದ್ರ ಹಂಗ ಹೊಡದ್ರ ಅಂತಂದ ನಕ್ಕೊಂತ ಮಾತಾಡೋದ ಒಂದ ಮಜವಾದ ಆಟ ಆದಂಗ ಆಗಿತ್ತು ನೋಡ್ರಿ.

 


ವಿಜಯ ಶಿ. ಮಲ್ಲಿಗವಾಡ, 8ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಕುಂದಗೋಳ ತಾಲ್ಲೂಕು, ಧಾರವಾಡ ಜಿಲ್ಲೆ

 

ಪ್ರತಿಕ್ರಿಯಿಸಿ (+)