ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾತ್ರೇಯ ಅವಧೂತಗುರು

Last Updated 6 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಭಾರತೀಯ ಅಧ್ಯಾತ್ಮಪರಂಪರೆಯಲ್ಲಿ ದತ್ತಾತ್ರೇಯನ ಕಲ್ಪನೆ ವಿಶಿಷ್ಟವಾಗಿದೆ.

ದತ್ತಾತ್ರೇಯ ಅವಧೂತ; ಅವಧೂತರಿಗೇ ಪರಮಗುರು. ಅವಧೂತ ಎಂದರೆ ಯಾರು? ಆನಂದದ, ಜ್ಞಾನದ, ಶಾಂತಸ್ಥಿತಿಯ ಮೂರ್ತರೂಪದಲ್ಲಿ ಕಾಣಿಸಿಕೊಳ್ಳುವವರೇ ಅವಧೂತರು.

ಅತ್ರಿಮುನಿಯ ತಪ್ಪಸ್ಸಿಗೆ ಒಲಿದು ಅವನಿಗೆ ತನ್ನನ್ನು ತಾನೇ ಕೊಟ್ಟುಕೊಂಡವನು ‘ದತ್ತಾತ್ರೇಯ.’ ಇಲ್ಲಿ ಮತ್ತೂ ಒಂದು ಅರ್ಥವನ್ನು ಕಾಣಬಹುದು. ಭಗವಂತನ ಸ್ವಭಾವವೇ ಆನಂದ, ಜ್ಞಾನ. ತಪಸ್ಸಿನಲ್ಲಿ ನಿರತರಾದವರಿಗೆ ತನ್ನತನವನ್ನು ತಾನೇ ದಾನವಾಗಿ ಕೊಡುವ ಅವನ ಔದಾರ್ಯದ ಸಂಕೇತ ತತ್ತ್ವವೇ ‘ದತ್ತಾತ್ರೇಯ.’

ದತ್ತಾತ್ರೇಯನನ್ನು ‘ದಿಗಂಬರ’ ಎಂದೂ ಬಣ್ಣಿಸುವುದುಂಟು. ಈ ಪದದ ಅರ್ಥವ್ಯಾಪ್ತಿ ವಿಶಾಲವಾದುದು. ದಿಕ್ಕುಗಳನ್ನೇ ಬಟ್ಟೆಯನ್ನಾಗಿ ಧರಿಸಿದವನು ದತ್ತಾತ್ರೇಯ – ಎಂದರೆ ಅವನು ವಿಶ್ವವ್ಯಾಪಕ ಎಂದು ತಾತ್ಪರ್ಯ.

ಪ್ರಪಂಚದಲ್ಲಿದ್ದೂ ಪ್ರಪಂಚಭಾವದಿಂದ ವಿಮುಕ್ತನಾಗಿ ಜ್ಞಾನದ ನೆಲೆಯನ್ನು ಕಂಡುಕೊಂದು, ಸದಾ ಆನಂದದಲ್ಲಿರುವವನೇ ಅವಧೂತ. ಇಂಥ ಅವಧೂತಗುರು ದತ್ತಾತ್ರೇಯ.

ಎಲ್ಲ ರೀತಿಯ ಆಸೆಯ ವಾಸನೆಗಳಿಂದ ದೂರವಾದವನು ಅವಧೂತ. ಅವನಲ್ಲಿ ಯಾವ ದೋಷವೂ ಗೊಂದಲವೂ ಉದ್ವೇಗವೂ ಇರದು. ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಈ ಕ್ಷಣದಲ್ಲಿ ಅವನು ಬದುಕುತ್ತಿರುತ್ತಾನೆ. ಲೋಕವ್ಯವಹಾರದ ಯಾವುದೇ ಅಳತೆಗೋಲಿಗೂ ಅವನು ಸಿಗುವುದಿಲ್ಲ. ಜ್ಞಾನಿಯಾಗಿ, ಹುಚ್ಚನಾಗಿ, ಮಗುವಿನಂತೆ – ಯಾವ ಸ್ವರೂಪದಲ್ಲೂ ಅವನು ಕಾಣಿಸಿಕೊಳ್ಳಬಹುದು. ಆನಂದವೊಂದೇ ಅವನ ದಿಟವಾದ ಸ್ವಭಾವ–ಸ್ವರೂಪವಾಗಿರುತ್ತದೆಯೇ ಹೊರತು, ಹೊರಗಿನ ವಿವರಗಳಿಂದ ಅವನನ್ನು ಅಳೆಯಲು ಆಗದು. ಹೀಗೆ ಲೋಕೋತ್ತರ ತತ್ತ್ವದ ಮೂರ್ತರೂಪವೇ ದತ್ತಾತ್ರೇಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT