ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ದೇಶ ಅನ್‌ಲಾಕ್‌: ಇವರ ಬದುಕು ಇನ್ನೂ ‘ಲಾಕ್‌’!

ದಿಕ್ಕು ಕಾಣದೇ ಅತಂತ್ರ ಸ್ಥಿತಿಯಲ್ಲಿ ಸರ್ಕಸ್ ಕಲಾವಿದರು
Last Updated 19 ಸೆಪ್ಟೆಂಬರ್ 2020, 7:15 IST
ಅಕ್ಷರ ಗಾತ್ರ

ಕಲಬುರ್ಗಿ: 'ದೇಶದಲ್ಲಿ ಕೊರೊನಾ ಲಾಕಡೌನ್-ಅನಲಾಕ್ ಎಲ್ಲವೂ ಗತಿಸಿ ಬರೋಬ್ಬರಿ 6 ತಿಂಗಳಾದವು. ಎಲ್ಲರ ಬದುಕು ಸುಧಾರಿಸುತ್ತಿದೆ. ಆದರೆ, ನಾವು ಮಾತ್ರ ಇನ್ನೂ ‘ಲಾಕ್’ ಸ್ಥಿತಿಯಲ್ಲೇ ಇದ್ದೇವೆ. ಸರ್ಕಸ್ ಪ್ರದರ್ಶಿಸಿಲ್ಲ, ಬೇರೆ ಊರಿಗೆ ಹೋಗಿಲ್ಲ. ನೆಮ್ಮದಿಯೂ ಇಲ್ಲ’.

ದೇಶದಲ್ಲೇ ದೊಡ್ಡ ಮತ್ತು ಹಳೆಯ ಸರ್ಕಸ್‌ಗಳಲ್ಲಿ ಒಂದಾದ ಜಮುನಾ ಸರ್ಕಸ್ ಕಲಾವಿದರ‌ ವೇದನೆಯಿದು. ಮಾರ್ಚ್ ತಿಂಗಳಿನಿಂದ ಕಲಬುರ್ಗಿಯಲ್ಲೇ ನೆಲೆಸಿರುವ ಅವರು ಅಕ್ಷರಶಃ ಬಂದಿಯಾಗಿದ್ದಾರೆ.

ಇತ್ತ ಸರ್ಕಸ್ ಪ್ರದರ್ಶನಕ್ಕೆ ಅನುಮತಿ ಸಿಗದೇ, ಅತ್ತ ನಿಯಮಿತ ಆದಾಯವೂ ಕಂಡುಕೊಳ್ಳಲು ಆಗದೇ ಅತಂತ್ರ ಸ್ಥಿತಿಯಲ್ಲಿರುವ ಅವರು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಕಲಾವಿದರು ಮತ್ತು ತಂತ್ರಜ್ಞರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಹೊರಬರಲು ಆಗುತ್ತಿಲ್ಲ.

ಸರ್ಕಸ್‌ವೊಂದನ್ನೇ ನೆಚ್ಚಿಕೊಂಡಿದ್ದ ಅವರಲ್ಲಿ ಕೆಲವರು ಈಗ ಅನಿವಾರ್ಯವಾಗಿ ಹೊರಹೋಗಿ ಕಟ್ಟಡ ನಿರ್ಮಾಣ, ಪೇಂಟಿಂಗ್, ಮೆಕಾನಿಕ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಅಪರಿಚಿತ ಊರಿನಲ್ಲಿ ಪರಿಚಯವಲ್ಲದ ಜನರ ಮಧ್ಯೆ ಬದುಕು ಕಟ್ಟಿಕೊಳ್ಳುವುದಿರಲಿ, ಉದ್ಯೋಗ ಅಭದ್ರತೆಯಲ್ಲಿ ನರಳುವಂತಾಗಿದೆ.

ಶರಣಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ಸರ್ಕಸ್ ಪ್ರದರ್ಶಿಸಬೇಕು ಮತ್ತು ವೈವಿಧ್ಯಮಯ ಕಸರತ್ತಿನ ಮೂಲಕ ಜನರ ಮನರಂಜಿಸಬೇಕು ಎಂಬ ಉಮೇದಿನಲ್ಲಿ ಮಾರ್ಚ್‌ ಮೊದಲ ವಾರವೇ ಆಂಧ್ರಪ್ರದೇಶದ ವಿಜಯವಾಡದಿಂದ ಬಂದ ಜಮುನಾ ಸರ್ಕಸ್ ಕಲಾವಿದರು ಸಕಲ ಸಿದ್ಧತೆ ಮಾಡಿಕೊಂಡರು.

‘ಜಮುನಾ ಸರ್ಕಸ್ ನೋಡಲು ಬನ್ನಿ’ ಎಂದು ಊರು ತುಂಬಾ ಪೋಸ್ಟರ್ ಅಂಟಿಸಿದ ಅವರು, ನಂತರ ಆಟೋಗಳ ಮೂಲಕ ಪ್ರಚಾರವೂ ನಡೆಸಿದರು. ಎರಡು ದಿನ ಸರ್ಕಸ್ ಪ್ರದರ್ಶನವೂ ಆಯಿತು. ಆದರೆ, ವ್ಯಕ್ತಿಯೊಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದು ದೃಢಪಟ್ಟ ಕೂಡಲೇ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತು.

ಕೊರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಂತಹಂತವಾಗಿ ಲಾಕ್‌ಡೌನ್ ಘೋಷಿಸಿದ ಕಾರಣ ಕ್ರಮೇಣ ಸರ್ಕಸ್ ಪ್ರದರ್ಶನ ಬಂದ್ ಆಯಿತು. ಜನರನ್ನು ರಂಜಿಸುವ ಭಾರಿ ನಿರೀಕ್ಷೆಯಲ್ಲಿದ್ದ ಸರ್ಕಸ್ ಕಲಾವಿದರಲ್ಲಿ ನಿರಾಸೆಯ ಕಾರ್ಮೋಡ ಆವರಿಸಿತು.

ಮೂರು ತಿಂಗಳ ಬಳಿಕ ಜೂನ್‌ ಆಸುಪಾಸಿನಲ್ಲಿ ಸರ್ಕಾರವು ಅನಲಾಕ್ ಘೋಷಿಸಿತು. ಆದರೆ, ಇದರ ನಂತರವೂ ಸರ್ಕಾರದ ನಿಯಮಾವಳಿಯಂತೆ ಸರ್ಕಸ್ ಪ್ರದರ್ಶನಕ್ಕೆ ಜಿಲ್ಲಡಾಳಿತವು ಅನುಮತಿ ನೀಡಲಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಆಗದಂತೆ ನಿಗಾ ವಹಿಸುವುದು ಕಷ್ಟವಾಗುವುದು ಎಂಬುದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಸರ್ಕಸ್ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ.

ಲಾಕ್‌ಡೌನ್‌ ಯಾವ ಪರಿ ದಿಗ್ಬಂಧನ ಹೇರಿತೆಂದರೆ, ಸರ್ಕಸ್‌ನವರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸಂಚಾರ ನಿರ್ಬಂಧವಿದ್ದ ಕಾರಣ ಅವರಿಗೆ ಬೇರೆ ಊರಿಗೆ ಹೋಗಲು ಆಗಲಿಲ್ಲ. ಒಂದು ವೇಳೆ ಹೊರಟರೂ 18 ಲಾರಿಗಳಲ್ಲಿ ಭಾರಿ ಪ್ರಮಾಣದ ಸರಕುಗಳನ್ನು ಎಲ್ಲಿಗೆ ಒಯ್ಯುವುದು ಎಂಬ ಚಿಂತೆ.

‘ಲಾಕ್‌ಡೌನ್‌ನಿಂದ ಕಲಬುರ್ಗಿಯಲ್ಲಿ ಈಗಾಗಲೇ ನಷ್ಟವಾಗಿದೆ. ಬೇರೆ ಊರಿನಲ್ಲಿ ಅನುಮತಿ ಪಡೆದು, ಅಲ್ಲಿ ಉಳಿದು ಜಾಗ ನಿಗದಿಪಡಿಸಿಕೊಂಡು ಸರ್ಕಸ್ ಪ್ರದರ್ಶಿಸುವುದು ಹೇಗೆ ಎಂಬ ಆತಂಕ ಕಾಡಿತು. ಇದರಿಂದ ನಾವು ಎಲ್ಲಿಯೂ ಹೋಗದೇ ಇಲ್ಲೇ ಉಳಿಬಿಟ್ಟೆವು’ ಎಂದು ಜಮುನಾ ಸರ್ಕಸ್ ಮಾಲೀಕ ಚರಣಜೀತ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಸಂಕಷ್ಟದಲ್ಲಿರುವುದು ಗೊತ್ತಾಗಿ ಜಿಲ್ಲಾಡಳಿತವು ನಮಗೆ ಆಹಾರ ಧಾನ್ಯ ಪೂರೈಸಿತು. ಶರಣಬಸವೇಶ್ವರ ದೇವಾಲಯದ ಪ್ರಮುಖರು, ಶಾಸಕರು, ಮುಖಂಡರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ನಮಗೆ ಆಹಾರಧಾನ್ಯ ಒದಗಿಸಿದರು. ಇದರಿಂದ ತುಂಬ ಉಪಕಾರವಾಯಿತು’ ಎಂದು ಅವರು ಹೇಳಿದರು.

ಮಿನಿ ಇಂಡಿಯಾ
ಜಮುನಾ ಸರ್ಕಸ್‌ನಲ್ಲಿ ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ, ಮಣಿಪುರ, ಪಶ್ಚಿಮ ಬಂಗಾಳ ಅಲ್ಲದೇ ನೆರೆ ದೇಶ ನೇಪಾಳದ ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ಭಿನ್ನ ಭಿನ್ನ ಸಂಸ್ಕೃತಿ, ಭಾಷೆ ಮತ್ತು ಜೀವನಶೈಲಿ ಹೊಂದಿದ್ದರೂ ಎಲ್ಲರೂ ಒಂದೇ ಸೂರಿನಡಿ ಒಗ್ಗಟ್ಟಿನಿಂದ ಬಾಳುತ್ತಿದ್ದಾರೆ.

‘40 ವರ್ಷಗಳಿಂದ ಜಮುನಾ ಸರ್ಕಸ್‌ನಲ್ಲಿರುವ ನನಗೆ ಬೇರೆ ಕೆಲಸ ಗೊತ್ತಿಲ್ಲ. ಬೇರೆ ಕೆಲಸ ಹುಡುಕುವ ಗೋಜಿಗೂ ಹೋಗಿಲ್ಲ. ಇಷ್ಟು ವರ್ಷಗಳಲ್ಲಿ ಇದೇ ಮೊದಲನೇ ಬಾರಿ ಯಾವುದೇ ಪ್ರದರ್ಶನ ನೀಡಲಾಗದೇ ಖಾಲಿ ಕೂತಿದ್ದೇವೆ. ಕೊರೊನಾ ನಮ್ಮ ಜೀವನವನ್ನು ಹಿಡಿದಿಟ್ಟಿದೆ. ಸೋಂಕಿನ ಪ್ರಭಾವ ಬೇಗನೇ ಕ್ಷೀಣಿಸಬೇಕು. ಸರ್ಕಸ್ ಪ್ರದರ್ಶನಕ್ಕೆ ನಮಗೆ ಅನುಮತಿ ಸಿಗಬೇಕೆಂದು ನಿತ್ಯ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ’ ಎಂದು ಒಡಿಶಾದ ಕಲಾವಿದ ನಾರಾಯಣ ತಿಳಿಸಿದರು.

ನಾರಾಯಣ ಅದ್ಭುತ ಬೈಕ್ ಸವಾರಿ ಮಾಡುತ್ತಾರೆ. ‘ಸಾವಿನ ಬಾವಿ’ (ಮೌತ್ ಕಾ ಕುವಾ) ಎಂಬ ಬೃಹತ್ ಗೋಲಾಕಾರದ ಚೆಂಡಿನಂತಹ ಸಾಧನದೊಳಗೆ ಹೋಗಿ ಬೈಕ್ ಸವಾರಿ ಮಾಡುತ್ತಾರೆ. ಅದರಲ್ಲಿ ಏಕಕಾಲಕ್ಕೆ ನಾಲ್ಕು ಮಂದಿ ಬೈಕ್‌ ಸವಾರಿ ಮಾಡುತ್ತಾರೆ. ಅದರಲ್ಲಿ ಯಾವುದೇ ಬೈಕ್‌ನ ವೇಗ ಕೊಂಚ ಕಡಿಮೆಯಾದರೂ ನಾಲ್ಕೂ ಮಂದಿ ಅಪಘಾತಕ್ಕೀಡಾಗಿ ಗಾಯಗೊಳ್ಳುತ್ತಾರೆ.

ನೇಪಾಳದ ಕಲಾವಿದೆ ಬಿಂದೂ ಸೈಕಲ್‌ನಲ್ಲಿ ಸಾಹಸ ಮಾಡುತ್ತಾರೆ. ಸೈಕಲ್‌ನ್ನು ಓಡಿಸುತ್ತಾ ಅದರ ಮೇಲೆ ಕಸರತ್ತು ಪ್ರದರ್ಶಿಸುತ್ತಾರೆ. ಓಡುತ್ತಿರುವ ಸೈಕಲ್‌ ಏರಿ, ನೃತ್ಯ ಪ್ರದರ್ಶಿಸಿ ಅಚ್ಚರಿ ಮೂಡಿಸುತ್ತಾರೆ. ಅವರನ್ನು ಕೊಂಚ ಮಾತನಾಡಿದರೆ ಸಾಕು, ಲಾಕ್‌ಡೌನ್‌ ತಮ್ಮನ್ನು ಎಷ್ಟೆಲ್ಲ ಸಂಕಷ್ಟಕ್ಕೆ ದೂಡಿದೆ ಎಂದು ವಿವರಿಸುತ್ತಾರೆ. ‘ಸರ್ಕಸ್ ಪ್ರದರ್ಶನಕ್ಕೆ ಬೇಗನೇ ಸಿಗಲಿ’ ಎಂದು ಅವರು ದೇವರಲ್ಲಿ ಬೇಡುತ್ತಾರೆ.

ಇಲ್ಲಿನ ಕೆಲ ಕಲಾವಿದರು ಟಿವಿ ವಾಹಿನಿಗಳಲ್ಲಿ ಪ್ರದರ್ಶನವಾಗುವ ರಿಯಾಲಿಟಿ ಶೋಗಳಲ್ಲೂ ಪಾಲ್ಗೊಂಡಿದ್ದಾರೆ. ಬಹುಮಾನಗಳನ್ನೂ ಗಳಿಸಿದ್ದಾರೆ.

ಇತಿಹಾಸ
ಪಂಜಾಬ್‌ನಲ್ಲಿ 1901ರಲ್ಲಿ ಜಮುನಾ ಸರ್ಕಸ್ ಅಸ್ತಿತ್ವಕ್ಕೆ ಬಂತು.ಇಲ್ಲಿ ಸಾಹಸ ಕಲಾವಿದರಾಗಿದ್ದ ಪಂಜಾಬ್‌ನ ಗುರುದೀಪ್ ಸಿಂಗ್ ಮತ್ತು ಕೇರಳದ ರತ್ನಾ ಸರ್ಕಸ್‌ನಲ್ಲೇ ವಿವಾಹವಾದರು. ಅವರಿಬ್ಬರೂ ಸೇರಿ 1960ರ ದಶಕದಲ್ಲಿ₹ 8000ಕ್ಕೆ ಇಡೀ ಸರ್ಕಸ್ ಖರೀದಿಸಿದರು. ಈಗ ಇಡೀ ಸರ್ಕಸ್‌ನ ಒಟ್ಟು ಮೌಲ್ಯ ₹ 45 ಲಕ್ಷಕ್ಕೂ ಹೆಚ್ಚಿದೆ. ಅವರಿಬ್ಬರ ಪುತ್ರ ಚರಣಜೀತ ಸಿಂಗ್ ಎಲ್ಲದರ ಜವಾಬ್ದಾರಿ ಹೊತ್ತಿದ್ದಾರೆ.

119 ವರ್ಷಗಳ ಇತಿಹಾಸ ಹೊಂದಿರುವ ಜಮುನಾ ಸರ್ಕಸ್‌ನಲ್ಲಿ ಒಂದು ಕಾಲದಲ್ಲಿ ಹುಲಿ, ಸಿಂಹ, ನರಿ, ತೋಳ, ಆನೆ ಸೇರಿದಂತೆ ಬಗೆಬಗೆಯ ವನ್ಯಜೀವಿಗಳಿದ್ದವು. ವಿವಿಧ ರಾಷ್ಟ್ರಗಳ ಬಗೆಬಗೆಯ ಪಕ್ಷಿಗಳಿದ್ದವು. ಆದರೆ, ಸರ್ಕಸ್‌ನಲ್ಲಿ ವನ್ಯಜೀವಿಗಳನ್ನು ಬಳಸುವಂತಿಲ್ಲ ಎಂಬ ಕಾನೂನು ಜಾರಿಯಾದ ನಂತರ ಪ್ರಾಣಿಪಕ್ಷಿಗಳ ಬಳಕೆ ನಿಷೇಧಗೊಂಡಿತು.

ಜಮುನಾ ಸರ್ಕಸ್ ಸೇರಿದಂತೆ ಯಾವುದೇ ಸರ್ಕಸ್ ಕಂಪನಿ ಒಂದು ರಾಜ್ಯಕ್ಕೆ ತೆರಳಿದರೆ, ಸುತ್ತಮುತ್ತಲ ದೊಡ್ಡ ಊರುಗಳಲ್ಲಿ ಪ್ರದರ್ಶನ ನೀಡುತ್ತ ಅಲ್ಲೇ 7 ರಿಂದ 8 ವರ್ಷ ಕಳೆದು ಬಿಡುತ್ತಾರೆ. ಸರ್ಕಸ್ ಕಲಾವಿದರ ಮತ್ತು ತಂತ್ರಜ್ಞರ ಇಡೀ ಜೀವನ ಅಲ್ಲಿಯೇ ಕಳೆದುಬಿಡುತ್ತಾರೆ. ಹೊರಗಿನ ಪ್ರಪಂಚದ ಹೆಚ್ಚು ಸಂಪರ್ಕ ಹೊಂದದೇ ‘ಮಿನಿ ಇಂಡಿಯಾ’ದಂತೆ ಇರುವ ತಮ್ಮ ಸರ್ಕಸ್ ಕುಟುಂಬದೊಂದಿಗೆ ಬದುಕಿಬಿಡುತ್ತಾರೆ.

ಅಸ್ತಿತ್ವದ ಪ್ರಶ್ನೆ
ಇಂದಿನ ಸವಾಲಿನ ದಿನಗಳಲ್ಲಿ ಸರ್ಕಸ್ ನಿರ್ವಹಣೆ ಕಷ್ಟವಾಗುವುದಿಲ್ಲವೇ ಎಂದು ಪ್ರಶ್ನಿಸಿದರೆ, ಎಲ್ಲರಿಂದ ಬರುವ ಏಕಮೇವ ಉತ್ತರ: ಖಂಡಿತ ಇಲ್ಲ, ಆದರೆ ಸವಾಲು ಎದುರಿಸಲೇಬೇಕು.

ಅವರು ಹೇಳುವ ಪ್ರಕಾರ, ಎರಡು ವರ್ಷಗಳ ಹಿಂದೆ ದೇಶದಲ್ಲಿ 50ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣಪುಟ್ಟ ಸರ್ಕಸ್ ಕಂಪನಿಗಳಿದ್ದವು. ಆದರೆ, ನೋಟು ಅಮಾನ್ಯೀಕರಣ ಮತ್ತು ಇತರ ಸಮಸ್ಯೆಗಳಿಂದ ಇತ್ತೀಚೆಗೆ 21 ಸರ್ಕಸ್ ಕಂಪನಿಗಳು ಮುಚ್ಚಿದವು. ಎಲ್ಲರೂ ಬೇರೆ ಬೇರೆ ಉದ್ಯೋಗಗಳನ್ನು ಕಂಡುಕೊಂಡರು.

‘ವನ್ಯಜೀವಿಗಳ ಬಳಕೆ ನಿಷೇಧದಿಂದ ದೊಡ್ಡ ಪೆಟ್ಟು ಬಿತ್ತು. ಪ್ರಾಣಿಪಕ್ಷಿಗಳನ್ನು ನೋಡಲೆಂದೇ ಬಹುತೇಕ ಮಂದಿ ಸರ್ಕಸ್‌ಗೆ ಬರುತ್ತಿದ್ದರು. ಆದರೆ, ಪ್ರಾಣಿಗಳು ಇರುವುದಿಲ್ಲ ಎಂಬ ಗೊತ್ತಾದ ನಂತರ ಜನರು ಸರ್ಕಸ್ ವೀಕ್ಷಣೆಗೆ ಬರುವುದು ಕಡಿಮೆ ಆಯಿತು. ಆಗ ನಾವು ಜೋಕರ್, ಚಾರ್ಲಿ ಸೇರಿದಂತೆ ಬೇರೆ ಬೇರೆ ಕಲಾವಿದರಿಂದ ಇನ್ನಷ್ಟು ಕಸರತ್ತು ಪ್ರದರ್ಶಿಸಬೇಕಾಯಿತು. ಜನರನ್ನು ಹಿಡಿದಿಟ್ಟುಕೊಳ್ಳಬೇಕಾಯಿತು’ ಎಂದು ಕಲಾವಿದ ಮನೀಶ ಚೌಧರಿ ತಿಳಿಸಿದರು.

‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸರ್ಕಸ್‌ ಯಶಸ್ವಿಯಾಗಿ ಮುಂದುವರೆಸುವ ಆತ್ಮವಿಶ್ವಾಸದಲ್ಲಿ ಮಾಲೀಕರಿದ್ದಾರೆ. ಹಲವು ಸಂಕಷ್ಟ–ಸವಾಲುಗಳು ಎದುರಾದರೂ ಅವರು ಧೈರ್ಯ ಕಳೆದುಕೊಂಡಿಲ್ಲ. ಅವರ ಈ ಆಶಾಭಾವವೇ ನಮ್ಮೆಲ್ಲರನ್ನೂ ಕಾಪಾಡಿದೆ. ಸರ್ಕಸ್ ಇರುವವರೆಗೆ ನಾವೂ ಇರುತ್ತೇವೆ’ ಎಂದು ತಿಳಿಸಿದರು.

ಪ್ರದರ್ಶನಕ್ಕೆ ಅನುಮತಿ
‘ಅನ್‌ಲಾಕ್‌ ಪ್ರಕ್ರಿಯೆ ಹಂತಹಂತವಾಗಿ ಜಾರಿಯಾಗುತ್ತಿರುವ ಕಾರಣ ಸರ್ಕಸ್ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಿದ್ದೇವೆ. ‌‌ಅಲ್ಲಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಲ್ಲಿ, ಅಕ್ಟೋಬರ್ ಮೊದಲ ವಾರದಲ್ಲಿ ಸರ್ಕಸ್ ಆರಂಭಿಸುವ ಉದ್ದೇಶವಿದೆ. ಸರ್ಕಸ್ ಪ್ರದರ್ಶನಕ್ಕೆ ಕಲಬುರ್ಗಿಯ‌ ನಿವಾಸಿಗಳಿಗೆ ಪ್ರೀತಿಯ ಆಹ್ವಾನ ನೀಡುತ್ತೇವೆ. ಅವರು ಸರ್ಕಸ್ ವೀಕ್ಷಣೆಗೆ ಬಂದು ಸರ್ಕಸ್ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಚರಣಜೀತ ಸಿಂಗ್ ತಿಳಿಸಿದರು.

‘ಲಾಕ್‌ಡೌನ್‌ ಜಾರಿಯಾಗದೇ ಎಲ್ಲವೂ ಅಂದ್ಕೊಂಡಂತೆ ನೆರವೇರಿದ್ದರೆ, ಏಪ್ರಿಲ್‌ ಕೊನೆ ವಾರದಲ್ಲಿ ನಾವು ರಾಯಚೂರಿನಲ್ಲಿ ಪ್ರದರ್ಶನ ನೀಡಬೇಕಿತ್ತು. ನಂತರ ಬೆಳಗಾವಿ ಜಿಲ್ಲೆಯ ಗೋಕಾಕ್‌ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಇದ್ಯಾವುದೂ ಸಾಧ್ಯವಾಗಲಿಲ್ಲ. ಇಲ್ಲಿ ಸರ್ಕಸ್ ಪ್ರದರ್ಶನ ನೀಡಿ, ಜನರನ್ನು ಮನರಂಜಿಸಿದ ಬಳಿಕಷ್ಟೇ ನಾವು ಬೇರೆ ಊರಿಗೆ ಪ್ರಯಾಣ ಬೆಳೆಸುತ್ತೇವೆ’ ಎಂದು ಅವರು ತಿಳಿಸಿದರು.

ಸರ್ಕಸ್‌ ಕಲಾವಿದರ ಸ್ಥಿತಿಗತಿ ಆಧರಿಸಿದ ‘ರಾಮಸಿಂಗ್ ಚಾರ್ಲಿ’ ಎಂಬ ಚಲನಚಿತ್ರ ಈಚೆಗಷ್ಟೇ ತೆರೆ ಕಂಡಿದೆ. ಸರ್ಕಸ್‌ನ ಪ್ರಸ್ತಾ‍ಪವಾದಾಗಲೆಲ್ಲ, ಬಾಲಿವುಡ್‌ ಶೋ ಮ್ಯಾನ್ ರಾಜ್‌ಕಪೂರ್ ಅವರ ‘ಮೇರಾ ನಾಮ್ ಜೋಕರ್’ ಚಲನಚಿತ್ರ ನೆನಪಾಗುತ್ತದೆ. ಅವರು ಅದರಲ್ಲಿ ‘ಜೋಕರ್’ ಪಾತ್ರದಲ್ಲಿ ‘ಜೀನಾ ಯಹಾ , ಮರನಾ ಯಹಾ’ ಎಂದು ಹಾಡುತ್ತಾರೆ. ಅದೇ ಸ್ಫೂರ್ತಿಯಲ್ಲಿ ಇರುವ ಜಮುನಾ ಸರ್ಕಸ್ ಕಲಾವಿದರು–ತಂತ್ರಜ್ಞರು, ‘show must go on' ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT