ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಹುಡುಗಿ ಮೂಡಿ ಮಾಡಿದಳು ಮೋಡಿ..

Last Updated 10 ಮೇ 2019, 20:00 IST
ಅಕ್ಷರ ಗಾತ್ರ

ಸುಂದರ ಹೂ, ಅದಕ್ಕೊಪ್ಪುವ ಅಷ್ಟೇ ಸುಂದರ ಹೂಕುಂಡ ಮನಸ್ಸನ್ನು ಆಕರ್ಷಿಸುತ್ತದೆ. ಸಹಜ ಸೌಂದರ್ಯದ ಹೂವನ್ನು ಇನ್ನಷ್ಟು ಚೆಂದಗಾಣಿಸುವುದೂ ಒಂದು ಕಲೆ. ಜಗತ್ತಿನಲ್ಲಿ ಬಹುಬೇಡಿಕೆಯಿರುವ ಕ್ಷೇತ್ರಗಳಲ್ಲಿಪುಷ್ಪವಿನ್ಯಾಸವೂ ಒಂದು.

ಖ್ಯಾತ ಪುಷ್ಪೋದ್ಯಮ ಸಂಸ್ಥೆ ಲಾ ಫ್ಲರ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಬ್ರಿಟನ್ ಮೂಲದ ಪುಷ್ಪತಜ್ಞೆ ಜೋ ಮೂಡಿ ಅವರು ನಗರದಲ್ಲಿ ಇತ್ತೀಚೆಗೆ ಪುಷ್ಪ ಪ್ರದರ್ಶನ ನಡೆಸಿಕೊಟ್ಟರು. ಸೂಪರ್ ಮಾರ್ಕೆಟ್‌, ಮಾಲ್‌ಗಳಲ್ಲಿ ತಾಜಾ ಹೂವುಗಳನ್ನು ಜೋಡಿಸಿಡುವ ಕೆಲಸವನ್ನು ಲಾ ಫ್ಲರ್‌ ಮಾಡುತ್ತದೆ. ಆ ಮೂಲಕ ಪುಷ್ಪಗಳ ಚೆಲುವಿಗೆ ಮತ್ತಷ್ಟು ಮೆರುಗು ನೀಡುತ್ತದೆ.

ಹವ್ಯಾಸಿ ಪುಷ್ಪಶಾಸ್ತ್ರಜ್ಞೆಯಾಗಿ ಸ್ವಂತ ಉದ್ದಿಮೆ ನಡೆಸುತ್ತಿರುವ ಜೋ ಅವರು ವಿವಾಹ ಕಾರ್ಯಕ್ರಮ, ವಿಶೇಷ ಸಮಾರಂಭಗಳಿಗೆ ‍ಪುಷ್ಪವಿನ್ಯಾಸ ಮಾಡುತ್ತಾ, ತರಬೇತಿಯನ್ನೂ ನೀಡುತ್ತಿದ್ದಾರೆ. ಇದೀಗ ಲಾ ಫ್ಲರ್‌ ಜತೆಗೂ ಕೆಲಸ ಮಾಡುತ್ತಿದ್ದಾರೆ.

ಲಾ ಫ್ಲರ್‌ ಸಂಸ್ಥೆಯ ಸಿಇಒ ಹರಿಹರನ್ ಸುಬ್ರಮಣಿಯನ್ ನೇತೃತ್ವದಲ್ಲಿ ಪುಷ್ಪ ಪ್ರದರ್ಶನ ನಡೆಯಿತು. ಪ್ರದರ್ಶನಕ್ಕೆ ವಿವಿಧ ನಮೂನೆಯ ಹೂಗಳನ್ನು ಆಯ್ಕೆ ಮಾಡಲಾಗಿತ್ತು. ಗುಲಾಬಿ, ಕಾರ್ನೇಷನ್, ಕ್ರಿಸೆಂಥಮಮ್, ಓರಿಯಂಟಲ್ ಲಿಲ್ಲೀಸ್, ಏಷ್ಯಾಟಿಕ್ ಲಿಲ್ಲೀಸ್, ಜರ್ಬೇರಾ, ಸ್ಟೆಟೈಸ್, ಯೂಕಲಿಪ್ಟಸ್ ಆರ್ಕಿಡ್ಸ್ ಮತ್ತು ಬರ್ಡ್ಸ್ ಆಫ್ ಪ್ಯಾರಡೈಸ್ ಮೊದಲಾದ ಪುಷ್ಪಗಳು ಇಲ್ಲಿದ್ದವು. ಭಾರತದಲ್ಲೇ ಬೆಳೆಯುವ ಹೂಗಳಿಗೆ ಆದ್ಯತೆ ನೀಡಲಾಗಿತ್ತು.

ಜೋ ಮೂಡಿ

ಜೋ ಮೂಡಿಯವರಿಗೆ ಪುಷ್ಪಗಳ ಮೇಲಿನ ಪ್ರೀತಿ ಅಪಾರ. ಅವರ ವೃತ್ತಿಬದುಕು ಕ್ರಿಯಾಶೀಲ ಹಾಗೂ ವೈವಿಧ್ಯಮಯ. ತೋಟಗಾರಿಕಾ ಉದ್ದಿಮೆಯಲ್ಲಿ ಅವರದ್ದು 15 ವರ್ಷಗಳ ಅನುಭವ. ಇವರ ಅಜ್ಜಿ ಅಮೆರಿಕದಲ್ಲಿ 40ರ ದಶಕದಲ್ಲಿಪುಷ್ಪ ಶಾಸ್ತ್ರಜ್ಞೆಯಾಗಿ ತರಬೇತಿ ಪಡೆದು, ಉದ್ದಿಮೆ ತೆರೆದರು. ಬಳಿಕ ಅದು ಕುಟುಂಬದ ವೃತ್ತಿಯೇ ಆಯಿತು. ಮದುವೆಯಾದ ಬಳಿಕ ಮೂಡಿ ಅವರು ಇಂಗ್ಲೆಂಡ್‌ಗೆ ಸ್ಥಳಾಂತರಗೊಂಡರು. ಸೂಪರ್ ಮಾರ್ಕೆಟ್‌ಗಳಿಗೆ ಹೂಗುಚ್ಛ ಪೂರೈಸುವ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಇಲ್ಲಿ ಹೂಗುಚ್ಛಗಳನ್ನು ವಿನ್ಯಾಸಗೊಳಿಸುವ ಅನುಭವ ದೊರೆಯಿತು. ಇವರ ವಿನ್ಯಾಸಗಳು ಕೆಲ ದಿನಗಳಲ್ಲಿಯೇ ಇಂಗ್ಲೆಂಡ್‌ನಲ್ಲಿ ಮನೆಮಾತಾದವು.

**

ಪುಷ್ಪಗಳ ಆಯ್ಕೆ ಸೂತ್ರ

* ಪುಷ್ಪಗಳು ಬಾಡಿಲ್ಲ ಅಥವಾ ಮುದುಡಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು

* ಕಾಂಡಗಳು ಬಲಿಷ್ಠವಾಗಿದ್ದು, ಹೂಗಳ ಭಾರ ತಡೆದುಕೊಳ್ಳಬಲ್ಲವೇ ಎಂದು ನೋಡಿಕೊಳ್ಳಬೇಕು

* ಎಲೆಗಳು ಕಂದುಬಣ್ಣಕ್ಕೆ ತಿರುಗಿಲ್ಲ ಅಥವಾ ಎಲೆಗಳಲ್ಲಿ ಕಲೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು

* ಹೂಗಳು ಶುಷ್ಕವಾಗಿರಬೇಕು. ನೀರಿನಂಶವಿದ್ದರೆ ಅದಕ್ಕೆ ಬೇಗನೆ ರೋಗ ಬರುವ ಸಾಧ್ಯತೆ ಇರುತ್ತದೆ

* ಮನೆಯ ಅಲಂಕಾರಕ್ಕೆ ಹೊಂದುವಂಥ ಅಥವಾ ಕಾಂಟ್ರಾಸ್ಟ್ ಆಗಿರುವ ಹೂ ಆಯ್ಕೆ ಮಾಡಿಕೊಳ್ಳಬಹುದು

* ಹಾಲ್‌ನಲ್ಲಿ ಅಥವಾ ಡೈನಿಂಗ್ ಟೇಬಲ್ ಮಧ್ಯಭಾಗದಲ್ಲಿ ಹೂ ಜೋಡಿಸಿಟ್ಟರೆ ಅದ್ಭುತ ಲುಕ್ ನೀಡುತ್ತದೆ

* ಸುಂದರವಾದ ಪುಷ್ಪವೊಂದರ ಒಂದೇ ಕಾಂಡವನ್ನು ಹೂಕುಂಡದಲ್ಲಿ ಇಡುವುದು ಸೂಕ್ತ

* ಹೂವಿನ ಸಹಜ ಚೆಲುವು ಅನಾವರಣಗೊಳ್ಳುವಂತಹ ಸ್ವಾಭಾವಿಕ ವಿನ್ಯಾಸಗಳೇ ಹೆಚ್ಚು ಜನಪ್ರಿಯ

* ಆಕರ್ಷಕವಾಗಿ ಕಾಣಲು ಟೆಕ್ಸ್ಚರ್‌, ಸುಂದರ ಸೀಡ್ ಹೆಡ್‌, ಹುಲ್ಲು, ಬ್ಲೌಸಿ ಬ್ಲೂಮ್ ಬಳಸಲಾಗುತ್ತದೆ

* ಫೋಲಿಯೇಜ್ ಎಂಬಪ್ರಮುಖ ಟ್ರೆಂಡ್ ಈಗಲೂ ಪ್ರಾಮುಖ್ಯತೆ ಉಳಿಸಿಕೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT