ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ದೇವತೆಗಳು

Last Updated 17 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ನಗರದ ಶಕ್ತಿ ದೇವಿಗಳು ನೆಲೆಸಿರುವ ದೇವಾಲಯಗಳಲ್ಲಿ ಅಕ್ಟೋಬರ್‌ 9ರಿಂದ ನವರಾತ್ರಿ ಹಬ್ಬದ ಪ್ರಯುಕ್ತ ನಿತ್ಯ ವಿಶೇಷ ಪೂಜೆ, ಹೋಮ, ಹವನ, ಅಲಂಕಾರಗಳು ನಡೆಯುತ್ತಿವೆ. ದೇವಿಯರಿಗೆ ನಿತ್ಯವೂ ಒಂದೊಂದು ಅಲಂಕಾರಗಳನ್ನು ಮಾಡಿ ಪೂಜಿಸಿ ಆರಾಧಿಸಲಾಗುತ್ತಿದೆ. ಅಲ್ಲದೆ ಭಜನೆ, ಸತ್ಸಂಗ, ಹರಿಕಥೆ, ನೃತ್ಯ, ಗಾಯನ ಕಾರ್ಯಕ್ರಮಗಳು ನಡೆಯುತ್ತಿವೆ.

ನಗರದಲ್ಲಿ ಶತಮಾನಗಳಷ್ಟು ಹಳೆಯ ದೇವಾಲಯಗಳಿಂದ ಇತ್ತೀಚೆಗೆ ನಿರ್ಮಾಣವಾಗಿರುವ ಹಲವಾರು ದೇವಾಲಯಗಳಿವೆ. ಅಲ್ಲೆಲ್ಲ ದಸರಾ ಉತ್ಸವವನ್ನು ವೈಭವದಿಂದ ನೆರವೇರಿಸಲಾಗುತ್ತಿದೆ. ಇದೇ 18ರಂದು ಆಯುಧ ಪೂಜೆ ಮತ್ತು ಇದೇ 19ರಂದು ವಿಜಯ ದಶಮಿಯನ್ನೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಗರದ ಪ್ರಮುಖ ದೇವಾಲಯಗಳ ಪರಿಚಯ ಇಲ್ಲಿದೆ.

ಅಣ್ಣಮ್ಮದೇವಿ:

ಬೆಂಗಳೂರಿನಲ್ಲಿ ಅತ್ಯಂತ ಹಳೆಯ ದೇವಿ ದೇವಾಲಯಗಳಲ್ಲಿ ಗಾಂಧಿನಗರದ ಗ್ರಾಮದೇವತೆ ಅಣ್ಣಮ್ಮದೇವಿ ದೇವಾಲಯವೂ ಒಂದು. ಸುಮಾರು 10ನೇ ಶತಮಾನದ ಈ ದೇವಾಲಯದಲ್ಲಿ ಆಯತಾಕಾರದ ಗರ್ಭಗೃಹವಿದ್ದು, ಗರ್ಭ ಗೃಹದ ನಡುವೆ ಉದ್ದವಾದ ಪೀಠದ ಮೇಲೆ ಸಪ್ತಮಾತೃಕೆಯರ ಪ್ರತೀಕವಾಗಿ ಏಳು ಸಣ್ಣ ಕಲ್ಲುಗಳನ್ನು ಸ್ಥಾಪಿಸಲಾಗಿದೆ.

ಎರಡು ದೇವಿಶಿಲ್ಪಗಳಿದ್ದು ಚತುರ್ಭುಜೆಯಾದ ದೇವಿಯ ಕೈಗಳಲ್ಲಿ ಖಡ್ಗ, ತ್ರಿಶೂಲ, ಡಮರು ಮತ್ತು ಪಾನಪಾತ್ರೆಗಳಿಗೆ. ಗರ್ಭಗೃಹದ ಮುಂದಿನ ನವರಂಗ, ಮುಖಮಂಟಪದ ಮುಂಭಾಗಗಳು ಆ ನಂತರದ ಸೇರ್ಪಡೆಗಳಾಗಿವೆ. ಈ ದೇವಾಲಯ ಹಲವು ಬಾರಿ ಜೀರ್ಣೋದ್ಧಾರಗೊಂಡಿದೆ. ಈ ದೇವಾಲಯದಲ್ಲಿ ದೇವಿಯ ಕಂಚಿನ ಹಲವು ಮೂರ್ತಿಗಳಿದ್ದು ನಗರದ ನಾನಾ ಕಡೆ ದೇವಿಯನ್ನು ಪೂಜೆಗೆ ಕೊಂಡೊಯ್ಯುತ್ತಾರೆ. ಚೈತ್ರ, ವೈಶಾಖ ಮಾಸಗಳಲ್ಲಿ ದೇವಿಗೆ ವಿಶೇಷ ಪೂಜೆಗಳು ಸಲ್ಲುತ್ತವೆ.

**

ಸರ್ಕಲ್‌ ಮಾರಮ್ಮ

ಮಲ್ಲೇಶ್ವರ ಬಡಾವಣೆಯ 18ನೇ ಕ್ರಾಸ್‌ನಲ್ಲಿರುವ ಸರ್ಕಲ್‌ ಮಾರಮ್ಮ ದೇವಾಲಯದಲ್ಲಿನ ಅಣ್ಣಮ್ಮ ದೇವಿ, ಮಾರಮ್ಮ ದೇವಿಯವರಿಗೆ ನಗರದ ಎಲ್ಲೆಡೆ ಭಕ್ತರಿದ್ದಾರೆ. ಹಿಂದೆ ಇಲ್ಲಿ ರಸ್ತೆಗೆದುರಾಗಿದ್ದ ಅರಳಿಕಟ್ಟೆಯ ಬಳಿ ಚಿಕ್ಕದಾಗಿದ್ದ ಗುಡಿಯೊಳಗೆ ದೇವಿಯ ಮುಖ ಮತ್ತು ಎರಡು ತ್ರಿಕೋನಾಕಾರದ ಕಲ್ಲುಗಳನ್ನು ಇರಿಸಿ ಪೂಜಿಸಲಾಗುತ್ತಿತ್ತು. ನಂತರ ಮತ್ತೊಂದು ಗರ್ಭಗೃಹವನ್ನು ನಿರ್ಮಿಸಲಾಗಿದ್ದು, ಗರ್ಭಗೃಹದ ನಡುವೆ ಪೀಠದ ಮೇಲೆ ಸಿಂಹಾರೂಢಳಾಗಿರುವ ಚತುರ್ಭುಜೆಯಾದ ಚೌಡೇಶ್ವರಿ ದೇವಿಯ ಬಿಂಬವನ್ನು ಸ್ಥಾಪಿಸಲಾಗಿದೆ.

ದೇವಿಯ ಕೈಗಳಲ್ಲಿ ಕ್ರಮವಾಗಿ ಖಡ್ಗ, ತ್ರಿಶೂಲ, ಡಮರು ಮತ್ತು ಪಾನಪಾತ್ರೆಗಳಿವೆ. ಗರ್ಭಗೃಹದ ಮುಂದೆ ಮುಖಮಂಟಪವನ್ನು ರಚಿಸಿದ್ದು, ಎರಡೂ ಗರ್ಭಗೃಹಗಳೂ ಸೇರಿದಂತೆ ಪ್ರದಕ್ಷಿಣಾಪಥವಿದೆ.

ಈ ದೇವಾಲಯವನ್ನು 1972ರಲ್ಲಿ ಪ್ಯಾಲೇಸ್‌ ಗುಟ್ಟಹಳ್ಳಿಯ ನರಸಯ್ಯನವರು ಸ್ಥಾಪಿಸಿದ್ದರು. ದೇವಿ ಗುಡಿಯ ಮೇಲೆ ಚಿಕ್ಕದಾದ ಗಾರೆಯ ಶಿಖರವಿದೆ. ದೇವಾಲಯದ ಮುಂಭಾಗದಲ್ಲಿರುವ ಅರಳಿಕಟ್ಟೆಯ ಮೇಲೆ ಲೋಹದ ಚೌಡೇಶ್ವರಿ ದೇವಿಯ ಸುಮಾರು ಎಂಟು ಅಡಿ ಎತ್ತರದ ಮೂರ್ತಿಯಿದೆ. ಇದರ ಪಕ್ಕದಲ್ಲಿಯೇ ಬಿಸಿಲು ಮಾರಮ್ಮ ದೇವಿಯಿದೆ.

1996ರಲ್ಲಿ ಈ ದೇವಾಲಯ ಮತ್ತೆ ವಿಸ್ತಾರಗೊಂಡು, ಅರಳಿಕಟ್ಟೆಯ ಮುಂದೆ ಗಣಪತಿ ಗುಡಿ ಮತ್ತು ದುರ್ಗಾದೇವಿ ದೇವಾಲಯಗಳು ನಿರ್ಮಾಣವಾಗಿವೆ. ಕೆಲ ವರ್ಷಗಳ ಹಿಂದೆ ಮತ್ತೊಮ್ಮೆ ದೇವಾಲಯವನ್ನು ವಿಸ್ತರಿಸಿದಾಗ ದೇವಿ ಗುಡಿಯ ಪಕ್ಕದಲ್ಲಿದ್ದ ಜಾಗದಲ್ಲಿ ಧ್ಯಾನಮಂದಿರವನ್ನು ಕಟ್ಟಲಾಗಿದ್ದು, ಉಳಿದ ಭಾಗದಲ್ಲಿ ಪ್ರವೇಶದ್ವಾರ, ದ್ವಾರಮಂಟಪ ನಿರ್ಮಿಸಲಾಗಿದೆ.

ದೇವಾಲಯದ ಹೊರ ಪ್ರಾಕಾರದ ಪ್ರವೇಶದ್ವಾರದ ಮೇಲೆ ರಾಜಗೋಪುರ ನಿರ್ಮಿಸಿದ್ದು, ಇದು ಸುಂದರ ವರ್ಣಾಲಂಕೃತರಾದ ವಿವಿಧ ದೇವಿ ಶಿಲ್ಪಪಗಳಿಂದ ಕೂಡಿದೆ. ದೇವಾಲಯದ ಹೊರಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿರುವ ದೊಡ್ಡದಾದ ಮಹಿಷಾಸುರನ ಶಿಲ್ಪ, ಮಹಿಷಮರ್ಧಿನಿಯ ಶಿಲ್ಪವೂ ಆಕರ್ಷಿಸುವಂತಿವೆ. ಇಲ್ಲೂ ವೈಭವದಿಂದ ನವರಾತ್ರಿ ನಡೆಯುತ್ತಿದೆ.

**

ಬಂಡೆ ಮಹಾಕಾಳಿ

ಮತ್ತೊಂದು ಹಳೆಯ ದೇವಾಲಯವೆಂದರೆ ಗವಿಪುರಂನ ‘ಬಂಡೆ ಮಹಾಕಾಳಿ’ ಗುಡಿ. ಬಂಡೆಯೊಂದರಲ್ಲಿ ಕೆತ್ತಿರುವ ಸುಮಾರು ಮೂರಡಿ ಎತ್ತರದ ಮಹಾಕಾಳಿ ಶಿಲ್ಪವು ಪದ್ಮಪೀಠದ ಮೇಲೆ ಸಮಭಂಗಿಯಲ್ಲಿ ನಿಂತಿದೆ.

ಚತುರ್ಭುಜೆಯಾದ ದೇವಿಯ ಕೈಗಳಲ್ಲಿ ಅಭಯ, ಪರಶು, ಡಮರು ಮತ್ತು ವರದ ಮುದ್ರೆಗಳಿದ್ದು ಪ್ರಸನ್ನವದನಳಾಗಿದ್ದಾಳೆ. ಮೊದಲಿಗೆ ಇಲ್ಲಿ ಚಿಕ್ಕ ಗುಡಿಯಿತ್ತು. ನಂತರ ಪ್ರವಾಸಿಗರು ತಂಗಲು ಛತ್ರವೊಂದು ನಿರ್ಮಾಣವಾಯಿತು. ವಿವಿಧ ಪ್ರದೇಶಗಳಿಂದ ಬಂಡಿಗಳಲ್ಲಿ ಬರುತ್ತಿದ್ದು ಭಕ್ತರು ಈ ಛತ್ರದಲ್ಲಿ ತಂಗುತ್ತಿದ್ದರು. ಹಾಗಾಗಿ ಇದು ‘ಬಂಡಿ ಮಹಾಕಾಳಿ’ ಗುಡಿ ಎಂದು ಪ್ರಸಿದ್ಧವಾಗಿದೆ.

ಈ ದೇವಾಲಯವೂ ಕೆಲ ವರ್ಷಗಳಿಂದೀಚೆಗೆ ಜೀರ್ಣೋದ್ಧಾರಗೊಂಡಿದ್ದು ಗುಡಿಗೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಗರ್ಭಗೃಹದ ಮುಂದೆ ತೆರೆದ ಮುಖಮಂಟಪವನ್ನು ನಿರ್ಮಿಸಲಾಗಿದೆ. ಇದರ ಹಿಂಭಾಗದಲ್ಲಿ ಮತ್ತೊಂದು ದೇವಿ ಮೂರ್ತಿಯನ್ನು ಸ್ಥಾಪಿಸಿದ್ದು ಅಲ್ಲಿ ದೇವರಿಗೆ ಹರಕೆ, ಬಲಿ, ಎಡೆ ಮುಂತಾದವು ನಡೆಯುತ್ತವೆ. ಗರ್ಭಗೃಹದ ಮೇಲೆ ಗಾರೆ ಶೀಖರವಿದೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆಗಳಂದು ವಿಶೇಷ ಪೂಜೆಗಳು ನಡೆಯುತ್ತವೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆಗಳಂದು ವಿಶೇಷ ಪೂಜೆಗಳು ನಡೆಯುತ್ತವೆ. ನವರಾತ್ರಿ ಸಂದರ್ಭದಲ್ಲಿ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.

**

ಮೀನಾಕ್ಷಿ ದೇವಾಲಯ

ಮಧುರೆಯ ಮೀನಾಕ್ಷಿ ದೇವಾಲಯದ ಪ್ರತಿರೂಪದಂತೆಯೇ ಹುಳಿಮಾವಿನಲ್ಲಿ ಮೀನಾಕ್ಷಿ ದೇವಾಲಯವಿದೆ. ಇಲ್ಲಿ ಜೋಡಿ ದೇವಾಲಯಗಳಿದ್ದು, ಸುಂದರೇಶ್ವರ ಮತ್ತು ಮೀನಾಕ್ಷಿ ಅಮ್ಮನವರ ಗುಡಿಗಳಿವೆ.

ಮಹಾದ್ವಾರದ ರಾಯಗೋಪುರ ಆಕರ್ಷಕವಾಗಿದೆ. ಎರಡೂ ದೇವಾಲಗಳೂ ಬೇರೆ ಬೇರೆಯ ಅಧಿಷ್ಠಾನದ ಮೇಲೆ ನಿಂತಿದ್ದು ಗರ್ಭಗೃಹ, ಅಂತರಾಳಗಳನ್ನು ಹೊಂದಿವೆ. ನವರಂಗದ ಭಾಗ ಒಂದೇ ಆಗಿದೆ. ಪ್ರಾಕಾರ ಮಂಟಪವುಳ್ಳ ಈ ದೇವಾಲಯದ ವಿಸ್ತಾರವಾದ ಅಂಗಳದ ನಡುವೆ ನಿರ್ಮಿಸಲಾದ ಕಗ್ಗಲ್ಲಿನ ರಚನೆ. ಇಲ್ಲೂ ನವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

**

ಗಾಯತ್ರಿ ದೇವಾಲಯ

ಯಶವಂತಪುರದ ಗಾಯತ್ರಿ ದೇವಾಲಯವು ನಗರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಇದು ದ್ರಾವಿಡ ಶೈಲಿಯ ದೇವಾಲಯ. ಗರ್ಭಗೃಹದ ಮಧ್ಯೆ ಹಂಸಪೀಠದ ಮೇಲೆ ಐದು ಮುಖಗಳುಳ್ಳ ಸುಂದರವಾದ ಗಾಯತ್ರಿದೇವಿ (ಮೂರಡಿ ಎತ್ತರದ) ಮೂರ್ತಿ ಇದೆ. 10 ಕೈಗಳುಳ್ಳ ದೇವಿಯು ವಿವಿಧ ಆಯುಧಗಳನ್ನು ಧರಿಸಿದ್ದಾಳೆ.

ದೇವಿಯು ವೀರಾಸನಭಂಗಿಯಲ್ಲಿ ಕುಳಿತಿದ್ದು ಮುಂದಿನ ಎರಡು ಕೈಗಳು ಅಭಯ ಮತ್ತು ವರದಹಸ್ತಗಳಾಗಿವೆ. ದೇವಾಲಯ ಜೀರ್ಣೋದ್ಧಾಗೊಂಡಾಗ ಮುಂದಿನ ಮುಖಮಂಟಪವನ್ನು ಸಜ್ಜುಗೊಳಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಎಡಭಾಗದಲ್ಲಿ ಚಿಕ್ಕದಾದ ಜಾಗದಲ್ಲಿ ನವಗ್ರಹವನ್ನು, ಮತ್ತೊಂದರಲ್ಲಿ ಆಂಜನೇಯನನ್ನು ಸ್ಥಾಪಿಸಲಾಗಿದೆ.

ದೇವಾಲಯದ ಹೊರ ಆವರಣದಲ್ಲಿ ಬಲಭಾಗದಲ್ಲಿ ಚಿಕ್ಕ ಗುಡಿಗಳಿದ್ದು ಗಣಪತಿ, ಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಮತ್ತೊಂದು ಚಿಕ್ಕಗುಡಿಯಲ್ಲಿ ಶಿವಲಿಂಗವಿದೆ. ದೇವಾಲಯದ ಮುಂಭಾಗದಲ್ಲಿ ಯಾಗಶಾಲೆ, ಹಿಂಭಾಗದಲ್ಲಿ ದೊಡ್ಡದಾದ ಅರಳಿಕಟ್ಟೆಯಿದೆ. ಗೋಶಾಲೆಯೂ ಇದೆ. ಇಲ್ಲಿರುವ ದೊಡ್ಡದಾದ ನಾಗಪ್ರತಿಮೆ ಕೂಡ ಆಕರ್ಷಣೀಯವಾಗಿದೆ.

**

ಕಾಳಿಕಾಂಬ

ವಿದ್ಯಾರಣ್ಯಪುರದ ಕಾಳಿಕಾಂಬ ದುರ್ಗಾಪರಮೇಶ್ವರಿ ದೇವಿಯು ನಗರದ ಪ್ರಮುಖ ದೇವಿಗಳಲ್ಲಿ ಒಂದು. ತಮಿಳುನಾಡಿನ ದೇವಾಲಯಗಳ ಮಾದರಿಯಲ್ಲಿಯೇ ಇದನ್ನೂ ನಿರ್ಮಿಸಲಾಗಿದೆ. ವಿಶಾಲವಾದ ಅಂಗಳದ ನಡುವೆ ಆಧುನಿಕ ರೀತಿಯಲ್ಲಿ, ಪ್ರಾಚೀನ ಶೈಲಿಯಲ್ಲಿ ನಿರ್ಮಿಸಿದ ದೇಗುಲ ಇದು.

ದ್ರಾವಿಡ ಶೈಲಿಯ ಈ ದೇವಾಲಯವನ್ನು ಸಿಮೆಂಟಿನಿಂದ ನಿರ್ಮಿಸಲಾಗಿದೆ. ದ್ವಿಕೂಟಾಚಲವಾದ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ಮಹಿಷನ ತಲೆಯ ಮೇಲೆ ಸಮಭಂಗಿಯಲ್ಲಿ ನಿಂತಿರುವ ದುರ್ಗಾದೇವಿಯ ಬಿಂಬವಿದೆ.

ಅಷ್ಟಭುಜೆಯಾದ ದೇವಿ ಪ್ರಸನ್ನವದನಳಾಗಿದ್ದಾಳೆ. ದೇವಿಯ ಬಲಭಾಗದ ಗರ್ಭಗೃಹದಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದ್ದು, ಈ ಎರಡೂ ಗರ್ಭಗೃಹಗಳೂ ಸೇರಿದಂತೆ ಭಿತ್ತಿ ರಚನೆಯಾಗಿದೆ. ಶಿವಾಲಯದ ಹೊರಬ ಭಿತ್ತಿಯ ಮೇಲೆ ಮಾರ್ಕಂಡೇಯನನ್ನು ರಕ್ಷಿಸುತ್ತಿರುವ ಶಿವನ ಶಿಲ್ಪವನ್ನು, ದೇವಿ ಆಲಯದ ಹಿಂಭಾಗ ಭಿತ್ತಿಯ ಮೇಲೆ ಚಂಡ–ಮುಂಡಾಸುರರನ್ನು ಸಂಹರಿಸುತ್ತಿರುವ ಚಾಮುಂಡೇಶ್ವರಿಯ ಶಿಲ್ಪವನ್ನು, ಮತ್ತೊಂದು ಭಾಗದ ಭಿತ್ತಿಯ ಮೇಲೆ ಲಕ್ಷ್ಮಿ ಸರಸ್ವತಿಯರ ಶಿಲ್ಪಗಳನ್ನು ರಚಿಸಲಾಗಿದೆ.

ದೇವಿ ಆಲಯದ ಸುತ್ತ ಪರಿವಾರ ದೇವತೆಗಳ ಚಿಕ್ಕ ಚಿಕ್ಕ ಗುಡಿಗಳಿವೆ. ಇವುಗಳಲ್ಲಿ ಗಣಪತಿ, ಸುಬ್ರಹ್ಮಣ್ಯ, ವಿಜಯದುರ್ಗೆ, ಭೈರವ, ಉತ್ಸವಮೂರ್ತಿ ಮೊದಲಾದವುಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಿಗುಡಿಗೆ ಅಭಿಮುಖವಾಗಿ ಮತ್ತೊಂದು ಚಿಕ್ಕದಾದ ತ್ರಿಚಕ್ರಾಕಾರದ ಕಲ್ಲಿನ ದೇವಾಲಯವಿದೆ. ದೇವಾಲಯದ ಪ್ರಮುಖ ದ್ವಾರಮಂಟಪದ ಬಳಿ ಬಲಗಡೆ ನಟರಾಜನ ಶಿಲ್ಪವೂ ಎಡಗಡೆಯಲ್ಲಿ ಮಹಾಕಾಳಿಯ ಶಿಲ್ಪವೂ ಇದೆ. ದ್ವಾರಬಂಧದ ಪಟ್ಟಿಕೆಯಲ್ಲಿ ವಿಜಯನಗರದ ಶೈಲಿಯನ್ನು ನೆನಪಿಸುವ ಲತಾಪಲ್ಲವದೊಂದಿಗೆ ನಿಂತಿರುವ ಶಿಲಾಸುಂದರಿಯರಿದ್ದಾರೆ.

ಈ ದೇವಾಲಯದ ಮಹಾದ್ವಾರದ ಇಕ್ಕೆಲದಲ್ಲೂ ಹೊರಭಾಗದಲ್ಲಿ ಆನೆಗಳ ಶಿಲ್ಪಗಳಿವೆ. ಉನ್ನತವಾದ ದ್ವಾರಗೋಪುರದಲ್ಲಿ ನಾನಾ ದೇವದೇವತೆಗಳ, ಗಂಧರ್ವರ ಶಿಲ್ಪಗಳಿದ್ದು, ವರ್ಣರಂಜಿತವಾಗಿದೆ.

(ಮಾಹಿತಿ ಸಂಗ್ರಹ: ಉದಯಭಾನು ಕಲಾಸಂಘದ ‘ಬೆಂಗಳೂರು ದರ್ಶನ’)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT