ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕೊರೊನಾ ಜಾಗೃತಿ: ಕಲಾಕೃತಿಗೆ ಪ್ರಶಸ್ತಿ ಗರಿ

ಅಂತರರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಎಂ.ನಾಗರಾಜಗೆ ದ್ವಿತೀಯ ಸ್ಥಾನ
Last Updated 18 ನವೆಂಬರ್ 2020, 4:51 IST
ಅಕ್ಷರ ಗಾತ್ರ
ADVERTISEMENT
""
""
""

ಕೊರೊನಾ ಸೋಂಕಿನ ಕಬಂಧಬಾಹುಗಳಲ್ಲಿ ಬಂಧಿಯಾದ ದೇಶ; ಎಲ್ಲೆಡೆ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದ ದಿನಗಳವು. ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆಯೇ ಆ ವ್ಯಕ್ತಿ ಇದ್ದ ಇಡೀ ಬೀದಿ ಸೀಲ್‌ಡೌನ್‌. ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದ್ದ ಬಡಾವಣೆಗಳು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಇರುವ ಪರಿಣಾಮಕಾರಿ ಕ್ರಮಗಳೆಂದರೆ ಮಾಸ್ಕ್‌ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು...

ಇದು ಚಿತ್ರಕಲಾವಿದ ಎಂ.ನಾಗರಾಜ ರಚಿಸಿದ್ದ ಕಲಾಕೃತಿಯು ಧ್ವನಿಸುತ್ತಿದ್ದ ವಸ್ತುವಿಷಯ. ದೆಹಲಿಯ ಜೆರ್ನೈಟ್‌ ಡಿಜಿಟಲ್‌ ಪ್ರೊಡಕ್ಷನ್‌ ಸಂಸ್ಥೆಯು ಮೇ 30ರಂದು ಆನ್‌ಲೈನ್‌ ಮೂಲಕ ಆಯೋಜಿಸಿದ್ದ ಅಂತರರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಈ ಕಲಾಕೃತಿಗೆ ದ್ವಿತೀಯ ಬಹುಮಾನವೂ ಒಲಿಯಿತು.

ಕೋವಿಡ್‌ ಲಾಕ್‌ಡೌನ್‌ ಎಲ್ಲರನ್ನೂ ಒಂದೆಡೆ ಕೂಡಿಹಾಕಿತ್ತು. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪವನ್ನು ಚಿತ್ರಕಲಾವಿದರು ಕೈಗೊಂಡಿದ್ದರು. ತಮ್ಮದೇ ಅಭಿವ್ಯಕ್ತಿ ಮಾಧ್ಯಮ ಬಳಸಿ ಸೃಜನಾತ್ಮಕ ನೆಲೆಗಟ್ಟಿನಲ್ಲಿ ಚಿತ್ರಕಲಾಕೃತಿಗಳನ್ನು ರಚಿಸಿದ್ದರು. ವಿಶ್ವದ ಅನೇಕ ದೇಶಗಳಿಂದ ಭಾಗವಹಿಸಿದ್ದ ಕಲಾವಿದರು ಚಿತ್ರ ಬಿಡಿಸಿದ್ದು, ಅವುಗಳನ್ನು ಆನ್‌ಲೈನ್‌ ಮೂಲಕವೇ ವಿವಿಧ ದೇಶಗಳ ಮೂವರು ತೀರ್ಪುಗಾರರು ಗಮನಿಸುತ್ತಿದ್ದರು. ಅಂತಿಮವಾಗಿ ಮೈಸೂರಿನ ಹೆಬ್ಬಾಳದ ನಿವಾಸಿ ಎಂ.ನಾಗರಾಜು ಅವರ ಕಲಾಕೃತಿಗೆ ಬೆಳ್ಳಿ ಪದಕದ ಗರಿ ಸಿಕ್ಕಿತು.

ಬೆಳ್ಳಿ ಪದಕಕ್ಕೆ ಭಾಜನವಾದ ‘ಕೊರೊನಾ’ ಜಾಗೃತಿ ಮೂಡಿಸುವ ಜಲವರ್ಣ ಚಿತ್ರ

ಉತ್ತರಾಖಂಡದ ಈಸ್ಟರ್ನ್‌ ಫೌಂಡೇಷನ್‌ ಆಫ್‌ ಆರ್ಟ್‌ ಅಂಡ್‌ ಕಲ್ಚರ್‌ ಸಂಸ್ಥೆ ಆಯೋಜಿಸಿದ್ದ 5ನೇ ವಾರ್ಷಿಕ ಚಿತ್ರಕಲಾ ಸ್ಪರ್ಧೆಯಲ್ಲಿ (ಆನ್‌ಲೈನ್‌) ನಾಗರಾಜ ಅವರ ‘ಮುಂಜಾನೆ ಸಮಯ’ದ ರೇಖಾಚಿತ್ರವು ನಗದು ಬಹುಮಾನಕ್ಕೆ ಪಾತ್ರವಾಗಿದೆ. ಈ ಸ್ಪರ್ಧೆಯಲ್ಲಿ 400ರಿಂದ 500 ಮಂದಿ ಪಾಲ್ಗೊಂಡಿದ್ದರು. ಅಂತಿಮವಾಗಿ 35 ಕಲಾಕೃತಿಗಳನ್ನು ಆಯ್ಕೆ ಮಾಡಿದ್ದು, ಎಲ್ಲರಿಗೂ ನಗದು ಬಹುಮಾನ ನೀಡಲಾಗಿದೆ.

ಮನುಷ್ಯ ಬೆಳಿಗ್ಗೆ ನಿದ್ದೆಯಿಂದ ಎದ್ದಾಗಲೇ ಜೀವನದ ಜಂಜಾಟಗಳಲ್ಲಿ ಕಳೆದು ಹೋಗುತ್ತಾನೆ. ಆ ಜಂಜಾಟಗಳಿಂದ ಬಿಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾನೆ. ಧೂಮಪಾನ, ಮದ್ಯಪಾನದಂತಹ ಚಟಗಳಿಂದಾಗಿ ಮತ್ತಷ್ಟು ಸಮಸ್ಯೆಗಳನ್ನು ತಂದುಕೊಳ್ಳುತ್ತಾನೆ. ಕೊನೆಗೆ ನೇಣು ಕುಣಿಕೆಗೂ ತನ್ನ ಕೊರಳನ್ನು ಒಡ್ಡುತ್ತಾನೆ ಎಂಬುದನ್ನು ನಾಗರಾಜ ಅವರು ತಮ್ಮ ರೇಖಾಚಿತ್ರದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

‘ಈಸ್ಟರ್ನ್‌ ಫೌಂಡೇಷನ್‌ ಆಫ್‌ ಆರ್ಟ್‌ ಅಂಡ್‌ ಕಲ್ಚರ್‌ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಗೆ ‘ಕೋವಿಡ್‌ ಜಾಗೃತಿ ಮೂಡಿಸುವ ಕಲಾಕೃತಿ’, ‘ಮುಂಜಾನೆ ಸಮಯ’ ಹಾಗೂ ವ್ಯಂಗ್ಯಚಿತ್ರವೊಂದನ್ನು ಕಳುಹಿಸಿದ್ದೆ. ಕಲಾಕೃತಿಯ ವಸ್ತುವಿಷಯ, ಅದರ ಗುಣಮಟ್ಟ ಹಾಗೂ ಅದು ಮೂಡಿಸುವ ಸಂದೇಶವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಧಾರವಾಡದ ಕಲಾವಿದರೊಬ್ಬರಿಗೂ ಪ್ರಶಸ್ತಿ ಬಂದಿದೆ’ ಎಂದು ಎಂ.ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ದೊಡ್ಡಗಡಿಯಾರ ಕಲಾಕೃತಿ ಉಡುಗೊರೆ

ಮೈಸೂರಿನ ದೊಡ್ಡ ಗಡಿಯಾರದ ಪ್ರತಿಕೃತಿ

ನಾಗರಾಜ ಅವರು ಥರ್ಮಕೋಲ್‌ನಲ್ಲಿ ಮೈಸೂರಿನ ದೊಡ್ಡ ಗಡಿಯಾರದ ಪ್ರತಿಕೃತಿಯನ್ನು ತಯಾರಿಸಿದ್ದರು. 4 ಅಡಿ ಎತ್ತರವಿದ್ದ, ಈ ಕಲಾಕೃತಿಗೆ ವಸ್ತುಪ್ರದರ್ಶನದ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಶಸ್ತಿಯೂ ಸಂದಿತ್ತು. ಗೋಪುರದ ನಾಲ್ಕೂ ಕಡೆಗಳಲ್ಲಿ ಗಡಿಯಾರಗಳನ್ನು ಅಳವಡಿಸಿದ್ದು, ಅವು ಕಾರ್ಯ ನಿರ್ವಹಿಸುತ್ತವೆ. ದೀಪಗಳಿಂದ ಬೆಳಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಕಲಾಕೃತಿಯನ್ನು ಅರಮನೆ ಮಂಡಳಿಗೆ ಉಡುಗೊರೆ ನೀಡಿದ್ದು, ಇದನ್ನು ಅಂಬಾ ವಿಲಾಸ ಅರಮನೆಯ ಸಭಾಭವನದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ನಾಗರಾಜ ಅವರ ಹಿನ್ನೆಲೆ

ತಿ.ನರಸೀಪುರ ಗ್ರಾಮದ ಸೋಸಲೆ ಗ್ರಾಮದ ಮಹದೇವಾಚಾರ್‌, ಪುಟ್ಟತಾಯಮ್ಮ ದಂಪತಿ ಪುತ್ರ ಎಂ.ನಾಗರಾಜ. ಈ ಕುಟುಂಬದ ವೃತ್ತಿ ಮರಕೆತ್ತನೆ. ಚಿಕ್ಕಂದಿನಿಂದಲೂ ಕಲೆಯ ಪರಿಸರದಲ್ಲೇ ಬೆಳೆದ ನಾಗರಾಜ ಭೂಗೋಳಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ್ದಾರೆ. ಅವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯ ಕಡೆಗೆ ಸೆಳೆತ. ಹೀಗಾಗಿ, ಶ್ರೀ ಕಲಾನಿಕೇತನ ಸ್ಕೂಲ್‌ ಆಫ್‌ ಆರ್ಟ್‌ ಕಾಲೇಜಿನಲ್ಲಿ ಬಿವಿಎ ಪೂರೈಸಿದರು. ಈಗ ಹೆಬ್ಬಾಳದ ಪರಮಹಂಸ ವಿದ್ಯಾಕೇತನ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಕ್ಯಾನ್ವಾಸ್‌ ಪೇಂಟಿಂಗ್‌, ವರ್ಲಿ ಚಿತ್ರಕಲೆಯಲ್ಲೂ ಇವರು ಸಿದ್ಧಹಸ್ತರು. ಅನೇಕ ಕಡೆಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಕಂಡಿವೆ. ಮೈಸೂರು ದಸರಾ ವಸ್ತ್ರಪ್ರದರ್ಶನದಲ್ಲಿ ಆಯೋಜಿಸುವ ಚಿತ್ರಕಲಾ ಸ್ಪರ್ಧೆಯಲ್ಲಿ 2010ರಿಂದ 2019ರವರೆಗೆ ಭಾಗವಹಿಸಿದ್ದಾರೆ. ವಿವಿಧ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಅವರ ಮೊ.ಸಂ. 98804 50716.

***

ರೇಖಾಚಿತ್ರ, ಮಣ್ಣಿನಲ್ಲಿ ಕಲಾಕೃತಿ ರೂಪಿಸುವುದೆಂದರೆ ನನಗೆ ತುಂಬಾ ಇಷ್ಟ. ಚಿತ್ರಕಲೆಯಲ್ಲೇ ಸಾಧನೆ ಮಾಡುವ ಹಂಬಲವಿದೆ.

–ಎಂ.ನಾಗರಾಜ, ಚಿತ್ರಕಲಾವಿದ

‘ಮುಂಜಾನೆ ಸಮಯ’ ಕಲಾಕೃತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT