ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಚುಂಬಿ ಸ್ಲಮ್ಮು!

ಹಾಂಗ್‌ಕಾಂಗ್‌
Last Updated 23 ಜೂನ್ 2019, 6:49 IST
ಅಕ್ಷರ ಗಾತ್ರ

ಬಹಿರ್ಜಗತ್ತಿನ ಮಂದಿಗೆ ಇದೊಂದು ಕಗ್ಗತ್ತಲಿನ ಊರು. ಕೂರಲಿಕ್ಕಿರಲಿ, ಉಸುರಲಿಕ್ಕೂ ಎಡೆಯಿರದಷ್ಟು ಮೊಟುಕಿಕೊಂಡು, ಜಟಿಲವೂ ಕುಟಿಲವೂ ಆದ- ನೆಲದಷ್ಟೇ ಆಕಾಶವೂ ಇಲ್ಲದ ಜಗತ್ತು. ಭೂಗತವೆನ್ನುತ್ತಾರಲ್ಲ; ಅಂತಹ ದುರಿತ ದುರ್ಗಮ ಪಾತಾಳದೊಳಗಿನ ಲೋಕ!

ಇದೊಂದು ಸ್ಲಮ್ಮು. ವರ್ಟಿಕಲ್ ಸ್ಲಮ್ಮು. ಅಂದರೆ ನೆಲ ತಬ್ಬಿಕೊಂಡು ಹಬ್ಬುವ ಊರುಕೇರಿಯಂತಿರದೆ- ಏಕ್‍ದಮ್ ಆಕಾಶಕ್ಕೇ ಎದ್ದುಕೊಂಡು, ಸೀದಾ ಮುಗಿಲೊಳಗೇ ನೆಟ್ಟುಕೊಂಡು ನಿಂತ ಕಟ್ಟಡ. ಕಟ್ಟಡವೆಂದರೆ ಕಟ್ಟಡವೆಂತಲೂ ಅಲ್ಲ. ಆಡುವ ಮಕ್ಕಳು, ಬೆಂಕಿಪೊಟ್ಟಣಗಳನ್ನು ಒಂದರ ಮೇಲೊಂದು ಏರಿಸಿ ಪೇರಿಸಿ- ಗೋಪುರ ಕಟ್ಟುವುದಿಲ್ಲವೆ, ಥೇಟು ಅಂತಹ ರಚನೆ! ಇಷ್ಟಿದ್ದೂ ಇದೊಂದು ಬಹುಮಹಡಿಗಳ ಸಂಕೀರ್ಣ. ನಿಜಕ್ಕೂ ‘ಸಂಕೀರ್ಣ’ವೇ!

ಬಹುಮಹಡಿ ಅನ್ನುತ್ತಲೇ ಸುಸಜ್ಜಿತವಾಗಿ ಲಿಫ್ಟು- ಎಸ್ಕಲೇಟರು- ಸ್ಟೇರ್‌ಕೇಸು ಇತ್ಯಾದಿಯುಳ್ಳ ಬಲು ಪಾಂಗತವಾದ ಅಪಾರ್ಟ್‌ಮೆಂಟ್‌ ಅಂತನಿಸಿದರೆ ಕ್ಷಮಿಸಿ... ಇದು ಹಾಗಲ್ಲ. ಇನ್ನು, ಇದನ್ನು ಕಟ್ಟಲಾಗಿದೆಯೆಂಬುದೂ ಸುಳ್ಳೇ! ಹಾಗೇ, ಕಟ್ಟಿಲ್ಲ ಅಂತಂದರೂ ಈ ಸುಳ್ಳಿನ ತಲೆಯೊಡೆಯಬಲ್ಲ ಇನ್ನೂ ಒಂದು ಸುಳ್ಳು! ಯಾಕೆಂದರೆ, ನಮ್ಮ ಯಾವೊತ್ತಿನ ‘ನಾಗರಿಕ’ ರಿವಾಜುಗಳಲ್ಲಿ ‘ಕಂಟ್ರಾಕ್ಟು’ಗಾರಿಕೆ ಎಂದೊಂದು ಕಸುಬು ಇದ್ದು, ಹಣವಂತ ಮಂದಿ ‘ಕಟ್ಟು’ಕೆಲಸವನ್ನು ಗುತ್ತಿಗೆ ಕೊಟ್ಟು ಮನೆ ಮಹಡಿ ಕಟ್ಟಿಸುತ್ತಾರಲ್ಲ, ಹಾಗೆ ‘ಇದನ್ನು’ ಅಂದರೆ ಈ ಸ್ಲಮ್ಮನ್ನು ಕಟ್ಟಿಸಲಾಗಿಲ್ಲ. ಸುಮಾರು ಆರೂವರೆ ಎಕರೆ ವಿಸ್ತೀರ್ಣದಷ್ಟು ನೆಲದಲ್ಲಿ ಉಂಟಾಗಿ, ನೂರಕ್ಕೂ ಹೆಚ್ಚು ಫೂಟು ಎತ್ತರಕ್ಕಿರುವ- ಈ ಮನುಷ್ಯ ನಿರ್ಮಿತಿಗೆ ‘ಪ್ಲ್ಯಾನ್’ ಅಂತೆಂಬ ನಿಯೋಜಿತ ನಕಾಶೆಯೂ, ‘ಸ್ಯಾಂಕ್ಷನ್’ ಎಂಬ ಪರವಾನಗಿಯ ಮಂಜೂರಾತಿಯೂ ಇಲ್ಲವೆಂದರೆ ನಂಬಲಾದೀತೆ?!

ನಂಬಲೇಬೇಕು. ಯಾಕೆಂದರೆ, ಈ ಜಗತ್ತಿನ ಎಲ್ಲ ‘ಶಹರ’- ಸಂಸ್ಕೃತಿಗಳಲ್ಲಿ ಮತ್ತು ಸಮಕಾಲೀನ ‘ನಾಗರಿಕತೆ’ಗಳಲ್ಲಿ- ‘ಸ್ಲಮ್ಮು’ ಉಂಟಾಗುವುದೇ ಹೀಗೆ.

ಯೋಚಿಸಿ ನೋಡಿ: ಮನುಷ್ಯ, ಅವನಿರುವ ಜಗತ್ತಿನ ಇತಿಹಾಸದುದ್ದಕ್ಕೂ ನೀರನ್ನು ಅರಸಿಕೊಂಡು ವಲಸೆ ಹೋಗಿದ್ದಾನೆ. ನೀರಿರುವಲ್ಲಿಯೇ ನೆಲೆ ನಿಂತಿದ್ದಾನೆ. ವರ್ಷಪೂರ್ತಿ ಹರಿಯುವ ನದಿಯ ಅದಿಬದಿಗಳಲ್ಲಿ ಊರು ಕಟ್ಟಿದ್ದಾನೆ. ನೀರಿಗೆ ಮಳೆಯನ್ನೇ ನೆಚ್ಚಬೇಕಾದ ಕಡೆಗಳಲ್ಲಿ, ಕೆರೆಕಟ್ಟೆ ಕಟ್ಟಿ ಅದೇ ನೀರನ್ನು ಕಲೆಹಾಕಿಕೊಂಡು ತನಗೆ ತಾನೇ ಊಡಿಕೊಂಡು ವಾಸ ಹೂಡಿದ್ದಾನೆ. ಕಳೆದ ನೂರು ಇನ್ನೂರು, ಮುನ್ನೂರು, ನಾನೂರು ವರ್ಷಗಳ ಹಿಂದಿನವರೆಗೂ, ಜಾಗತಿಕವಾಗಿ ಚಾಲ್ತಿಯಲ್ಲಿದ್ದ ಮನುಷ್ಯ- ಪ್ರತೀತಿಯೇ ಇದಾಗಿತ್ತು ತಾನೇ? ಯಾವಾಗ, ವಿದ್ಯುತ್ತೆಂಬ ಸೋಜಿಗದ ಸಂಗತಿಯುಂಟಾಗಿ- ಆ ಮೇರೆಗೆ, ಇವನು ಇರುವಲ್ಲಿಗೇ ನೀರು ಸರಬರಾಜು ಮಾಡುವುದೆನ್ನುವ ಪದ್ಧತಿ ಹುಟ್ಟಿಕೊಂಡಿತೋ ಆಗ, ಈ ಭೂಗ್ರಹದ ‘ಶಾಹರಿಕ’ ನಕಾಶೆಯೇ ಬದಲಾಗಿಹೋಯಿತು.

ಮನುಷ್ಯನೆಂಬ ಮನುಷ್ಯ ಎಲ್ಲೆಂದರಲ್ಲಿ ನೆಲೆ ನಿಲ್ಲುವುದನ್ನು ಕಂಡುಕೊಂಡ. ಮರುಭೂಮಿಯಿರಲಿ, ಮೈನಸು ತಾಪಮಾನದ ಅಂಟಾರ್ಕ್ಟಿಕಾದಂತಹ ಎಡೆಗಳಲ್ಲೂ ವಾಸ್ತವ್ಯ ಹೂಡಿದ. ಈಗಿತ್ತಲಾಗಿ, ಭುವಿಯ ಮೇಲಿನ ಸ್ವರ್ಗವೆಂದು ತಂತಾವು ಗುರುತಿಸಿಕೊಳ್ಳುವ- ದುಬೈ- ಸಿಂಗಪುರಗಳೆಲ್ಲ, ಅಸಲಿನಲ್ಲಿ ಉಂಟಾಗಿರುವುದೇ ಹೀಗೆ. ವಿಪುಲವಾಗಿ ವಿದ್ಯುತ್ತಿರುವ ಮೇರೆಗೆ!

ಇಷ್ಟಿದ್ದೂ, ಇವೆಲ್ಲ ದುಡ್ಡಿರುವ ಮಂದಿಯ ವರಸೆ. ಹಣಕಾಸು ಚೆನ್ನಿರುವ ಪಕ್ಷಕ್ಕೆ- ಎಲ್ಲೆಂದರಲ್ಲಿಗೆ ನೀರನ್ನೂ, ಎಲ್ಲೆಂದರಲ್ಲಿ ನೆಲವನ್ನೂ ಸಂಪಾದಿಸಿ ನೆಲೆ-ನಿಲೆ ಊರಿಕೊಳ್ಳಬಹುದು. ವಿದ್ಯುತ್ತಿದೆಯಾಗಿ, ಗಗನದೊಳಗೇ ಗಗನಚುಂಬಿಗಳನ್ನು ಕಟ್ಟಿ- ಅದೇ ಗಗನದಲ್ಲಿ ಲಾಗ ಹೊಡೆದುಕೊಂಡೂ ಇರಬಹುದು. ಆದರೆ, ಇಲ್ಲದವರು ಏನು ತಾನೇ ಮಾಡಬೇಕು?

ಹಣವಿಲ್ಲದಲೋಗರು, ಉಳ್ಳವರು ಬಳಸಿ ತ್ಯಜಿಸಿದ ‘ನೀರು’ಗಳನ್ನೇ ನೆಚ್ಚಿ- ಊರಿನ ತಗ್ಗಿನಲ್ಲಿ ಹರಿಯುವ ಮೋರಿಗಳ ಮಗ್ಗುಲಿನಲ್ಲಿ ಬದುಕು ಕಟ್ಟಿಕೊಳ್ಳಬೇಕು. ಯಾಕೆಂದರೆ, ಊರಿನ ಹೊಲಸು ಸಾಗುವ ಚರಂಡಿಗಳ ಮಗ್ಗುಲಿನಲ್ಲಿ ಸಿರಿವಂತರು ಇರಬಯಸುವುದಿಲ್ಲ. ಹಾಗಾಗಿ, ಈ ಪರಿಯ ಹೊಲಸು ಹಾಯುವ ಕಾಲುವೆಗಳ ಅದಿಬದಿಯ ಜಮೀನಾದರೂ- ಒಂದು, ಬಲು ಅಗ್ಗ; ಎರಡು, ಕೆಲವೊಮ್ಮೆ ಅದು ಯಾರಿಗೂ ಸೇರಿರುವುದಿಲ್ಲ. ಹೀಗಾಗಿಯೇ, ಆರ್ಥಿಕವಾಗಿ ಜೇಬು ಭದ್ರವಿಲ್ಲದ ಮಂದಿ ಇಂತಹ ಎಡೆಗಳತ್ತಲೇ ಮುಗಿಬೀಳುವುದು. ನೆಲೆ ಕಂಡುಕೊಳ್ಳುವುದು! ಊರು ಉತ್ಪಾದಿಸುವ ಹೊಲಸಿನೊಡನೆ ತಮ್ಮ ಹೊಲಸನ್ನೂ ಬೆರೆಸಿ, ತಮಗೆ ತಾವೇ ಹೊಲಸೆಂಬಂತೆ, ಸ್ವತಃ ಅಂದುಕೊಳ್ಳದೆಯೂ, ‘ಹಾಗೇ’ ಬದುಕುವುದು.

ನಮ್ಮ ದೇಶದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಹೊಲೆಗೇರಿಗಳು ಉಂಟಾಗಿದ್ದೇ ಈ ಮೇರೆಗೆ. ‘ಹೊಲೆಗೇರಿ’’ ಅಂತನ್ನುವುದು, ಇಪ್ಪತ್ತನೇ ಶತಮಾನದಿಂದೀಚೆಗಿನ ರಾಜಕೀಯ ಸಂದರ್ಭದಲ್ಲಿ, ಭಾಷಿಕವಾಗಿ ಮತ್ತು ಅಷ್ಟೇ ‘ರಾಜಕೀಯ’ವಾಗಿ ತಪ್ಪು ಎನ್ನುವ ಮೇರೆಗೆ, ‘ಕೊಳೆಗೇರಿ’ ಎಂದು ಇನ್ನೊಂದು ಪದವನ್ನು ಟಂಕಿಸಲಾಗಿದೆಯಷ್ಟೆ? ನಾವೇ ಹುಟ್ಟಿಸಿದ್ದೇವೆ. ಹಾಗನ್ನುವುದಕ್ಕಿಂತ ಹೀಗನ್ನುವುದು ಲೇಸೆಂದು ಬಳಸುತ್ತೇವೆ!

ಯೋಚಿಸಿ ನೋಡಿ: ‘ಹೊಲೆಗೇರಿ’ಯಲ್ಲಿರುವ ಜಾತಿಸೂಚಿಯನ್ನು ತೆಗೆದುಬಿಟ್ಟಲ್ಲಿ, ಇವೆರಡೂ ಒಂದೇ. ಜಾತ್ಯತೀತವಾಗಿ ಇದೇ ಅದು ಮತ್ತು ಅದೇ ಇದು.

ಇರಲಿ... ಈಗ ಪುನಃ ಮೊದಲು ಹೇಳಿದ ವರ್ಟಿಕಲ್‌ ಸ್ಲಮ್ಮಿಗೆ ವಾಪಸಾಗುತ್ತೇನೆ. ಇದೊಂದು ಕಟ್ಟಡವೇ ಅಲ್ಲ ಅಂತಂದೆನಲ್ಲ. ಹೀಗಂದರೆ ಈ ಕಟ್ಟಡವನ್ನು ಎಂಜಿನಿಯರು ಆರ್ಕಿಟೆಕ್ಟುಗಳ ಮೂಲಕ ಕಟ್ಟಿಸಲಾಗಿಲ್ಲ ಎಂದು ಅರ್ಥ. ಯಾವುದೇ ಕೊಳೆಗೇರಿಯಲ್ಲಿರುವ ಮಂದಿಯ ಹಾಗೇ, ಈ ಸ್ಲಮ್ಮನ್ನೂ ಅಲ್ಲಿರುವ ಮಂದಿಯೇ ಕಟ್ಟಿದ್ದಾರೆ. ಅಂದರೆ ತಂತಾವೇ ಕಟ್ಟಿಕೊಂಡಿದ್ದಾರೆ. ಯಾವುದೇ ಆಧುನಿಕ ತಂತ್ರಜ್ಞಾನದ ಗೋಜುಗೊಡವೆಯೇ ಇಲ್ಲದೆ, ಹತ್ತೂ ಮತ್ತೆರಡು ಮಹಡಿಗಳ ಈ ‘ಕಟ್ಟಡ’ವನ್ನು ತಮಗೆ ತಾವೇ ಕಟ್ಟಿಕೊಂಡಿದ್ದಾರೆ.

ಹೀಗೆ ಸ್ಲಮ್ಮಿಗೆ ಸ್ಲಮ್ಮೇ ಒಂದು ಬೆಕ್ಕಸದ ಸಂಗತಿಯಾದರೆ, ಈ ಬೆಕ್ಕಸವೇ ಬೆರಗಂತಾಗುವ ಇನ್ನೂ ಒಂದು ಸಂಗತಿಯಿದೆ. ಜಗತ್ತಿನ ಯಾವ ಅದ್ಭುತವೂ ಇದರೆದುರು ಸಣ್ಣದೇ ಸರಿ, ಅಂತಹ ಸೋಜಿಗ.

ಹೌದು... ಈ ಮೊದಲು, ಆಡುವ ಮಕ್ಕಳು ಏರಿಸಿ ಪೇರಿಸಿಟ್ಟ ಬೆಂಕಿಪೆಟ್ಟಿಗೆಗಳು- ಎಂದೊಂದು ಉಪಮಿಸಿದೆನಲ್ಲ, ಅದು ಹೇಗೆ ಅಂತಂದರೆ- ಬರೇ ನಾನೂರು ಅಡಿಗಳಷ್ಟು ಅಗಲ ಮತ್ತು ಏಳು ನೂರು ಅಡಿಗಳಷ್ಟು ಉದ್ದದ ಜಾಗದಲ್ಲಿ, ಐನೂರೂ ಚಿಲ್ಲರೆ ಕಟ್ಟಡಗಳನ್ನು ಪುಟ್ಟ ಪುಟ್ಟದಾಗಿ ಕಟ್ಟಲಾಗಿದೆ. ಒಂದರ ಬದಿಗಿನ್ನೊಂದೆನ್ನುವಂತೆ ಒತ್ತರಿಸಿ ಇಡಲಾಗಿದೆ. ಕೆಳಗಿನದರ ಸೂರನ್ನೇ ನೆಲವಾಗಿಸಿಕೊಂಡು ಮೇಲಿನವರು ತಮ್ಮ ತಮ್ಮ ಮನೆ ಕಟ್ಟಿಕೊಂಡಿದ್ದಾರೆ. ಆಶ್ಚರ್ಯ ತಾನೇ?!

ಈಗ, ಇಕೋ-ಇನ್ನೊಂದಿಷ್ಟು ಮಾಹಿತಿಯನ್ನು ಕಾಣಿ: ಇಲ್ಲಿರುವ ಐನೂರಕ್ಕೂ ಹೆಚ್ಚು ಕಟ್ಟಡಗಳಲ್ಲಿ, ಒಂದೊಂದರಲ್ಲೂ ತಲಾ ಹತ್ತು ಹನ್ನೆರಡು ಮನೆಗಳಿವೆ. ಒಂದೊಂದು ಮನೆಯಲ್ಲೂ ಹತ್ತು ಹನ್ನೆರಡು ಮಂದಿಯಿದ್ದಾರೆಂದರೆ ಲೆಕ್ಕವೇನಾದೀತು ಯೋಚಿಸಿ. ಹೌದು... ಈ ಸ್ಲಮ್ಮಿನಲ್ಲಿನ ಒಟ್ಟು ಜನಸಂಖ್ಯೆ ಐವತ್ತೈದು ಸಾವಿರ.

ನೀವೇ ಊಹಿಸಿಕೊಳ್ಳಿ. ಊಹೆಗೆ ಮುನ್ನ ಹೀಗೊಂದಿಷ್ಟು ಲೆಕ್ಕ ಹಾಕಿ. 400 ಅಡಿ X 700 ಅಡಿ= 2,80,000 ಚದರಡಿ. ಹತ್ತು ಮಹಡಿ ಅಂತಂದರೆ, ಈ ವಿಸ್ತೀರ್ಣದ ಹತ್ತು ಪಟ್ಟು ಲೆಕ್ಕ. ಅಂದರೆ- 28,00,000 ಚದರಡಿ. ಇಷ್ಟು ಅಳತೆಯಲ್ಲಿ 50,000 ಮಂದಿ ಇದ್ದಾರೆ ಅಂತಂದರೆ, ಒಬ್ಬೊಬ್ಬರಿಗೂ ಬರೇ 50 ಚದರಡಿ ಮಾತ್ರ! ಈಗ ಯೋಚಿಸಿ: ಮನುಷ್ಯನನ್ನು ಮಣ್ಣು ಮಾಡಲಿಕ್ಕೆ ಆರಡಿಗೆ ಮೂರಡಿ ಜಾಗ ಸಾಕು ಅನ್ನುತ್ತೇವಲ್ಲ- ಅಂದರೆ ಹದಿನೆಂಟು ಚದರಡಿಯ ಅಳತೆ, ಇದಕ್ಕೆ ಹೋಲಿಸಿದರೆ, ‘ಇದು’ ಬರೇ ಎರಡೂವರೆ ಪಟ್ಟು ಅಳತೆ ಅಷ್ಟೇ!!

ಹೌದು ‘ಅಷ್ಟೇ’.

ಗಂಡ, ಹೆಂಡತಿ, ನಡುವೊಂದು ಮಗು- ಈ ಮೂವರು ಮಲಗಬಹುದಾದಷ್ಟು ಮಂಚದಳತೆಯಷ್ಟೇ ಎಡೆಯಲ್ಲಿ- ಒಬ್ಬ ವಯಸ್ಕ ಗಂಡಸೋ, ಹೆಂಗಸೋ ಇರಬೇಕು. ಬರೇ ಇರುವುದಾದರೆ ಓಕೆ. ಇದ್ದು, ಇದ್ದಲ್ಲೇ ಇದ್ದು- ಐಹಿಕ- ದೈಹಿಕದ ಸಕಲ ಸಂಪತ್ತನ್ನೂ ನಡೆಸಬೇಕು. ವಂಶಾಭಿವೃದ್ಧಿಯನ್ನೂ ಒಳಗೊಂಡಂತೆ- ಅಡುಗೆ, ಊಟ, ಶೌಚ, ನಿದ್ರೆ... ಇತ್ಯಾದಿಯಾದ ಕಡು ಜೈವಿಕ ಸಂದಿಗ್ಧವನ್ನೂ ಸಂಭಾಳಿಸಬೇಕು. ಹೇಗಿದೆ ವರಸೆ?!

ರಾಮಾಯಣದ ಕಿಷ್ಕಿಂಧೆಯಿದೆಯಲ್ಲ, ಬರೇ ವಾನರರೇ ವಾನರರಿದ್ದ ಎಡೆ- ಇದನ್ನು, ಮನುಷ್ಯಾನುಭವವು ಕಂಡುಕೊಳ್ಳಬಲ್ಲ ಅತ್ಯಂತ ಕಿಕ್ಕಿರಿದು ಇಡುಕುವ ಇಕ್ಕಟ್ಟನ್ನೂ, ಇಕ್ಕಟ್ಟಿನ ಬಿಕ್ಕಟ್ಟನ್ನೂ ಸೂಚಿಸುವ ಸಲುವಾಗಿ- ನಾವು ಬಳಸುತ್ತೇವೆ. ಭಾರತೀಯ ಭಾಷೆಗಳು ಬಳಸುತ್ತವೆ. ಇನ್ನು, ನಾನು ಹೇಳುತ್ತಿರುವ ಈ ಸ್ಲಮ್ಮು ‘ವಾನರ’ರ ‘ಕಾಲ್ಪನಿಕ’ ಕಿಷ್ಕಿಂಧೆಗಿಂತಲೂ ಹೆಚ್ಚಿನ ಇಕ್ಕಟ್ಟು-ಬಿಕ್ಕಟ್ಟುಗಳನ್ನು ‘ನರ’ ಪ್ರಯುಕ್ತವಾಗಿ ಕಟು ‘ವಾಸ್ತವ’ವಾಗಿ ಹೊಂದಿದೆ ಅಂತಂದರೆ- ಹೇಗೆಂದು ನೀವೇ ಯೋಚಿಸಿ.

ಇನ್ನು, ಈ ಸ್ಲಮ್ಮಿನಲ್ಲಿ ಶಹರದ ಮುಖ್ಯವಾಹಿನಿಯಲ್ಲಿ ಇರುವ ಮತ್ತು ಘಟಿಸುವ ಸಕಲ ಐಷಾರಾಮವೂ ಇದೆ. ನೆಲದ ಅಂತಸ್ತಿನಲ್ಲಿರುವ ಮನೆಗಳೆಲ್ಲ ಅಂಗಡಿಗಳಾಗಿವೆ. ಹೊಟೇಲ್‌ಗಳಿವೆ. ಕೆಫೆಗಳಿವೆ. ಸಲೂನುಗಳಿವೆ. ಬ್ಯೂಟಿಪಾರ್ಲರ್‌ಗಳಿವೆ. ಪಬ್‍ಗಳಿವೆ. ಸ್ಟಾಲುಗಳಿವೆ... ಡೆಂಟಲ್ ಮೆಂಟಲ್‌ ಕ್ಲಿನಿಕ್ಕುಗಳಿವೆ. ರೆಸ್ತುರಾಗಳಲ್ಲಿ ಶ್ವಾನ ಮಾಂಸದ ವಿಶಿಷ್ಟ ಖಾದ್ಯಗಳನ್ನು ಬಡಿಸಲಾಗುತ್ತದೆ. ಪಾರಿವಾಳದ ರೆಕ್ಕೆಪುಕ್ಕಗಳ ಸೂಪನ್ನು ‘ಡೆಲಿಕೆಸಿ’ಯೆಂದು ಮಾರಲಾಗುತ್ತದೆ. ಹುರಿದ ಕರಿದ ಮೀನಿನ ಉಂಡೆಗಳ, ಥರ ಥರದ ಸುಟ್ಟ ಮಾಂಸದ ಮುದ್ದೆಗಳ- ಪರಿಪರಿಯಾದ ತಯಾರಿಯಿರುವ ಇಲ್ಲಿನ ಮೆನುವಿಗಾಗಿ, ಇಲ್ಲಿನವರೇ ನೊಣಗಳಂತೆ ಮುಗಿಬೀಳುತ್ತಾರೆ. ಮುಸುರಿಕೊಳ್ಳುತ್ತಾರೆ. ಇಲ್ಲಿರುವ ಡಾಕ್ಟರ್‌ಗಳು ಲೈಸನ್ಸ್‌ ಇಲ್ಲದೆ ಪ್ರ್ಯಾಕ್ಟೀಸು ನಡೆಸುತ್ತಾರೆ. ಕಾಲೇಜಿಗೇ ಹೋಗದೆ ಬೋರ್ಡು ಹಾಕಿಕೊಂಡು ಇಲಾಜು ಕೈಕೊಳ್ಳುತ್ತಾರೆ. ಪಾರ್ಲರುಗಳಲ್ಲಿ ಮುಸುಡಿಯನ್ನೇ ಹೆರೆದು ತಿದ್ದಬಲ್ಲ ಸೌಂದರ್ಯವರ್ಧಕ ಪ್ರಸಾಧಕ ಮಂದಿಯೂ ಇದ್ದಾರೆ.

ನೆಲ ಅಂತಸ್ತಿನದೇ ವಹಿವಾಟಿನ ವಿಸ್ತರಣೆಯೆಂಬಂತೆ- ಮೊದಲ ಮಹಡಿಯೂ ತಕ್ಕ ಮಟ್ಟಿಗೆ ‘ವ್ಯಾಪರಸ್ಥ’ವೇ ಇದೆ. ಇಲ್ಲಿ ಸುಭಗವಾದ ವೇಶ್ಯಾವಾಟಿಕೆ ಜರುಗುತ್ತದೆ. ಗಲ್ಲಿಗಲ್ಲಿಯಲ್ಲೂ ಸೂಳೆಗೇರಿಯಿದೆ. ಅಥವಾ, ಓಣಿಬೀದಿಗಳೆಲ್ಲ ಮೈಮಾರಿಕೊಳ್ಳುವ ಮಂಡಿಯಾಗಿವೆ. ಸಾಲದುದಕ್ಕೆ ಜೂಜುಕೋರರು ಎಗ್ಗುಸಿಗ್ಗಿರದೆ ದಂಧೆ ನಡೆಸುತ್ತಾರೆ. ಅಫೀಮು-ಗಾಂಜಾ ಹೆರಾಯಿನ್‌ಗಳು ವಾಣಿಜ್ಯವೆಂಬಂತೆ ಬಿಕರಿಗೊಳ್ಳುತ್ತವೆ. ಮನುಷ್ಯ- ಕಟುಕರು, ಕೊಲೆಗಾರರು... ಈ ಪರಿಯ ಕ್ರೈಮುಕಾರರೆಲ್ಲ ನಿರ್ಭೀತಿಯಿಂದ ಬದುಕುತ್ತಾರೆ.

ಇನ್ನು, ವರ್ಟಿಕಲ್‌ ಸ್ಲಮ್‌ ಅಂದರೇನು ಸಾಮಾನ್ಯವೇ? ನೆಲದ ಮೇಲಿರುವ ಕೊಳೆಗೇರಿಯ ಪೂರ್ತಾ ನಕಲೂ ಇಲ್ಲಿದೆ. ತೆರೆದ ಮೋರಿ- ಚರಂಡಿಗಳಲ್ಲಿ ಹರಿಯುವ ಕಗ್ಗಪ್ಪನೆ ಕೊಳೆ ನೀರಿನಷ್ಟೇ, ಅದರೊಡನೆ ಸಿಂಡುಹಳಸುನಾತವೂ ಇಲ್ಲಿದೆ. ಮೋರಿಯಲ್ಲಿನ ನೀರಿನ ಹಾಗೇ ಬಳುಕಿ ಸಾಗುವ ದಾರಿ-ಕೇರಿಗಳೂ ಇಲ್ಲಿವೆ. ವಿಚಿತ್ರವೆಂದರೆ ಇಲ್ಲಿನ ಪ್ರತಿ ಮಹಡಿಯಲ್ಲೂ ಹೀಗೆಯೇ ಇದೆ. ಕೆಳಗಿರುವ ಮನೆಗಳ ಸೂರಿನ ಮೇಲೇ ಮಲಿತ ನೀರು- ಭರಪೂರದ ಋಷಭಾವತಿಯ ಹಾಗೆ ಹರಿಯುತ್ತದೆ. ತನ್ನ ಹರಿವಿನ ತಳದ ನೆಲ ಬಿರಿದಿತ್ತೋ, ಕೊಳೆನೀರು ಕೆಳಗಿನವರೆಗೂ ಸೋರಿ- ಅನುದಿನವೂ ಸದಾಕಾಲ ಕೊಳಕೇ ಕೊಳಕಿನ ಅಭಿಷೇಕ ಕೈಕೊಳ್ಳುತ್ತದೆ. ಎಂತಲೇ ಇಲ್ಲಿನ ಮಂದಿ, ಮಳೆಗಾಲದಲ್ಲಿನ ಕೇರಳದ ಮಂದಿಯ ಹಾಗೆ- ಯಾವಾಗಲೂ ಬಗಲಿನಲ್ಲಿ ಕೊಡೆ ಹಿಡಿದೇ ಸಜ್ಜಾಗಿರುತ್ತಾರೆ. ಸದಾ ಛತ್ರಛಾಯೆಯ ಅಡಿಯೇ ನಡೆದಾಡುತ್ತಾರೆ.

ಇನ್ನುಳಿದಂತೆ, ಇದು ತನಗೆ ತಾನೇ ಒಂದು ನಗರಿ. ಉಳಿದ ಸಿಟಿಯ ಗೊಡವೆಯೇ ಇಲ್ಲದೆ- ಸ್ವಯಂಭುವೆಷ್ಟೋ ಅಷ್ಟೇ ಸ್ವಯಂಚರಿಯಾಗಿ ಜರುಗುವ ಸ್ವಯಂಸಿಟಿ. ಬಹಿರ್ಜಗತ್ತಿನ ಮಂದಿಗೆ ಇದೊಂದು ಕಗ್ಗತ್ತಲಿನ ಊರು. ಕೂರಲಿಕ್ಕಿರಲಿ, ಉಸುರಲಿಕ್ಕೂ ಎಡೆಯಿರದಷ್ಟು ಮೊಟುಕಿಕೊಂಡು, ಜಟಿಲವೂ ಕುಟಿಲವೂ ಆದ- ನೆಲದಷ್ಟೇ ಆಕಾಶವೂ ಇಲ್ಲದ ಜಗತ್ತು. ಭೂಗತವೆನ್ನುತ್ತಾರಲ್ಲ ಅಂತಹ ದುರಿತ ದುರ್ಗಮ ಪಾತಾಳದೊಳಗಿನ ಲೋಕ!

ಸ್ವಯಂಸಿಟಿ ಅಂತಂದ ಮೇಲೆ ಸಿಟಿಯೊಂದರ ಸಾಧಾರಣ ಸವಲತ್ತೂ ಇರಬೇಕಷ್ಟೆ?

ಹ್ಞೂಂ... ಇದೆ.

ಇಲ್ಲಿ ಶಾಲೆಗಳಿವೆ. ಅಂಗನವಾಡಿಗಳಿವೆ. ಕ್ರೆಶ್ಷು-ಬೇಬಿ ಸಿಟ್ಟಿಂಗುಗಳೂ ಇವೆ. ಜಿಮ್ಮು-ಮಾರ್ಷಿಯಲ್ ಆರ್ಟ್ಸ್ ಇತ್ಯಾದಿಯ ಅಂಗಾಂಗಸಾಧಕ ಗರಡಿಮನೆಗಳಿವೆ. ಮನೆ ಮನೆಗೂ ಎಣಿಕೆ ತಪ್ಪದ ಹಾಗೆ ಟೀವಿ ಇದೆ. ಕಂಪ್ಯೂಟರುಗಳಿವೆ. ವಾಷಿಂಗ್‌ಮಿಷಿನ್‌ಗಳು, ಲಾಂಡ್ರೋಮ್ಯಾಟ್ ಇತ್ಯಾದಿ ಸವಲತ್ತೂ ಇದೆ. ಇಷ್ಟೆಲ್ಲ ಸರ್ವತಂತ್ರ ಸ್ವತಂತ್ರ ಸ್ವಾಯತ್ತವಿರುವ ಈ ಪರಿಯ ‘ಮರಿ’ಸಿಟಿಗೆ ಸುತ್ತಲಿನ ‘ಹಿರಿ’ಸಿಟಿಯೊಡನೆಯ ಲೇವಾದೇವಿಯಾದರೂ ಏನು? ಹೀಗೊಂದು ಕೊಡುಕೊಳುವಾದರೂ ಉಂಟೇನು?

ಉಂಟು!

ಮರಿಸಿಟಿಯು ಹಿರಿಸಿಟಿಯನ್ನು- ನೀರು ಮತ್ತು ಕರೆಂಟಿನ ಸಲುವಾಗಿ, ಮತ್ತು ತನ್ನೊಳಗಿನ ಹೊಲಸನ್ನು ‘ಹಿರಿ’ಯದರ ತ್ಯಾಜ್ಯದೊಡನೆ ಹೊರಬಿಡುವ ಸಲುವಾಗಿಯಷ್ಟೇ ಅವಲಂಬಿಸಿದೆ. ತನ್ನ ಮಟ್ಟಿಗೆ ತಾನು ಸ್ವಾಯತ್ತವಿದ್ದರೂ ಸೈಯೆ, ಈ ಅರ್ಥದಲ್ಲಿ ಇದು ಅದಕ್ಕಂಟಿಕೊಂಡ ಜಿಗಣೆಯೇ, ಪರಾವಂಬಿಯೇ!

ಇನ್ನು, ಹಿರಿಸಿಟಿಯಾದರೂ ಈ ಮರಿಸಿಟಿಯನ್ನು- ಮೈಯೆಂಬಮೈಯು ತನ್ನ ಮೈಮೇಲಿನ ಗಡ್ಡೆಯನ್ನು ತನ್ನದೇ ಎಂಬಷ್ಟು ಸರಳವಾಗಿ, ತನ್ನ ಒಳ- ಸರಬರಾಜನ್ನೆಲ್ಲ ಅದಕ್ಕೂ ದಕ್ಕಿಸಿ ಪೂರೈಸುತ್ತದಲ್ಲ, ಹಾಗೇ- ತನ್ನ ನೀರು ಕರೆಂಟುಗಳನ್ನು ಊಡುತ್ತದೆ. ಪೊರೆಯುತ್ತದೆ. ಪಾಲಿಸುತ್ತದೆ. ಮರಿಗೆ ‘ಹಿರಿ’ಯದರೊಡನೆ ಅಂಟಿಕೊಂಡಿರುವ ಅನಿವಾರ್ಯದಷ್ಟೇ, ಇದಕ್ಕೂ ಅದನ್ನು ಲಾಲನೆ ಪಾಲನೆಗೈಯುವ ಅನಿವಾರ್ಯವಿದ್ದೇ ಇದೆ.

ಹಾಗಾಗಿ ಎರಡೂ ಇವೆ. ಒಟ್ಟೊಟ್ಟಾಗಿ ಇವೆ.

ಸಹಕಾರ, ಸಹವಾಸ, ಸಹಯೋಗ, ಸಹವರ್ತನೆ... ಇತ್ಯಾದಿ ‘ಸಹ’ಕಾರಗಳನ್ನೆಲ್ಲ ಇಟ್ಟುಕೊಂಡೂ ಸಹ ಇದ್ದೇ ಇವೆ. ಬಲ್ಲವರು ಹೇಳುತ್ತಾರೆ: ಕೊಳೆಗೇರಿಗಳು ಸಮಸ್ಯೆಯಲ್ಲ. ದೊಡ್ಡ ಊರು ಒದಗಿಸದ ಸವಲತ್ತುಗಳನ್ನು ಮಂದಿ ತಮಗೆ ತಾವೇ ದಕ್ಕಿಸಿಕೊಂಡ ಪರಿಹಾರ.

2

ಜಗತ್ತಿನ ಅಷ್ಟೂ ಸಮಸ್ತ ಪುರಾತನ ಸಂಸ್ಕೃತಿಗಳೂ, ತಂತಮ್ಮ ಗ್ರಹಿಕೆಗಳಿಗೆ ಸಿಕ್ಕಿದ ‘ಮನುಷ್ಯ’ ಸಂಗತಿಗಳನ್ನು- ಎರಡು ಬಗೆಗಳಾಗಿ ವಿಂಗಡಿಸಿಬಿಟ್ಟಿವೆ. ನಡುವೆ ಕಪ್ಪು-ಬಿಳುಪೆನ್ನುವ ಅಂತರ ಹೂಡಿ ಎರಡು ಪಂಗಡಗಳಾಗಿ ಹಂಚಿಬಿಟ್ಟಿವೆ. ಸ್ವರ್ಗ- ನರಕ, ಪಾಪ- ಪುಣ್ಯ, ಒಳಿತು- ಕೆಡುಕು, ನೇರ್ಪು- ಕೇಡು, ಚೆನ್ನಾದ್ದು- ಚೆನ್ನಿರದ್ದು... ದೈವ-ಅದೈವ... ಈ ಪರಿಯ ವಿರುದ್ಧಾತ್ಮಕತೆ ಹುಟ್ಟಿದ್ದೇ ಈ ಮೇರೆಗೆ.

ಮನುಷ್ಯನೆಂಬುವವನ ‘ಸೋ ಕಾಲ್ಡ್’ ಮಾನವೀಯ ಚಿಂತನೆಯ ಮೇರೆಗೆ. ಇದೇ ನಿಟ್ಟಿನಲ್ಲಿ, ಒಂದನ್ನು ಆದರ್ಶಪ್ರಾಯವೆಂದೂ, ಇನ್ನೊಂದು ಮನುಷ್ಯಾದರಕ್ಕೆ ಸಲ್ಲದ್ದೆಂದೂ- ಇನ್ನೂ ಒಂದು ವಿಭಜನೆಯಿದೆ.

ನಮ್ಮ ಸಂದರ್ಭದಲ್ಲಿ, ರಾಮರಾಜ್ಯ ಅಂತೆಂಬುದು ಈ ಪರಿಯ ‘ಆದರ್ಶ’ವಾದಿ ಕಲ್ಪನೆ. ಇದಕ್ಕೆ ವಿರುದ್ಧವಾಗಿ ರಾವಣ ರಾಜ್ಯವೆಂಬ ಇನ್ನೊಂದನ್ನು ಹೇಳಲಾಗುತ್ತದೆ. ಹಾಗೆ ನೋಡಿದರೆ ಎರಡೂ ಕಲ್ಪನೆಗಳೇ. ಇದೆಷ್ಟು ಸರಿ ಇದೆಯೋ, ಅದು ಅಷ್ಟೇ ತಪ್ಪು ಅಂತೆಂಬ ತದ್ವಿರುದ್ಧವಾದ ಆಲೋಚನೆ ಅಷ್ಟೇ.

ಇರಲಿ. ಪಶ್ಚಿಮದ ಜಗತ್ತು- (ನಮಗೆ ಸಾಕಷ್ಟು ಪರಿಚಿತವಿರುವ ಮತ್ತು ಇಂಗ್ಲಿಷ್‌ ಓದಿನ ಮೂಲಕ ಈಗಾಗಲೇ ಕನ್ನಡಕ್ಕೂ ಬಂದಿರುವ) ‘ಯುಟೋಪಿಯಾ’ ಎಂದೊಂದನ್ನು ಪ್ರತಿಪಾದಿಸುತ್ತದೆ. ಇದನ್ನು ಒತ್ತಾಯದಿಂದ ಕನ್ನಡಿಸದೆ, ಇದ್ದ ಹಾಗೇ, ಯುಟೋಪಿಯಾ ಎಂದೇ ಓದಿಕೊಳ್ಳುವುದು ಸರಿ.

ಯುಟೋಪಿಯಾ ಎಂಬುದು ಈ ಜಗತ್ತಿನಲ್ಲಿ ಎಂದೂ ಇಲ್ಲದ ಮತ್ತು ಇದ್ದಿರದ ಒಂದು ಎಡೆ; ಅಥವಾ ಪ್ರದೇಶ. ಗ್ರೀಕ್ ಮೂಲದ ಈ ಶಬ್ದಕ್ಕೆ ನಿಷ್ಪ್ರದೇಶ (ನಿಷ್ಪ್ರಯೋಜಕ ಎಂಬಲ್ಲಿನ ಬಳಕೆಯ ಹಾಗೇ) ಎಂದು ಬರೆಯಬಹುದೇನೋ. ಅಂದರೆ ಪ್ರದೇಶ ಎಂಬುದಕ್ಕೆ ವಿರುದ್ಧವಾದ ಜಾಡು. ಈ ಜಾಗವು ಎಷ್ಟು ಆದರ್ಶಪ್ರಾಯವಾದುದು ಮತ್ತು ಚೆನ್ನಾದುದು ಅಂತಂದರೆ, ಅಂತಹ ಜಾಗವೇ ಇಲ್ಲ ಅಂತೆನ್ನುವ ಅರ್ಥ ಇದಕ್ಕೆ. ಇದನ್ನು ಇನ್ನೊಂದು ಕಂತಿನಲ್ಲಿ ವಿಸ್ತರಿಸಬಲ್ಲೆ.

ಯುಟೋಪಿಯಾ ಎಂಬುದು ಟಂಕಗೊಂಡಿದ್ದು ಹದಿನಾರನೇ ಶತಮಾನದ ಶುರುವಿನಲ್ಲಿ. ಇಂಗ್ಲೆಂಡಿನಲ್ಲಿ. ಅಂದರೆ ಕೈಗಾರಿಕಾ ಕ್ರಾಂತಿಯು ಸುರುಗೊಂಡ ಸುರು ಸುರುವಿನಲ್ಲಿ. ಇದಾದ ಇನ್ನೂರು ವರ್ಷಗಳಲ್ಲಿ, ಔದ್ಯೋಗಿಕ ಜಗತ್ತು, ‘ಯುಟೋಪಿಯಾ’ಕ್ಕೆ ವಿರುದ್ಧವಾಗಿ ಜಾರಿಗೊಂಡಿತ್ತು. ಯುಟೋಪಿಯಾದ ಕಲ್ಪನೆಯೇ ಪ್ರತಿಕೂಲವೆನ್ನುವಷ್ಟು ಅನನುಕೂಲಗೊಂಡಿತ್ತು.

ನಾನು ಇಲ್ಲಿ ಉದಾಹರಿಸಿದ ವರ್ಟಿಕಲ್‌ ಸ್ಲಮ್‌ ಇದೆಯಲ್ಲ, ಇದು ಈ ಯುಟೋಪಿಯಾಕ್ಕೆ ತೀರಾ ‘ಆಪೋಸಿಟ್’ ಆದುದು. ‘ಯುಟೋಪಿಯನ್’ ಕೃತಾಂತಕ್ಕೇ ಪ್ರತಿಗಾಮಿಯೆಂಬಂತೆ ಘಟಿಸಿದಂಥದ್ದು. ಇಂತಹ ಪರಿಸ್ಥಿತಿಯನ್ನು ಬಣ್ಣಿಸಲಿಕ್ಕೆ ಭಾಷೆಯೂ ತನ್ನ ತಾನು ಅಣಿಗೊಳ್ಳಬೇಕಷ್ಟೆ? ಹೊಸತೊಂದು ವಿಶೇಷಣವನ್ನು ಹುಟ್ಟಿಸಬೇಕಷ್ಟೆ? ಹೌದು... ‘ಯುಟೋಪಿಯಾ’ವಲ್ಲದ್ದನ್ನು ಅದು ‘ಡಿಸ್ಟೋಪಿಯಾ’ ಎಂದು ಕರೆಯಿತು. ಹಾಗೇ, ಈ ವರ್ಟಿಕಲ್‌ ಸ್ಲಮ್‍ನಂತಹುದರ ತನ್ನತನವನ್ನು ‘ಡಿಸ್ಟೋಪಿಯನ್’ ಎಂದು ವಿಶೇಷಿಸಿತು!

ಈಗ ಇತಿಹಾಸದ ಪುಟ ಸೇರಿರುವ ಹಾಂಗ್‌ಕಾಂಗ್‌ನ ಕೊವ್ಲೂನ್ ವಾಲ್ಡ್‌ ಸಿಟಿ ಸ್ಲಮ್ಮು ‘ಡಿಸ್ಟೋಪಿಯನ್‌’ಗೆ ತಕ್ಕ ಉದಾಹರಣೆ

ಕೊವ್ಲೂನ್ ವಾಲ್ಡ್ ಸಿಟಿ

ಹಾಂಗ್‌ಕಾಂಗ್‌ನ ಹೊರವಲಯದ ಕೊವ್ಲೂನ್‌ ಪ್ರದೇಶದಲ್ಲಿ 1950ರ ದಶಕದಲ್ಲಿಯೇ ತಲೆ ಎತ್ತಿತ್ತು ಗಗನಚುಂಬಿ ಸ್ಲಮ್ಮು. ಈ ಕೊಳೆಗೇರಿಯನ್ನು ‘ಕೊವ್ಲೂನ್ ವಾಲ್ಡ್ ಸಿಟಿ’ ಅಂತಲೇ ಕರೆಯಲಾಗುತ್ತಿತ್ತು. ವಾಲ್ಡ್ ಸಿಟಿ ಅಂದರೆ ಕೋಟೆಯೊಳಗಿನ ನಗರ ಎಂದು ಕನ್ನಡಿಸಬಹುದೇನೋ. ಚೀನಾದ ಮಿಲಿಟರಿ ಕೋಟೆಯ ಪ್ರದೇಶದಲ್ಲಿ ನಿರ್ಮಾಣವಾದ ಕಾರಣಕ್ಕೆ ಇದಕ್ಕೆ ವಾಲ್ಡ್‌ ಸಿಟಿ ಎಂಬ ಹೆಸರು ಬಂದಿರಬಹುದು. ಬೆಂಗಳೂರಿನ ಅವೆನ್ಯೂ ರಸ್ತೆ ಇರುವ ಜಾಗವನ್ನು ಹಿಂದೆ ‘ವಾಲ್ಡ್ ಸಿಟಿ’ ಅಂತಲೇ ಕರೆಯಲಾಗುತ್ತಿತ್ತು. ಅದು ಕೂಡ ಕೋಟೆಯಲ್ಲೇ ಇರುವ ಪ್ರದೇಶವಾಗಿತ್ತು, ಅಲ್ಲವೇ?

ಹಾಂಗ್‌ಕಾಂಗ್‌ನ ಮುಗಿಲೊಳಗಿನ ಆ ಸ್ಲಮ್ಮಿನ ವಿಷಯಕ್ಕೆ ಮತ್ತೆ ಬರೋಣ. ಅಂತರ ಸಂಪರ್ಕ ಹೊಂದಿದ 500ಕ್ಕೂ ಅಧಿಕ ಕಟ್ಟಡಗಳ ಬೃಹತ್‌ ಸಂಕೀರ್ಣವಾಗಿತ್ತು ಕೊವ್ಲೂನ್ ವಾಲ್ಡ್ ಸಿಟಿ. ಇತ್ತ ಚೀನಾ ಹಾಗೂ ಅತ್ತ ಇಂಗ್ಲೆಂಡ್‌ನ ಆಡಳಿತದ ತೂಗುಯ್ಯಾಲೆಯಲ್ಲಿ ತೂಗಿದ್ದ ಹಾಂಗ್‌ಕಾಂಗ್‌ನಲ್ಲಿ ಅರಾಜಕತೆ ಮನೆ ಮಾಡಿತ್ತು. ದ್ವಿತೀಯ ಮಹಾಯುದ್ಧದ ಬಳಿಕ ಸಿಕ್ಕಾಪಟ್ಟೆ ಜನ ವಲಸೆ ಬಂದಿದ್ದರಿಂದ ಇಲ್ಲಿ ಕಾನೂನಿಗೆ ಕ್ಯಾರೇ ಎನ್ನುವವರು ಇರಲಿಲ್ಲ. ಈ ಅವಧಿಯಲ್ಲಿ ಯಾರು, ಯಾರೋ ಮನಬಂದಂತೆ ಕಟ್ಟಡ ಕಟ್ಟುತ್ತಾ ಹೋದಾಗ ಸೃಷ್ಟಿಯಾದ ಸ್ಲಮ್ಮು ಅದು. ಜಗತ್ತಿನ ಅತ್ಯಧಿಕ ಜನಸಾಂದ್ರತೆಯ ಪ್ರದೇಶ ಎಂದೇ ಅದು ಹೆಸರಾಗಿತ್ತು. ಹಾಂಗ್‌ಕಾಂಗ್‌ ಸರ್ಕಾರ ಈ ಕಟ್ಟಡವನ್ನು ನೆಲಸಮಗೊಳಿಸಿ, ಅಲ್ಲಿನ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಮುನ್ನ ಗ್ರೇಗ್‌ ಜೆರಾಲ್ಡ್‌ ಎಂಬ ಛಾಯಾಗ್ರಾಹಕ ಕೊವ್ಲೂನ್ ವಾಲ್ಡ್ ಸಿಟಿಯಲ್ಲಿ ಸುತ್ತಾಡಿ, ಅಲ್ಲಿನ ಬದುಕನ್ನು ಛಾಯಾಚಿತ್ರಗಳಲ್ಲಿ ದಾಖಲಿಸುವ ಕಾರ್ಯ ಮಾಡಿದ್ದಾರೆ. ‘ಸಿಟಿ ಆಫ್‌ ಡಾರ್ಕ್‌ನೆಸ್‌ ರೀವಿಜಿಟೆಡ್‌’ ಎಂಬ ಶಿರೋನಾಮೆ ಅಡಿಯಲ್ಲಿ ಬಿಚ್ಚಿಕೊಳ್ಳುವ ಆಗಿನ ನೋಟಗಳು ಕಳೆದುಹೋದ ಸ್ಲಮ್‌ನ ನೆನಪುಗಳನ್ನು ಹಸಿರಾಗಿಡುತ್ತಿವೆ.

ಇಲ್ಲಿದೆ ದೊಡ್ಡದೊಂದು ಜಗತ್ತು

ಈ ಸ್ಲಮ್ಮಿನ ಸುತ್ತಲಿರುವ ಇನ್ನುಳಿದ ಸಭ್ಯ- ಸಂಭಾವಿತ ‘ಇತರೆ’ ಶಹರವು- ತನ್ನ ಪೊಲೀಸ್ ವ್ಯವಸ್ಥೆಯಿಂದ ಹಿಡಿದು ನ್ಯಾಯಾಂಗದವರೆಗಿನ ಎಲ್ಲದರ ಕಣ್ಣುಗಳ ಮೇಲೂ ತನ್ನ ಎವೆಗಳನ್ನು ಕವಿಯಿಸಿ, ತಾನು ಸುರಿಯುವ ಅಮೇಧ್ಯವನ್ನು ತಾನು ನೋಡುವುದೂ ಹೇಸಿಗೆಯೆಂದು, ಸ್ವ-ಇಚ್ಛೆಯಿಂದ ಸ್ವಚಿತ್ತ ತಾಳಿ ಕುರುಡಾಗಿದೆ.

ಸದರಿ ಸ್ಲಮ್ಮಿನಲ್ಲಿ ಪ್ರಿಂಟಿಂಗ್‌ ಪ್ರೆಸ್ಸುಗಳಿವೆ. ಟಿ.ವಿ- ಮಿಕ್ಸಿ ರಿಪೇರಿಕಾರರಿದ್ದಾರೆ. ಲೋಹದ ಸರಕುಕಾರರಿದ್ದಾರೆ. ವೆಲ್ಡಿಂಗ್-ಕಾರರಿದ್ದಾರೆ. ಟೇಲರಿಂಗ್‌ನಲ್ಲಿ ತೊಡಗುವವರಿದ್ದಾರೆ. ಪಾತ್ರೆ ಪಗಡಿ ಮಾಡುವ ಮಂದಿ ಇದ್ದಾರೆ.

ಗುಡಿ ಕೈಗಾರಿಕೆ ಅನ್ನುವರಲ್ಲ, ಅಂತಹ ಸಣ್ಣಪುಟ್ಟ ಕೆಲಸ ಕೈಕೊಳ್ಳುವ ದೊಡ್ಡದೊಂದು ಜಗತ್ತೇ ಇಲ್ಲಿದೆ. ಒಂದರ್ಥದಲ್ಲಿ ಇದೊಂದು ಇಂಡಸ್ಟ್ರಿಯಲ್ ಎಸ್ಟೇಟ್ ಇದ್ದಂತೆ. ಅಷ್ಟೇ ಕಮರ್ಷಿಯಲ್‌ ಕಾಂಪ್ಲೆಕ್ಸೂ ಸಹ. ಇವೆರಡರೊಡನೆ ಜನವಸತಿಯೂ ಉಂಟಾಗಿ, ಇದೊಂದು ಅಪಾರ್ಟ್‌ಮೆಂಟ್‌ ಸಮುಚ್ಚಯವೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT