72ನೆಯ ಸ್ವರಾಜ್ಯ ಸಂಭ್ರಮಕ್ಕೆ ಬಾವುಟದ ಮೆರಗು

7
Chowkattu

72ನೆಯ ಸ್ವರಾಜ್ಯ ಸಂಭ್ರಮಕ್ಕೆ ಬಾವುಟದ ಮೆರಗು

Published:
Updated:
Deccan Herald

ದೇಶದೆಲ್ಲೆಡೆ ಸ್ವರಾಜ್ಯದ ಎಪ್ಪತ್ತೆರಡನೆಯ ದಿನಾಚರಣೆಯ ಸಂಭ್ರಮದ ತಯಾರಿ ಜೋರಾಗಿಯೇ ನೆಡೆಯುತ್ತಿದೆ. ನಮ್ಮ ತ್ರಿವರ್ಣ ದ್ವಜಗಳ ಬ್ಯಾಡ್ಜ್, ಮುಂಗೈ ಬ್ಯಾಂಡ್, ಪ್ಲಾಸ್ಟಿಕ್ ಬಾವುಟಗಳು, ದೊಡ್ಡ ಅರಿವೆಯ ಅಥವಾ ಖಾದಿ ಧ್ವಜಗಳು ಕೂಡಾ ಜೀವತಳೆದಿವೆ. ನಮ್ಮ ರಾಜಧಾನಿಯಲ್ಲಿ ಈಗಾಗಲೇ ಲಾಲ್‌ಬಾಗ್‌, ಕಬ್ಬನ್ ಪಾರ್ಕ್, ಮಾರ್ಕೆಟ್, ಶಿವಾಜಿನಗರ, ಜಯನಗರ ಮುಂತಾದ ಜನನಿಬಿಡ ಜಾಗಗಳಲ್ಲಿ, ದೊಡ್ಡ ರಸ್ತೆ ಬದಿಯಲ್ಲಿ ಅನೇಕರು ವಾರದ ಮುಂಚಿತವಾಗಿಯೇ ಇವುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಬ್ಬನ್ ಪಾರ್ಕ್‌ಗೆ ತಾಗಿರುವ ಕಸ್ತೂರ್ ಬಾ ರಸ್ತೆಯ ಪಾದಚಾರಿ ಪಥದಲ್ಲಿ ಕಂಡ  ಈ ಚಿತ್ರವನ್ನು ಕ್ಯಾಮೆರಾದಲ್ಲಿ ಕೆಲವು ದಿನಗಳ ಹಿಂದಷ್ಟೇ ಒಂದು ಮಧ್ಯಾಹ್ನ ಸೆರೆಹಿಡಿದವರು ನಂದೀಶ್. ಎಂ ಉರುಫ್ ನಂದಿ ಮಲ್ನಾಡ್. ಕಂದಾಯ ಇಲಾಖೆಯ ಉದ್ಯೋಗಿ, ಹಾಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಲ್ಲಿ ಡೆಪ್ಯುಟೇಷನ್ ಮೇರೆಗೆ ಕೆಲಸ ನಿರ್ವಹಿಸುತ್ತಿರುವ , ಬನಶಂಕರಿಯ ಭುವನೇಶ್ವರಿ ನಗರದ ವಾಸಿ.   

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಬಳಿಯ ಐವತ್ತಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕಳೆದೆರಡು ದಶಕಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಒಂದು ವಾರ ಮುಂಚಿತವಾಗಿ ಬೆಂಗಳೂರಿಗೆ ಬಂದು ತ್ರಿವರ್ಣ ಪರಿಕರಗಳನ್ನು ಸಗಟು ದರದಲ್ಲಿ ಕೊಂಡುತಂದು ಮಾರುತ್ತಾರೆ ಎಂಬುದು ಚಿತ್ರ ತೆಗೆದ ನಂತರ ಸಂಗ್ರಹಿಸಿದ ಮಾಹಿತಿ.

‘ಮೇರಾ ದೇಶ್.. ಮೇರಾ ನಿಶಾನ್’ ಎನ್ನುತ್ತಾ ಬಾವುಟಗಳ ಮಾರಾಟದಲ್ಲಿ ತೊಡಗಿರುವವರು ಹರಪನಹಳ್ಳಿಯ ಬಶೀರ್ ಮತ್ತು ಕಾಸಿಂ.. ದೇವತಾ ದರ್ಷನಕ್ಕೆ ಹೊರಟು, ಮಧ್ಯೆ ಕಟ್ಟೆಯಮೇಲೆ ದಣಿವಾರಿಸುತ್ತಾ ಕುಳಿತವರು, ಚಿಕ್ಕಪೇಟೆ ನಿವಾಸಿಗಳಾದ ಲಕ್ಷ್ಮಣ್ ಮತ್ತು ಗೆಳೆಯರು.

ಹನ್ನೆರಡು ವರ್ಷಗಳಿಂದ ಚಾರಣ ಮತ್ತು ಛಾಯಾಗ್ರಹಣ ಹವ್ಯಾಸಿಯಾಗಿರುವ ನಂದೀಶ್ ಅವರು ಬಳಸಿದ ಕ್ಯಾಮೆರಾ, ಕೆನಾನ್ ಇ.ಒ.ಎಸ್ 700 ಡಿ, ಜೊತೆಗೆ 18 – 55 ಎಂ.ಎಂ. ಲೆನ್ಸ್. ಎಕ್ಸ್ ಪೋಶರ್ ವಿವರ ಇಂತಿವೆ: 18 ಎಂ.ಎಂ. ವೈಡ್ ಯ್ಯಾಂಗಲ್ , ಅಪರ್ಚರ್ ಎಫ್ 4, ಶಟರ್ ವೇಗ 1/ 125 ಸೆಕೆಂಡ್, ಐ.ಎಸ್.ಒ 200, ಟ್ರೈಪಾಡ್ , ಫ್ಲಾಶ್ ಅಳವಡಿಸಿಲ್ಲ.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನಕ್ಕಾಗಿ ಕೆಲವು ಅಂಶಗಳನ್ನು ಗಮನಿಸೋಣ :

* ಸೂರ್ಯನ ಬೆಳಕು ಪ್ರಖರವಾಗಿಲ್ಲದೆ ಆಗಾಗ ತುಂತುರು ಮಳೆ ಹನಿ ಬಿದ್ದ ಸಮಯವಾಗಿದ್ದರಿಂದ, ತಾಂತ್ರಿಕವಾಗಿ ಕ್ಯಾಮೆರಾದ ಹಿಡಿತಗಳು ( ಕಂಟ್ರೋಲ್ಸ್) ಚಿತ್ರದ ವಸ್ತು ನಿರೂಪಣೆಯ ದೆಸೆಯಿಂದ ಸಮರ್ಪಕವಾಗಿಯೇ ಇವೆ.

* ಚಿತ್ರ ಕೌಶಲ್ಯದ ಬಗ್ಗೆ ಒಂದು ಅಂಶದ ವಿಶ್ಲೇಷಣೆ ಅಗತ್ಯ. ಅದೆಂದರೆ, ಆಗಸ ಮಸುಕಾಗಿದ್ದು ( ಓವರ್ ಕ್ಯಾಸ್ಟ್), ಮರಗಳ ಸಂದಿಯಿಂದ ಮತ್ತು ರಸ್ತೆಯ ಕಡೆಯಿಂದ ದೃಶ್ಯಗಳು ಬಿಳಿಚಿಕೊಂಡು ಚೌಕಟ್ಟಿನ ಮುಖ್ಯವಸ್ತು ಭಾಗಗಳ ಜೊತೆ ವರ್ಣಸಾಮರಸ್ಯವಿಲ್ಲದೇ, ಕಾಂತಿ ಭೇದದ( ಕಾಂಟ್ರಾಸ್ಟ್) ವೈದೃಶ್ಯ ವನ್ನು ದೊಡ್ಡಳತೆಯ ಅಪರ್ಚರ್ ಸ್ವಲ್ಪಮಟ್ಟಿಗೆ ಕೆಡಿಸಿದೆ. ಅದಕ್ಕೆ ಪರಿಹಾರವಾಗಿ, ಎಫ್ 4 ರ ಬದಲು ಎಫ್ 11 ಅಳವಡಿಸಿ, ಅದಕ್ಕೆ ಪೂರಕವಾದ ತುಸು ಹೆಚ್ಚು ಐ.ಎಸ್.ಒ. 400 ಹೊಂದಿಸಬಹುದಾಗಿತ್ತು. ಆಗ ಹಿನ್ನೆಲೆಯ ಹೆಚ್ಚಿನ ಗ್ಲೇರ್ ಹಿಡಿತಕ್ಕೆ ಬರಬಹುದಿತ್ತು.

* ಕೊಡು-ಕೊಳ್ಳುವಿಕೆಯಲ್ಲಿ ತೊಡಗಿಕೊಂಡಿರು
ವವರೆಲ್ಲರೂ ಅವರವರ ಅನನ್ಯ ಭಾವದಲ್ಲಿ ಮುಳುಗಿರುವುದು ಸಹಜವಾಗಿಯೇ ಮೂಡಿ ಬಂದಿದೆ. ಅವರಿಗ್ಯಾರಿಗೂ ಅರಿವಾಗದಂತೆ ಛಾಯಾಗ್ರಹಣ ಮಾಡಿರುವುದು ಕೂಡಾ ಸರಿಯಾಗಿದೆ . ಅಂತೆಯೇ ಇದು ಉತ್ತಮವಾದ ಕ್ಯಾಂಡಿಡ್ ಚಿತ್ರವೆಂದೂ ಗುರುತಿಸಬಹುದು.

* ಒಬ್ಬ ಮಾರಾಟಗಾರನ ಕೈಯ್ಯಲ್ಲಿ ಹಿಡಿದಿರುವ ದ್ವಜವು ಚೌಕಟ್ಟಿನ ಮಧ್ಯ ಹಾಗೂ ಮೇಲಿನ ಭಾಗದಲ್ಲಿ ಬೀಸುವ ಗಾಳಿಗನುಗುಣವಾಗಿ ಪೂರ್ತಿಯಾಗಿ ಬಿಚ್ಚಿ ಹಾರುತ್ತಿರುವ ನೋಟ, ಅದೇ ಸಮಯದಲ್ಲಿ ಹಿರಿಯನಾಗರಿಕನೊಬ್ಬ ಪುಟಾಣಿ ಬಾವುಟಗಳನ್ನು ಕೊಳ್ಳುತ್ತಿರುವುದು, ಇತರರೂ ಆ ಕಾರ್ಯದಲ್ಲೇ ಸಹವರ್ತಿಗಳಾಗಿರುವುದು ಮತ್ತು ಆಗ ಚಿಮ್ಮುತ್ತಿರುವ ಆ ಮಾರಾಟಗಾರ ಹುಡುಗನ ಹರ್ಷದ ಮುಖದಲ್ಲಿನ ಸುಂದರ ಛಾಯೆ, ಎಲ್ಲವೂ ಒಂದಕ್ಕೊಂದು ಹೇಳಿ ಮಾಡಿಸಿದಂತೆಯೋ ಎಂಬಂತಹ ಅನನ್ಯ “ ಕ್ಷಣ” ವಾಗಿದ್ದು ( ಐಡಿಯಲ್ ಮೊಮೆಂಟ್ ), ನಂದೀಶ್ ಅವರ ಕ್ಯಾಮೆರಾದ ಗುಂಡಿ ಒತ್ತುವ ಸಮಯ ಪ್ರಜ್ಞೆ ಮತ್ತು ಕ್ಯಾಮೆರಾದ ಸಂಯೋಜನಾ ಕೋನ ( ಶೂಟಿಂಗ್ ಯ್ಯಾಂಗಲ್ ಆಫ್ ಕಾಂಪೋಶಿಶನ್ ) ಮೆಚ್ಚತಕ್ಕದ್ದೇ ! ಈ ಅಂಶಗಳಲ್ಲಿ ಯಾವುದೇ ಒಂದು ವ್ಯತ್ಯಯವಾಗಿದ್ದರೂ, ಚೌಕಟ್ಟಿನ ಭಾವನಾತ್ಮಕ ಮತ್ತು ಕಲಾತ್ಮಕ ಮೌಲ್ಯ ಕ್ಷೀಣಿಸುವ ಸಾದ್ಯತೆ ಹೆಚ್ಚಿತ್ತು. 


ನಂದಿ ಮಲ್ನಾಡ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !