ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆ ನಡುವೆಯೂ ಉತ್ತಮ ಶಿಕ್ಷಣ

ಓತಗಿ ಸರ್ಕಾರಿ ಶಾಲೆ ಸಿಬ್ಬಂದಿ ಶ್ರಮದಿಂದ ಅತ್ಯುತ್ತಮ ಸಾಧನೆ
Last Updated 6 ಜೂನ್ 2018, 10:23 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಓತಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಬ್ಬಂದಿ ಸೌಲಭ್ಯ ಕೊರತೆ ನಡುವೆಯೂ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ.

ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಶಂಸೆಗೆ ಈ ಶಾಲೆ ಪಾತ್ರವಾಗಿದೆ.

ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಮರಾಠಾ ಮತ್ತು ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಈ ಗ್ರಾಮದಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಇತರೆ ಮಾಧ್ಯಮಕಿಂತ ಹೆಚ್ಚಿರುವುದು ವಿಶೇಷ.

1ರಿಂದ 8ನೇ ತರಗತಿವರೆಗೆ ಒಟ್ಟು 204 ಮಕ್ಕಳು ಪ್ರವೇಶ ಪಡೆದಿದ್ದು, ಪ್ರತಿದಿನ 200 ಮಕ್ಕಳ ಹಾಜರಾತಿ ಇರುತ್ತದೆ. ಎಲ್ಲ ವಿಷಯಗಳಿಗೂ ಶಿಕ್ಷಕರು ಇದ್ದಾರೆ. ಪರಿಣಾಮಕಾರಿ ಬೋಧನೆ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಯೋಗಾಭ್ಯಾಸಕ್ಕೂ ಒತ್ತು ನೀಡಲಾಗುತ್ತದೆ. ಪ್ರೊಜೆಕ್ಟರ್‌ ಬಳಸಿ ಬೋಧನೆ ಮಾಡುವುದು ಈ ಶಾಲೆ ವಿಶೇಷ. ಪ್ರತಿ ವಾರ ಮಕ್ಕಳಿಗಾಗಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆ ಕಡ್ಡಾಯವಾಗಿ ಆಯೋಜಿಸಲಾಗುತ್ತದೆ.

2014ರಿಂದ ಪ್ರತಿ ವರ್ಷ ವಿಜ್ಞಾನ ಮತ್ತು ಗಣಿತ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿಭಾ ಕಾರಂಜಿ ಸ್ಪರ್ಧೆಯ ಭಾಷಣ, ಛದ್ಮವೇಶ, ಹುಚ್ಚಿ ಮತ್ತು ಪೋತರಾಜ ಪಾತ್ರಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದೆ. 2016ರಲ್ಲಿ ಶಾಟ್‌ಪಟ್‌ನಲ್ಲಿ ಈ ಶಾಲೆಯ ಪೂಜಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಸಮಸ್ಯೆ: 20 ಗುಂಟೆ ನಿವೇಶನದಲ್ಲಿ 9 ಕೋಣೆಗಳಿವೆ. ಮುಖ್ಯಶಿಕ್ಷಕ, ಅಡುಗೆ ಕೋಣೆ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಸೇರಿ ಒಟ್ಟು 5 ಕೋಣೆಗಳ ಕೊರತೆ ಇದೆ.

ಆಟದ ಮೈದಾನ ಸೌಲಭ್ಯವಿಲ್ಲದ ಕಾರಣ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ಶಾಲೆಯ ಅರ್ಧ ಭಾಗಕ್ಕೆ ಈಗಲೂ ಕಾಂಪೌಂಡ್ ಇಲ್ಲ. ರಸ್ತೆಗೆ ಹೊಂದಿಕೊಂಡೇ ಶಾಲೆ ಇರುವ ಕಾರಣ ಮಕ್ಕಳು ಭೀತಿ ಎದುರಿಸುತ್ತಾರೆ. ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕೊರತೆ ಇಲ್ಲ. ಗ್ರಾಮಸ್ಥರು ಪ್ರತಿಯೊಂದಕ್ಕೂ ಶಿಕ್ಷಕರಿಗೆ ಪ್ರೋತ್ಸಾಹಿಸುತ್ತಾರೆ. ಉಳಿದ ಕೊರತೆ ನೀಗಿದರೆ ಗುಣಮಟ್ಟ ಸುಧಾರಣೆಗೆ ಅನುಕೂಲ ಆಗುತ್ತದೆ ಎಂಬುದು ಪಾಲಕರ ಒತ್ತಾಸೆ.

ಪಾಲಕರು, ಗ್ರಾಮಸ್ಥರ ಸಹಕಾರ ಮತ್ತು ಸಿಬ್ಬಂದಿ ನೆರವಿನಿಂದ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗಿದೆ. ಮೈದಾನ ಸೇರಿ ಇತರ ಸಮಸ್ಯೆ ನೀಗಿದರೆ ಸುಧಾರಣೆ ಸಾಧ್ಯ
- ಬಜರಂಗ ಹುಪಳೆ, ಮುಖ್ಯಶಿಕ್ಷಕ, ಓತಗಿ 

ಶಶಿಕಾಂತ ಭಗೋಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT