ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಗ್‌ನ ವಿವಾದಾತ್ಮಕ ಶಿಲ್ಪಗಳು

Last Updated 12 ಜೂನ್ 2021, 19:30 IST
ಅಕ್ಷರ ಗಾತ್ರ

ಜೆಕ್ ಗಣರಾಜ್ಯದಲ್ಲಿರುವ ಹಚ್ಚ ಹಸಿರು ಕಾಡುಗಳು, ಸುಂದರವಾದ ಬೆಟ್ಟಗಳ ಸಾಲುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಯುರೋಪಿಯನ್ ಒಕ್ಕೂಟದ 13ನೇ ದೊಡ್ಡ ಹಾಗೂ ಅತ್ಯಂತ ಸುಂದರ ನಗರಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಜೆಕ್ ಗಣರಾಜ್ಯದ ರಾಜಧಾನಿ ‘ಪ್ರಾಗ್’ (ಜೆಕ್‌ನಲ್ಲಿ ಪ್ರಾಹ). ಐತಿಹಾಸಿಕ ಕಟ್ಟಡಗಳು, ಕ್ಯಾಸಲ್‍ಗಳು, ಸೇತುವೆಗಳು ಹಾಗೂ ಅವುಗಳ ಮೇಲಿರುವ ಸುಂದರ ಶಿಲ್ಪಗಳು ಹೀಗೆ ಹತ್ತು ಹಲವು ಆಕರ್ಷಣೆಗಳಿಂದ ಕೂಡಿದ ಪ್ರಾಗ್ ಪ್ರವಾಸಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಜೆಕ್ ಸಾಂಪ್ರದಾಯಿಕ ಸಿಹಿ ತಿಂಡಿಗಳು ಮತ್ತು ಉಲ್ಲೇಖನೀಯ ಪೇಸ್ಟ್ರಿಗಳು, ಆತಿಥ್ಯ, ರುಚಿಕರವಾದ ಬಿಯರ್‌ಗೆ ಮಾರುಹೋಗದವರಿಲ್ಲ.

ಜೆಕ್ ಗಣರಾಜ್ಯವಾಗುವುದಕ್ಕೂ ಮುನ್ನ ಜೆಕಸ್ಲೋವಾಕಿಯಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು ಸೋವಿಯತ್ ಆಳ್ವಿಕೆಯಲ್ಲಿತ್ತು. 1993ರಲ್ಲಿ ಜೆಕಸ್ಲೋವಾಕಿಯಾವನ್ನು ಜೆಕ್ ಮತ್ತು ಸ್ಲೋವಾಕಿಯಾ ಎಂದು ಎರಡು ರಾಜ್ಯಗಳನ್ನಾಗಿ ವಿಭಜಿಸಲಾಯಿತು. ಜೆಕ್‌ ರಾಜಧಾನಿಯಾದ ಪ್ರಾಗ್‌ನಲ್ಲಿ ಸೇತುವೆಗಳು, ಕೋಟೆಗಳು ಮತ್ತು ಜಿಂಜರ್ ಬ್ರೆಡ್ ಮನೆಗಳ ನಿರ್ಮಾಣದ ಹಿಂದೆ ಮರೆತುಹೋದ ಕರಾಳ ರಾಜಕೀಯ ಇತಿಹಾಸವಿದೆ.

ಪ್ರಾಗ್ ನಗರದ ಬೀದಿಗಳಲ್ಲಿ ಸಂಚರಿಸಿದರೆ, ಅಸಂಖ್ಯಾತ ಸುಂದರ ಐತಿಹಾಸಿಕ ಕಟ್ಟಡಗಳ ಹಾಗೂ ಹೆಗ್ಗುರುತುಗಳ ಪರಿಚಯ ನಿಮಗಾಗುತ್ತದೆ. ಅಲ್ಲದೆ, ಹಲವಾರು ಪ್ರಚೋದನಕಾರಿ, ವಿವಾದಾತ್ಮಕ ಶೈಲಿಯ ಶಿಲ್ಪಗಳು ಕಾಣಸಿಗುತ್ತವೆ. ಕೆಲವು ಶಿಲ್ಪಗಳು ನಗೆಯುಕ್ಕಿಸಿದರೆ, ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ. ಇತಿಹಾಸ ಮತ್ತು ಕಲೆಯನ್ನು ಪ್ರೀತಿಸುವ ಯಾರೇ ಆಗಲಿ ಪ್ರಾಗ್ ನಗರವನ್ನು ಇಷ್ಟಪಡುತ್ತಾರೆ.

ಡೇವಿಡ್ ಸೆರ್ನಿ

ಜೆಕ್ ಗಣರಾಜ್ಯದ ಅತ್ಯಂತ ವಿವಾದಾತ್ಮಕ ಸಮಕಾಲೀನ ಫ್ರೆಂಚ್ ಶಿಲ್ಪಿ ಡೇವಿಡ್ ಸೆರ್ನಿ; ಸೋವಿಯತ್ ವಿರುದ್ಧ ಧ್ವನಿಯೆತ್ತಿ ಅಲ್ಪಕಾಲ ಬಂಧನಕ್ಕೊಳಗಾಗಿದ್ದರು. ನಂತರ ಸಿಡಿದೆದ್ದು ಪ್ರಾಗ್ ನಗರದಾದ್ಯಂತ ಚಿಂತನಾತ್ಮಕ -ಪ್ರಚೋದನಾತ್ಮಕ ಶಿಲ್ಪಗಳನ್ನು ರಚಿಸಿದರು. ಪ್ರತಿಯೊಂದು ಕಲಾಕೃತಿಯೂ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ಸಮಾಜವನ್ನು ರಾಜಕೀಯ ಹೇಗೆ ರೂಪಿಸುತ್ತದೆಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಡೇವಿಡ್ ಸೆರ್ನಿಯವರ ಕಲಾಕೃತಿಗಳನ್ನು ನಾವು ಜೆಕ್ ಗಣರಾಜ್ಯದ ಹಲವು ಕಡೆ ನೋಡಬಹುದು.

* ಪಿಂಕ್ ಟ್ಯಾಂಕ್

ಶಿಲ್ಪಿ ಡೇವಿಡ್ ಸೆರ್ನಿ ಕಲಾ ವಿದ್ಯಾರ್ಥಿಯಾಗಿದ್ದಾಗಲೇ ಸೋವಿಯತ್ ಬಗ್ಗೆ ತನಗಿದ್ದ ಆಕ್ರೋಶವನ್ನು ತೋರಿಸಿದ್ದ. 1991ರಲ್ಲಿ ಸೋವಿಯತ್ ಸ್ಮಾರಕ ಯುದ್ಧ ಟ್ಯಾಂಕರ್‌ಗೆ ಪಿಂಕ್ ಬಣ್ಣವನ್ನು ಬಳಿದಿದ್ದ. ಆ ಸಮಯದಲ್ಲಿ ಯುದ್ಧ ಟ್ಯಾಂಕರ್ ರಾಷ್ಟ್ರೀಯ ಸಾಂಸ್ಕೃತಿಕ ಸ್ಮಾರಕವಾಗಿದ್ದುದರಿಂದ ಸೆರ್ನಿಯನ್ನು ಸ್ವಲ್ಪಕಾಲ ಬಂಧನದಲ್ಲಿಡಲಾಯಿತು. ಪ್ರಾಗ್‌ನಿಂದ 20 ಕಿ.ಮೀ ದೂರದಲ್ಲಿರುವ ಮಿಲಿಟರಿ ಮ್ಯೂಸಿಯಂಗೆ ಟ್ಯಾಂಕರನ್ನು ಸ್ಥಳಾಂತರಿಸಲಾಯಿತು. ಜೆಕ್ ಗಣರಾಜ್ಯವಾದ ನಂತರ 2012ರಲ್ಲಿ ಮತ್ತೆ ಪ್ರಾಗ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

* ಹ್ಯಾಂಗಿಂಗ್ ಮ್ಯಾನ್

ಪ್ರಾಗ್ ನಗರದ ‘ಓಲ್ಡ್ ಟೌನ್’ನ ರಸ್ತೆಯಲ್ಲಿ ಸಂಚರಿಸುತ್ತಿರಬೇಕಾದರೆ, ಎತ್ತರದ ಕಟ್ಟಡವೊಂದರ ಅಂಚಿನಲ್ಲಿ, ಒಂದು ಕೈಯಲ್ಲಿ ಲೋಹದ ರಾಡ್ ಹಿಡಿದುಕೊಂಡು ನೇತಾಡುತ್ತಿರುವ ವ್ಯಕ್ತಿಯ ಶಿಲ್ಪ ಗಮನ ಸೆಳೆಯುತ್ತದೆ. ಸುಮಾರು 20 ಮೀಟರ್ ಎತ್ತರದಲ್ಲಿ ನೇತಾಡುತ್ತಿರುವ, ಏಳು ಅಡಿ ಉದ್ದದ ಶಿಲ್ಪ ಕೈ ಬಿಡಬೇಕೋ, ಬೇಡವೋ ಎನ್ನುವ ಸಂದಿಗ್ಧದಲ್ಲಿ ಇರುವಂತೆ ಕಾಣುತ್ತದೆ. ಈ ಶಿಲ್ಪವು ಖ್ಯಾತ ಮನೋವಿಶ್ಲೇಷಕ ‘ಸಿಗ್ಮಂಡ್ ಫ್ರಾಯ್ಡ್’ನದ್ದಾಗಿದೆ. ಸ್ವತಃ ಮನೋವಿಶ್ಲೇಷಕನಾದರೂ ತನ್ನ ಸಾವಿನ ಬಗ್ಗೆ ಭಯಪಡುತ್ತಿದ್ದ ಹಾಗೂ ಹಲವು ವಿಷಯಗಳ ಬಗ್ಗೆ ಭೀತಿಯುಳ್ಳವನಾಗಿದ್ದ. ಹಲವು ಫೋಬಿಯಾಗಳಿಂದ ನರಳುತ್ತಿದ್ದ.

‘ಹ್ಯಾಂಗಿಂಗ್ ಮ್ಯಾನ್’ ಶಿಲ್ಪವು ಸಿಗ್ಮಂಡ್ ಫ್ರಾಯ್ಡ್‌ನ ಆಂತರಿಕ ಹೋರಾಟಗಳ ಮೇಲೆ ಬೆಳಕು ಚೆಲ್ಲುತ್ತದೆ. ನೇತಾಡುತ್ತಿರುವ ವ್ಯಕ್ತಿಯ ಶಿಲ್ಪವನ್ನು ನಿಜವಾದ ವ್ಯಕ್ತಿಯೆಂದುಭಾವಿಸಿ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಗೆ ಕರೆಮಾಡಿ ದೂರು ನೀಡಿದ ಪ್ರಸಂಗಗಳೂ ನಡೆದಿವೆ. 20ನೇ ಶತಮಾನದ ಬುದ್ಧಿಜೀವಿಗಳು ಬದುಕುಳಿಯುವುದರ ಸಂಕೇತವನ್ನು, ಈ ಭಂಗಿಯಲ್ಲಿ ಶಿಲ್ಪವನ್ನು ನಿರ್ಮಿಸುವುದರ ಹಿಂದೆ ಸೆರ್ನಿಯ ಉದ್ದೇಶವಾಗಿತ್ತೆಂದು ಹೇಳುತ್ತಾರೆ. ಭವಿಷ್ಯದಲ್ಲಿ ಬೌದ್ಧಿಕತೆಯ ಉಳಿವಿನ ಅನಿಶ್ಚಿತತೆಯ ಸಂಕೇತವೂ ಹೌದು.

* ಪೀಯಿಂಗ್ ಗೈಸ್

ಲೆಸ್ಸರ್ ಟೌನ್ ಎಂದು ಕರೆಯಲ್ಪಡುವ ‘ಮಾಲಾಸ್ಟ್ರಾನಾ’ ಪ್ರದೇಶವು ಬೆಟ್ಟ ಪ್ರದೇಶವಾಗಿದ್ದು, ಪ್ರಾಗ್ ನಗರ ಹಾಗೂ ವಲ್ಟಾವಾ ನದಿಯ ಸೌಂದರ್ಯವನ್ನು ವೀಕ್ಷಿಸಲು ಸೂಕ್ತ ಪ್ರದೇಶವಾಗಿದೆ. ಮಾಲಾಸ್ಟ್ರಾನದಲ್ಲಿರುವ ‘ಫ್ರಾಂಜ್ ಕಾಫ್ಕಾ ಮ್ಯೂಸಿಯಂ’ನ ಹೊರಗಡೆಯಿರುವ ಇಬ್ಬರು ಪುರುಷರ ಶಿಲ್ಪಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. 210 ಸೆಂ.ಮೀ ಎತ್ತರವಿರುವ, ಕಂಚಿನಿಂದ ತಯಾರಿಸಲಾದ ಯಾಂತ್ರೀಕೃತ ಶಿಲ್ಪಗಳು, ಪರಸ್ಪರ ಎದುರು ನಿಂತು ಅಷ್ಟೇನೂ ಆಳವಿಲ್ಲದ ಕೊಳವೊಂದಕ್ಕೆ ‘ಮೂತ್ರ ವಿಸರ್ಜನೆ’ ಮಾಡುತ್ತಿರುತ್ತವೆ.

ಶಿಲ್ಪಗಳು ಮೇಲ್ನೋಟಕ್ಕೆ ಅಶ್ಲೀಲ ಕಲಾಕೃತಿಯಂತೆ ಕಂಡರೂ ಇದರ ಹಿಂದೆ ಒಂದು ರಹಸ್ಯ ಅಡಗಿದೆ. ಮೂತ್ರ ವಿಸರ್ಜಿಸುತ್ತಿರುವಾಗ, ಎರಡೂ ಕಲಾಕೃತಿಗಳ ಸೊಂಟ ಕುಣಿಯುತ್ತದೆ, ಲಿಂಗ ಮೇಲೆ ಕೆಳಗೆ ಚಲಿಸುತ್ತದೆ ಹಾಗೂ ನೀರಿನಿಂದ ಪ್ರಾಗ್ ನಿವಾಸಿಗಳ ಪ್ರಸಿದ್ಧ ಉಲ್ಲೇಖಗಳನ್ನು ಬರೆಯುತ್ತದೆ. ಶಿಲ್ಪಗಳ ಪಕ್ಕದಲ್ಲಿರುವ ಮೊಬೈಲ್ ಫೋನ್‌ನಿಂದ ಸಂದೇಶ ಕಳುಹಿಸುವುದರ ಮೂಲಕ ಸಂದೇಶ ಬರೆಯುವುದನ್ನು ನಿಲ್ಲಿಸಬಹುದು. ಆಳವಿಲ್ಲದ ಕೊಳ ಅಸಲಿಗೆ ಜೆಕ್ ಗಣರಾಜ್ಯದ ರೂಪರೇಖೆಯಾಗಿದೆ. ಅರ್ಥಾತ್ ಪುರುಷರು ಜೆಕ್ ದೇಶದ ಮೇಲೆ ಮೂತ್ರ ವಿಸರ್ಜಿಸುತ್ತಿದ್ದಾರೆಂಬ ಸಂದೇಶ ನೀಡುತ್ತದೆ.

* ಕ್ರಾಲಿಂಗ್ ಬೇಬೀಸ್

‘ಕಂಪಾ ಐಲ್ಯಾಂಡ್’ ಪ್ರಾಗ್ ನಗರದ ಸುಂದರವಾದ ಪ್ರದೇಶಗಳಲ್ಲೊಂದಾಗಿದೆ. ಇಲ್ಲಿಂದ ಕಾಣುವ ನಗರದ ನೋಟ, ಚಾರ್ಲ್ಸ್‌ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತವೆ. ‘ಕಂಪಾ ಪಾರ್ಕ್’ ನಲ್ಲಿರುವ ಕರಿ ಬಣ್ಣದ, ಅಸಹಜ ಗಾತ್ರದ, ವಿಲಕ್ಷಣ ರೀತಿಯ ತೆವಳುತ್ತಿರುವ ಭಂಗಿಯಲ್ಲಿರುವ ಮಕ್ಕಳ ಶಿಲ್ಪಗಳಂತೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಬಾರ್ ಕೋಡ್‌ನಂತೆ ಕಾಣುವ ಮುಖಗಳು ಗರ್ಭಪಾತವನ್ನು ಪ್ರತಿಭಟಿಸುವುದರ ಸಂಕೇತವಾಗಿವೆ. ಕಂಚಿನಿಂದ ತಯಾರಿಸಲಾದ ಈ ಶಿಲ್ಪಗಳು ಪುಟ್ಟ ಮಕ್ಕಳಿಗೆ ಮನರಂಜನೆಯ ವಸ್ತುಗಳಾಗಿವೆ. ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು, ತೆವಳುತ್ತಿರುವ ಭಂಗಿಯಲ್ಲಿರುವ ಮಕ್ಕಳನ್ನು ಕುತೂಹಲದಿಂದ ವೀಕ್ಷಿಸಿ ಫೋಟೊ ತೆಗೆಸಿಕೊಳ್ಳುತ್ತಾರೆ. ತೆವಳುತ್ತಿರುವ ಭಂಗಿಯಲ್ಲಿರುವ ಮಕ್ಕಳ ಶಿಲ್ಪಗಳು ಕಮ್ಯುನಿಸ್ಟ್ ಯುಗದ ಹಾಗೂ ನಿರಂಕುಶ ಆಡಳಿತವು ಪ್ರೌಢಾವಸ್ಥೆಯನ್ನು ತಲುಪುವ ಸಾಮರ್ಥ್ಯವನ್ನು ನಿಗ್ರಹಿಸುವುದರ ಸಂಕೇತವಾಗಿವೆ. ಇಂತಹ ತೆವಳುತ್ತಿರುವ ಮಕ್ಕಳ ಶಿಲ್ಪಗಳು, ಪ್ರಾಗ್ ನಗರದ ಅತಿ ಎತ್ತರದ ‘ಶಿಶ್ಕೋವ್ ಟೆಲಿವಿಷನ್ ಟವರ್’ ಮೇಲೂ ಕಾಣಸಿಗುತ್ತವೆ.

* ಶಿಶ್ಕೋವ್ ಟೆಲಿವಿಷನ್ ಟವರ್

ಪ್ರಾಗ್ ನಗರದ ಅತಿ ಎತ್ತರದ ಗೋಪುರವೆಂದೇ ಗುರುತಿಸಲ್ಪಟ್ಟಿರುವ ‘ಶಿಶ್ಕೋವ್ ಟೆಲಿವಿಷನ್ ಟವರ್’ ಪ್ರವಾಸಿಗರು ನೋಡಲೇ ಬೇಕಾದಂತಹ ಅದ್ಭುತ ಟವರ್. ಅಸಾಂಪ್ರದಾಯಿಕ ಆಕಾರವುಳ್ಳ ಈ ಗೋಪುರದ ಮೇಲೆ ತೆವಳಿಕೊಂಡು ಹೋಗುತ್ತಿರುವ ಹತ್ತು ಮಕ್ಕಳ ಶಿಲ್ಪಗಳಿವೆ. ಶಿಲ್ಪಗಳನ್ನು ಫೈಬರ್ ಗ್ಲಾಸ್‌ನಿಂದ ತಯಾರಿಸಲಾಗಿದ್ದು ನೋಡುಗರನ್ನು ಅಚ್ಚರಿಗೊಳಿಸುತ್ತವೆ. 216 ಮೀ. ಎತ್ತರವುಳ್ಳ ‘ಶಿಶ್ಕೋವ್ ಟೆಲಿವಿಷನ್ ಟವರ್’ನ 66ನೇ ಮೀಟರ್‌ನಲ್ಲಿ ರೆಸ್ಟೊರೆಂಟ್, 70 ಮೀಟರ್ ಎತ್ತರದಲ್ಲಿ ವಿಶ್ರಾಂತಿ ಗೃಹ, 93 ಮೀಟರ್ ಎತ್ತರದಲ್ಲಿ ವೀಕ್ಷಣಾಲಯವಿದ್ದು ನಗರವನ್ನು 360 ಡಿಗ್ರಿಗಳಲ್ಲಿ ವೀಕ್ಷಿಸಬಹುದು.

* ಬ್ರೌನ್ ನೋಸಸ್

ಫ್ಯುಟುರಾ ಆರ್ಟ್ ಮ್ಯೂಸಿಯಂ ಹಿಂಭಾಗದ ತೋಟದಲ್ಲಿರುವ ‘ಬ್ರೌನ್ ನೋಸರ್ಸ್’ ಮೇಲ್ನೋಟಕ್ಕೆ ಉದ್ಧಟತನದಂತೆ ಕಾಣುವ ಶಿಲ್ಪಗಳು ನೋಡುಗರಲ್ಲಿ ನಗೆಯುಕ್ಕಿಸುತ್ತವೆ. ಸುಮಾರು 17 ಅಡಿ ಎತ್ತರವಿರುವ ಬೃಹದಾಕಾರದ ಈ ಶಿಲ್ಪಗಳನ್ನು ಗೋಡೆಯ ಕಡೆ ಮುಖಮಾಡಿ ಬಗ್ಗಿರುವಂತೆ ರಚಿಸಲಾಗಿದೆ. ಅವುಗಳ ಪೃಷ್ಠದ ಮೇಲೆ ಏಣಿಯನ್ನಿಡಲಾಗಿದೆ. ವೀಕ್ಷಕರು ಏಣಿಯ ಮೂಲಕ ಹತ್ತಿ ಶಿಲ್ಪದ ಗುದದ್ವಾರದಲ್ಲಿ ತಲೆಯನ್ನು ತೂರಿಸಿ ನೋಡಿದರೆ, ಜೆಕ್ ಗಣರಾಜ್ಯದ ಮಾಜಿ ಅಧ್ಯಕ್ಷ ಮತ್ತು ನ್ಯಾಷನಲ್ ಗ್ಯಾಲರಿಯ ಮುಖ್ಯಸ್ಥರು ಚಮಚದಿಂದ ಪರಸ್ಪರ ತಿನ್ನಿಸುತ್ತಿರುವ ವಿಡಿಯೊ ನೋಡಬಹುದು. ಹಿನ್ನೆಲೆಯಲ್ಲಿ ‘ವಿ ಆರ್‌ ಚಾಂಪಿಯನ್ಸ್’ ಎಂಬ ಮಾತುಗಳು ಕೇಳಿಬರುತ್ತವೆ. ಈ ಶಿಲ್ಪಗಳು ರಾಜಕಾರಣಿಗಳ ಅಹಂಕಾರಕ್ಕೆ ಪೆಟ್ಟುಕೊಟ್ಟಂತಿವೆ.

* ಡೆಡ್ ಹಾರ್ಸ್

ನಿಷ್ಪ್ರಯೋಜಕನನ್ನು ‘ಸತ್ತ ಕುದುರೆ’ಗೆ ಹೋಲಿಸುತ್ತೇವೆ. ಅದೇರೀತಿ, ವೆನ್ಸೆಸ್ಲಾಸ್ಸ್ಕ್ವೇರ್‌ನ ‘ಪಲಾಕ್ ಲುಸೆರ್ನಾ’ ದಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ಸತ್ತ ಕುದುರೆಯೊಂದರ ಮೇಲೆ ಸಂತ ವೆನ್ಸೆಸ್ಲಾಸ್ ಸವಾರಿ ಮಾಡುತ್ತಿರುವ ಶಿಲ್ಪವಿದೆ. ಅಸಲಿಗೆ ಈ ಕಲಾಕೃತಿಯು ವೆನ್ಸೆಸ್ಲಾಸ್ಸ್ಕ್ವೇರ್‌ಮೇಲ್ಭಾಗದಲ್ಲಿರುವ ‘ವೆನ್ಸೆಸ್ಲಾಸ್’ ನ ದೊಡ್ಡ ಪ್ರತಿಮೆಯ ವಿಡಂಬನೆಯಾಗಿದೆ. ಕಷ್ಟದಲ್ಲಿರುವವರಿಗೆ ವೆನ್ಸೆಸ್ಲಾಸ್ ಬಂದು ಸಹಾಯ ಮಾಡುತ್ತಾರೆಂದು ಹೇಳುತ್ತಾರಾದರೂ, ಇದುವರೆಗೂ ಆತ ಬಂದು ಯಾರಿಗೂ ಸಹಾಯ ಮಾಡಿದ್ದಿಲ್ಲ. ಅರ್ಥಾತ್ ಆತ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಸತ್ತ ಕುದುರೆಯಂತೆ ಎನ್ನುವುದನ್ನು ಈ ಶಿಲ್ಪ ಸೂಚಿಸುತ್ತದೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT