ಕಣ್ಕಟ್ಟಿ ಅಡುಗೆ ಮಾಡುವ ಪಾಕಪ್ರವೀಣ

7
ಅಂಧೇರಿ ಕುಕರಿ

ಕಣ್ಕಟ್ಟಿ ಅಡುಗೆ ಮಾಡುವ ಪಾಕಪ್ರವೀಣ

Published:
Updated:
Deccan Herald

ಮೈ ಎಲ್ಲಾ ಕಣ್ಣಾಗಿಸಿಕೊಂಡು ಅಡುಗೆ ಮಾಡುವುದೂ ಕಷ್ಟ. ಉಪ್ಪು ಹೆಚ್ಚೊ, ಹುಳಿ ಕಡಿಮೆಯೊ ಆಗಿ ತಿನ್ನುವವರ ಮುಖದಲ್ಲಿ ಅಸಂತುಷ್ಟಿಯ ಗೆರೆಗಳು ಮೂಡಿ ಅಡುಗೆ ಮಾಡಿದವರನ್ನು ಮುಜುಗುರಕ್ಕೀಡು ಮಾಡುವುದೂ ಇದೆ. ಅಂಥದ್ದರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುತ್ತಾನೆಂದರೆ ಆತ ಪಾಕಪ್ರವೀಣನೇ ಸರಿ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಇಪ್ಪತ್ತೊಂದು ವರ್ಷದ ಸಂದೇಶ್ ದೊಡ್ಡಮನಿ ಈ ಅಡುಗೆ ಚತುರ. ಯಲಹಂಕದ ನಿಸರ್ಗ ಮೈದಾನದಲ್ಲಿ ಬಾಬಾ ದಾ ದಾಭಾ ಏರ್ಪಡಿಸಿರುವ ಮೂರು ದಿನಗಳ ಸ್ವದೇಶಿ ಆಹಾರ ಮೇಳದಲ್ಲಿ ಅವರ ಈ ಕಣ್–ಕೈ ಚಳಕವನ್ನು ಕಣ್ತುಂಬಿಕೊಂಡರು.

ಉಡುಪಿ ಜಿಲ್ಲೆಯವರಾದ ಸಂದೇಶ್  ತಂದೆ ಗಂಗಾವತಿಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ‘ತಂದೆಯ ನಿಂದನೆಯೇ ಸಾಧನೆಗೆ ಪ್ರೇರಣೆ’ ಎನ್ನುವ ಸಂದೇಶ, ತಮ್ಮ ಈ ಕ್ರೇಜ್‌ನ ಹಿಂದಿರುವ ಕಹಿ ಸತ್ಯವನ್ನು ಹೀಗೆ ಬಿಚ್ಚಿಡುತ್ತಾರೆ.

‘ಪಿಯುಸಿಯಲ್ಲಿ ಫೇಲಾದೆ. ಮನೆಯಲ್ಲಿ ಖಾಲಿ ಕೂತು ಅಪ್ಪನಿಂದ ಬೈಗುಳ ತಿನ್ನುತ್ತಿದ್ದೆ. ನೀನು ಕೆಲಸಕ್ಕೆ ಬಾರದವನು, ನಿನ್ನಿಂದ ಏನೂ ಮಾಡಲಾಗದು ಎನ್ನುವ ಅಪ್ಪನ ಈಟಿಯಂತಹ ಮಾತಿಗೆ ಆ ಕ್ಷಣಕ್ಕೆ ಬೇಸರವಾಗಿದ್ದೂ ನಿಜ. ನಂತರ ಅದನ್ನೇ ಸವಾಲಾಗಿ ಸ್ವೀಕರಿಸಿದೆ. ತಂದೆ ನಡೆಸುತ್ತಿರುವ ಹೋಟೆಲ್‌ನಲ್ಲಿಯೇ ಏನಾದರೂ ಹೊಸ ಪ್ರಯೋಗ ಮಾಡಬೇಕೆಂದು ಪ್ರಯತ್ನಿಸಿದೆ. ಅದರ ಫಲವೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುವ ಕಲೆ ಕರಗತವಾಗಿದ್ದು’.

ಅಂದಹಾಗೆ, ಸಂದೇಶ್, ಅಡುಗೆ ಆರಂಭಿಸುವುದೇ ಕಣ್ಣು ಕಟ್ಟಿಕೊಂಡ ನಂತರ. ತರಕಾರಿ ಕತ್ತರಿಸುವುದು, ಒಗ್ಗರಣೆ ಹಾಕುವುದು, ಮಸಾಲೆ ಸೇರಿಸುವುದು... ಎಲ್ಲಾ ಕೆಲಸವನ್ನೂ ಅವರು ಕಣ್‌ ಕಟ್ಟಿಕೊಂಡೇ ಮಾಡುವುದು. ಅಡುಗೆಗೆ ಬೇಕಾಗುವ ಈರುಳ್ಳಿ, ತರಕಾರಿ, ಮೆಣಸಿನಕಾಯಿಯನ್ನು ಚಕಚಕನೇ ಅವರು ಕತ್ತರಿಸುವ ಬಗೆ ನೋಡುತ್ತಿದ್ದರೆ ಎಂಥವರೂ ಕ್ಷಣ ಬೆರಗಾಗಿ ನಿಂತು ಬಿಡುತ್ತಾರೆ. ಜೀರಾ ರೈಸ್, ವೆಜ್ ಪುಲಾವ್, ಮಸಾಲಾ ರೈಸ್, ಘೀ ರೈಸ್, ಗೋಬಿ ಮಂಚೂರಿ, ಇಡ್ಲಿ –ವಡೆ, ದೋಸೆ... ಹೀಗೆ ಅವರ ಕೈಯಲ್ಲಿ ಅರಳುವ ಬಗೆಬಗೆಯ ಖಾದ್ಯಕ್ಕೆ ರುಚಿಮೊಗ್ಗು ಅರಳುತ್ತವೆ.

‘ಕಳೆದ ಏಳು ವರ್ಷಗಳಿಂದ ಕಣ್ಣಿಗೆ ಕಟ್ಟಿಕೊಂಡು ಅಡುಗೆ ಮಾಡುತ್ತಿದ್ದೇನೆ. ಈ ಪ್ರಯತ್ನ ಬಹುಶಃ ಎಲ್ಲೂ ನಡೆದಿರಲಿಕ್ಕಿಲ್ಲ. ಆರು ಗಂಟೆಗಳ ಕಾಲ ನಿರಂತರವಾಗಿ ಅಡುಗೆ ಮಾಡಿದ್ದು ಇಲ್ಲಿಯವರೆಗಿನ ದಾಖಲೆ. ವಿಶ್ವ ದಾಖಲೆ ಮತ್ತು ಗಿನ್ನಿಸ್‌ ದಾಖಲೆಗೆ ಹೆಸರು ನೋಂದಾಯಿಸಿದ್ದೇನೆ. ಆದರೆ ಪ್ರವೇಶ ಶುಲ್ಕ ಭರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಸಂದೇಶ್ ದೊಡ್ಡಮನಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !