ಸೋಮವಾರ, ಜೂನ್ 1, 2020
27 °C

ಕೊರೊನಾ ಏಕಾಂತದಲಿ ಸಾಹಿತಿಗಳ ಲೋಕಾಂತ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಏಕಾಂತಕ್ಕೂ, ಸಾಹಿತ್ಯಕ್ಕೂ ಬಿಡಿಸಲಾರದ ನಂಟು. ಶ್ರೇಷ್ಠ ಬರಹ ಅವತರಿಸುವುದೇ ಏಕಾಂತದಲ್ಲಿ ಎಂದು ಹಲವು ಶ್ರೇಷ್ಠ ಬರಹಗಾರರೇ ಉದ್ಗರಿಸಿದ್ದಾರೆ. ಈ ಏಕಾಂತವನ್ನು ದಕ್ಕಿಸಿಕೊಳ್ಳಲು ಬರಹಗಾರರು ಪಡುವ ಪರಿಪಾಟಲುಗಳು ಕಡಿಮೆಯೇನಿಲ್ಲವೆನ್ನಿ! ಜಗತ್ತಿನ ಆಗುಹೋಗುಗಳ ಬಗ್ಗೆ ಬರೆಯುವ ಸಾಹಿತಿಯು ಜಗತ್ತಿನ ಗದ್ದಲಗಳಿಂದ ತಪ್ಪಿಸಿಕೊಳ್ಳಲು ಹವಣಿಸುವುದು ಸುಳ್ಳಲ್ಲವಷ್ಟೆ. ಆದರೆ, ಸದ್ಯದ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಈಗ ಏಕಾಂತವೇ ಬರಹಗಾರರನ್ನು ಹುಡುಕಿಕೊಂಡು ಬಂದಂತಿದೆ. ಬರಹಗಾರರಿಗೆ ಪಂಥಾಹ್ವಾನವನ್ನು ನೀಡುವಂತೆಯೋ ಎನ್ನುವಂತೆ ಜಗತ್ತನ್ನೇ ಈಗ ಕೊರೊನಾ ವೈರಸ್‌ ನಿಶ್ಶಬ್ದಗೊಳಿಸಿದೆ. ಹಾಗಾದರೆ ಈ ಸಮಯ ಸಾಹಿತಿಗಳ ಪಾಲಿಗೆ ಬಯಸದೇ ಬಂದ ಭಾಗ್ಯವಾಗಿದೆಯೆ? ಈ ಲಾಕ್‌ಡೌನ್‌ ಕಾಲದಲ್ಲಿ ಅವರ ಸಾಹಿತ್ಯಸೃಷ್ಟಿ ಹುಲುಸಾಗಿ ನಡೆದಿರಬಹುದಲ್ಲವೆ? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ನಮ್ಮ ನಡುವೆ ಇರುವ ಕೆಲವು ಸಾಹಿತಿಗಳನ್ನು ಮಾತನಾಡಿಸಿದಾಗ ವಿಭಿನ್ನ ಉತ್ತರಗಳು ಬಂದವು. ಕೊರೊನಾ ಕಾಲದ ಏಕಾಂತದಲ್ಲೂ ನಮ್ಮ ಸಾಹಿತಿಗಳ ಲೋಕಾಂತದ ಕುರಿತ ನಿಲುವುಗಳು ಕುತೂಹಲ ಮೂಡಿಸುವಂತಿವೆ.

‘ಇಷ್ಟು ದಿನ ಬರೆಯುತ್ತಿದ್ದವರು ಓದಬೇಕಾದ, ಓದುತ್ತಿದ್ದವರು ಬರೆಯಬೇಕಾದ ಸಮಯ ಈಗ ಬಂದಿದೆ’ ಎಂದು ಪ್ರಶ್ನಿಸುವ ಮೊದಲೇ ಮಾತನ್ನು ಆರಂಭಿಸಿದವರು ಜಯಂತ ಕಾಯ್ಕಿಣಿ. ಏಕಾಂತ ಹೆಚ್ಚಾದರೆ ಸಾಹಿತಿಗೆ ಎದುರಿಗಿರುವವರ ಮನಸ್ಸನ್ನು ಓದುವ ಶಕ್ತಿ ಏನಾದರೂ ದಕ್ಕುತ್ತದೆಯೆ– ಎಂದು ನಾನು ಒಂದು ಕ್ಷಣ ಯೋಚಿಸುವಂತಾಯಿತು!

‘ಹೌದು, ಓದು–ಬರಹದ ಬಗ್ಗೆ ಮಾತನಾಡೋಣವೆಂದೇ ಫೋನಾಯಿಸಿದೆ. ಬರೆಯುವುದಕ್ಕೆ ಲಾಕ್‌ಡೌನ್‌ ಪ್ರಶಸ್ತ ಸಮಯವಲ್ಲವೆ? ಈಗ ಏನು ಬರೆಯುತ್ತಿದ್ದೀರಿ?’ ಎಂಬ ಪ್ರಶ್ನೆಗೆ ಉತ್ತರಿಸುತ್ತ ‘ಈಗ ಬರಹಕ್ಕಿಂತಲೂ ನಾನು ಓದಿನಲ್ಲಿ ತೊಡಗಿಕೊಂಡಿರುವೆ. ಓಡಾಟ, ಕಾರ್ಯಕ್ರಮಗಳ ಗಡಿಬಿಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಓದುವುದಕ್ಕೆ ಹೆಚ್ಚಿನ ಸಮಯ ಸಿಕ್ಕಿರಲಿಲ್ಲ. ಈಗ ಆ ಕೊರತೆಯನ್ನು ತುಂಬಿಸಿಕೊಳ್ಳುತ್ತಿರುವೆ. ಈಗ ನಮ್ಮ ಓದನ್ನು, ಅನುಭವವನ್ನು ಹೀರಿಕೊಳ್ಳಲು ಸರಿಯಾದ ಸಮಯ. ಕಾಲೇಜು ದಿನಗಳಲ್ಲಿ ಕಾರಂತ, ಕುವೆಂಪು, ಬೇಂದ್ರೆ ಅವರನ್ನು ಓದುವುದಕ್ಕೂ ಈಗ ಓದುವುದಕ್ಕೂ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ಈಗ ‘ಗ್ರಾಮಾಯಣ’ದ ಓದು ಬೇರೆಯೇ ಅನುಭವವನ್ನು ಕಟ್ಟಿಕೊಡುತ್ತದೆ. ಈಗ ನಾನು ಸದ್ಯಕ್ಕೆ ಎರಡು ಕಾದಂಬರಿಗಳನ್ನು ಓದುತ್ತಿರುವೆ. ಮುಕುಂದ ಜೋಶಿ ಅವರ ‘ನಿರುತ್ತರ’ ಮತ್ತು ವಿಠ್ಠಲ ಕಟ್ಟಿ ಅವರು ಮರಾಠಿಯಿಂದ ಅನುವಾದಿಸಿರುವ ಶ್ಯಾಮ್‌ ಮನೋಹರ್‌ ಅವರ ಕಾದಂಬರಿ ‘ನಾನು ಕುತೂಹಲದಿಂದ ನಿದ್ರಿಸಿದೆ’. ಇವುಗಳ ಜೊತೆಯಲ್ಲಿಯೇ ಜಿ. ರಾಮನಾಥ ಭಟ್‌ ಅವರು ಅನುವಾದಿಸಿರುವ ಕಬೀರರ ಕವನಗಳನ್ನೂ ಓದುತ್ತಿರುವೆ’ ಎಂದ ಜಯಂತ, ಯುವಜನತೆ ಹೆಚ್ಚೆಚ್ಚು ಓದಿಗೆ ತೊಡಗಿಕೊಳ್ಳಬೇಕೆಂದೂ ಆಶಿಸಿದರು.

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಅದರ ಬಿಡುವಿಲ್ಲದ ಚಟುವಟಿಕೆಗಳಲ್ಲಿ ಭಾಗವಹಿಸಿದ ಬಳಿಕ ಎಚ್.ಎಸ್‌. ವೆಂಕಟೇಶಮೂರ್ತಿಯವರು ಈಗ ಏನು ಬರೆಯುತ್ತಿರಬಹುದು ಎಂಬ ಕುತೂಹಲದಿಂದ ಅವರನ್ನು ವಿಚಾರಿಸಿದ ಕೂಡಲೇ, ‘ಕುಮಾರವ್ಯಾಸ ನನ್ನನ್ನು ಆವರಿಸಿಕೊಂಡಿದ್ದಾನೆ’ ಎಂದರು. ‘ಕರ್ಣಾಟಭಾರತ ಕಥಾಮಂಜರಿ’ಯ ಆಯ್ದ ಪದ್ಯಗಳ ವಿವರಣೆಯನ್ನು ಅವರು ಈಗಾಗಲೇ ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾರಷ್ಟೆ. ಈಗ ನಾಲ್ಕನೆಯ ಸಂಪುಟ ರಚನೆಯಲ್ಲಿ ತೊಡಗಿದ್ದಾರೆ. ಸದ್ಯದ ವಿಷಮ ಪರಿಸ್ಥಿತಿಯಲ್ಲಿ ಕುಮಾರವ್ಯಾಸನಂಥ ಮಹಾಕವಿಗಳ ಅನುಸಂಧಾನ ಮನಸ್ಸಿಗೊಂದು ಆಸರೆ ಕೊಡುವಂಥದ್ದು ಎಂಬ ಧ್ವನಿ ಅವರ ಮಾತಿನಲ್ಲಿತ್ತೆಂದು ಭಾಸವಾಯಿತು.

‘ಲಾಕ್‌ಡೌನ್‌ ಮುಗಿದ ಮೇಲೆ ಪ್ರಕಾಶಕರಿಗೆ ಒತ್ತಡವೋ ಒತ್ತಡ’ ಎಂದು ನಗುತ್ತಲೇ ಮಾತನ್ನು ಆರಂಭಿಸಿದವರು ಎಂ.ಎಸ್‌. ಶ್ರೀರಾಮ್‌. ಇದಕ್ಕೆ ನಿಮ್ಮ ಕೊಡುಗೆ ಏನು –ಎಂದಾಗ ‘ಇಂಗ್ಲಿಷ್‌ ಮತ್ತು ತೆಲುಗಿನಲ್ಲಿ ಪ್ರಕಟವಾಗಿರುವ ವೈ.ವಿ. ರೆಡ್ಡಿ ಅವರ ಕೃತಿಗಳನ್ನು ಆಧರಿಸಿ ಸುಮಾರು ಎರಡು ವರ್ಷಗಳಿಂದ ಜೀವನವೃತ್ತಾಂತವನ್ನು ಬರೆಯುತ್ತಿದ್ದೆ. ಈಗ ಅದಕ್ಕೆ ಅಂತಿಮ ರೂಪವನ್ನು ಕೊಡುತ್ತಿರುವೆ. ನನ್ನ ಹತ್ತು ಸಣ್ಣ ಕಥೆಗಳನ್ನು ಒಂದು ಕಾದಂಬರಿಯಾಗಿ ಹೆಣೆಯುತ್ತಿರುವೆ. ಇದರ ಜೊತೆಗೆ ಇನ್ನೊಂದು ಕಾದಂಬರಿಯನ್ನೂ ಬರೆಯುತ್ತಿರುವೆ. ಈ ಬರವಣಿಗೆಗೆ ನೆರವಾಗುವಂಥ ಪುಸ್ತಕಗಳನ್ನು ಓದುತ್ತಿರುವೆ. ‘ಚಿಲ್ಲರ ದೇವುಳ್ಳು’ ಎಂಬ ದಾಶರಥಿ ರಂಗಾಚಾರ್ಯ ಅವರ ಪುಸ್ತಕ; ಜೊತೆಗೆ ‘ತೆಲಂಗಾಣ ಕಥುಲು’ ಮತ್ತು ಕಮೂವಿನ ‘ಪ್ಲೇಗ್‌’ ಓದುತ್ತಿರುವೆ‘ ಎನ್ನುತ್ತ, ಓದಿನ ಮಧ್ಯೆ ಸಿನಿಮಾಗಳ ನೋಡುವಿಕೆಯೂ ನಡೆದಿದೆ ಎಂದರು. ಪುಸ್ತಕಗಳ ಜೊತೆಗೆ ಕೊರೊನಾ ವೈರಸ್‌ಗೂ, ನಮ್ಮ ರೋಗನಿರೋಧಕಶಕ್ತಿಗೂ ಇರುವ ನಂಟಿನ ಬಗ್ಗೆಯೂ ನಡೆದ ಈ ಮಾತುಕತೆಯಲ್ಲಿ ಬದುಕಿನ ಸಂಕೀರ್ಣತೆಯ ಹಲವು ಆಯಾಮಗಳು ಗೋಚರವಾಗುತ್ತಿದ್ದವು.

‘ಲಾಕ್‌ಡೌನ್‌ ನಮಗೆ ಬೇಡವಾಗಿರುವ, ಆದರೆ ಸದ್ಯಕ್ಕೆ ಅನಿವಾರ್ಯವಾಗಿರುವ ಸಂಗತಿ’ ಎನ್ನುತ್ತ ಮಾತಿಗೆ ತೊಡಗಿದವರು ವಿವೇಕ ಶಾನಭಾಗ. ‘ಲಾಕ್‌ಡೌನ್ ಎನ್ನುವುದು ವೆಕೇಶನ್ ಅಲ್ಲ. ಅದೊಂದು ಅಯಾಚಿತವಾಗಿ ದೊರೆತ ರಜೆಯೆಂದು ಸಂಭ್ರಮಿಸಿ ಮನೆಯಲ್ಲಿ ತಾವು ಮಾಡುತ್ತಿರುವ ನಾನಾ ಚೇಷ್ಟೆಗಳನ್ನು ಜಗಜ್ಜಾಹೀರು ಮಾಡುವುದು ಅಸೂಕ್ಷ್ಮ ಮನಃಸ್ಥಿತಿಯವರಿಗೆ ಮಾತ್ರ ಸಾಧ್ಯ’ ಎಂದು ತಳಮಳಿಸುತ್ತ, ‘ಅಸಂಖ್ಯ ಜನ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ. ಬಹುಮುಖ್ಯವಾಗಿ ಇವರೆಲ್ಲ ಕಡುಬಡತನದಲ್ಲೂ ದುಡಿದು ತಿನ್ನುವವರು. ಇವರು ಬೇಡುವ ಅನಿವಾರ್ಯ ಸ್ಥಿತಿಯಲ್ಲಿದ್ದಾರೆಂದರೆ ಅವರ ಆತ್ಮಗೌರವಕ್ಕೆ ಆದ ಧಕ್ಕೆ ಎಂಥದ್ದಿರಬಹುದು?’

‘ಜಗತ್ತಿನಾದ್ಯಂತ ಸಾವಿರಾರು ಜನ ಒಂಟಿಯಾಗಿ ಸಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳನ್ನು ನೋಡುವ ಅವಕಾಶ ಯಾರಿಗೂ ಯಾವ ದೇಶದಲ್ಲೂ ಇಲ್ಲ. ಸಾಹಿತ್ಯ, ಕಲೆ, ರಂಗಭೂಮಿ ಮುಂತಾದವುಗಳನ್ನು ನೋಡುವ ನಮ್ಮ ದೃಷ್ಟಿಕೋನದಲ್ಲಿ, ಅವುಗಳನ್ನು ಅನುಭವಿಸುವ ನಮ್ಮ ಬಗೆಯಲ್ಲಿ ಇನ್ನು ಮುಂದೆ ಗಣನೀಯವಾದ ಬದಲಾವಣೆಯಾಗಲಿದೆ. ಇದುವರೆಗೂ ಮಹತ್ವದ್ದೆಂದು ಕಂಡಿದ್ದು ಇನ್ನು ಮುಂದೆ ಹಾಗೆ ಕಾಣದೇ ಹೋಗಬಹುದು’. 

‘ಇದೆಲ್ಲ ಮುಗಿಯುವ ವೇಳೆಗೆ ಪ್ರತಿಯೊಬ್ಬರನ್ನೂ, ಪ್ರತಿಯೊಂದನ್ನೂ ಸಂಶಯದಿಂದ ನೋಡುವ ಸ್ವಭಾವವನ್ನು ನಾವು ರೂಢಿಸಿಕೊಂಡಿರಬಹುದು. ನಮ್ಮ ಪಕ್ಕ ಕೂತವರನ್ನೇ ನಂಬದೇ ಇರುವ ಸಂದರ್ಭದಲ್ಲಿ ಸಮೂಹದಲ್ಲಿ ಸಂತೋಷವನ್ನು ಹಂಚಿಕೊಳ್ಳುವ, ಅನುಭವಿಸುವ ಇಂತಹ ಕಲೆಗಳು ಯಾವ ರೂಪವನ್ನು ಪಡೆಯಬಹುದು?’ ಎನ್ನುತ್ತ, ಈಗಿನ ಸಂದರ್ಭದಲ್ಲಿ ಗಂಭೀರ ಓದು–ಬರಹಗಳಿಗೆ ಮನಸ್ಸು ಸಹಕರಿಸದು ಎಂದರು.

‘ಮನಸ್ಸೇ ಲಾಕ್‌ಡೌನ್‌ ಆದಂತಿದೆ’ ಎಂದು ಮಾತು ಆರಂಭಿಸಿದವರು ವೈದೇಹಿ. ‘ಬರವಣಿಗೆಗಿಂತಲೂ ಓದು ನಡೆದಿದೆ. ವಸುಧೇಂದ್ರರ ಕಾದಂಬರಿ ಆಯ್ತು. ಉಮಾರಾವ್‌ ಸಮಗ್ರ ಕಥೆಗಳನ್ನು ಓದುತ್ತಿರುವೆ. ಆಮೇಲೆ ಎಸ್‌. ದಿವಾಕರ್‌ ಅವರ ಕವನ ಸಂಗ್ರಹ ಓದಬೇಕು. ಲಾಕ್‌ಡೌನ್ ಅನಿವಾರ್ಯ; ಆದರೆ, ಜನರು ಸಂಕಷ್ಟವನ್ನೂ ಪಡುತ್ತಿದ್ದಾರೆ. ಯಾರನ್ನೂ ದೂರುವುದರಲ್ಲಿ ಅರ್ಥವಿಲ್ಲ’ ಎನ್ನುತ್ತ ಸದ್ಯದ ಪರಿಸ್ಥಿತಿ ಒಡ್ಡಿರುವ ಸವಾಲುಗಳ ಬಗ್ಗೆ ಚಿಂತಿತರಾದರು.

ಬೊಳುವಾರು ಮಹಮದ್‌ ಕುಂಇ ಅವರನ್ನು ಕೇಳಿದ ಪ್ರಶ್ನೆಗೆ ಅವರು, ಟಿಪ್ಪಣಿಯನ್ನೇ ಕಳುಹಿಸಿಬಿಟ್ಟರು: ‘ಕಳೆದ ಏಳೆಂಟು ವರ್ಷಗಳಿಂದಲೂ ‘ನಿವೃತ್ತಿ ಕ್ವಾರಂಟೀನ್’ನಲ್ಲೇ ಇದ್ದ ನನಗೆ, ಮೊನ್ನೆ ಮೊನ್ನೆಯಷ್ಟೇ ಆರಂಭವಾಗಿರುವ ‘ಕೊರೊನಾ ಕ್ವಾರಂಟೀನ್’ಗೆ ಒಗ್ಗಿಕೊಳ್ಳಲು ಕಷ್ಟವಾಗಲಿಲ್ಲ. ಒಂದೇ ಒಂದು ಬದಲಾವಣೆಯೆಂದರೆ, ‘ನಿವೃತ್ತಿ ಕ್ವಾರಂಟೀನ್’ ಕಾಲದಲ್ಲಿ ಕತೆನೋ, ಕಾದಂಬರಿನೋ, ಫೇಸ್ ಬುಕ್ಕೋ, ವಾಟ್ಸ್-ಆಪ್ಪೋ ಅಂತ ಬೆರಳಾಡಿಸುತ್ತಿದ್ದ ನಾನು ಅವುಗಳನ್ನೂ ನಿಲ್ಲಿಸಿಬಿಟ್ಟಿರುವೆ. ಕಾರಣ; ‘ಹೆಚ್ಚು ಪುಸ್ತಕಗಳನ್ನು ಓದುವವರು ಕಡಿಮೆ ಕೆಟ್ಟವರಾಗಿರುತ್ತಾರೆ’ ಎಂಬ ನನ್ನ ನಂಬಿಕೆ ಸುಳ್ಳಾಗಿ ಹೋದದ್ದು.

ನನ್ನ ಹೆಸರಿನಲ್ಲಿ ಪ್ರವಾದಿಯೊಬ್ಬರ ಹೆಸರು ‘ಮಿಕ್ಸ್’ ಆಗಿಬಿಟ್ಟಿರುವುದರಿಂದ ನಾನು ಏನು ಹೇಳಿದರೂ, ಏನನ್ನು ಬರೆದರೂ, ಅವುಗಳನ್ನು ಪ್ರವಾದಿ ಸಂದೇಶಗಳೆಂದೇ ಓದುವ ಅಪಾಯ ಕಾಣಿಸಿದ್ದರಿಂದ, ಸದ್ಯಕ್ಕೆ ಬೆರಳುಗಳಿಗೆ ಪ್ಲಾಸ್ಟರ್ ಅಂಟಿಸಿಕೊಂಡು ಕಣ್ಣು, ಕಿವಿಗಳನ್ನಷ್ಟೇ ತೆರೆದಿರಿಸಿಕೊಂಡಿರುವೆ. ಕಳೆದೆರಡು ವಾರಗಳಿಂದ ‘ತಬ್ಲೀಗ್ ಬಗ್ಗೆ ನಿನ್ನ ವೈಯಕ್ತಿಕ ಅಭಿಪ್ರಾಯವೇನು?’ ಎಂಬುದಾಗಿ ಪ್ರಶ್ನಿಸುತ್ತಾ ಫೋನ್ ಮಾಡುತ್ತಿರುವ ಗೆಳೆಯರನ್ನು, ಅವರವರ ಭಾವಕ್ಕೆ ಹಾಗೂ ಅವರವರ ಭಕುತಿಗೆ ತಕ್ಕಂತಹ ಉತ್ತರಗಳನ್ನು ನೀಡುತ್ತಾ, ತೃಪ್ತಿಪಡಿಸುವುದರಲ್ಲೇ ದಿನದ ಬಲುಭಾಗ ಕಳೆದುಹೋಗುತ್ತಿದೆ.’

ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಪುಸ್ತಕಗಳನ್ನು ಓದಲು ಸಾಧ್ಯವೆ ಎಂದು ಅಚ್ಚರಿಯಿಂದ ಕೇಳುವಂತೆ ಮಾಡಿದ್ದು ಎಚ್‌. ನಾಗವೇಣಿ ಅವರು ನೀಡಿದ ಪಟ್ಟಿ: ‘ಆ ಕಾಲದ ಸಾಮಾಜಿಕ ಜೀವನವನ್ನು ತಿಳಿದುಕೊಳ್ಳುವ ಕುತೂಹಲದಿಂದ ಸೇಡಿಯಾಪು ಕೃಷ್ಣಭಟ್ಟ, ಕುವೆಂಪು, ಮುಳಿಯ ತಿಮ್ಮಪ್ಪಯ್ಯ, ಹಿರಿಯಡ್ಕ ಗೋಪಾಲರಾಯರು, ಗೊರೂರು –ಇವರೆಲ್ಲರ ಜೀವನವೃತ್ತಾಂತಗಳನ್ನು ಓದಿದೆ. ಕಲಾರಾಧನೆ ಎಂಬ ಅಪರೂಪದ ಪುಸ್ತಕವೊಂದು ದೊರೆಯಿತು. ಕಡಲತಡಿಯ ನೆನಪಿನ ಅಲೆಗಳು, ವಚನಭಾರತ, ಜಯ, ಸುದರ್ಶನ...’ ಹೀಗೆ ಪಟ್ಟಿಯನ್ನು ಬೆಳೆಸುತ್ತಲೇ ನನ್ನನ್ನೂ ‘ನೀವು ಏನೇನು ಓದಿದ್ದೀರಿ’ ಎಂದು ಪ್ರಶ್ನಿಸುತ್ತ, ಕಾದಂಬರಿಯೊಂದರ ಸಿದ್ಧತೆಯಲ್ಲಿರುವುದಾಗಿಯೂ ನಾಗವೇಣಿ ತಿಳಿಸಿದರು.

‘ಭಾಷಣ ಮಾಡುವುದರಿಂದ ಬಿಡುಗಡೆ ಸಿಕ್ಕಿದೆ’ ಎಂದು ಮಾತನ್ನು ಆರಂಭಿಸಿದವರು ಸುನಂದಾ ಕಡಮೆ. ‘ನೌಕಾನೆಲೆಯಿಂದ ಸಂತ್ರಸ್ತರಾದವರ ಬದುಕನ್ನು ಆಧರಿಸಿ ಕಾದಂಬರಿಯೊಂದನ್ನು ಬರೆಯುತ್ತಿರುವೆ. ನಿಧಾನವಾಗಿ ಸಾಗಿದೆ. ವೋಲ್ಗಾ ಅವರ ‘ವಿಮುಕ್ತಾ’ ಓದಿದೆ. ಮಗಳು ಕೆಲವೊಂದು ಪುಸ್ತಕಗಳನ್ನು ಕೊಟ್ಟಿದ್ದಾಳೆ. ಅವನ್ನೂ ಓದುತ್ತಿರುವೆ’ ಎಂದರು.

ಜೊತೆಗೇ ಲಾಕ್‌ಡೌನ್‌ನ ಸಂಕಷ್ಟದಲ್ಲಿರುವವರಿಗೆ ಯಾವ ರೀತಿಯಿಂದಲೂ ಸಹಾಯ ಮಾಡಲು ಆಗುತ್ತಿಲ್ಲ– ಎಂಬ ಸಾಲನ್ನು ಸೇರಿಸಲೂ ಮರೆಯಲಿಲ್ಲ.

ವೈಸರ್‌ಗಳ ಬಗ್ಗೆ ಕುತೂಹಲ ಬೆಳೆಸಿಕೊಂಡು ಓದಲು ತೊಡಗಿದ್ದಾರೆ ಕುಂ. ವೀರಭದ್ರಪ್ಪ. ಈಗಾಗಲೇ ರಾಬಿನ್‌ ಕುಕ್‌ ರಚಿತ ‘ಫೀವರ್‌’ ಮತ್ತು ‘ವೈರಸ್‌’ಗಳನ್ನು ಓದಿ ಮುಗಿಸಿದ್ದಾರೆ. ಕಮೂವಿನ ‘ಪ್ಲೇಗ್‌’ನ ಜೊತೆಗೆ ಮಾರ್ಕ್ವೆಜ್‌ನ ‘ಒನ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಸಾಲಿಟ್ಯುಡ್‌’ ಕೂಡ ಮುಗಿದಿದೆಯಂತೆ. ‘ಇದು ಸಂಕಟದ ಸಮಯ, ಬರವಣಿಗೆ ಕಷ್ಟ’ ಎಂದು ಅವರು ಮೌನವಾದರು.

ಕಾದಂಬರಿಯೊಂದರ ರಚನೆಯಲ್ಲಿ ತಲ್ಲೀನರಾಗಿದ್ದಾರೆ ರಾಘವೇಂದ್ರ ಪಾಟೀಲ. ‘ಬಾಲವಿಧವೆಯನ್ನು ಕುರಿತ ಕಾದಂಬರಿಯನ್ನು ಬರೆಯುತ್ತಿರುವೆ. ಕಥೆ 1930ರ ಕಾಲಘಟ್ಟದಲ್ಲಿ ನಡೆಯುತ್ತದೆ; ಸಾಂಪ್ರದಾಯಿಕ ಹಿನ್ನೆಲೆ. ಇದಕ್ಕೆ ಪೂರಕವಾಗಿ ಉಪನಿಷತ್ತುಗಳನ್ನು ಓದುತ್ತಿರುವೆ; ಜೊತೆಗೆ ಅರವಿಂದರು ಕಾಳಿದಾಸನ ಬಗ್ಗೆ ಬರೆದಿರುವುದನ್ನೂ ಓದುತ್ತಿರುವೆ’ ಎಂಬ ಅವರ ಮಾತಿನಲ್ಲಿ ಸಾಹಿತ್ಯವು ಅಂತರಂಗಕ್ಕೂ, ಬಹಿರಂಗಕ್ಕೂ ಸಲ್ಲುವ ಸಂಭ್ರಮವೇ ಹೌದು ಎಂಬ ನಿಲುವು ಇಣುಕುತ್ತಿತ್ತು.

ಹೌದು, ಸಾಹಿತ್ಯವೂ ಸೇರಿದಂತೆ ಯಾವುದೇ ಕಲೆ ಅರಳಲು ಏಕಾಂತ ಆವಶ್ಯಕ. ಆದರೆ, ಅದು ನಾವಾಗಿ ದಕ್ಕಿಸಿಕೊಳ್ಳುವಂಥ ಧ್ಯಾನವಾಗಿರಬೇಕೇ ವಿನಾ ನಮ್ಮ ಮೇಲೆ ಎರಗುವ ಭೀತಿಯಾಗಕೂಡದು. ಭಯದಲ್ಲಿ ಉದ್ವೇಗ ತೋರಿಕೊಳ್ಳುವುದೇ ಹೊರತು ಕ್ರಿಯಾಶೀಲತೆಯಲ್ಲ ಎನ್ನುವುದು ಎಲ್ಲರ ಮಾತಿನಲ್ಲೂ ಕಂಡುಬಂದ ಸಮಾನಭಿತ್ತಿ ಅನ್ನಿಸಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು