ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದ ಅಂತಃಕರಣ ಕಲಕಿದ ಹುಡುಗ

Last Updated 18 ಮೇ 2019, 19:30 IST
ಅಕ್ಷರ ಗಾತ್ರ

ಪ್ರಭುತ್ವವೊಂದು ಮರಣದಂಡನೆ ಶಿಕ್ಷೆ ವಿಧಿಸಬಹುದೇ ಎನ್ನುವ ನೈತಿಕ ಚರ್ಚೆ ಪ್ರಜಾತಾಂತ್ರಿಕ ದೇಶಗಳಲ್ಲೆಲ್ಲ ಹರಳುಗಟ್ಟಿರುವ ಈ ಹೊತ್ತಿನಲ್ಲಿ ಅಮೆರಿಕದ ಆ ಕಪ್ಪು ಹುಡುಗನ ಕಥೆ ಏನನ್ನು ಹೇಳುತ್ತಿದೆ?

***

ಅದು ದಕ್ಷಿಣ ಕೆರೋಲಿನ ಪ್ರಾಂತ್ಯದ ಅಲ್ಕಾಲು ಎಂಬ ಪುಟ್ಟ ಹಳ್ಳಿ. 1944ರ ಮಾರ್ಚ್ ತಿಂಗಳಿನ ಒಂದು ಸಂಜೆ ಬೆಟ್ಟಿ ಜೂನ್ ಬಿನ್ನಿಕೆರ್ ಹಾಗೂ ಮೇರಿ ಎಮ್ಮ ಥೇಮ್ಸ್ ಎಂಬಿಬ್ಬರು ಬಿಳಿಹುಡುಗಿಯರು ಹೂವು ತರಲೆಂದು ಕಾಡಿನತ್ತ ಹೋದವರು ಸಂಜೆ ಮನೆಗೆ ಮರಳಲಿಲ್ಲ. ಮರುದಿನ ಆ ಇಬ್ಬರ ಶವಗಳೂ ಕಾಲುವೆಯಲ್ಲಿ ಪತ್ತೆಯಾದವು. ಯಾವುದೋ ಸುತ್ತಿಗೆಯಂತಹ ಸಾಧನವೊಂದರಿಂದ ಬಲವಾಗಿ ತಲೆಗೆ ಹೊಡೆದಿದ್ದರಿಂದ ಮರಣ ಸಂಭವಿಸಿದೆ ಎಂದು ಮರಣೋತ್ತರ ವರದಿಯಲ್ಲಿ ವೈದ್ಯರು ಅಭಿಪ್ರಾಯಪಟ್ಟಿದ್ದರು. ತಲೆಬುರುಡೆಯಲ್ಲಿ ತೂತಾದದ್ದನ್ನೂ ಅವರು ನಮೂದಿಸಿದ್ದರು. ಆದರೆ, ಅತ್ಯಾಚಾರವಾದ ಯಾವುದೇ ಕುರುಹುಗಳು ಇಲ್ಲ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು.

ಹಿಂದಿನ ದಿನ ಸಂಜೆ ಆ ಹುಡುಗಿಯರನ್ನು ಕಡೆಯದಾಗಿ ನೋಡಿ ಮಾತನಾಡಿದ್ದ ಜಾರ್ಜ್ ಸ್ಟೈನಿ ಹಾಗೂ ಜಾನಿ ಎಂಬ ಇಬ್ಬರು ಹುಡುಗರನ್ನು ಈ ಕೊಲೆಯ ಆರೋಪದ ಮೇಲೆ ಪೊಲೀಸರು ಬಂಧಿಸಿದರು. ಅಂದಿನ ಸಂಜೆ ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯಾಯ್ತು. ಜನಾಂಗಿಯ ದ್ವೇಷ ಅಮೆರಿಕದಲ್ಲಿ ಆಳವಾಗಿ ಬೇರೂರಿದ್ದ ಕಾಲವದು. ಹೀಗಾಗಿ, ಕರಿಯ ಹುಡುಗನೊಬ್ಬ ಬಿಳಿಯ ಹುಡುಗಿಯರನ್ನು ಕೊಲೆ ಮಾಡಿದ ಎಂದಷ್ಟೇ ಈ ಘಟನೆ ಪ್ರಚಾರ ಪಡೆಯಿತು.

ಸ್ಟೈನಿಯ ತಂದೆಯನ್ನು ಸುದ್ದಿ ತಿಳಿದ ಕೂಡಲೇ ಮಿಲ್ಲಿನ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಏನು ಮಾಡಬೇಕೆಂದು ಆತನಿಗೆ ಯೋಚಿಸುವಷ್ಟು ಸಮಯವಿರಲಿಲ್ಲ. ಅದಾಗಲೇ ಉದ್ರಿಕ್ತ ಬಿಳಿಯರ ಗುಂಪೊಂದು ಅವರ ಮನೆಯತ್ತಲೇ ಬರುತ್ತಿರುವ ಸೂಚನೆ ಅವರಿಗೆ ಲಭಿಸಿತು. ಆತ ರಾತ್ರೋರಾತ್ರಿ ಇಡೀ ಕುಟುಂಬವನ್ನು ಕರೆದುಕೊಂಡು ಅವರ ಅಜ್ಜಿಯ ಮನೆಗೆ ಓಡಿಹೋದರು. ಮರುದಿನ ಬೆಳಿಗ್ಗೆ ಜಾನಿಯನ್ನು ಬಿಟ್ಟ ಪೊಲೀಸರು ಸ್ಟೈನಿಯನ್ನು ಮಾತ್ರ ಕಸ್ಟಡಿಯಲ್ಲಿಯೇ ಇಟ್ಟುಕೊಂಡರು. ಇಡೀ ಘಟನೆ ಬಹಳ ಬೇಗ ದೊಡ್ದ ಸುದ್ದಿಯಾಗಿ ಹೋಯ್ತು. ದಿನಪತ್ರಿಕೆಗಳು ತನಿಖಾ ವರದಿ ನೀಡಲು ಪೊಲೀಸರನ್ನು ಒತ್ತಾಯಿಸಿದವು. ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿ ನ್ಯೂಮನ್ರ ಅವರು, ‘ಸ್ಟೈನಿಯು ಎರಡೂ ಕೊಲೆಗಳನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ತಾನು ಹುಡುಗಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದಾಗ ಅವರು ಒಪ್ಪದೇ, ತಮ್ಮ ಪೋಷಕರ ಬಳಿ ಹೇಳುವುದಾಗಿ ಹೆದರಿಸಿದಾಗ ಅವರನ್ನು ಕೊಲೆಗೈದಿರುವುದಾಗಿ ನಮ್ಮ ಬಳಿ ಹೇಳಿ, ಕೊಲೆ ನಡೆದ ಜಾಗವನ್ನೂ ಮತ್ತು ಕೊಲೆಗೆ ಬಳಸಿದ ಸಲಾಕೆಯನ್ನು ತೋರಿಸಿದ್ದಾನೆ’ ಎಂದು ಹೇಳಿದರು.

ಹುಡುಗಿಯರ ಶವಗಳನ್ನು ಹುಡುಕುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದ ಜಾರ್ಜ್ ಬ್ರೂಕ್ ಎಂಬಾತನನ್ನು ಮುಖ್ಯ ಸಾಕ್ಷಿಯನ್ನಾಗಿ ಪರಿಗಣಿಸಲಾಯ್ತು. ಫ್ರಾಂಕ್ ಮೆಕ್ಲಿಯಾಡ್ ಹಾಗೂ ಅಲ್ಲಿನ ಸ್ಥಳೀಯ ಸೆನೆಟರ್ ಒಬ್ಬರು ಈ ತನಿಖೆ ಅತ್ಯಂತ ಶೀಘ್ರವಾಗಿ ನಡೆಯಬೇಕೆಂದೂ ಅದಕ್ಕಾಗಿ ಒಂದು ವಿಶೇಷ ನ್ಯಾಯಪೀಠವನ್ನು ಸ್ಥಾಪಿಸಬೇಕೆಂದೂ ಒತ್ತಾಯಿಸಿದರು. ಬಂಧನವಾದ ಮೂವತ್ತೊಂದು ದಿನಗಳಲ್ಲಿ ಸ್ಟೈನಿಯ ಪ್ರಕರಣದ ವಿಚಾರಣೆಗಾಗಿ ಕ್ಲಾರೆಡಾನ್ ಕಂಟ್ರಿ ನ್ಯಾಯಪೀಠವನ್ನು ಸ್ಥಾಪಿಸಿ, ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. ಪಾಪದ ಹುಡುಗ ತನ್ನ ತಂದೆ– ತಾಯಿಯೊಂದಿಗೆ ಮಾತನಾಡಿಯೇ ಹಲವು ದಿನಗಳಾಗಿದ್ದವು. ನ್ಯಾಯಾಲಯದಲ್ಲಿಯೂ ಆತನಿಗೆ ಪೋಷಕರೊಂದಿಗೆ ಮಾತನಾಡಲು ಅವಕಾಶ ಲಭ್ಯವಾಗಲಿಲ್ಲ.

ಮಧ್ಯಾಹ್ನ ವಿಚಾರಣೆ ಆರಂಭವಾಯ್ತು. ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶರು ಅವನಿಗೆ ಮರಣದಂಡನೆ ವಿಧಿಸಿದರು. ಈ ನಿರ್ಧಾರ ಪ್ರಕಟಿಸಲು ನ್ಯಾಯಾಧೀಶರು ತೆಗೆದುಕೊಂಡ ಸಮಯ ಕೇವಲ ಹತ್ತು ನಿಮಿಷ. ಸಾಕ್ಷಿಗಳ ದೀರ್ಘವಾದ ವಿಚಾರಣೆಯಿಲ್ಲ. ಮೇಲ್ಮನವಿಗೂ ಅವಕಾಶವಿಲ್ಲ. ಆತನ ತಂದೆ- ತಾಯಿಯೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ವಕೀಲರನ್ನೂ ನೇಮಿಸಲಿಲ್ಲ. ಒಟ್ಟಾರೆಯಾಗಿ ಆರೋಪಿಯೊಬ್ಬನಿಗೆ ನ್ಯಾಯವಾಗಿ ಸಿಗಬೇಕಾದ ಯಾವುದೇ ಸವಲತ್ತುಗಳೂ ಸ್ಟೈನಿಗೆ ಸಿಗಲಿಲ್ಲ.

ಈ ತೀರ್ಪು ಅಮೆರಿಕದಲ್ಲಿ ದೊಡ್ದ ಕೋಲಾಹಲವನ್ನು ಉಂಟು ಮಾಡಿತು. ಆತನಿಗೆ ಕ್ಷಮಾದಾನ ನೀಡುವಂತೆ ನ್ಯಾಯಾಧೀಶರಿಗೆ ಹಾಗೂ ದಕ್ಷಿಣ ಕೆರೋಲಿನದ ರಾಜ್ಯಪಾಲರಿಗೆ ಸಾವಿರಾರು ನಾಗರಿಕರು ಒತ್ತಾಯಿಸಿದರು. ಆತನಿಗಿನ್ನೂ ಹದಿನೆಂಟು ತುಂಬಿಲ್ಲದ ಕಾರಣ ಅವನ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವಂತೆ ಅಥವಾ ಬಾಲಮಂದಿರಗಳಲ್ಲಿ ಬಿಡುವಂತೆ ಮನವಿ ಸಲ್ಲಿಸಲಾಯ್ತು. ಅದೇ ವರ್ಷದಲ್ಲಿ ಬಿಳಿಯ ಅರ್ನೆಸ್ಟ್ ಫೆಲ್ಟ್‌ವೆಲ್ ಎಂಬ ಹದಿನಾರು ವರ್ಷದ ಹುಡುಗನನ್ನು ಕೊಲೆ ಆರೋಪದ ಮೇಲೆ ಬಂಧಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆ ತೀರ್ಪಿನ ಅಧಾರದಲ್ಲಿ ಆತನಿಗಿಂತ ಚಿಕ್ಕವನಾದ ಸ್ಟೈನಿಯನ್ನು ಗಲ್ಲುಶಿಕ್ಷೆಯಿಂದ ಬಿಡುಗಡೆಗೊಳಿಸಬೇಕೆಂದು ಹಲವಾರು ಪ್ರಜ್ಞಾವಂತರು ಒತ್ತಡ ಹಾಕಿದರು. ಆದರೆ ನ್ಯಾಯಾಧೀಶರು, ‘ಆತನನ್ನು ಬಂಧಿಸಿದ ಪೊಲೀಸ್‌ ಅಧಿಕಾರಿಗಳ ಹೇಳಿಕೆಗಳಲ್ಲಿ ನನಗೆ ಯಾವ ಸಂದೇಹವೂ ಕಾಡಲಿಲ್ಲ. ಅಲ್ಲದೇ ಕೃತ್ಯವನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದ್ದರಿಂದ ಅವನ ಶಿಕ್ಷೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು. 1944ರ ಜೂನ್‌ 16ರಂದು ಮುಂಜಾನೆ ಸ್ಟೈನಿಯ ದೇಹಕ್ಕೆ ಸುಮಾರು 2400 ವೋಲ್ಟ್ ವಿದ್ಯುತ್ ಹರಿಸಿ ಮರಣದಂಡನೆ ನೀಡಲಾಯ್ತು.

ತನಿಖೆಯಲ್ಲಿನ ನ್ಯೂನತೆಗಳು

ತಾನು ಕೊಲೆಗಾರನಲ್ಲವೆಂದೂ ತನ್ನನ್ನು ಬಲಿಪಶು ಮಾಡಲಾಯ್ತೆಂದು ಪೋಲೀಸರು ಬಲವಂತದಿಂದ ತನ್ನ ಬಳಿ ತಪ್ಪೊಪ್ಪಿಗೆಯನ್ನು ಪಡೆದರು ಎಂದೂ ಸ್ಟೈನಿ ತನ್ನ ಸಹಕೈದಿಗಳ ಬಳಿ ಹೇಳಿರುವುದಕ್ಕೆ ಸಾಕ್ಷ್ಯಗಳಿವೆ. ಅಪರಾಧ ಜಗತ್ತಿನಲ್ಲಿ ಪಳಗದ ಕೇವಲ ಹದಿನಾಲ್ಕು ವರ್ಷದ ಬಾಲಕ ಇಷ್ಟು ಸುವ್ಯವಸ್ಥಿತವಾದ ಅಪರಾಧವೆಸಗಿ ಆ ನಂತರ ಪೊಲೀಸರ ಮೇಲೆ ಗೂಬೆ ಕೂರಿಸಲು ಸಾಧ್ಯವೇ ಇಲ್ಲ.
ಆತ ಕೊಲೆಗೆ ಬಳಸಿದ ಸಲಾಕೆಯನ್ನು ತನಿಖಾ ತಂಡಕ್ಕೆ ತೋರಿಸಿದ ಎಂದು ಹೇಳಲಾಗಿದೆಯಾದರೂ, ಅದನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಿಲ್ಲ. ಅದೆಲ್ಲಿದೆಯೆಬ ಮಾಹಿತಿ ಇಂದಿಗೂ ಇಲ್ಲ.

ಅಲ್ಕಾಲು ನಿವಾಸಿಗಳ ಪ್ರಕಾರ ಮೃತ ಹುಡುಗಿಯರೊಂದಿಗೆ ಕಡೆಯ ಬಾರಿಗೆ ಮಾತನಾಡಿದವರು ಸ್ಟೈನಿ ಹಾಗೂ ಆತನ ಅಕ್ಕ ಮಾತ್ರವಲ್ಲ; ಶ್ರೀಮಂತ ಬಿಳಿಯನೊಬ್ಬನ ಹೆಂಡತಿಯೊಂದಿಗೆ ಅವರು ಮಾತನಾಡಿದ್ದಾರೆಂದೂ, ಅವಳ ಮಗ ಹುಡುಗಿಯರ ಜೊತೆಗೆ ಹೋದನೆಂದೂ ಹೇಳುತ್ತಾರೆ. ಅದು ಪ್ರತಿಷ್ಠಿತ ಶ್ರೀಮಂತ ಕುಟುಂಬವಾದ್ದರಿಂದ ಅವರ ವಿಚಾರಣೆ ನಡೆಸಲಿಲ್ಲ.

ತನಿಖಾಧಿಕಾರಿಗಳೆದುರು ಸ್ಟೈನಿ ತಪ್ಪೊಪ್ಪಿಕೊಂಡ ಎಂದು ಅವರೇ ಹೇಳಿದ್ದು ಅಥವಾ ಅವರೇ ಹಾಗೆ ಹೇಳುವಂತೆ ಮಾಡಿದರು ಎಂಬುದನ್ನು ಬಿಟ್ಟರೆ ಸ್ಟೈನಿಯೇ ಕೊಲೆಗಾರ ಎಂಬುದಕ್ಕೆ ಯಾವ ಸಾಕ್ಷ್ಯವೂ ಇರಲಿಲ್ಲ.

ಪ್ರಕರಣದ ಮರು ವಿಚಾರಣೆ

2004ರಲ್ಲಿ ಜಾರ್ಜ್ ಫೆರಿಸನ್ ಎಂಬಾತ ತಾನು ಬಾಲ್ಯದಿಂದ ಕೇಳಿದ್ದ ಅಲ್ಕಾಲುವಿನ ಈ ನಿಗೂಢ ಪ್ರಕರಣದ ತನಿಖೆ ಮಾಡಲು ಉತ್ಸುಕನಾದ. ಘಟನೆಯ ವಿವರಗಳನ್ನು ಪರಿಶೀಲಿಸುತ್ತಿದ್ದಂತೆ ಆತ ತೀವ್ರ ಗೊಂದಲಕ್ಕೀಡಾದ. ವಕೀಲರಾದ ಸ್ಟೀವ್ ಮೆಕೆಂಜಿ ಹಾಗೂ ಮ್ಯಾಟ್ ಬರ್ಗೆಸ್ರಿವರು ಆತನಿಗೆ ಸಾಥ್ ನೀಡಿದರು. ಇವರ ಜೊತೆಗೆ ರೇ ಬ್ರೌನ್ ಹಾಗೂ ಜೇಮ್ಸ್ ಮೂನ್ ಎಂಬ ವಕೀಲರೂ ಈ ಸಂಶೋಧನೆಯಲ್ಲಿ ಭಾಗವಹಿಸಿದರು.

ಅವರೆಲ್ಲರೂ ಸಾಕಷ್ಟು ಕಷ್ಟಪಟ್ಟು ಮಾಹಿತಿಗಳನ್ನು ಕಲೆಹಾಕಿ, ನಿಜವಾದ ಕೊಲೆಗಾರನನ್ನು ಹಿಡಿಯಲಾಗದೇ ಹೋದರೂ ಕಡೆಗೆ ಸ್ಟೈನಿಯನ್ನು ನಿರಪರಾಧಿಯೆಂದಾದರೂ ಸಾಬೀತು ಮಾಡಬೇಕೆಂಬ ಪಣತೊಟ್ಟರು. ಇದಕ್ಕೆ ಸಿವಿಲ್ ರೈಟ್ಸ್ ಆಂಡ್ ರೆಸ್ಟೋರೇಟಿವ್ ಜಸ್ಟೀಸ್ ಹಾಗೂ ನಾರ್ತ್ ಈಸ್ಟರ್ನ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾ ಸಂಸ್ಥೆಗಳೂ ಸಹಾಯ ಮಾಡಿದವು. 2013ರ ಅಕ್ಟೋಬರ್‌ 25ರಂದು ಇವರೆಲ್ಲರೂ ಸ್ಟೈನಿಯ ಕುಟುಂಬಸ್ಥರೊಡಗೂಡಿ ಸ್ಟೈನಿಯನ್ನು ನಿರಪರಾಧಿಯೆಂದು ಘೋಷಿಸಲು ಅವಶ್ಯವಿರುವ ಎಲ್ಲಾ ದಾಖಲೆಗಳನ್ನೂ ಸಲ್ಲಿಸಿ ಈ ಪ್ರಕರಣದ ಮರುವಿಚಾರಣೆ ನಡೆಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದರು.

ಕೊಲೆ ನಡೆಯಲಾಗಿದೆ ಎಂದು ಹೇಳಲಾದ ಸಮಯದಲ್ಲಿ ತನ್ನಣ್ಣ ತನ್ನ ಜೊತೆಯಲ್ಲಿಯೇ ಇದ್ದ ಎಂದು ಸ್ಟೈನಿಯ ತಂಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದಳು. ಸ್ಟೈನಿಯ ಸಹಕೈದಿಗಳ ಹೇಳಿಕೆಗಳು, ಸ್ಟೈನಿಯನ್ನು ಶೀಘ್ರವೇ ಮರಣದಂಡನೆಗೆ ಒಳಪಡಿಸುವಂತೆ ನ್ಯಾಯಾಲಯದ ಮೇಲೆ ಒತ್ತಡ ಹಾಕಿದ್ದವರ ಸಂಬಂಧಿಯಾಗಿದ್ದ ಶ್ರೀಮಂತನೊಬ್ಬ ಸಾಯುವ ಮೊದಲು ತಾನೇ ಆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾದ ಹೇಳಿಕೆಗಳು, (ಹುಡುಗಿಯರ ಹಿಂದೆ ಹೋದ ಶ್ರೀಮಂತನೊಬ್ಬನೊಬ್ಬನ ಮಗ ಎಂದು ಹೇಳಲಾದ ವ್ಯಕ್ತಿ ಇವನೇ ಹೌದೇ ಎಂಬುದರಲ್ಲಿ ಸಂದೇಹವಿದೆ) ಶವಗಳನ್ನು ಹುಡುಕಿದ್ದ ಫ್ರಾನ್ಸೀಸ್ ಬೇಟ್ಸನ್ ಅವುಗಳ ಸುತ್ತಲೂ ಯಾವುದೇ ರಕ್ತದ ಕಲೆಗಳು ಇರಲಿಲ್ಲ, ಅಂದರೆ ಬೇರೆಲ್ಲಿಯೋ ಕೊಲೆ ಮಾಡಿ ಆನಂತರ ಶವವನ್ನು ಅಲ್ಲಿ ತಂದು ಎಸೆಯಲಾಗಿರಬಹುದು ಎಂದು ನೀಡಿದ್ದ ಅಫಿಡವಿಟ್ಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ಪ್ರಕರಣವನ್ನು ಸಮಗ್ರವಾಗಿ ಅಧ್ಯಯನ ಮಾಡಿದ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಕಾರ್ಮೆನ್ ಮುಲ್ಲೆನ್ರನವರು 2014ರ ಡಿಸೆಂಬರ್‌ 17ರಂದು ಸ್ಟೈನಿಯು ನಿರಪರಾಧಿ ಎಂದು ಘೋಷಿಸಿಬಿಟ್ಟರು. ಸ್ಟೈನಿಯೇ ಕೊಲೆಗಾರ ಎಂದ ಯಾವ ಸಾಕ್ಷಿಗಳೂ ಪೂರ್ಣವಲ್ಲ. ಹೀಗಾಗಿ, ಸ್ಟೈನಿಯ ಮರಣದಂಡನೆಯನ್ನು ಅತ್ಯಂತ ಕ್ರೂರ ಹಾಗೂ ಅಸ್ವಾಭಾವಿಕವಾದದ್ದು ಎಂದು ನಾನು ಭಾವಿಸುತ್ತೇನೆ. ಕೊಲೆಯನ್ನು ಆತನೇ ಮಾಡಿದ್ದಾನೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಸಾಕ್ಷ್ಯವನ್ನು ಆಧರಿಸಿ ತೀರ್ಮಾನ ಕೊಡಲು ಸಾಧ್ಯವಿಲ್ಲ. ಮುಗ್ಧ ಮಗುವೊಂದು ತನ್ನ ಜೀವ ಕಳೆದುಕೊಳ್ಳುವಂತಹ ಸ್ಥಿತಿಯಲ್ಲಿ ಇದ್ದಾಗ ಆತನಿಗೆ ಲಭಿಸಬೇಕಾಗಿದ್ದ ಸಹಾಯ ಯಾವ ಮೂಲದಿಂದಲೂ ಅವನಿಗೆ ಲಭಿಸದಿರುವುದು ಅತ್ಯಂತ ಸ್ಪಷ್ಟವಾಗಿ ಗೋಚರವಾಗುತ್ತಿರುವುದರಿಂದ, ನಾನು ಆತನನ್ನು ನಿರಪರಾಧಿಯೆಂದು ಘೋಷಿಸುತ್ತೇನೆ ಎಂದು ನ್ಯಾಯಾಧೀಶರು ತೀರ್ಪು ಬರೆದರು.

(ಆಧಾರ: ವಾಷಿಂಗ್ಟನ್‌ ಪೋಸ್ಟ್‌ ಸೇರಿದಂತೆ ಅಮೆರಿಕದ ಹಲವು ಪತ್ರಿಕೆಗಳು, ಎಟಿಐ ವೆಬ್‌ಸೈಟ್‌ನ ವರದಿಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT