ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾಗೆ ಡಾಕ್ಟರೇಟ್ ‘ಸಿದ್ಧಿ’: ರಂಗಭೂಮಿ ಕಲಾವಿದೆಯ ಮನದಾಳ...

Last Updated 24 ಡಿಸೆಂಬರ್ 2022, 1:26 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಅಣಲೆಸರ ಗ್ರಾಮ ನನ್ನೂರು, ಪ್ರಾಥಮಿಕ ಶಿಕ್ಷಣವನ್ನು ಹಾಸಣಗಿ ಶಾಲೆಯಲ್ಲಿ, ಪ್ರೌಢಶಾಲೆಯನ್ನು ಮಂಚಿಕೇರಿಯಲ್ಲಿ ಮುಗಿಸಿದೆ. ಅಪ್ಪ ಅಮ್ಮನಿಗೆ ಕೂಲಿ ಬಿಟ್ಟರೆ ಬೇರೇನೂ ತಿಳಿಯದು. ಎಸ್ಸೆಸ್ಸೆಲ್ಸಿಯಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಫೇಲಾದೆ. ಇದರಿಂದ ಸಾಕಷ್ಟು ಅವಮಾನ, ಹಿಂಜರಿಕೆ ಅನುಭವಿಸಿದೆ. ಇದು ನನ್ನ ಓದಿಗೆ ಹಿನ್ನಡೆಯಾಯಿತು.

ನೀನಾಸಂ ತಂದ ತಿರುವು...

ಹತ್ತನೇ ತರಗತಿಯ ನಂತರ ಗೆಳತಿಯರೆಲ್ಲರೂ ಓದಿಗಾಗಿ ಬೇರೆ ಕಡೆ ತೆರಳಿದರು. ನಾನು ಊರಿನಲ್ಲಿ ಒಂಟಿಯಾದೆ. ಇದೇ ಸಮಯಕ್ಕೆ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ಶಿಬಿರ ಹಮ್ಮಿಕೊಂಡಿತ್ತು. ಅಲ್ಲಿ ಮೇಷ್ಟ್ರಾಗಿದ್ದ ಚಿದಂಬರ ರಾವ್‌ ಜಂಬೆ ಅವರು ನನ್ನನ್ನು ಸೇರಿಸಿಕೊಂಡು ‘ಪುಂಟಿಲ’ ಎನ್ನುವ ನಾಟಕ ಮಾಡಿಸಿದರು. ಜತೆಗೆ ನನ್ನ ಅಭಿನಯ ಕಂಡು ’ನೀನ್ಯಾಕೆ ನೀನಾಸಂಗೆ ಸೇರಬಾರದು’ ಎಂದು ಕೇಳಿದರು.

ಸಿದ್ದಿಗಳನ್ನು ಅಸ್ಪೃಶ್ಯರಂತೆ ನೋಡುವ ಕಾಲವೊಂದಿತ್ತು. ನಮ್ಮನ್ನು ನೋಡಿ ನಗುವವರೇ ಹೆಚ್ಚಿದ್ದರು. ಆದರೆ, ಯಕ್ಷಗಾನ, ಭರತನಾಟ್ಯ, ಸಂಗೀತ, ಡಮಾಮಿ ಕುಣಿತ, ಸುಗ್ಗಿ ಕುಣಿತ ಇವೆಲ್ಲವೂ ನಾನು ಬೆಳೆದ ಪರಿಸರದಲ್ಲಿ ತುಸು ಹೆಚ್ಚೇ ಪ್ರಚಲಿತದಲ್ಲಿತ್ತು. ನಾನು ಕಂಡುಂಡ ನೋವುಗಳಿಗೆ ಈ ಕಲೆ ಮದ್ದಾಗಿತ್ತು. ಅದೇ ನನ್ನೊಳಗೆ ಹೊಸ ಧೈರ್ಯವನ್ನು ಹುಟ್ಟುಹಾಕಿತ್ತು.

ನೀನಾಸಂನಲ್ಲಿ ನಾಟಕದ ಡಿಪ್ಲೊಮಾ ಕೋರ್ಸ್‌ಗೆ ಸೇರಿದೆ. ಸಹಪಾಠಿಗಳೆಲ್ಲ ಪದವಿ ಮುಗಿಸಿ ಬಂದವರು. ಅವರ ಎದುರು ಫೇಲಾದ ಕೀಳರಿಮೆಯ ಸೂಜಿ ನನ್ನನ್ನು ಸದಾ ಚುಚ್ಚುತ್ತಿತ್ತು. ಓದು ಮುಂದುವರಿಸುವ ಯೋಚನೆ ಬಂದದಷ್ಟೆ ತಡ ಮಾಡಲಿಲ್ಲ. ಫೇಲ್‌ ಆಗಿದ್ದ ಎಸ್ಸೆಸ್ಸೆಲ್ಸಿಯ ಎರಡು ವಿಷಯಗಳನ್ನು ಓದಿ ಪಾಸ್ ಮಾಡಿದೆ. ಮುಂದೆ ಓದುವ ಆಸಕ್ತಿ ಮೊಳೆಯಿತಾದರೂ ಹಣಕ್ಕೆ ತತ್ವಾರವಿತ್ತು. ಹಾಗಾಗಿ ನೀನಾಸಂ ತಿರುಗಾಟ ತಂಡದೊಂದಿಗೆ ಸೇರಿ ನಾಟಕಗಳಿಂದ ಬಂದ ಹಣದಿಂದ ದ್ವಿತೀಯ ಪಿಯು ಮುಗಿಸಿದೆ.

ಬೆಂಗಳೂರಿನ ನಂಟು

ಅಷ್ಕೊತ್ತಿಗಾಗಲೇ ಅಕ್ಕ ಗಿರಿಜಾ ರಂಗಭೂಮಿ ಕಲಾವಿದ ಸಿ. ಚನ್ನಕೇಶವ ಅವರನ್ನು ಮದುವೆಯಾಗಿದ್ದರು. ಇವರು ನನ್ನ ಕನಸಿನ ಬದುಕಿಗೆ ನೀರೆರೆದರು. ಅವರ ಪ್ರೋತ್ಸಾಹದಿಂದಲೇ ಬೆಂಗಳೂರಿಗೆ ಬಂದೆ. ರಂಗಭೂಮಿ ಹಾಗೂ ಕ್ರೀಡೆಯಲ್ಲಿನ ಆಸಕ್ತಿಯಿಂದಾಗಿ ಸುರಾನಾ ಕಾಲೇಜಿನಲ್ಲಿ ಪದವಿ ತರಗತಿಗೆ ಪ್ರವೇಶ ಪಡೆದೆ. ರಾಜಕೀಯಶಾಸ್ತ್ರ ಇಷ್ಟದ ಕಾರಣ ಇತಿಹಾಸ, ಇಂಗ್ಲಿಷ್ ಹಾಗೂ ರಾಜಕೀಯಶಾಸ್ತ್ರವನ್ನು ಆಯ್ಕೆ ಮಾಡಿಕೊಂಡೆ.ನೀನಾಸಂ ಕೋರ್ಸ್‌ನ ಪ್ರಮಾಣಪತ್ರದ ಆಧಾರದ ಮೇಲೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಾಟಕ ವಿಷಯದಲ್ಲಿ ಎಂ.ಎ ಮುಗಿಸಿದ್ದೆ.

ಅಕ್ಷರದಿಂದ ಆತ್ಮವಿಶ್ವಾಸ..

ಹಿಂದುಳಿದ ವರ್ಗದವರಾಗಿದ್ದು, ರೂಪದಲ್ಲಿಯೂ ಸಂಪ್ರದಾಯದಲ್ಲಿಯೂ ಭಿನ್ನವಾಗಿರುವ ನಮ್ಮ ಸಿದ್ದಿ ಜನಾಂಗಕ್ಕೆ ಮೂಲಸೌಕರ್ಯವೆಲ್ಲ ಕನಸಿನ ಮಾತಾಗಿತ್ತು. ನಾಡಿನಲ್ಲಿದ್ದರೂ ಕಾಡುಪಾಲಾದ ಜನಾಂಗ ನಮ್ಮದು. ಹಾಗಾಗಿ ಓದಿನ ಕಿಚ್ಚಿನಿಂದಲೇ ಬದುಕನ್ನು ಒಪ್ಪವಾಗಿಸಿಕೊಳ್ಳಬೇಕು, ನನ್ನ ಸಮುದಾಯಕ್ಕೂ ನೆಲೆ ಕಲ್ಪಿಸಿಕೊಡಬೇಕು ಎಂಬ ಮಹದಾಸೆ ಇತ್ತು. ಹಾಗಾಗಿ ಪಿಎಚ್‌.ಡಿ ಪಡೆಯಲು ಮುಂದಾದೆ.ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಅದೇ ರಂಗಭೂಮಿ ವಿಷಯವನ್ನು.

ಎಂ.ಎ ಮುಗಿದ ತಕ್ಷಣ ಸಿಇಟಿ ಬರೆದು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ಆದರೆ ಮಾರ್ಗದರ್ಶಕರ ಆಯ್ಕೆ ಕಷ್ಟವಾಯಿತು. ಸ್ನೇಹಿತರೆಲ್ಲರೂ ಗೈಡ್‌ಗಳನ್ನು ಆಯ್ಕೆ ಮಾಡಿಕೊಂಡ ಕಾರಣ ಕೊನೆಯಲ್ಲಿ ನಾನು ಬಾಕಿಯಾದೆ. ಆಗ ಸಿಕ್ಕವರು ಪ್ರದರ್ಶನ ಕಲಾ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್‌. ಎನ್‌. ಸುಶೀಲಾ ಮೇಡಂ.

ಪಿಎಚ್‌.ಡಿ→ಮಾಡುವಾಗಲೂ ಹಣದ ಸಮಸ್ಯೆಯಾಗಿತ್ತು. ಆಗಲೂ ನನ್ನ ಕೈಹಿಡಿದಿದ್ದು ಕಲೆ ಮತ್ತು ರಂಗಭೂಮಿ. ಆಗಾಗ ನಾಟಕಗಳನ್ನು ಮಾಡುತ್ತಿದ್ದೆ. ಅಲ್ಲಲ್ಲಿ ಹಾಡುಗಳನ್ನು ಹಾಡುವುದು, ಮಕ್ಕಳ ಶಿಬಿರಗಳನ್ನು ನಡೆಸಿ ನಾಟಕದ ತರಬೇತಿ ನೀಡುತ್ತಿದ್ದೆ. ಜೊತೆಗೆ ಒಂದಷ್ಟು ಸ್ಕಾಲರ್‌ಷಿಪ್‌ಗಳಿಂದ ಕಲಿಕೆಯ ದಾರಿ ಸುಗಮವಾಯಿತು. ‘ಆಧುನಿಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಸ್ತ್ರೀಲೋಕ’ ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್‌ ಪದವಿ ಸಿಕ್ಕಿತು. ಜನಪದ ಹಾಡುಗಾರಿಕೆಯಿಂದ ಭಾರತ ಮಾತ್ರವಲ್ಲದೆ ಅಮೆರಿಕ, ದುಬೈಗಳಲ್ಲೂ ಸಿದ್ದಿ ಜನಾಂಗದ ಕಥೆಗಳ ಆಧಾರಿತ ನಾಟಕ ಪ್ರದರ್ಶನ ನೀಡಿದ್ದೇನೆ.

ಸಿದ್ದಿಯರ ಪರ ನಿಲ್ಲುವ ಕನಸು...

ನನ್ನ ಸಮುದಾಯಕ್ಕೆ ಗೌರವ ಸಿಗಬೇಕಿದೆ. ಅದನ್ನು ದಕ್ಕಿಸಿಕೊಡುವುದು ನನ್ನ ಜವಾಬ್ದಾರಿಯೂ ಹೌದು. ಎಸ್ಸೆಸ್ಸೆಲ್ಸಿ ಪಾಸಾಗುವುದೇ ದೊಡ್ಡದು ಎನ್ನುವ ಸ್ಥಿತಿ ಇದೆ. ಓದುವ ಹಂಬಲವಿರುವವರಿಗೆ ಸ್ಫೂರ್ತಿಯಾಗಿ ನಿಲ್ಲಬೇಕಿದೆ. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಸಿದ್ದಿಯರನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಿದೆ.

ಪುಸ್ತಕ ಬರೆಯುವಾಸೆ...

ಜಾನಪದ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಉಪನ್ಯಾಸಕಿಯಾಗಿದ್ದೆ. ಈಗಲೂ ಪಾಠ ಮಾಡುವ ತುಡಿತ ವಿದೆ. ಅದರ ಜೊತೆಗೆ ಮುಖ್ಯವಾಗಿ ಸಿದ್ದಿ ಜನಾಂಗದ ಹಾಡು, ಕಲೆ, ಕತೆಗಳನ್ನು ಒಟ್ಟು ಸೇರಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಆಸೆಯಿದೆ. ನಮ್ಮ ಸಂಪ್ರದಾಯದ ಡಮಾಮಿ ಹಾಡು, ನೃತ್ಯಗಳನ್ನು ಮಾಡುವುದು ಇತ್ತೀಚಿನವರಿಗೆ ಅವಮಾನ ಎನಿಸಲು ಆರಂಭವಾಗಿದೆ. ಹಳೆಯ ಪದ್ಧತಿಯನ್ನು ಬರಹದ ಮುಖಾಂತರ ವಾಗಿಯೋ, ಸಿನಿಮಾ, ಹಾಡುಗಳ ಮೂಲಕವಾಗಿಯೋ ಕಾಪಿಟ್ಟುಕೊಳ್ಳುವ ಅಗತ್ಯವಿದೆ.

ಟಿಣಿಂಗ ಮಿಣಿಂಗ ಟಿಶ್ಯಾ...

‘ಸಲಗ’ ಸಿನಿಮಾ ತಂಡ ಹಾಡು ಬೇಕೆಂದು ಕೇಳಿದಾಗ ಮೊದಲು ಒಪ್ಪಿರಲಿಲ್ಲ. ಏಕೆಂದರೆ ಸಮುದಾಯದ ಸಂಸ್ಕೃತಿಗೆ ಧಕ್ಕೆಯಾಗಬಹುದೆಂಬ ಭಯವಿತ್ತು. ಕೊನೆಯಲ್ಲಿ ಹಿರಿಯರ ಒಪ್ಪಿಗೆ ಪಡೆದು ಟಿಣಿಂಗ ಮಿಣಿಂಗ ಟಿಶ್ಯಾ ಹಾಡನ್ನು ನಾನು ಮತ್ತು ಅಕ್ಕ ಗಿರಿಜಾ ನಮ್ಮದೇ ಶೈಲಿಯಲ್ಲಿ ಹಾಡಿದ್ದೆವು. ಅದಕ್ಕೆ ಆಧುನಿಕ ರೂಪ ಕೊಟ್ಟಿದ್ದು ಚಿತ್ರತಂಡ. ಹೀಗಾಗಿ ಹಾಡು ಜನಪ್ರಿಯವಾಯಿತು.

ಕರ್ನಾಟಕ, ಗುಜರಾತ್‌ನಲ್ಲಷ್ಟೇ ಸಿದ್ದಿಗಳ ಆವಾಸ...

ಪಿತೃ ಆರಾಧನೆ, ಪ್ರಕೃತಿಯ ಪೂಜೆಯನ್ನೇ ನಂಬಿಕೊಂಡಿರುವ ಜನಾಂಗ ಸಿದ್ಧಿ ಸಮುದಾಯ. ಸುಮಾರು 200 ವರ್ಷಕ್ಕೂ ಹಿಂದೆ ಈ ಜನಾಂಗದವರು ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದರು ಎನ್ನುವ ಉಲ್ಲೇಖವಿದೆ. ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಜೊಯಿಡಾದಲ್ಲಿ ವಾಸ ಮಾಡುತ್ತಾರೆ. ತಮ್ಮದೇ ಆದ ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರಗಳಿಂದ ಅಸ್ತಿತ್ವ ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT