ಭಾನುವಾರ, ಅಕ್ಟೋಬರ್ 25, 2020
22 °C
ಲಾಕ್‌ಡೌನ್‌ ಅವಧಿ: ಸಮರ್ಥ ನಿರ್ವಹಣೆ

PV Web Exclusive: ಕೊರೊನಾ ಕಾಲದಲ್ಲಿ ಅರಳಿತು ಕರಕುಶಲ ಕಲೆ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

‘ಲಾಕ್‌ಡೌನ್‌ ಸಮಯದಲ್ಲಿ ತಂಗಿಯರು ಮಾಡಿದ್ದು. ಈಗ ಮನೆಯ ತುಂಬಾ ಇವುಗಳದ್ದೇ ಕಾರುಬಾರು. ಇನ್ನೂ ತುಂಬಾ ಇವೆ. ಕೆಲವನ್ನಷ್ಟನ್ನು ಹಾಕಿದೀನಿ...’ ಮುಖಪುಟದ ಗೆಳತಿಯೊಬ್ಬರು ತಮ್ಮ ಫೇಸ್‌ಬುಕ್‌ವಾಲ್‌ಅನ್ನು ತಂಗಿಯರ ಕೈಯಲ್ಲಿ ಅರಳಿದ ಕಸೂತಿ ಕಲೆಗಳಿಂದ ಅಲಂಕರಿಸಿದ್ದರು.

ಅವರಿಂದ ಅವರ ತಂಗಿಯರ ಮೊಬೈಲ್‌ ದೂರವಾಣಿ ನಂಬರ್‌ ಪಡೆದು ಫೋನಾಯಿಸಿದರೆ ಕೊರೊನಾ ಸಮಯ ಆ ಸಹೋದರಿಯರನ್ನು ಕಸೂತಿಗಾರ್ತಿಯರನ್ನಾಗಿ ಬದಲಾಯಿಸಿದ ಸಂಗತಿ ಅನಾವರಣಗೊಂಡಿತು. ಹೆಚ್ಚಿನವರಿಗೆ ಕೊರೊನಾ ಕಾಲ, ಲಾಕ್‌ಡೌನ್‌ ಇನ್ನಿಲ್ಲವೆಂಬಷ್ಟು ಸಂಕಟಗಳನ್ನು ತಂದಿಟ್ಟರೆ ಈ ಸಹೋದರಿಯರ ಪಾಲಿಗೆ ಹೊಸತನವನ್ನು ಹುಟ್ಟುಹಾಕಿತ್ತು. ಅವರಲ್ಲಿನ ಸುಪ್ತಕಲೆಗಳನ್ನು ಹೊರಹಾಕಿತ್ತು. ಇಬ್ಬರನ್ನೂ ಸೃಜನಾತ್ಮಕ ಕಲೆಗಳನ್ನು ಅನಾವರಣಗೊಳಿಸುವಲ್ಲಿ ಪ್ರೇರೇಪಿಸಿತ್ತು. ಅಕ್ಕ ಪಕ್ಕದವರಲ್ಲದೆ, ಫೇಸ್‌ಬುಕ್‌ ಮೂಲಕವೂ ಅನೇಕರು ಆ ಸಹೋದರಿಯರ ಕಲೆಗಾರಿಕೆಯನ್ನು ಮೆಚ್ಚಿಕೊಳ್ಳುವಂತೆ ಮಾಡಿತು.

ಅವರೇ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಅಳವಳ್ಳಿಯ ಸಹೋದರಿಯರಾದ ಮಾನಸಾ ಹೆಗಡೆ ಹಾಗೂ ಮೇಘನಾ ಹೆಗಡೆ. 

ಮಾನಸಾ ಸಿ.ಎ ಫೈನಲ್‌ ಪರೀಕ್ಷೆ ಬರೆಯುತ್ತಿದ್ದು, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ. ಮೇಘನಾ ಶಿರಸಿಯಲ್ಲಿ ಬಿ.ಕಾಂ ಫೈನಲ್‌ ಓದುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಊರು ಸೇರಿಕೊಂಡ ಮಾನಸಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು.  ಕೆಲಸ ಮಾಡಿ ಉಳಿದ ಸಮಯವನ್ನು ಹೇಗಪ್ಪಾ ಕಳೆಯೋದು ಎಂಬ ಆಲೋಚನೆಗೆ ಬಿದ್ದಾಗ, ಅವರಿಗೆ ನೆನಪಾಗಿದ್ದು ಕಸೂತಿ ಕಲೆ. ತಂಗಿ ಮೇಘನಾ ಕೂಡ ಸಾಥ್‌ ಕೊಟ್ಟರು. ಇಬ್ಬರೂ ಸೇರಿ ಉಲ್ಲನ್‌ ಹೆಣೆದು ಗೋಡೆಗಳನ್ನು ಅಲಂಕರಿಸಿದರು. ಬಾಗಿಲಿಗೆ ಉಲ್ಲನ್‌ ತೋರಣ ಕಟ್ಟಿದರು. ಗೋಡೆಗಳ ಮೇಲೆ ಚಿತ್ರ ಬಿಡಿಸಿದರು. ಉದ್ದದ, ಅಗಲದ, ಗೋಲಾಕಾರದ ಬಾಟಲಿ‌ಗಳ ಮೇಲೆ ಬಣ್ಣ ಬಳಿದು ಚೆಂದದ ಚಿತ್ತಾರ ಮೂಡಿಸಿದರು. ಮನೆ ಬಿಟ್ಟು ಹೊರಗೆ ಹೋಗದ ಸಮಯದಲ್ಲಿ ತಿಂದ ಶೇಂಗಾಗಳ ಸಿಪ್ಪೆಗಳನ್ನು ಜೋಡಿಸಿ, ಕಲರ್‌ಫುಲ್‌ ಕೃತಿಯಾಗಿಸಿದರು. ಮೂಲೆ ಸೇರಿದ್ದ ಕೊರಡಿನ ಮೇಲೂ ಚಿತ್ರ ಬರೆದರು. ಬಿಳಿಹಾಳೆ ಮೇಲೆ ಕಪ್ಪು ಶಾಯಿಯಿಂದ ಸುಂದರ ಕೃತಿಗಳನ್ನು ಮೂರ್ತಗೊಳಿಸಿದರು. ಒಟ್ಟಿನಲ್ಲಿ ನೋಡಿದವರು ವ್ವಾರೇವ್ಹಾ...ಕೂಸುಗಳಾ... ಎಂದು ಉದ್ಗಾರ ಹೊರಹಾಕುವಂತೆ ಮಾಡಿದರು.

ಹಾಗಾದರೆ ಅವರು ಕೊರೊನಾ ಸಮಯದ ಲಾಕ್‌ಡೌನ್‌ ಹಾಗೂ ನಂತರದ ದಿನಗಳ ವರ್ಕ್‌ ಫ್ರಂ ಹೋಂ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಂಡರು ಎಂಬುದನ್ನು ಅವರ ಮಾತಲ್ಲೇ ಕೇಳಿ.

‘ಮೊದಲೆಲ್ಲ ಕ್ರಾಫ್ಟ್‌ ಬಗ್ಗೆ ಆಸಕ್ತಿಯಿತ್ತು. ಆದರೆ ಅದನ್ನೆಲ್ಲ ಮಾಡ್ಲಿಕ್ಕೆ ಸಮಯ ಸಿಕ್ತಿರ್ಲಿಲ್ಲ. ಅದ್ರಲ್ಲೂ ಸಿ.ಎ ಓದೋದು ಅಂದರೆ ಇರೋ ಸಮಯವೇ ಸಾಲ್ತಿರ್ಲಿಲ್ಲ.  ಕೊರೊನಾ ಕಾಲದಲ್ಲಿ ಮನೇಲೇ ಇದ್ದಿದ್ರಿಂದ ಸಮಯ ಹೆಚ್ಚು ಸಿಗ್ತು. ಆ ಸಮಯವನ್ನು ಇಂಥ ಕರಕುಶಲ ಕಲೆಗೆ ಕೊಟ್ಟಾಯ್ತು. ಡ್ರಾಯಿಂಗ್‌ ಮಾಡ್ತಿದ್ವಿ. ಅದಕ್ಕೆಲ್ಲ ತಾಳ್ಮೆ ಬೇಕು. ಮನೇಲೆ ಕೂತುಕೂತು ಹೇಗೆ ಟೈಂಪಾಸ್‌ ಮಾಡ್ಬೇಕು ಅಂತಾ ಇವನ್ನೆಲ್ಲ ಮಾಡ್ತಾ ಮಾಡ್ತಾ ಅದೇ ಹವ್ಯಾಸವಾಯ್ತು. ಒಂದಷ್ಟು ಕ್ರಾಫ್ಟ್‌ ಐಡಿಯಾವನ್ನು ಇನ್‌‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿದ್ದೇವೆ. ಈಗೆಲ್ಲ ಆನ್‌ಲೈನ್‌ ಕ್ಲಾಸ್ ಇರೋದ್ರಿಂದ ಶನಿವಾರ, ಭಾನುವಾರದ ಸಮಯವನ್ನು ಬಳಸಿಕೊಂಡಿದ್ದೇವೆ. ನಾವು ಮಾಡಿದ ಕ್ರಾಫ್ಟ್‌ವರ್ಕ್‌ಗಳನ್ನು ಅಕ್ಕಪಕ್ಕದ ಮನೆಯವರು ಬಂದು ನೋಡಿ, ಮಚ್ಚಿಕೊಂಡಾಗ ಖುಷಿಯಾಗ್ತಿದೆ’ ಎನ್ನುತ್ತಾರೆ ಮಾನಸಾ ಮತ್ತು ಮೇಘನಾ.    

ಕೊರೊನಾ ಕಾಲದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲಾಗದೇ ಕೆಲವರು ಖಿನ್ನತೆಗೆ ಜಾರುತ್ತಿದ್ದಾರೆ. ಹೆಚ್ಚಿನ ಯುವಜನರು ಅತೀಯಾದ ಇಂಟರ್ನೆಟ್‌ ಚಟಕ್ಕೆ ದಾಸರಾಗುತ್ತಿದ್ದಾರೆ. ಅಂಥವರಿಗೆಲ್ಲ ಮಾನಸಾ, ಮೇಘನಾ ಮಾದರಿಯಾಗಿ ಕಾಣುತ್ತಿದ್ದಾರೆ. ಹಾಗಂತ ಎಲ್ಲರೂ ಇವರಂತೆ ಕರಕುಶಲಕಲೆಯನ್ನೇ ಮಾಡಬೇಕೆಂದೇನಿಲ್ಲ. ಅವರಿಷ್ಟದ ಯಾವುದೇ ಹವ್ಯಾಸದಲ್ಲಿ ತೊಡಗಿಕೊಳ್ಳಬಹುದು. ಒಟ್ಟಿನಲ್ಲಿ ಒಂದೊಳ್ಳೆ ಕೆಲಸಕ್ಕೆ ಸಮಯದ ಸದ್ಬಳಕೆಯಾದರೆ ನೋಡುವವರೂ ಮೆಚ್ಚಿಕೊಂಡಾರು.

 

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು