ಇವರ ಕೈಗೆ ಸಿಕ್ಕಿದ್ದೆಲ್ಲವೂ ಕ್ಯಾನ್ವಾಸ್‌!

7

ಇವರ ಕೈಗೆ ಸಿಕ್ಕಿದ್ದೆಲ್ಲವೂ ಕ್ಯಾನ್ವಾಸ್‌!

Published:
Updated:

ವಿದ್ಯುದ್ದೀಪ, ಬಲ್ಬ್‌, ಗಾಜಿನ ಬಾಟಲಿ, ಮಗ್‌, ಹೂದಾನಿ, ಹಣ್ಣುಗಳನ್ನಿಡುವ ಟ್ರೇ... ಇವರ ಕೈಗೆ ಸಿಕ್ಕಿದರೆ  ಕ್ಯಾನ್ವಾಸ್‌ಗಳಾಗುತ್ತವೆ. ಪ್ರತಿ ವಸ್ತುವೂ ಸುಂದರ ಕಲಾಕೃತಿಯ ರೂಪ ಪಡೆಯುತ್ತದೆ. ‌ಮಂಗಳೂರು ಮೂಲದ ತ್ರಿವೇಣಿ ಎಂಬ ಕಲಾವಿದೆಯ ಕಲಾ ಕೌಶಲ್ಯ ಮತ್ತು ಜಾಣ್ಮೆಗೆ ಹೀಗೆ ಮುನ್ನುಡಿ ಬರೆಯಬಹುದು.

ಚಿತ್ರಕಲಾವಿದೆಯಾಗಿ ಪೂರ್ಣಾವಧಿಯನ್ನು ಬಣ್ಣಗಳು ಮತ್ತು ಕಲಾಕೃತಿಗಳ ಮಧ್ಯೆ ಕಳೆದುಹೋಗಬೇಕು ಎಂಬ ಕನಸು ಬಾಲ್ಯದಿಂದಲೂ ಕಾಡುತ್ತಿತ್ತು. ಆದರೆ ಕನಸು ನನಸಾಗಲಿಲ್ಲ. ವೃತ್ತಿಯಾಗಿ ಆರಿಸಲಾಗದಿದ್ದರೆ ಪ್ರವೃತ್ತಿಯಾಗಬಹುದಲ್ಲ ಎಂದು ಕನಸಿಗೇ ಸಡ್ಡುಹೊಡೆದವರು ತ್ರಿವೇಣಿ.

 ‘ಚಿತ್ರಕಲೆ ಮತ್ತು ಕರಕುಶಲ ಕಲೆಗಳೆಂದರೆ ನನಗೆ ಅಚ್ಚುಮೆಚ್ಚು. ಆದರೆ ಉದ್ಯೋಗವಾಗಿ ಪರಿಗಣಿಸಲು ಆಗ ಸಾಧ್ಯವಾಗಲಿಲ್ಲ. ಹಾಗಾಗಿ ಜೀವವಿಮೆ ಮತ್ತು ಕೌಶಲವೃದ್ಧಿ ತರಬೇತಿದಾರಳಾದೆ. ಈಗ ನನ್ನ ಮಗಳೂ ಕಲೆಯತ್ತ ಆಸಕ್ತಿ ಹೊಂದಿರುವುದು ನನಗೆ ತುಂಬಾ ಖುಷಿಯ ವಿಚಾರ. ಅವಳನ್ನಾದರೂ ಪೂರ್ಣಪ್ರಮಾಣದಲ್ಲಿ ಚಿತ್ರಕಲೆಯಲ್ಲೇ ತೊಡಗಿಸಿಕೊಳ್ಳುವಂತೆ ಮಾಡಬಹುದು’ ಎಂದು ನಗುತ್ತಾರೆ ಅವರು. 

ಆಗಲೇ ಹೇಳಿದಂತೆ ತ್ರಿವೇಣಿ ಅವರಿಗೆ ಕೈಗೆ ಸಿಕ್ಕಿದ್ದೆಲ್ಲವೂ ಕ್ಯಾನ್ವಾಸ್‌ಗಳಾಗಿವೆ. ಪ್ರತಿ ನಿತ್ಯ ರಾತ್ರಿ ಯಾವುದಾದರೊಂದು ಕಲಾಕೃತಿ ರಚಿಸಿದರೆ ಅವರಿಗೆ ತೃಪ್ತಿ. ಬಾಟಲಿಯಲ್ಲಿ ಚಿತ್ರ ಬರೆಯಲು ಅರ್ಧ ಗಂಟೆ ಸಾಕು ಎನ್ನುವ ಅವರ ಮಾತಿನಲ್ಲಿ ಕುಂಚದಲ್ಲಿ ಅವರಿಗಿರುವ ಪರಿಣತಿ ಕಾಣುತ್ತದೆ.

‘ಬಾಟಲಿಯಲ್ಲಿ ಚಿತ್ರಕಲೆ ಮಾಡುವುದು ನನ್ನ ಆದ್ಯತೆ. ಯಾಕೆಂದರೆ ಬಾಟಲಿಯಲ್ಲಿ ಲೀಲಾಜಾಲವಾಗಿ ಮಾಡಬಹುದು ಮತ್ತು ಹೆಚ್ಚು ಸಮಯವೂ ಬೇಕಾಗುವುದಿಲ್ಲ. ಇಂತಹುದೇ ಚಿತ್ರ ಮಾಡಬೇಕು ಎಂದು ಚಿಂತಿಸುತ್ತಾ ಸಮಯ ವ್ಯರ್ಥ ಮಾಡುವುದಿಲ್ಲ. ಆ ಕ್ಷಣಕ್ಕೆ ಮನಸ್ಸಿಗೆ ತೋಚಿದ ಚಿತ್ರಗಳನ್ನು ರಚಿಸಿಬಿಡುತ್ತೇನೆ. ತೆಂಗಿನ ಕಾಯಿ ಚಿಪ್ಪು, ಬಲ್ಬ್‌, ಥರ್ಮೋಕೋಲ್‌ನಲ್ಲಿಯೂ ಹಲವು ಕಲಾಕೃತಿಗಳನ್ನು ರಚಿಸಿದ್ದೇನೆ.‌ ಥರ್ಮೋಕೋಲ್‌ನಲ್ಲಿ ಪ್ರತಿಯೊಂದು ಸೂಕ್ಷ್ಮ ವಿವರಗಳನ್ನೂ ಬಿಡಿಸುವುದಕ್ಕೆ ಹೆಚ್ಚಿನ ತಾಳ್ಮೆ ಮತ್ತು ಸಮಯ ಬೇಕು’ ಎಂದು ಅನುಭವದ ಮಾತನಾಡುತ್ತಾರೆ.

ಕಿಟಕಿಗಳಿಗೆ ಸುಂದರ ಚಿತ್ತಾರ ಬಿಡಿಸುವುದರಲ್ಲಿಯೂ ತ್ರಿವೇಣಿ ಪಳಗಿದ್ದಾರೆ. ಆಗೀಗ ಮಕ್ಕಳಿಗಾಗಿ ಚಿತ್ರಕಲೆ ಮತ್ತು ಅಡುಗೆ ತಯಾರಿ ಕಾರ್ಯಾಗಾರಗಳನ್ನೂ ನಡೆಸುತ್ತಾರೆ.

ಚಿತ್ರಕಲೆಯಲ್ಲಿ ಆಸಕ್ತಿ ಬಂದಿದ್ದು ಹೇಗೆ ಎಂದು ಕೇಳಿದರೆ, ‘ಪ್ರತಿಯೊಬ್ಬರಲ್ಲೂ ಯಾವುದಾದರೊಂದು ವಿಶೇಷ ಕೌಶಲ್ಯ ಇರುತ್ತದೆ. ಅದನ್ನು ಕಂಡುಕೊಂಡು ದುಡಿಸಿಕೊಳ್ಳುವುದು ಅಗತ್ಯ. ನನ್ನಲ್ಲೂ ಅಂತಹ ಕೌಶಲ ದೈವದತ್ತವಾಗಿ ಬಂದಿದೆ ಅಷ್ಟೇ’ ಎಂದು ನಗುತ್ತಾರೆ.

‘ಚಿತ್ರಕಲೆಯನ್ನು ಆನಂದಿಸುತ್ತಾ ನಾನು ರಚಿಸುವ ಕಲಾಕೃತಿಗಳನ್ನು ಉಡುಗೊರೆಯಾಗಿ ಕೊಡುತ್ತಾ ಇರುತ್ತೇನೆ. ಜೊತೆಗೆ ತರಬೇತಿಗಳೂ ನಡೆಯುತ್ತಿವೆ. ಆದರೆ ನನ್ನ ಆಪ್ತರ ಸಲಹೆಯಂತೆ ಇದನ್ನು ಒಂದು ಉದ್ಯಮವಾಗಿ ಬೆಳೆಸುವ ಚಿಂತನೆಯೂ ಇದೆ. ಅದಕ್ಕೂ ಮುಂಚೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ತ್ರಿವೇಣಿ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !