ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಭಕ್ತ ಕುಟುಂಬದ ನಾಟಕ ಮಂಡಲಿ ಸುರಭಿ

Last Updated 23 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ನಾಟಕ ಮಾಡುವಾಗಲೇ ಹೆರಿಗೆಯಾಗಿದೆ. ಕಣ್ಣು ಕುಕ್ಕುವ ಬೆಳಕಿಗೆ ಅಂಧರಾಗಿದ್ದಾರೆ. ರಂಗದ ಮೇಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. 11 ತಿಂಗಳ ಮಗುವನ್ನು ರಂಗದ ಮೇಲೆ ತಂದ ಉದಾಹರಣೆಯಿದೆ. ಹುಟ್ಟಿದ್ದು ಇಲ್ಲೇ, ಕಲಿತಿದ್ದು ಇಲ್ಲೇ, ಬೆಳೆದಿದ್ದು ಇಲ್ಲೇ. ಡ್ರಾಮಾ ಇಸ್‌ ಮೈ ಲೈಫ್, ದ್ಯಾಟ್‌ ಇಸ್ ಮೈ ಸಿಗ್ನೇಚರ್...

ಇದು ನಮ್ಮ ಶ್ರೀವೆಂಕಟೇಶ್ವರ ನಾಟಕ ಮಂಡಲಿ (ಸುರಭಿ)ಯ ಸಂಕ್ಷಿಪ್ತ ಸ್ಟೋರಿ ಎಂದು ನಸುನಕ್ಕರು ರೇಕಂದರ್‌ ನಾಗೇಶ್ವರರಾವ್. ಹೀಗೆಂದರೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ. ‘ಸುರಭಿ ಬಾಬ್ಜಿ’ ಎಂದೇ ಪರಿಚಿತರಾದವರು ನಾಗೇಶ್ವರರಾವ್.

ಹೈದರಾಬಾದಿನ ನಾಂಪಳ್ಳಿಯ ಲಲಿತಕಲಾ ತೋರಣಂ ಆವರಣದಲ್ಲಿ 50 ಕುಟುಂಬದ ಸದಸ್ಯರೊಂದಿಗೆ ಬೀಡುಬಿಟ್ಟಿದ್ದಾರೆ ಅವರು. ತೆಲಂಗಾಣ ಸರ್ಕಾರದ ಸಂಸ್ಕೃತಿ ಇಲಾಖೆಗೆ ಸೇರಿದ ಜಾಗದಲ್ಲಿ ತಗಡಿನ ಶೆಡ್‌ ಹಾಕಿಕೊಂಡು ವಾಸವಿದ್ದಾರೆ. ಜಾಗ ಮತ್ತು ವಿದ್ಯುತ್‌ ಅನ್ನು ಉಚಿತವಾಗಿ ನೀಡಿರುವ ಅಲ್ಲಿನ ಸರ್ಕಾರಕ್ಕೆ, ಕನ್ನಡಿಗ ಅಲ್ಲಿನ ಹೋಟೆಲ್‌ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಅವರ ಸುಸಜ್ಜಿತ ರಂಗಭೂಮಿ ಕಟ್ಟಿಸಿಕೊಡುತ್ತೇವೆ ಎನ್ನುವ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಈಗಲೂ ತಗಡಿನ ಶೆಡ್‌ನಲ್ಲೇ ಕುಟುಂಬದ ಎಲ್ಲರ ಜೀವನ. ಹೈದರಾಬಾದಿನ ಉರಿಬಿಸಿಲಿಗೆ ಬಸವಳಿದರೂ ಅನಿವಾರ್ಯವಾಗಿ ತಗಡಿನ ಶೆಡ್‌ ಬದುಕಿಗೆ ಹೊಂದಿಕೊಂಡಿದ್ದಾರೆ. ಇಂಥ ಅವಿಭಕ್ತ ಕುಟುಂಬಕ್ಕೆ ತಿಂಗಳಿಗೆ 600 ಕೆ.ಜಿ ಅಕ್ಕಿ ಬೇಕು.

ಇನ್ನು ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಕೇವಲ ₹ 30 ಟಿಕೆಟ್‌ ದರ ನಿಗದಿಗೊಳಿಸಿ ನಾಟಕ ಆಡುತ್ತಾರೆ. ಕಡಿಮೆಯಾಯಿತಲ್ಲ ಎನ್ನುವ ಮಾತಿಗೆ ಬಡವರೂ ನಮ್ಮ ನಾಟಕ ನೋಡಲಿ ಎನ್ನುವ ಹಂಬಲ ಅವರದು.
ಈಗಲೂ ಅವರ ಯಶಸ್ವಿ ನಾಟಕ ಮಕ್ಕಳಿಗಾಗಿ ಮಕ್ಕಳೇ ಅಭಿನಯಿಸುವ ‘ಮಾಯಾ ಬಜಾರ್’. ಪ್ರತಿವರ್ಷ ಕನಿಷ್ಠ 100 ಪ್ರದರ್ಶನಗಳನ್ನಾದರೂ ಈ ನಾಟಕ ಕಾಣುತ್ತದೆ. 70 ಪ್ರದರ್ಶನಗಳನ್ನು ‘ಜೈ ಪಾತಾಳ ಭೈರವಿ’ ಕಾಣುತ್ತದೆ. ಉಳಿದಂತೆ ಭಕ್ತಪ್ರಹ್ಲಾದ, ಬಾಲನಾಗಮ್ಮ, ಬ್ರಹ್ಮಂಗಾರಿ ಚರಿತ್ರಾ, ಶ್ರೀಕೃಷ್ಣಲೀಲಲು, ಲವಕುಶ ಜನಪ್ರಿಯ ನಾಟಕಗಳು.

ಇಂಥ ಸುರಭಿ ನಾಟಕ ಕಂಪನಿಗೆ 134 ವರ್ಷಗಳ ಇತಿಹಾಸವಿದೆ. 1885ರಲ್ಲಿ ಅವರ ತಾತ ವನಾರಸ ಗೋವಿಂದರಾವ್‌ ಅವರಿಗೆ 9–10 ವರ್ಷ ವಯಸ್ಸು. ತೊಗಲುಗೊಂಬೆಯಾಟ ಆಡುತ್ತಿದ್ದ ಮನೆತನ ಅವರದು. ಅದರಿಂದ ಬೇಸತ್ತು ಹೊಸತೇನಾದರೂ ಮಾಡಬೇಕೆಂಬ ತುಡಿತ ಅವರ ತಾತನಿಗಿತ್ತು. ಆಗ ಧಾರವಾಡದಲ್ಲಿ ಮೊಕ್ಕಾಂ ಹೂಡಿದ್ದ ತಂತು ಪುರಸ್ತ ನಾಟಕ ಮಂಡಳಿಯಲ್ಲಿ ಸ್ವಲ್ಪ ದಿನವಿದ್ದು, ವಾಪಸು ಕಡಪಾ ಜಿಲ್ಲೆಯ ಸುರಭಿ ಗ್ರಾಮಕ್ಕೆ ತೆರಳಿದರು. ನಾಟಕ ಕಂಪನಿ ಹೇಗಿರುತ್ತದೆ ಎಂಬುದನ್ನು ತನ್ನ ಸೋದರ ಚಿನ ವೆಂಕಟರಾವ್‌ ಅವರಿಗೆ ವಿವರಿಸಿದರು. ನಂತರ ಸುರಭಿ ಗ್ರಾಮದಲ್ಲಿ ತಮ್ಮದೇ ಕಲ್ಪನೆಯ ರಂಗಸಜ್ಜಿಕೆಯನ್ನು ಅಣಿಗೊಳಿಸಿ, ಸುರಭಿ ನಾಟಕ ಕಂಪನಿ ಶುರು ಮಾಡಿದರು. ಅದು ‘ಸುರಭಿ ಡ್ರಾಮಾಸ್‌’ ಹೆಸರಿನ ಮೂಲಕ. ಆಡಿದ ಮೊದಲ ನಾಟಕ ‘ಕೀಚಕ ವಧಾ’. ಇದರಲ್ಲಿ ದ್ರೌಪದಿ ಪಾತ್ರ ಮಾಡಿದವರು ಅವೇಟಿ ಪಾಪಾಬಾಯಿ.

ಆ ಕಾಲದಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ 60 ನಾಟಕ ಕಂಪನಿಗಳಿದ್ದವು. ಆರ್ಥಿಕ ಮುಗ್ಗಟ್ಟಿನಿಂದ ಮುಚ್ಚಿದವು. ಆದರೆ, ಸುರಭಿ ಡ್ರಾಮಾಸ್‌ ಆಗಾಗ ನಾಟಕವಾಡುತ್ತಿತ್ತು. 1937ರಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿಮಿಡಿಪೇಟ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ನಾಟ್ಯ ಮಂಡಲಿ (ಸುರಭಿ) ಶುರುವಾಗಿದ್ದು ಇದುವರೆಗೆ ನಿಂತಿಲ್ಲ.

ಬಾಬ್ಜಿ ಅವರದು ಐದನೆಯ ತಲೆಮಾರು. ಅವರ ಹಿರಿಯರಲ್ಲಿ ವೆಂಕೋಜಿ, ಕೃಷ್ಣಾಜಿ ಹಾಗೂ ಪೆದರಾಮಯ್ಯ ಸೋದರರು. ವೆಂಕೋಜಿ ಪುತ್ರ ವನಾರಸ ಗೋವಿಂದರಾವ್. ಪೆದರಾಮಯ್ಯ ಪುತ್ರ ಚಿನರಾಮಯ್ಯ. ಗೋವಿಂದರಾವ್‌ ಪುತ್ರಿ ರೇಕಂದರ್ ಸುಭದ್ರಮ್ಮ. ನಾಗೋಜಿರಾವ್‌ ಪುತ್ರ ರೇಕಂದರ್‌ ವೆಂಕಟರಾವ್. ಇವರ ಹಾಗೂ ಸುಭದ್ರಮ್ಮ ಪುತ್ರ ಬಾಬ್ಜಿ. ಈ ಬಾಬ್ಜಿ ಅವರಿಗೆ ದಾಸರಥಿರಾವ್, ಭೋಜರಾಜು, ಗಣಪತಿರಾವ್‌ ಸೋದರರು, ಸೋದರಿ ಕೃಷ್ಣವೇಣಿ. ಇವರಲ್ಲಿ ಭೋಜರಾಜು ಅವರು ನಾಟಕ ಮಾಡುವಾಗಲೇ ಹೃದಯಾಘಾತವಾಗಿ ಮೃತಪಟ್ಟರು. ಉಳಿದವರು ಬಾಬ್ಜಿ ಹಾಗೂ ಕೃಷ್ಣವೇಣಿ.

ತಲೆಮಾರಿನಿಂದ ತಲೆಮಾರಿಗೆ ಪೌರಾಣಿಕ, ಐತಿಹಾಸಿಕ ಜಾನಪದ ನಾಟಕಗಳನ್ನು ಆಡುತ್ತ, ಆಂಧ್ರಪ್ರದೇಶದಲ್ಲಿ ಮಾತ್ರ ಗುರುತಿಸಿಕೊಂಡಿದ್ದ ಈ ನಾಟಕ ಕಂಪನಿಗೆ ಹೊಸ ಸ್ಪರ್ಶ ನೀಡಿದವರು ಬಿ.ವಿ. ಕಾರಂತ. ಅವರು 1996ರಲ್ಲಿ ನಾಲ್ಗೊಂಡ ಜಿಲ್ಲೆಯ ಭುವನಗಿರಿಯಲ್ಲಿ 45 ದಿನಗಳವರೆಗೆ ಈ ಕಂಪನಿಗೆ ಶಿಬಿರ ಆಯೋಜಿಸಿ ‘ಭೀಷ್ಮ’ ನಾಟಕ ನಿರ್ದೇಶಿಸಿದರು. 1997ರಲ್ಲಿ ಮತ್ತೆ ಶಿಬಿರ ಆಯೋಜಿಸಿ ಜಾನಪದ ನಾಟಕ ‘ಚಂಡಿಪ್ರಿಯ’ ನಾಟಕ ಹಾಗೂ 1998ರಲ್ಲಿ ‘ಬಸ್ತಿ ದೇವತಾ ಯಾದಮ್ಮ’ ಎಂಬ ಸಾಮಾಜಿಕ ನಾಟಕ ನಿರ್ದೇಶಿಸಿದರು. ಇದರಲ್ಲಿ 60 ಹಾಡುಗಳಿವೆ. ಈ ಎಲ್ಲ ನಾಟಕಗಳನ್ನು ಕಾರಂತರು ದೆಹಲಿಯ ಎನ್‌ಎಸ್‌ಡಿಯಲ್ಲಿ ಪ್ರದರ್ಶಿಸಲು ಅವಕಾಶ ನೀಡಿದರು. ಅಲ್ಲಿಂದ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ನಾಟಕಗಳನ್ನು ಸುರಭಿ ಕಂಪನಿ ಪ್ರದರ್ಶಿಸುತ್ತಿದೆ. ರಾಜ್ಯದ ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ, ಶಿವಾನಂದ ಹೆಗಡೆ ಅವರು ಗುಣವಂತೆಯಲ್ಲಿ ಪ್ರತಿವರ್ಷ ಆಯೋಜಿಸುವ ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವದಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಶಿವಾನಂದ ಹೆಗಡೆ ಅವರು ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

‘ಬಿ.ವಿ. ಕಾರಂತಜಿ ಅವರು ಎನ್‌ಎಸ್‌ಡಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ನಮ್ಮ ನಾಟಕಗಳನ್ನು ಆಹ್ವಾನಿಸಿ ದೆಹಲಿಯಲ್ಲಿ ನಾಟಕ ಆಡಲು ಅವಕಾಶ ನೀಡಿದರು. ಅಲ್ಲದೆ, ಅವರ ಕೃಪೆಯಿಂದ ನಮ್ಮ ಕಂಪನಿಯ 20 ಕಲಾವಿದರಿಗೆ ತಿಂಗಳಿಗೆ ಆರು ಸಾವಿರ ಸಂಬಳ ಬರುತ್ತಿದೆ’ ಎಂದು ನೆನೆಯುತ್ತಾರೆ ಬಾಬ್ಜಿ.

2011ರಲ್ಲಿ ಅವರ ಸುರಭಿ ಕಂಪನಿಯ 125ನೇ ವರ್ಷಾಚರಣೆಯ ಅಂಗವಾಗಿ 10 ದಿನಗಳ ನಾಟಕೋತ್ಸವವನ್ನು ದೆಹಲಿಯಲ್ಲಿ ಹಮ್ಮಿಕೊಂಡಿದ್ದರು. ಕಾರಂತರ ಪ್ರಭಾವದಿಂದ ಕರ್ನಾಟಕದಲ್ಲಿ ನಾಟಕ ಮಾಡುವಂತಾಯಿತು. ಬಿ. ಜಯಶ್ರೀ ಅವರೂ ಪ್ರೋತ್ಸಾಹ ನೀಡಿದ್ದಾರೆ. ಕಾರಂತಜಿ ಕಟ್ಟಿದ ರಂಗಾಯಣದಲ್ಲಿ ನಾಟಕ ಆಡಿದ್ದನ್ನು ಮರೆಯುವುದಿಲ್ಲ. ಗುಬ್ಬಿ ಕಂಪನಿಯಲ್ಲಿದ್ದ ಕಾರಂತಜಿ ಅವರಿಗೆ ನಮ್ಮ ಕಂಪನಿಯ ಕಷ್ಟನಷ್ಟಗಳು ಗೊತ್ತಿದ್ದವು. ಹೀಗಾಗಿ ಅವರು ನಮ್ಮ ಕಂಪನಿಗೆ ನಾಟಕ ನಿರ್ದೇಶಿಸುವ ಮೂಲಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ಹವ್ಯಾಸಿ ಹಾಗೂ ವೃತ್ತಿ ಎನ್ನುವ ಭೇದ ಅಳಿಸಲೂ ಅವರು ಪ್ರಯತ್ನಿಸಿದರು’ ಎನ್ನುತ್ತಾರೆ ಬಾಬ್ಜಿ.

ಆಮೇಲೆ 2013ರಲ್ಲಿ ಫ್ರಾನ್ಸಿನ ಪ್ಯಾರಿಸ್‌ ಹಾಗೂ ಮೆಡ್ಜ್ ನಗರಗಳಲ್ಲಿ ನಾಟಕಗಳನ್ನು ಬಾಬ್ಜಿ ಪ್ರದರ್ಶಿಸಿದರು. ಅಲ್ಲಿ ನಾಟಕ ನೋಡಿದ ಮೇಯರ್ ಬಾಬ್ಜಿ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಗಮನಿಸಬೇಕಾದ ಸಂಗತಿ ಎಂದರೆ, ಫ್ರಾನ್ಸಿಗೆ ಎರಡು ಲಾರಿಗಳಷ್ಟು ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಹಡಗಿನ ಮೂಲಕ ಕಳಿಸಿದ್ದಾರೆ. ‘ಎರಡು ವರ್ಷಕ್ಕೊಮ್ಮೆ ನಡೆಯುವ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಏಷ್ಯಾ ಖಂಡದಿಂದ ಆಯ್ಕೆಯಾದ ಮೊದಲ ಕಂಪನಿ ನಮ್ಮದು’ ಎನ್ನುವ ಹೆಮ್ಮೆ ಅವರದು.
ಈಗಲೂ ಜಗತ್ತಿನಾದ್ಯಂತ ಬೇಡಿಕೆಯಿದೆ. ವಿಮಾನದಲ್ಲಿ ಬಂದು ನಾಟಕವಾಡಿ ಎಂದು ಕೇಳುತ್ತಾರೆ. ವಿಮಾನದಲ್ಲಿ ನಾಟಕಕ್ಕೆ ಅಗತ್ಯ ವಾದ ವಸ್ತುಗಳನ್ನು ಸಾಗಿಸಲು ಆಗದು ಎನ್ನುವ ಬೇಸರ ಅವರದು.

ಹಿಂದಿನ ತಲೆಮಾರಿನವರು ಶಾಲೆಯ ಮೆಟ್ಟಿಲು ಹತ್ತಲಾಗದಿದ್ದರೂ ಈಗಿನ ತಲೆಮಾರಿನ ಅನೇಕರು ಪದವಿ ಪಡೆದಿದ್ದಾರೆ. ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಮೋಹನಕೃಷ್ಣ ವಯಲಿನ್‌, ಹಾರ್ಮೋನಿಯಂ ನುಡಿಸುತ್ತಾರೆ.

12ನೇ ತರಗತಿಯಲ್ಲಿ ಓದುತ್ತಿರುವ ಆರ್. ಲೋಚನಾ, ‘ಸುರಭಿ ಕಂಪನಿಯ ಕುಟುಂಬದವಳೆಂದು ಕಾಲೇಜಿನಲ್ಲಿ ತುಂಬ ಗೌರವದಿಂದ ಕಾಣ್ತಾರೆ. ನಾಟಕಗಳನ್ನು ಆಡಲು ಪರವಾನಗಿ ಕೊಡುತ್ತಾರೆ. ಜತೆಗೆ, ಶಾಲೆ, ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸುಲಭವಾಗಿ ಭಾಗವಹಿಸುವೆ. ಮುಖ್ಯವಾಗಿ ಬದುಕುವ ಧೈರ್ಯ ಕೊಟ್ಟಿದೆ ನಮ್ಮ ಕಂಪನಿ’ ಎಂದು ಖುಷಿಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT