ಶುಕ್ರವಾರ, ಡಿಸೆಂಬರ್ 6, 2019
21 °C

ಬಣ್ಣದಲ್ಲಿ ತುಂಬಿದ ಭಾವನೆಗಳು

Published:
Updated:
Deccan Herald

ಕೊಳದಲ್ಲಿ ಅರಳಿರುವ ತಾವರೆ, ಹೂಮಾಲೆ ಕಟ್ಟುತ್ತಿರುವ ಅಜ್ಜಿ, ಕಡಲತಡಿಯಲ್ಲಿ ಸೂರ್ಯನ ಹೊಂಗಿರಣದಲ್ಲಿ ಪ್ರಕೃತಿ ಸೊಬಗನ್ನು ಸವಿಯುತ್ತಾ ದೋಣಿ ನಡೆಸುತ್ತಿರುವ ಯುವತಿ, ಹಸಿದ ಸಿಂಹ... ಈ ಎಲ್ಲಾ ಚಿತ್ರಗಳೂ ಕ್ಯಾನ್ವಾಸಿನಲ್ಲಿ ಅರಳಿವೆ.

ಮೆಲಾಂಜೆ ಹೆಸರಿನಲ್ಲಿ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಈ ಕಲಾಕೃತಿಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಮುಡಿಗೆ ಹೂ ಚೆಂದ ಎಂದಂತೆ ಹೂ ಮುಡಿದು ಸಿಂಗಾರಗೊಂಡಿರುವ ಯುವತಿ, ಬೀದಿಯ ಮನೆಗಳು, ಅರಳಿ ನಿಂತಿರುವ ಹೂಗಳು, ಬೀದಿ ಬದಿಯಲ್ಲಿ ಅಡುಗೆ ತಯಾರಿಗೆ ಬಳಸಲು ಇಟ್ಟಿರುವ ಪಾತ್ರೆಗಳು, ಯಾರೋ ಬರುವುದಕ್ಕಾಗಿ ಹತಾಶಳಾಗಿ ಕಾಯುತ್ತಿರುವ ಅಜ್ಜಿ. ‌ಬೆಟ್ಟ ಗುಡ್ಡಗಳ ಮಧ್ಯೆ ಸ್ವಚ್ಛಂದವಾಗಿ ಹರಿಯುತ್ತಿರುವ ನದಿ ಇದೆಲ್ಲವೂ ಕಣ್ಣ ಮುಂದೆ ತಂದಿದ್ದಾರೆ ಕಲಾವಿದರು. 

ಪ್ರಕೃತಿಯ ಅಂಚಿನಲ್ಲಿ ಸಾಗರದ ಮಡಿಲಿನಲ್ಲಿ ದೋಣಿಗನ ಪ್ರಯಾಣ, ಮರ, ಗಿಡಗಳ ಮದ್ಯೆ ಏಕಾಂಗಿ ಪ್ರವಾಸ. ಪ್ರಕೃತಿಗೂ ಮಾನವನಿಗಿರುವ ಅವಿನಾಭವ ಸಂಬಂಧ. ಹುಟ್ಟು, ಸಾವು, ಭೂಲೋಕ, ಪಾತಾಳವನ್ನು ಪಿರಮಿಡ್‌ ಆಕಾರದಲ್ಲಿ ಜೀವ ತುಂಬಿದ್ದಾರೆ ಕಲಾವಿದೆ ಶಹಾಜ್‌ ಪುರಿ.

ಈ ಕಲಾ ಪ್ರದರ್ಶನದಲ್ಲಿ ಕೇವಲ ಹಿರಿಯ ಕಲಾವಿದರಷ್ಟೇ ಅಲ್ಲ ಕಿರಿಯ ಕಲಾವಿದರೂ ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಬಬಿತಾ ಜೋರಿ ಸಕ್ಸೆನಾ, ಕವಿತಾ ಹರ್ಷವರ್ಧನ್‌, ಶಿಖಾ ಗರ್ಗ್, ವನಿತಾ ಜಲನ್‌, ಅಫೀಲೆ ಖತ್ತರ್‌ ಅರೋರ, ಜುರುಶಾ ಮಾರ್ಟಿನ್‌, ಕರಣ್‌ ದೇವ್‌, ಪವಿತ್ರಾ ಶರ್ಮಾ, ಶ್ವೇತಾ ಚಂದ್ರ, ಶಹಜ್‌ ಪುರಿ, ಎ.ತೇಜಸ್ವಿ ಮುಂತಾದವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಜಲವರ್ಣ, ಆಕ್ರಿಲಿಕ್, ತೈಲವರ್ಣದಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಈ ಪ್ರದರ್ಶನವು ಡಿಸೆಂಬರ್‌ 2 ರವರೆಗೆ  ಇರಲಿದೆ.

ಪ್ರತಿಕ್ರಿಯಿಸಿ (+)