ಭಾನುವಾರ, ಆಗಸ್ಟ್ 25, 2019
21 °C

ಚರಿತ್ರೆಯ ಗಾಯ: ಡಕಾವ್

Published:
Updated:
Prajavani

ನಾವು ಜರ್ಮನಿಯಲ್ಲಿದ್ದಾಗ ಕಾಣಬಯಸಿದ್ದ ತಾಣಗಳಲ್ಲಿ ಡಕಾವ್ ಒಂದು. ಅದು ಎರಡನೇ ಮಹಾಯುದ್ಧದಲ್ಲಿ ನಾಜಿಗಳು ಸ್ಥಾಪಿಸಿದ್ದ ಯಾತನಾ ಶಿಬಿರವಿದ್ದ ಊರು. ಅಲ್ಲಿ ಲಕ್ಷಾಂತರ ಯಹೂದಿಗಳನ್ನು, ಸೆರೆಸಿಕ್ಕ ಸೈನಿಕರನ್ನು, ಲೈಂಗಿಕ ಅಲ್ಪಸಂಖ್ಯಾತರನ್ನು, ಅಲೆಮಾರಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸಲಾಯಿತು; ಗ್ಯಾಸ್ ಚೇಂಬರಿಗೂ ಸುಡುವೊಲೆಗೂ ತಳ್ಳಿ ಕೊಲ್ಲಲಾಯಿತು; ಅವರ ಶರೀರದ ಮೇಲೆ ಬಗೆಬಗೆಯ ಪ್ರಯೋಗ ಮಾಡಲಾಯಿತು. ಈ ಶಿಬಿರದಲ್ಲಿ ಸಜೀವ ದಹನವಾದವರಲ್ಲಿ ನೂರ್ ಎಂಬ ಯುವತಿಯೂ ಒಬ್ಬಳು. ಈಕೆ ಟಿಪ್ಪು ವಂಶಜ, ಸೂಫಿ ದಾರ್ಶನಿಕ ಹಜರತ್ ಇನಾಯತ್‍ಖಾನರ ಮಗಳು. ನೂರ್ ಕುರಿತು ಸಂಶೋಧನೆ ಮಾಡುತ್ತಿರುವ ಮಿತ್ರರು, ಈಕೆಯ ನೆನಪಲ್ಲಿ ನೆಡಲಾಗಿರುವ ಮರ ನೋಡಿಕೊಂಡು ಬರಲು ಹೇಳಿದ್ದರು. 

ಮ್ಯೂನಿಕ್‌ನಿಂದ ರೈಲಲ್ಲಿ ಅರ್ಧ ತಾಸು ಪಯಣ ಡಕಾವಿಗೆ. ನಿಲ್ದಾಣದಲ್ಲಿ ಇಳಿವಾಗಲೇ ವಿಷಾದ ಕವಿಯುತ್ತ ಮನಸ್ಸು ಭಾರವಾಗುತ್ತಿತ್ತು. ವಿಶಾಲ ರಸ್ತೆ, ಹಾದಿಬದಿಯ ಗಿಳಿಹಸುರಿನ ಮ್ಯಾಪಲ್ ಸಾಲುಮರ, ಹಚ್ಚನೆಯ ಹುಲ್ಲು, ಹೂಬಿಟ್ಟ ಗಿಡ-ಯಾವೂ ಶೋಕಭಾವವನ್ನು ತಗ್ಗಿಸಲಿಲ್ಲ. ಅಂಡಮಾನಿನಲ್ಲಿ ನೀಲಸಮುದ್ರ ಮತ್ತು ಹಚ್ಚನೆಯ ಕಾಡುಗಳು ಕೂಡ ಹೀಗೇ; ಕರಿನೀರಿನ ಸೆರೆಮನೆಯ ಸುತ್ತ ಹಬ್ಬಿರುವ ಕ್ರೌರ್ಯದ ನೆನಪುಗಳನ್ನು ತಿಳಿಗೊಳಿಸುವುದಿಲ್ಲ. ಡಕಾವ್ ಸ್ಮಾರಕದ ಪ್ರವೇಶದಲ್ಲಿದ್ದ ಬರಹ ನಮ್ಮ ದುಗುಡವನ್ನು ಮತ್ತಷ್ಟು ಗಾಢಗೊಳಿಸಿತು.

‘ಇದು ಸಹಸ್ರಾರು ಜನ ನರಳಿದ ಹಾಗೂ 41,500 ಜನ ಕೊಲೆಯಾದವರ ಸ್ಮಾರಕ; ಶೋಕತಪ್ತ ನೆನಪಿನ ತಾಣ. ಈ ಶಿಕ್ಷಾಶಿಬಿರದ ಹೆಸರನ್ನು ಜರ್ಮನಿ ಚರಿತ್ರೆಯಿಂದ ಅಳಿಸಲಾಗದು. ನಾಜಿಗಳು ಮಾಡಿದ ಅಪರಾಧವನ್ನು ದೃಢೀಕರಿಸಲು, ಕೈದಿಗಳ ನರಳಿಕೆ ದಾಖಲಿಸಲು, ಮುಂಬರುವ ತಲೆಮಾರುಗಳಿಗೆ ಇಂಥದ್ದು ಮತ್ತೆಂದೂ ಆಗದಂತೆ ಪ್ರೇರಣೆ ಕೊಡಲು, ಚರಿತ್ರೆಯ ತಿಳಿವಳಿಕೆಯಾಗಿ ದಾಖಲಿಸಲು ಇದನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ಜನಾಂಗವಾದಿ ಸಿದ್ಧಾಂತದ ಚಿಹ್ನೆ ಬಾವುಟ ಬಟ್ಟೆ ಧರಿಸಿ ಬರಬಾರದು; ಬಣ್ಣಧರ್ಮ ದೇಶದ ಆಧಾರದಲ್ಲಿ ತರತಮ ಮಾಡಬಾರದು. ಶಾಂತವಾಗಿದ್ದು ಮೃತರ ಘನತೆಯನ್ನು ಕಾಪಾಡಬೇಕು. ಪ್ರಜಾಪ್ರಭುತ್ವ ವಿರೋಧಿ, ಜನಾಂಗವಾದಿ ಹಾಗೂ ಸೆಮೆಟಿಕ್ ಧರ್ಮ ವಿರೋಧಿ ಸಂಘಟನೆಗಳಿಗೆ ಪ್ರವೇಶ ನಿರಾಕರಿಸುವ ಹಕ್ಕನ್ನು ಸ್ಮಾರಕ ಟ್ರಸ್ಟು ಇರಿಸಿಕೊಂಡಿದೆ.’

ಡಕಾವ್ ಶಿಬಿರದ ಈ ಜಾಗ, ಮಹಾಯುದ್ಧದ ಬಳಿಕ ಎರಡು ದಶಕ ನಿರ್ಜನವಾಗಿ ಪಾಳುಬಿದ್ದಿತ್ತು. ಡಕಾವ್ ಸ್ಮಾರಕ ಪ್ರತಿಷ್ಠಾನವು 1965ರಲ್ಲಿ ಇದನ್ನು ಮರುಕಟ್ಟಿತು. ಶಿಬಿರದೊಳಕ್ಕೆ ‘ಕೆಲಸವು ಸ್ವಾತಂತ್ರ್ಯ ಕೊಡುತ್ತದೆ’ ಎಂಬ ಸಲಾಕಿ ಬರಹವುಳ್ಳ ಕಬ್ಬಿಣದ ಗೇಟಿನ ಮೂಲಕ ಪ್ರವೇಶ. ಇದು ನಾಜಿಗಳು ಕೈದಿಗಳಿಂದ ಕಠಿಣ ಕೆಲಸ ತೆಗೆಸಲು ಬರೆಸಿದ್ದ ಸಂದೇಶ. ನೂರಾರು ಎಕರೆಯಷ್ಟು ಪ್ರದೇಶದಲ್ಲಿ ಹರಡಿರುವ ಈ ಸ್ಮಾರಕದಲ್ಲಿ, ಕೈದಿಗಳನ್ನು ಕೂಡುದೊಡ್ಡಿಗಳಲ್ಲಿ ಮಲಗಿಸುತ್ತಿದ್ದ ಡಾರ್ಮಿಟರಿಗಳಿವೆ; ಸುಡುತ್ತಿದ್ದ ಚಿತಾಗಾರಗಳಿವೆ; ಸುಡಲು ಕಲ್ಲಿದ್ದಲು ಸಿಗದಾಗ ಕಸದಂತೆ ಹುಗಿದ ಸಾಮೂಹಿಕ ಗೋರಿಗಳಿವೆ; ಆದರೆ, ದಟ್ಟಕಾಡಿನಲ್ಲಿ ನೂರ್ ಸ್ಮಾರಕ ವೃಕ್ಷ ಎಲ್ಲೂ ಗೋಚರಿಸಲಿಲ್ಲ. 

ಆಕಸ್ಮಿಕವೆಂಬಂತೆ ನಮ್ಮ ಸುತ್ತಾಟ ಶುರುವಾಗಿದ್ದು ಮ್ಯೂನಿಕ್ ನಗರದ ಮೂಲಕ. ಅದರಲ್ಲೂ ಹಿಟ್ಲರ್ ಭಾಷಣ ಮಾಡಿ ಜನರನ್ನು ಹುರಿದುಂಬಿಸುತ್ತಿದ್ದ ಓಡಿಯನ್‍ಪ್ಲಾಸ್ ಚೌಕದಿಂದ. ಮ್ಯೂನಿಕನ್ನು ಆತ ಚಳವಳಿಗಳ ರಾಜಧಾನಿ ಎಂದು ಕರೆಯುತ್ತಿದ್ದ. ಧಾರವಾಡ ಮೈಸೂರುಗಳಂತೆ ಸಾಂಸ್ಕೃತಿಕ ಚಟುವಟಿಕೆಗಳ ನೆಲೆಯಾದ ಮ್ಯೂನಿಕ್ಕಿನಲ್ಲೇ ನಾಜಿ ಸಿದ್ಧಾಂತ ರೂಪುಗೊಂಡಿತು. 1919ರಲ್ಲಿ ಹಿಟ್ಲರ್ ಜರ್ಮನ್ ಕಾರ್ಮಿಕರ ಪಕ್ಷವನ್ನು ಇಲ್ಲಿ ಸ್ಥಾಪಿಸಿದ. ಹೀಗಾಗಿ ಊರು ನಾಜಿ ನೆನಪಿನ ಕಟ್ಟಡಗಳಿಂದ ತುಂಬಿದೆ.

ಮ್ಯೂನಿಕ್ಕಿನ ವಾಕಿಂಗ್ ಟೂರಿನ ಗೈಡ್ ಜೇಕ್, ಇಂಥ ಕಟ್ಟಡಗಳು ಬಂದಾಗೆಲ್ಲ ಸೂಕ್ಷ್ಮವಾಗಿ ತಪ್ಪಿಸಿಕೊಳ್ಳುತ್ತಿದ್ದ. ವಿವರಣೆ ಸೌಮ್ಯಗೊಳಿಸುತ್ತಿದ್ದ. ಕೆದಕಿದರೆ, ನಾಟಕೀಯ ಭಂಗಿಯಲ್ಲಿ ‘ನೋಡಿ, ನಾನು ಅಮೆರಿಕನ್. ಜರ್ಮನ್ ಹುಡುಗಿಯನ್ನು ಮದುವೆಯಾಗಿದ್ದೇನೆ. ಹೆಚ್ಚು ಹೇಳಲಾರೆ. ನೀವೇ ಊಹಿಸಿಕೊಳ್ಳಿ’ ಎಂದು ಮಾರ್ಮಿಕವಾಗಿ ನಗುತ್ತಿದ್ದ. ಮಹಾಯುದ್ಧದಲ್ಲಿ ಅಮೆರಿಕ, ಜರ್ಮನಿಗೆ ಎದುರಾಳಿಯಾಗಿತ್ತು. ವೈಮಾನಿಕ ದಾಳಿ ಮಾಡಿ ಡಕಾವ್ ಕ್ಯಾಂಪಿನಿಂದ ಕೈದಿಗಳನ್ನು ಬಿಡಿಸಿತು. ಚರಿತ್ರೆಯ ಸತ್ಯ ಹೇಳಲು ಇರುವ ವಿಚಿತ್ರ ಇಕ್ಕಟ್ಟಿನ ಪ್ರತಿನಿಧಿಯಂತಿದ್ದ ಜೇಕ್.

ಆದರೆ, ಗೈಡುಗಳು ಹೇಳಲಾರದ ಕಹಿಸತ್ಯಗಳನ್ನು ನಾಜಿಗಳ ಕೈಯಲ್ಲಿ ನಲುಗಿದ ನೂರಾರು ಜನ ದಾಖಲಿಸಿದರು. ಇವರ ದಿನಚರಿ ಹಾಗೂ ಪುಸ್ತಕಗಳು ಜಗತ್ತಿನ ವಿವಿಧ ಭಾಷೆಗಳಲ್ಲಿ ಪ್ರಕಟವಾಗಿದ್ದು, ಡಕಾವ್ ಕ್ಯಾಂಪಿನ ಪುಸ್ತಕದಂಗಡಿಯಲ್ಲಿವೆ. ಅವುಗಳಲ್ಲಿ ಎಳೆಬಾಲೆ ಅನ್ನೆ ಫ್ರಾಂಕಾಳ ಮನಕಲಕುವ ದಿನಚರಿಯೂ ಒಂದು. ನಾಜಿಗಳನ್ನು ವಿರೋಧಿಸಿದವರಲ್ಲಿ ಜರ್ಮನರೂ ಇದ್ದರು. ಹೀಗಾಗಿ 20ನೇ ಶತಮಾನದ ಜರ್ಮನ್ ಸಾಹಿತ್ಯವು ನೆತ್ತರಲ್ಲಿ ನೆಂದ ಹೂವೇ. ಯುದ್ಧ, ಚಳಿ, ಹಸಿವು, ಕ್ರೌರ್ಯದ ಘಟನೆಗಳಿಂದ ತುಂಬಿಹೋಗಿರುವ ಅದು, ನಮ್ಮ ದೇಶ ವಿಭಜನೆಯ ಸಾಹಿತ್ಯವನ್ನೇ ನೆನಪಿಸುತ್ತದೆ.

 ಕನ್ನಡದಲ್ಲಿ ‘ನಾ ಕಂಡ ಜರ್ಮನಿ’ ಪ್ರವಾಸ ಕಥನವಿದೆ: ಇದರ ಲೇಖಕ ಜರ್ಮನಿಯ ರೈಲ್ವೆ ಕಾರ್ಖಾನೆಗಳಲ್ಲಿ ಎಂಜಿನಿಯರ್ ಆಗಿ ಕಲಿಯಲು ಹೋಗಿದ್ದ ಹೊ.ವೆ. ಶ್ರೀನಿವಾಸಯ್ಯ; ಗಾಂಧಿಭವನದ ಅಧ್ಯಕ್ಷರಾಗಿದ್ದವರು. ಅವರು ಹೋಗಿದ್ದು ಯುದ್ಧಾನಂತರ ವರ್ಷಗಳಲ್ಲಿ. ಅದು ಜರ್ಮನರು ಪರಿತಾಪದಲ್ಲಿ ಬೇಯುತ್ತಿದ್ದ ಕಾಲ. ‘ನಮಗೆ ಯುದ್ಧದಿಂದ ಸಾಕಾಗಿದೆ. ಗಾಂಧಿ, ನೆಹರೂರಂಥ ನಾಯಕರು ನಮಗೆ ಅಗತ್ಯವಿದೆ’ ಎಂದು ಅವರು ಹೇಳಿದ್ದನ್ನು ಲೇಖಕರು ದಾಖಲಿಸಿತ್ತಾರೆ.

ಸೋಜಿಗವೆಂದರೆ ಅವರು ನಾಜಿ ಹತ್ಯೆಗಳ ಬಗ್ಗೆ ಏನೂ ಹೇಳುವುದಿಲ್ಲ. ಹಾಗೆ ಕಂಡರೆ, ಗಾಂಧಿ ಹಿಟ್ಲರನ ವಿರುದ್ಧದ ಕದನದಲ್ಲಿ ಬ್ರಿಟಿಷರನ್ನು ಭಾರತೀಯರು ಬೆಂಬಲಿಸಬೇಕೆಂದು ಕರೆಗೊಟ್ಟಿದ್ದರು. ಪಾಪಪ್ರಜ್ಞೆಯಲ್ಲಿರುವ ಜರ್ಮನರ ಜತೆ ಈ ವಿಷಯವನ್ನು ಮುಕ್ತವಾಗಿ ಚರ್ಚಿಸಲು ಲೇಖಕರು ಹಿಂಜರಿದಿರಬಹುದು. ಆದರೆ, ಅವರ ಮೌನ ಅರ್ಥವಾಗುವುದಿಲ್ಲ. ಇದು ಪಂಜಾಬಿನ ಚರಿತ್ರೆ ಬರೆದು ಜಲಿಯನ್‍ ವಾಲಾಬಾಗ್ ಬಗ್ಗೆ ಏನೂ ಹೇಳದಂತೆ. 

ಡಕಾವ್ ನೋಡಲು ಜರ್ಮನರು ಹೋಗುತ್ತಾರೆಯೇ? ಅವರಿಗೆ ಏನನಿಸಬಹುದು? ಯುದ್ಧ, ಸೋಲು, ದೇಶ ವಿಭಜನೆ, ಏಕೀಕರಣಗಳ ನೆನಪು  ಕಾಡುತ್ತಿರಬಹುದೇ? ನನಗೆ ಕುತೂಹಲವಿತ್ತು. ಆದರೆ, ಆತಿಥೇಯರಾಗಿದ್ದ ದೀಪು- ಗೌರಿ, ಈ ಬಗ್ಗೆ ಚರ್ಚಿಸಲು ಜರ್ಮನ್ನರು ಇಷ್ಟಪಡುವುದಿಲ್ಲ ಎಂದು ಎಚ್ಚರಿಸಿದರು. ಭೂತಾನದಲ್ಲಿ ಪರ್ವತಗಳಲ್ಲಿ ಚಾರಣ ಮಾಡುವಾಗ ಭೇಟಿಯಾದ ಜರ್ಮನ್ ದಂಪತಿಯ ನೆನಪಾಗುತ್ತಿದೆ. ‘ಚರಿತ್ರೆಯ ಈ ಭಾರವನ್ನು ನೀವು ಹೇಗೆ ಹೊರುತ್ತಿದ್ದೀರಿ. ಇಲ್ಲವಾದರೆ ಅದರಿಂದ ಹೇಗೆ ಬಿಡುಗಡೆ ಪಡೆದಿದ್ದೀರಿ’ ಎಂದು ನಾನು ಕೇಳಿದೆ. ‘ಕಹಿಯಾದ ಘಟನೆ ಅದು. ತಪ್ಪೆಂದು ಒಪ್ಪಿಕೊಂಡಿದ್ದೇವೆ. ಆದರೆ ಅದಕ್ಕಾಗಿ ಈಗಿನವರು ಬೆಲೆ ತೆರಬೇಕು ಎಂಬುದನ್ನು ಒಪ್ಪುವುದಿಲ್ಲ. ಚರಿತ್ರೆಯ ತಪ್ಪನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ಅದನ್ನು ಮಾಡಿದ್ದೇವೆ’ ಎಂದ ಅವರ ಉತ್ತರ ಪ್ರಾಮಾಣಿಕವಾಗಿತ್ತು.

ನಾನು ಮತ್ತು ಮಿತ್ರ ಬೂದಾಳ್, ಲುಡ್‍ವಿಕ್ ವಿಶ್ವವಿದ್ಯಾಲಯದ ಪೌರ್ವಾತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರೂ ಕನ್ನಡ ವಿದ್ವಾಂಸರೂ ಆಗಿರುವ ಜೊಯ್ದೆನ್ ಬೋಸರ ಜತೆ ಮಾತಾಡುತ್ತಾ ಈ ವಿಷಯ ಪ್ರಸ್ತಾಪಿಸಿದೆವು. ಜೊಯ್ದೆನ್ ಹೇಳಿದರು: ‘ಯುದ್ಧಾನಂತರ ಜರ್ಮನಿ ಜಗತ್ತಿನ ನಿಂದೆಯ ವಸ್ತುವಾಗಿತ್ತು. ನಾವು ತಪ್ಪು ಮಾಡಿದೆವು ಎಂದು ಅವರಾದರೂ ಬಹಳಷ್ಟು ಪರಿತಪಿಸಿದರು. ಅವರ ಆತ್ಮವಿಶ್ವಾಸ ಕುಸಿದುಹೋಗಿತ್ತು. ಹಿಟ್ಲರ್ ಕೆಟ್ಟ ಕನಸಾಗಿದ್ದನು. ಅವರು ತಮ್ಮ ಸಮಸ್ತ ಕಳೆದುಕೊಂಡಿದ್ದರು. ಗೆದ್ದ ದೇಶಗಳು ದೇಶವನ್ನು ಹರಿದು ಹಂಚಿಕೊಂಡಿದ್ದವು. ಆದರೆ ಒಂದು ಘಟ್ಟದ ನಂತರ ಅವರು ಈ ದುಃಸ್ವಪ್ನವನ್ನು ದೇಶವನ್ನು ಕಟ್ಟುವ ಮೂಲಕ ಮರೆಯಲು ನಿರ್ಧರಿಸಿದರು.’

ಪ್ರತಿ ದೇಶದ ಗತದಲ್ಲೂ ಕಹಿಯಾದ ಘಟನೆ ಜರುಗಿರುತ್ತದೆ. ಅದರ ದೋಷವನ್ನು ವರ್ತಮಾನವು ಮುಖಾಮುಖಿಯಾಗುವ ಪರಿಯೆಂದರೆ, ಅದು ಪುನರುಕ್ತವಾದಂತೆ ಎಚ್ಚರವಹಿಸುವುದೇ. ಜರ್ಮನರು ಡಕಾವ್ ಕ್ಯಾಂಪನ್ನು ನೆಲಸಮಗೊಳಿಸಿ ಹೊಲ ಮಾಡಬಹುದಿತ್ತು. ಆದರೆ, ತಮ್ಮ ಹಿರೀಕರ ದುಷ್ಕೃತ್ಯಗಳನ್ನು ತಮಗೂ ಲೋಕಕ್ಕೂ ಪಾಠವಾಗಿ ಕಾಡಲಿ ಎಂಬಂತೆ ಅವರು ಸ್ಮಾರಕಗೊಳಿಸಿದರು. ಇದೊಂದು ಧೀರ ನಡೆ.

ಧರ್ಮ, ಜನಾಂಗ, ಬಣ್ಣ, ಭಾಷೆಗಳ ಮೇಲೆ ದ್ವೇಷ- ಹಿಂಸೆಯ ನೆಲೆಯಲ್ಲಿ ರೂಪುಗೊಳ್ಳುವ ಯಾವುದೇ ರಾಷ್ಟ್ರೀಯವಾದಿ ಸಿದ್ಧಾಂತಗಳು ಗೆಲುವು ಗಳಿಸಬಹುದು. ಆದರದು ಕಾಯಂ ಅಲ್ಲ. ನೈತಿಕವಾಗಿ ಉನ್ನತವೂ ಅಲ್ಲ. ಅವು ಹೂಡುವ ಯುದ್ಧಗಳಲ್ಲಿ ಸ್ವಂತ ಮನೆಯನ್ನೂ ಭಗ್ನಗೊಳಿಸುತ್ತವೆ. ನಾಜಿಗಳ ಯುದ್ಧೋತ್ಸಾಹದ ಪರಿಣಾಮ ಜರ್ಮನರ ಉದ್ದಿಮೆ, ಬೇಸಾಯ, ಪಶುಪಾಲನೆಗಳು ನಾಶವಾದವು.

ಯುದ್ಧ ಸಂಸ್ಕೃತಿಗಳು ಸಾಮಾನ್ಯವಾಗಿ ಪುರುಷವಾದಿ ಆಗಿರುತ್ತವೆ. ಅವು ಮಹಿಳೆಯರನ್ನು ಸಾರ್ವಜನಿಕ ಬದುಕಿನಿಂದ ಹೊರತಳ್ಳಿ ಮನೆಗೆ ಸೀಮಿತಗೊಳಿಸುತ್ತವೆ. ಜರ್ಮನರು ಯುದ್ಧದ ಗಾಯಗಳನ್ನು ಮರೆತಿದ್ದು ಜನಾಂಗ ದ್ವೇಷವಿಲ್ಲದ ಸಮಾಜವನ್ನು ಕಟ್ಟುವ ಮೂಲಕ. ಅದನ್ನು ನಾವು ಕಣ್ಣಾರೆ ಕಂಡೆವು. ಜರ್ಮನಿ ಆರ್ಥಿಕವಾಗಿ ಮಾತ್ರ ಬೆಳೆಯಲಿಲ್ಲ. ಮನುಷ್ಯ ಸಂಬಂಧಗಳ ವಿಷಯದಲ್ಲಿ ಕೂಡ ಪ್ರಬುದ್ಧವಾಗಿದೆ. ಅಲ್ಲೀಗ ವಲಸಿಗರನ್ನು ಉದಾರವಾಗಿ ಸ್ವೀಕರಿಸುವ ನೀತಿಯಿದೆ. ಸ್ತ್ರೀಯರು ಸಾರ್ವಜನಿಕ ಬದುಕಿನಲ್ಲಿ ಸಮಾನ ಸ್ಥಾನ ಪಡೆದಿರುವರು. ಚಾನ್ಸೆಲರ್ ಆಗಿರುವ ಏಂಜೆಲಾ ಮರ್ಕೆಲ್ ಎಂಬ ಧೀಮಂತ ಮಹಿಳೆ, ಎರಡನೇ ಸಲ ಆಯ್ಕೆಯಾಗಿದ್ದಾರೆ. ಇದು ನಾಜಿಗಳನ್ನು ಜರ್ಮನರು ಸೋಲಿಸಿದ ಬಗೆ.

ಡಕಾವ್ ಕ್ಯಾಂಪಿನಲ್ಲಿ ಮನ ಕದಡುವ ನೂರಾರು ಬಗೆಯ ಚಿತ್ರಗಳಿವೆ. ಅವುಗಳಲ್ಲಿ ಒಂದು ಗಾಢವಾಗಿ ಕಾಡುತ್ತಿದೆ. ಸಾವನ್ನು ಎದುರು ನೋಡುತ್ತಿರುವ ಕೈದಿಗಳು, ಒಟ್ಟಾಗಿ ಹಾಡುತ್ತಿರುವ ದೃಶ್ಯವದು. ಡಕಾವ್ ಕೇವಲ ನೋವಿನ ಚೀತ್ಕಾರಗಳನ್ನು ಹೊರಡಿಸಿದ ಶಿಬಿರವಲ್ಲ; ಭೀತಿಹಿಂಸೆಯ ಎದುರು ಚಿತ್ರ– ಹಾಡು– ಕಾವ್ಯವನ್ನು ಹುಟ್ಟಿಸಿದ ಜಾಗ ಕೂಡ. ಪೋಲಿಶ್ ಕವಿ ಸ್ಟಾನಿಸ್ಲಾ ‘ಡೈರಿ ಆಫ್ ಲವ್’ ಸಂಕಲನದ ಕವನಗಳನ್ನು ರಚಿಸಿದ್ದು ಇಲ್ಲೇ. ಅಧಿಕಾರಸ್ಥರು ಹುಟ್ಟಿಸುವ ಕ್ರೌರ್ಯವನ್ನು ಕಲೆ ಮತ್ತು ಮನುಷ್ಯತ್ವಗಳು ನೈತಿಕವಾಗಿ ಮುಖಾಮುಖಿ ಮಾಡುವ ಅಪೂರ್ವ ವಿಧಾನವಿದು. 

ಡಕಾವ್ ಚಿತ್ರಪ್ರದರ್ಶನ ನೋಡಿ ನಿಡಿದಾದ ನಿಟ್ಟುಸಿರನ್ನು ಬಿಡುತ್ತ ಹೊರಬಂದರೆ, ಭಿತ್ತಿಯ ಮೇಲೆ ಹಲವು ನುಡಿಗಳಲ್ಲಿ ಕೆತ್ತಿದ ಸಂದೇಶವೊಂದು ಕಾಣುತ್ತದೆ: ‘ನೆವರ್ ಎಗೈನ್’. ದಿಟ, ಇಂಥದ್ದು ಯಾವ ನಾಡಲ್ಲೂ ಸಂಭವಿಸಬಾರದು. ಆದರೆ, ಜಗತ್ತಿನಾದ್ಯಂತ ಧರ್ಮ, ಜನಾಂಗಗಳ ಆಧಾರದಲ್ಲಿ ದೇಶ ಕಟ್ಟುವ ಬಲಪಂಥೀಯರೇ ಗೆದ್ದು ಅಧಿಕಾರ ಹಿಡಿಯುತ್ತಿರುವ ವಿದ್ಯಮಾನಗಳು ಘಟಿಸುತ್ತಿವೆ. ಜರ್ಮನಿಯಲ್ಲಿ ಸಣ್ಣದಾಗಿ ನಿಯೋನಾಜಿ ಚಳವಳಿ ಮತ್ತೆ ಶುರುವಾಗಿದೆ. ಈ ವಿದ್ಯಮಾನಗಳ ವ್ಯಂಗ್ಯವೆಂದರೆ, ನಾಜಿ ಕ್ರೌರ್ಯದ ಬಲಿಪಶುಗಳಾಗಿದ್ದ ಯಹೂದಿಗಳು, ಇಸ್ರೇಲ್‌ನಲ್ಲಿ ಪ್ಯಾಲೆಸ್ತೇನಿಯರ ನೆಲವನ್ನು ಕಿತ್ತುಕೊಂಡು ಕಿರುಕುಳ ಕೊಡುತ್ತಿರುವುದು. ಇದನ್ನು ಜೆರುಸಲೇಮಿನಲ್ಲಿದ್ದಾಗ ನಾವು ಕಂಡೆವು. ಈಚೆಗೆ ಇಸ್ರೇಲ್‌ನಲ್ಲಿ ಒಂದು ಮೆರವಣಿಗೆ ನಡೆಯಿತು. ಅದರಲ್ಲಿ ‘ಕಿಲ್‍ದೆಮ್‘ ಎಂಬ ಪ್ಲಕಾರ್ಡುಗಳಿದ್ದವು. ಇತಿಹಾಸದಿಂದ ಮನುಷ್ಯರು ಪಾಠ ಕಲಿಯುತ್ತಾರೆ ಎನ್ನುವುದು ನಿಜವೇ? 

Post Comments (+)