ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಕತ್ತಿಯ ಅಂಚು!

Last Updated 3 ಏಪ್ರಿಲ್ 2019, 12:08 IST
ಅಕ್ಷರ ಗಾತ್ರ

ಕಣ್ಣು, ಮನಸ್ಸಿನ ಕನ್ನಡಿ. ಮಾತಿನಲ್ಲಿ ಹೇಳಲಾಗದ್ದನ್ನು, ಹೇಳಲಾರದ್ದನ್ನು, ಹೇಳಲಿಚ್ಚಿಸದ್ದನ್ನು ಹೇಳುವುದು ಕಣ್ಣಭಾವದಲ್ಲೇ. ‘ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನಾ’– ಸಿಪಾಯಿರಾಮು ಚಿತ್ರದ ಈ ಹಾಡಿನ ಭಾವವೂ, ‘ಜೋಕೆ... ನಾನು ಬಳ್ಳಿಯ ಮಿಂಚು... ಕಣ್ಣು ಕತ್ತಿಯ ಅಂಚು’ ಹಾಡಿನ ಎಚ್ಚರಿಕೆಯೂ ಅದುವೇ.

ಐ ಜ್ಯುವೆಲ್‌
ಐ ಜ್ಯುವೆಲ್‌

ಸಮಾರಂಭಕ್ಕೆ ಭರ್ಜರಿಯಾಗಿ ಸಿದ್ಧಳಾದ ಹೆಣ್ಣು ಕಣ್ಣಿಗೆ ಒಂದೆಳೆ ಕಾಡಿಗೆಯನ್ನಾದರೂ ಹಚ್ಚಿಕೊಂಡರೆ ಅವಳ ಮುಖದ ಕಳೆ ದುಪ್ಪಟ್ಟು ಆಗುತ್ತದೆ. ಸರಳವಾದ ಕಾಡಿಗೆಯಿಂದ ಆರಂಭವಾದ ಕಣ್ಣಿನ ಮೇಕಪ್‌ನಲ್ಲಿ ಈಗ ಅಸಂಖ್ಯಾತ ಆಯ್ಕೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಮಾದರಿಗಳು ಟ್ರೆಂಡಿಂಗ್‌, ಟ್ರೆಂಡ್‌ ಹೆಸರಿನಲ್ಲಿ ಫ್ಯಾಷನ್‌ ಲೋಕದಲ್ಲಿ ಮುಂಚೂಣಿಯಲ್ಲಿ ನಿಂತಿದ್ದೂ ಇದೆ. ಸ್ಮೋಕಿ ಐ ಎಂಬ ಮಾದರಿಯು ಉದ್ಯೋಗಸ್ಥ ಹೆಣ್ಣುಮಕ್ಕಳ ನೆಚ್ಚಿನ ಫ್ಯಾಷನ್‌ ಆಗಿದೆ.

ಕೆಲವು ಐ ಮೇಕಪ್‌ ಮಾದರಿಗಳು‌ ನಿತ್ಯ ಜೀವನಕ್ಕಾಗಲಿ, ವಿಶೇಷ ಸಮಾರಂಭಕ್ಕಾಗಲಿ ಹೊಂದುವುದಿಲ್ಲ. ಅವುಗಳೇನಿ‌ದ್ದರೂ ಮೋಜು ಮಸ್ತಿಯ ಪಾರ್ಟಿಗಳಿಗೆ, ರೂಪದರ್ಶಿಗಳ ಕ್ಯಾಟ್‌ವಾಕ್‌ಗೆ ಮೀಸಲಾದರೆ ಕೆಲವು ವಿನ್ಯಾಸಗಳು ಹಾಲಿವುಡ್‌ ಮತ್ತು ಇಂಗ್ಲಿಷ್‌ ಮನರಂಜನಾ ಕ್ಷೇತ್ರದ ಸೆಲೆಬ್ರಿಟಿಗಳಿಗಷ್ಟೇ ಸೀಮಿತವಾಗುವುದಿದೆ. ಉದಾಹರಣೆಗೆ,ಕಾಮನಬಿಲ್ಲಿನ ಬಣ್ಣದ ವಿನ್ಯಾಸ 2016ರಲ್ಲಿ ಟ್ರೆಂಡಿಂಗ್ ಆದರೂ ಜನಸಾಮಾನ್ಯರಿಗೆ ಬಳಕೆಗೆ ಸಾಧ್ಯವಾಗಲಿಲ್ಲ.

ಒಡವೆಯಂತಹ ವಿನ್ಯಾಸ

ಕಣ್ಣಿನ ರೆಪ್ಪೆ ಮತ್ತು ಅಂಚಿನ ಸುತ್ತ ಅಂಟಿಸುವ ‘ಐ ಜ್ಯುವೆಲ್‌’ಗಳು ಮತ್ತು ‘ಐ ಆರ್ಟ್‌’ಗಳು ಜನಪ್ರಿಯವಾಗುತ್ತಿವೆ. ಈ ಟ್ರೆಂಡ್‌ ಈಗ ಮದುವೆ ಮನೆಗಳಿಗೂ ಕಾಲಿಡುತ್ತಿದೆ.

ಸ್ಮೋಕಿ ಐ ಮೇಕಪ್‌ನ್ನೇ ವಿಸ್ತರಿಸಿ, ಇನ್ನಷ್ಟು ಸಮೃದ್ಧ ಲುಕ್‌ ನೀಡಿ ಅವುಗಳಿಗೆ ಸ್ಟಾರ್‌, ಡಾಟ್‌, ಹನಿ ಡ್ರಾಪ್‌ನಂತಹ ವಿನ್ಯಾಸಗಳನ್ನು ಅಂಟಿಸುವ ‘ಐ ಜ್ಯುವೆಲ್‌’ಗಳು ಈಗ ಆದ್ಯತೆ ಪಡೆಯುತ್ತಿವೆ.

ಫ್ಯಾಷನ್‌ ಜಗತ್ತಿನ ಹೊಸತನಗಳಿಗೆ ದೊಡ್ಡ ವೇದಿಕೆ ಒದಗಿಸಿಕೊಡುವ ಇನ್‌ಸ್ಟಾಗ್ರಾಂ, ಪಿಂಟರೆಸ್ಟ್‌ನಂತಹ ಸಾಮಾಜಿಕ ಮಾಧ್ಯಮಗಳು ‘ಐ ಜ್ಯುವೆಲ್‌’ ಮತ್ತು ‘ಐ ಆರ್ಟ್‌’ಗಳಿಗೂ ಶೋಕೇಸ್ ಆಗಿವೆ. ಈ ಎರಡೂ ಮಾಧ್ಯಮಗಳಲ್ಲಿ ಸಾವಿರಾರು ವಿನ್ಯಾಸಗಳು ಲಭ್ಯವಿದ್ದು ಪ್ರತಿದಿನ ಹೊಸ ಟ್ರೆಂಡ್‌ಗಳು ಸೇರ್ಪಡೆಯಾಗುತ್ತಲೇ ಇರುತ್ತವೆ.

ಕಣ್ಣು, ಬಣ್ಣದ ತಟ್ಟೆ... ಹಾರುವ ಚಿಟ್ಟೆ...
ಕಣ್ಣು, ಬಣ್ಣದ ತಟ್ಟೆ... ಹಾರುವ ಚಿಟ್ಟೆ...

ನೆಟ್‌ಫ್ಲಿಕ್ಸ್‌ನ ಇಂಗ್ಲಿಷ್‌ ಸರಣಿ ‘13 ರೀಸನ್ಸ್‌ ವೈ’ ನಟಿ ಕ್ಯಾಥರಿನ್‌ ಲಾಂಗ್‌ಫರ್ಡ್‌ ಒಮ್ಮೆ ಇನ್‌ಸ್ಟಾಗ್ರಾಂನಲ್ಲಿ ಐ ಜ್ಯುವೆಲ್‌ ಮೇಕಪ್‌ನ ಫೋಟೊ ಅಪ್‌ಲೋಡ್‌ ಮಾಡಿದ್ದರು. ಮುತ್ತು ಪೋಣಿಸಿದ ನಕ್ಷತ್ರದಾಕಾರದ ಸ್ಟಡ್‌ಗಳನ್ನು ಬಲಗಣ್ಣಿಗೆ ಮೂರು, ಎಡಗಣ್ಣಿಗೆ ಎರಡರಂತೆ ಅವರು ಧರಿಸಿದ್ದರು. ಪುಟಾಣಿ ಮುತ್ತುಗಳನ್ನು ಕಣ್ರೆಪ್ಪೆ ಕೂದಲು, ಹುಬ್ಬು ಮತ್ತು ರೆಪ್ಪೆಯ ಅಲ್ಲಲ್ಲಿ ಅಂಟಿಸಲಾಗಿತ್ತು. ಈ ಐ ಮೇಕಪ್‌ನಿಂದಲೇ ಅವರು ಟ್ರೆಂಡಿಂಗ್ ಆಗಿದ್ದರು.

ಕಣ್ಣೆಂಬ ಕ್ಯಾನ್ವಾಸ್!

ಐ ಜ್ಯುವೆಲ್‌ನಷ್ಟೇ ಜನಪ್ರಿಯವಾಗಿರುವ ಟ್ರೆಂಡ್‌ ಎಂದರೆ ಕಣ್ಣಿನ ರೆಪ್ಪೆ ಮತ್ತು ಇಡೀ ಕಣ್ಣಿನ ಸುತ್ತ ವಿವಿಧ ಬಣ್ಣಗಳ ಶೇಡ್‌ನಿಂದ ಅಸಹಜ ವಿನ್ಯಾಸ ಮಾಡುವ ‘ಐ ಆರ್ಟ್‌’. ಇದನ್ನು ‘ಡ್ರಾಮಾಟಿಕ್‌ ಮೇಕಪ್‌’ ಎಂದೂ ಹೇಳುತ್ತಾರೆ. ಕಣ್ಣಿಗೆ ಕಾಡಿಗೆ, ಮಸ್ಕರಾ, ಐ ಶ್ಯಾಡೊ ಬಳಸಲು ಇಂತಿಷ್ಟೇ ಜಾಗ ಎಂಬ ಮಿತಿ ಇದೆ. ಆದರೆ ಕಣ್ಣನ್ನೇ ಕ್ಯಾನ್ವಾಸ್‌ ಆಗಿಸುವ ‘ಐ ಆರ್ಟ್‌’ ಸ್ವಲ್ಪ ಹೆಚ್ಚು ಜಾಗಕ್ಕೆ ವಿಸ್ತರಿಸಿಕೊಳ್ಳುತ್ತದೆ.

ಮೂರೂ ಪ್ರಸಾಧನಗಳನ್ನು ಮೂರರಿಂದ ನಾಲ್ಕು ಕೋಟ್‌ ಗಾಢವಾಗಿ ಹಚ್ಚಿಕೊಂಡು ಅದರ ಮೇಲೆ ತಮಗಿಷ್ಟದ ಬಣ್ಣದ ಶ್ಯಾಡೊ ಪೆನ್ಸಿಲ್‌ನಿಂದ ಬೇಕದಷ್ಟು ದಪ್ಪನೆಯ ಕೋಟ್‌ ಬಳಿಯುತ್ತಾ ಹೋಗುವುದು, ಆಯ್ದ ವಿನ್ಯಾಸದಲ್ಲಿ ಹೈಲೈಟ್‌ ಮಾಡುವುದು.

ಚಿಟ್ಟೆ, ರೆಕ್ಕೆ, ಸ್ಮೋಕಿ ವಿಂಗ್‌, ಎರಡರಿಂದ ಏಳು ಬಣ್ಣಗಳ ಪ್ರತ್ಯೇಕವಾಗಿ ಕಾಣಿಸುವಂತಹ ಶೇಡ್‌ಗಳು, ಗ್ಲಿಟರ್‌, ಕ್ರಿಸ್ಟಲ್‌, ತ್ರೀಡಿ ಸ್ಟಾರ್‌ಗಳಲ್ಲಿ ನಿಮಗಿಷ್ಟವಾದುದನ್ನು ಕಣ್ಣಿನ ಅಂಚಿಗೆ ಅಂಟಿಸುವುದು. ಅದಾದ ಬಳಿಕ ಮತ್ತೆ ಹೈಲೈಟಿಂಗ್‌ ಕೋಟ್‌ ಹಚ್ಚುವುದು. ಹೀಗೆ ‘ಐ ಆರ್ಟ್‌’ ಮಾಡಿದಾಗ ಕಣ್ಣು ಥೇಟ್‌ ಕ್ಯಾನ್ವಾಸ್‌ನಂತೆ ಕಾಣುತ್ತದೆ!

ಐ ಆರ್ಟ್‌ ಅಥವಾ ಐ ಜ್ಯುವೆಲ್‌ ಆಯ್ದುಕೊಂಡಾಗ ಕಣ್ಣಿಗಿಂತ ಈ ಮೇಕಪ್‌ ಎದ್ದುಕಾಣುವಂತೆ ಹಾಲೋ ಶ್ಯಾಡೋಗಳನ್ನು ಬಳಸಲಾಗುತ್ತದೆ. ಮೂಗಿನ ಬದಿಗೆ ಬಂದಂತೆ ಎಲ್ಲಾ ಬಣ್ಣಗಳ ಶ್ಯಾಡೊಗಳನ್ನು ತೆಳುವಾಗಿ ಮತ್ತು ಕಣ್ಣಿನ ಆಕಾರಕ್ಕೆ ಸರಿಯಾಗಿ ಕೊನೆಗೊಳ್ಳುವಂತೆ ಬಳಿಯಬೇಕು. ಇದರಿಂದ ಇಡೀ ಮುಖದಲ್ಲಿ ಕಣ್ಣಿನ ಮೇಕಪ್ ಎದ್ದುಕಾಣುತ್ತದೆ.

ಆನ್‌ಲೈನ್‌ನಲ್ಲಿ...

ಫ್ಯಾಷನ್‌ ಮತ್ತು ಮೇಕಪ್‌ ಜಗತ್ತಿನಲ್ಲಿ ಕಣ್ಣಿನ ಮೇಕಪ್‌ಗೆ ಇನ್ನಿಲ್ಲದ ಆದ್ಯತೆ ಸಿಗತೊಡಗಿದಾಗಿನಿಂದಲೂ ಪ್ರಸಾಧನ ಸಾಮಗ್ರಿಗಳು ಆನ್‌ಲೈನ್‌ನಲ್ಲಿ ಸಿಗಲಾರಂಭಿಸಿವೆ. ಸಿಲ್ವರ್‌ ಗ್ಲಿಟರ್‌, ಎಕ್ಸಾಟಿಕ್‌, ಬ್ಲೂ ಐ, ಜ್ಯುವೆಲ್ಸ್‌, ಐ ಲ್ಯಾಶಸ್‌ ಆ್ಯಂಡ್‌ ಅಡೆಸ್ಸಿವ್‌... ಹೀಗೆ ಹತ್ತಾರು ಆಯ್ಕೆಗಳು ಆನ್‌ಲೈನ್‌ನಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT