ಪ್ರಸಿದ್ಧರಿಗೆ ವ್ಯಂಗ್ಯ ‘ಸ್ಪರ್ಶ’

7

ಪ್ರಸಿದ್ಧರಿಗೆ ವ್ಯಂಗ್ಯ ‘ಸ್ಪರ್ಶ’

Published:
Updated:

ಎಂ.ಜಿ.ರಸ್ತೆಯಲ್ಲಿರುವ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆಯು ಇದೇ ಶನಿವಾರದಿಂದ ಸ್ಪರ್ಶ್‌ ಧಹರ್ವಾಲ್ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ.

ದೆಹಲಿಯವರಾದ ಸ್ಪರ್ಶ್‌ ಧಹರ್ವಾಲ್ ಪ್ರತಿಭಾವಂತ ಯುವ ಗ್ರಾಫಿಕ್ ಕಲಾವಿದರಾಗಿದ್ದು, ರಾಜಕೀಯ ವ್ಯಂಗ್ಯಚಿತ್ರ, ಕಾಮಿಕ್ ಡ್ರಾಯಿಂಗ್, ಕ್ಯಾರಿಕೇಚರ್ ಮತ್ತು ಸ್ಟೋರಿ ಬೋರ್ಡ್ ಇಲ್ಲಸ್ಟ್ರೇಷನ್‌ಗಳಲ್ಲಿ ತಮ್ಮ ಛಾಪು ಮೂಡಿಸಿ ಖ್ಯಾತರಾಗಿದ್ದಾರೆ. ಡೆಲ್ಲಿ ಕಾಲೇಜ್ ಆಫ್ ಆರ್ಟ್ಸ್‌ನಿಂದ ಬಿಎಫ್‌ಎ ಪದವಿ ಪಡೆದಿದ್ದಾರೆ. ಕೆಲವು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಆರ್ಟ್ಸ್‌ ಕನ್ಸಲ್ಟೆಂಟ್‌ ಆಗಿ ಕೆಲಸ ಮಾಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಹವ್ಯಾಸಿ ವ್ಯಂಗ್ಯಚಿತ್ರಕಾರರಾಗಿಯೂ, ಹಲವು ಪ್ರಕಾಶನಗಳಲ್ಲಿ ಕಲಾ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಸಲೀಸಾಗಿ ಡಿಜಿಟಲ್ ರೂಪದಲ್ಲಿ ವ್ಯಂಗ್ಯಚಿತ್ರ, ವ್ಯಕ್ತಿಚಿತ್ರ, ಗ್ರಾಫಿಕ್ ಡಿಸೈನ್ ಮಾಡುತ್ತಾರೋ, ಅಷ್ಟೇ ಸಲೀಸಾಗಿ ಕೈಯಿಂದಲೂ ಚಿತ್ರ ರಚಿಸಬಲ್ಲರು. ಲೆಡ್ ಪೆನ್ಸಿಲ್, ಚಾರ್ಕೋಲ್, ಪೆನ್, ಬ್ರಷ್‌, ಜಲವರ್ಣ, ತೈಲವರ್ಣ ಹೀಗೆ ಎಲ್ಲ ಮಾಧ್ಯಮಗಳನ್ನೂ ಮತ್ತು ಬಣ್ಣಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸುವುದರಲ್ಲಿ ಇವರು ಸಿಧ್ಧಹಸ್ತರು. 

ಚಾರ್ಕೋಲ್‌ ಬಳಸಿ ಶೇಡ್‌ಗಳನ್ನುನೀಡುವುದು ಇವರ ವ್ಯಂಗ್ಯಚಿತ್ರಗಳ ವಿಶೇಷತೆ. ಇದರ ಜೊತೆಗೆ ಈ ತಲೆಮಾರಿನ ಯುವಜನರನ್ನು ಸೆಳೆಯುವ ರೀತಿಯಲ್ಲಿ ಬಣ್ಣಗಳನ್ನು ಬಳಸಿ ಆಕರ್ಷಕ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾರೆ. ಸದಾ ಕ್ರಿಯಾಶೀಲರಾಗಿರುವ ಇವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಲಾ ಪ್ರಾತ್ಯಕ್ಷಿಕೆಗಳನ್ನು ನಡೆಸುತ್ತಿದ್ದಾರೆ. ಪುಸ್ತಕಗಳ ವಿನ್ಯಾಸ, ನಿಯತಕಾಲಿಕೆಗಳು, ಬ್ರೋಚರ್‌ಗಳ ವಿನ್ಯಾಸವನ್ನೂ ಮಾಡುತ್ತಾರೆ.

ಹೀಗಾಗಿ ಇವರು ಕೇವಲ ವ್ಯಂಗ್ಯಚಿತ್ರಕಾರರಲ್ಲ. ಚಿತ್ರಕಲೆಯ ಎಲ್ಲಾ ಪ್ರಕಾರಗಳಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಇವರ ಹಲವು ವ್ಯಂಗ್ಯಚಿತ್ರಗಳು ಬರಿಯ ರೇಖೆಗಳಿಂದ ಮೂಡಿದ ಚಿತ್ರಗಳಾಗಿರುವುದಿಲ್ಲ. ಚಿತ್ರಗಳಿಗೆ ಚಾರ್ಕೋಲ್‌ನಿಂದ ಶೇಡ್‌ ನೀಡಿ, ಇನ್ನಷ್ಟು ಪರಿಣಾಮಕಾರಿಯಾಗುವಂತೆ ಮಾಡುತ್ತಾರೆ.

ಅನೇಕ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ  ಬಹುಮಾನ ಗಳಿಸಿದ ಇವರು, ಚಿತ್ರಕಲಾ ತರಗತಿಗಳನ್ನೂ ನಡೆಸುತ್ತಾರೆ. ವ್ಯಂಗ್ಯಚಿತ್ರಗಳಲ್ಲದೇ ವ್ಯಕ್ತಿಚಿತ್ರ, ಗ್ರಾಫಿಕ್ ವಿನ್ಯಾಸ, ಡಿಜಿಟಲ್‌ನಲ್ಲಿ ವ್ಯಕ್ತಿಗಳ ನೈಜ ಚಿತ್ರ ರಚನೆ ಮಾಡುತ್ತಾರೆ.  

ಈ ಪ್ರದರ್ಶನದಲ್ಲಿ ಒಟ್ಟು 60 ಕಲಾಕೃತಿಗಳು ಇವೆ. ಡಿಜಿಟಲ್‌, ಪೆನ್ಸಿಲ್‌, ಚಾರ್ಕೋಲ್‌ ಬಳಸಿ ರಚಿಸಿದ ವ್ಯಂಗ್ಯಚಿತ್ರಗಳಿವೆ. ಇದು ಗ್ಯಾಲರಿಯಲ್ಲಿ ನಡೆಯುತ್ತಿರುವ 158ನೇ ಪ್ರದರ್ಶನವಾಗಿದೆ ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಟೂನಿಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ನಾಗೇಂದ್ರ ಮಾಹಿತಿ ನೀಡಿದ್ದಾರೆ. 

ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ. ಜ.5ರಿಂದ 19, ಬೆಳಿಗ್ಗೆ 10ರಿಂದ ಸಂಜೆ 6.

v

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !