ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಪರಿಭಾಷೆ ಎಷ್ಟೊಂದು ಬದಲಾಗಿದೆ !

Last Updated 24 ಏಪ್ರಿಲ್ 2019, 19:50 IST
ಅಕ್ಷರ ಗಾತ್ರ

‘ಚಿತ್ರ ನಿರ್ಮಾಣ ಎಂದರೆ ಸುಮ್ಮನೆ ಅಲ್ಲ, ಅದು ಒಂದು ಮನೆ ಕಟ್ಟಿದಷ್ಟೇ ಶ್ರಮ ಬಯಸುತ್ತದೆ. ಕಾಲಕ್ಕೆ ಅನುಸಾರ ಎಲ್ಲವೂ ಯೋಜಿತವಾಗಿ ನಡೆಯಬೇಕು. ಪಾತ್ರಗಳಿಗೆ ಜೀವ ತುಂಬಬಲ್ಲ ಕಲಾವಿದರು ಸಿಗಬೇಕು ಮತ್ತು ವ್ಯವಸ್ಥಿತವಾಗಿ ಸೌಕರ್ಯ, ಸಲಕರಣೆಗಳು ಲಭ್ಯವಾಗಬೇಕು’.

ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಮಾತು ಅಕ್ಷರಶಃ ಅನ್ವಯ ಆಗುತ್ತದೆ. ಮನೆ ಅಥವಾ ಚಿತ್ರ ನಿರ್ಮಾಣದ ಸಾಹಸ ಕಾರ್ಯದಲ್ಲಿ ಹಲವು ಏರಿಳಿತಗಳು ಆಗುತ್ತವೆ. ಒಟ್ಟಾರೆ ನಿರ್ಮಾಣ ಕಾರ್ಯ ಪೂರ್ಣಗೊಂಡಾಗ ಸಂತಸಕ್ಕೆ ಪಾರವೇ ಇರುವುದಿಲ್ಲ.

ಬಾಲಿವುಡ್, ಸ್ಯಾಂಡಲ್‌ವುಡ್‌ ಸೇರಿದಂತೆ ಯಾವುದೇ ಭಾಷೆ ಚಿತ್ರರಂಗದಲ್ಲಿನ ಚಲನಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದಿನ 20 ವರ್ಷಗಳ ಜೊತೆ ಇತ್ತೀಚಿನ 7 ರಿಂದ 8 ವರ್ಷಗಳ ಬೆಳವಣಿಗೆ, ಹೋಲಿಕೆ ಸೂಕ್ಷ್ಮವಾಗಿ ಗಮನಿಸಿದರೆ ಅಬ್ಬಾ ಅನ್ನುವಷ್ಟು ಬದಲಾವಣೆ ಗಮನಿಸಬಹುದು.

ಮೊದಲೆಲ್ಲ ದೊಡ್ಡ ಬ್ಯಾನರ್, ದೇವಾನುದೇವತೆಗಳ ಮೂರ್ತಿಗಳು, ಘರ್ಜಿಸುವ ಸಿಂಹಗಳು ಇಲ್ಲವೇ ಮಿಂಚುವ ನಕ್ಷತ್ರಗಳು ಪರದೆ ಮೇಲೆ ಮೂಡುವುದರೊಂದಿಗೆ ಚಿತ್ರ ಆರಂಭವಾಗುತಿತ್ತು. ಚಿತ್ರಕ್ಕೆ ದುಡಿದವರ ಹೆಸರಿನ ಉದ್ದನೆಯ ಪಟ್ಟಿ ಒಂದೆಡೆ, ನಿರ್ಮಾಪಕರು–ನಿರ್ದೇಶಕರ ಪಟ್ಟಿಯಲ್ಲಿ ಒಬ್ಬರು ಅಥವಾ ಇಬ್ಬರ ಹೆಸರು ಇರುತ್ತಿತ್ತು.

ಆದರೆ ಈಗ? ಚಿತ್ರ ಶುರುವಾಗುವುದಕ್ಕೂ ಮೊದಲು ದೊಡ್ಡ ಬ್ಯಾನರ್ ಜೊತೆಗೆ ಕನಿಷ್ಠ 20 ರಿಂದ 30 ಬ್ರ್ಯಾಂಡ್ ಕಂಪೆನಿಗಳ ಹೆಸರು ಬರುತ್ತದೆ. ಅದರಲ್ಲೂ ಚಿತ್ರ ನಿರ್ಮಾಣಕ್ಕೆ ನೆರವಾದ ಅಥವಾ ಪ್ರಚಾರಕ್ಕೆ ಕೈಜೋಡಿಸಿದ ಸಮೂಹ ಮಾಧ್ಯಮಗಳ ಹೆಸರು ದಪ್ಪ ಅಕ್ಷರಗಳಲ್ಲಿ ಇರುತ್ತದೆ. ಈ ಎಲ್ಲ ಹೆಸರುಗಳ ಉದ್ದನೆಯ ಪಟ್ಟಿ ಮುಗಿದು, ಚಿತ್ರಗಳು ಕೊನೆಯಾಗಲು ಇಂತಿಷ್ಟು ನಿಮಿಷಗಳು ಕಾಯಲೇಬೇಕು. ಅದು ಅನಿವಾರ್ಯವೂ ಹೌದೆನ್ನಿ.

ಕೆಲ ಚಿತ್ರಗಳಲ್ಲಂತೂ ಆಯಾ ಬ್ರ್ಯಾಂಡ್‌ನ ಉತ್ಪನ್ನಗಳು ಮತ್ತು ಹೆಸರು ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುತ್ತವೆ ಮತ್ತು ಕೆಲ ಬಾರಿ ಜಾಹೀರಾತು ಮಾದರಿಯಲ್ಲಿ ಇಣುಕಿದಂತೆ ತೋರುತ್ತದೆ. ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಚಿತ್ರ ನಿರ್ಮಿಸುವುದು ಒಂದು ಕಾಲದಲ್ಲಿ ಸವಾಲು ಆಗಿತ್ತು.

ಅಂತಹ ಚಿತ್ರಗಳು ಅಪರೂಪವೂ ಆಗಿದ್ದವು. ಆದರೆ ಈಗ ಚಿತ್ರಕ್ಕೆ ₹ 100 ಕೋಟಿಗೂ ಹೆಚ್ಚು ಖರ್ಚು ಆಗಿದೆ ಎಂದು ಹೇಳುವುದೇ ಒಂದು ಹೆಮ್ಮೆ!

ಚಿತ್ರಗಳ ಆಯುಸ್ಸು...

ವಾರಕ್ಕೆ ಒಂದು ಅಥವಾ ಎರಡು ಚಿತ್ರಗಳು ತೆರೆಗೆ ಬಂದರೆ, ನೋಡಲು ಸಮಯ ಮತ್ತು ಆಯ್ಕೆಗಳು ಇರುತ್ತಿದ್ದವು. ಆದರೆ ಈಗ ಆಯಾ ಭಾಷೆಗಳ ಚಿತ್ರಗಳ ಲೆಕ್ಕಾಚಾರ ಹಾಕಿಕೊಂಡರೆ, ಕನಿಷ್ಠ ಐದಕ್ಕೂ ಹೆಚ್ಚು ಚಿತ್ರಮಂದಿರಕ್ಕೆ ಬರುತ್ತವೆ. ಈ ವಾರ ಬೇಡ, ಮುಂದಿನ ವಾರ ನೋಡೋಣ ಎಂದು ಯೋಚಿಸಿ ಚಿತ್ರಮಂದಿರ ಅಥವಾ ಮಾಲ್‌ಗಳಿಗೆ ಹೋಗುವಷ್ಟರಲ್ಲಿ ಆ ಚಿತ್ರದ ಪೋಸ್ಟರ್ ಅಲ್ಲಿ ಇರುವುದಿಲ್ಲ. ಮನೆಗೆ ಬಂದು ಟಿ.ವಿ ಆನ್ ಮಾಡಿದರೆ ಯಾವುದೋ ಒಂದು ಚಾನೆಲ್ನಲ್ಲಿ ಆ ಚಿತ್ರದ ಪ್ರೀಮಿಯರ್ ಸುದ್ದಿ... ‘ಕಮಿಂಗ್ ಸೂನ್‘ ಎಂಬ ಜಾಹೀರಾತು ಪದೇ ಪದೇ ಬರುತ್ತಿರುತ್ತದೆ. ಚಿತ್ರಮಂದಿರಗಳಲ್ಲಿ ಚಿತ್ರಗಳ ಆಯುಸ್ಸು ದಿನಗಳ ಲೆಕ್ಕದಲ್ಲಿ!

ನವ ಉದಾರೀಕರಣ ನೀತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ವ್ಯಾಪಕ ಬದಲಾವಣೆ ಚಿತ್ರರಂಗವನ್ನು ಹೊರತುಪಡಿಸಿಲ್ಲ. ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಚಿತ್ರರಂಗದಲ್ಲಿ ತಾಂತ್ರಿಕವಾಗಿ ಅಲ್ಲದೇ ಬೇರೆ ಬೇರೆ ಸ್ವರೂಪದಲ್ಲಿ ಅಮೂಲಾಗ್ರ ಬದಲವಣೆಗಳು ಆಗುತ್ತಿವೆ. ಯೂ ಟ್ಯುಬ್ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ವಿಡಿಯೋ ವೆಬ್‌ಸೈಟ್‌ಗಳಲ್ಲಿ ಆಯಾ ಚಿತ್ರಗಳ ಲಿಂಕ್ ಲಭ್ಯವಾಗುತ್ತಿದ್ದು, ಬಹುತೇಕ ಮಂದಿ ಅಲ್ಲಿಯೇ ಚಿತ್ರವನ್ನು ವೀಕ್ಷಿಸಲು ಇಷ್ಟಪಡುತ್ತಾರೆ.

ಹಲವಾರು ಬ್ರ್ಯಾಂಡ್ ಕಂಪನಿಗಳನ್ನು ಜೊತೆಗೆ ಹಾಕಿಕೊಂಡು, ನಿರ್ಮಾಪಕರನ್ನು ಮನವೊಲಿಸಿಕೊಂಡು ಅಚ್ಚುಕಟ್ಟಾಗಿ ಚಿತ್ರ ನಿರ್ಮಿಸಿ, ಪ್ರೇಕ್ಷಕರ ಮುಂದಿಡುವುದು ಒಂದು ಸವಾಲಾದರೆ, ಚಿತ್ರ ದೀರ್ಘಕಾಲ ಪ್ರದರ್ಶನವಾಗುವಂತೆ ಮಾಡುವುದು, ಯಶಸ್ಸು ಕಾಣುವುದು ಮತ್ತು ಹಾಕಿದ ಬಂಡವಾಳ ಲಾಭದ ಸಮೇತ ವಾಪಸ್ ಪಡೆಯುವುದು ಮತ್ತೊಂದು ಕಠಿಣ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT