ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೊರಿಲ್ಲಾ’ ವೇಷಧಾರಿ ದೀಪಕ್ ಶೆಟ್ಟಿ

Last Updated 23 ಸೆಪ್ಟೆಂಬರ್ 2019, 9:27 IST
ಅಕ್ಷರ ಗಾತ್ರ

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮನಸ್ಸಿನ ಕಲ್ಪನೆಗೆ ಜೀವ ತುಂಬಲು ನೂರಾರು ಅವಕಾಶಗಳು ಇರುತ್ತವೆ. ಅಂತಹ ಹಾದಿಯಲ್ಲಿ ಸಾಗಿ, ಇನ್ನೊಂದು ವೇಷಕ್ಕೆ ಜೀವ ತುಂಬುವ ತೆರೆ-ಮರೆಯ ಪ್ರತಿಭಾನ್ವಿತ ಕಲಾವಿದ, ಕಿಂಗ್ ಕಾಂಗ್ ಗೊರಿಲ್ಲಾ ವೇಷಧಾರಿ ಸುರತ್ಕಲ್ ರಾಕ್ ಜಿಮ್‍ನ ದೀಪಕ್ ಶೆಟ್ಟಿ.

ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸರಕಾರಿ ಶಾಲೆ ಕೃಷ್ಣಾಪುರ ಹಾಗೂ ಸುರತ್ಕಲ್‍ನ ವಿದ್ಯಾದಾಯಿನಿ ಶಾಲೆಯಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ಗೋವಿಂದಾಸ್ ಕಾಲೇಜನಿಂದ ಪಡೆದರು. ಬಾಲ್ಯದಿಂದಲೂ ಕಿಂಗ್‍ ಕಾಂಗ್ ಸಿನಿಮಾಗಳನ್ನು ನೋಡುತ್ತಾ ಬೆಳೆದ ಇವರಿಗೆ ತಾನೂ ಈ ರೀತಿ ವೇಷ ತೊಟ್ಟು ನರ್ತಿಸಬೇಕೆಂಬ ಹಂಬಲಕ್ಕೆ ಬೆನ್ನೆಲುಬಾಗಿ ನಿಂತವರು ತಂದೆ ಶೇಖರ್ ಶೆಟ್ಟಿ ಮತ್ತು ತಾಯಿ ಮಾಲತಿ ಶೆಟ್ಟಿ, ಜೊತೆಗೆ ಮಾರ್ಗದರ್ಶಕರಾದ ಯಜ್ಞೇಶ್ವರ ಬರ್ಕೆ.

ಕಿಂಗ್ ಕಾಂಗ್ ವೇಷವನ್ನು ನೋಡುವ ನಮಗೆ ಮನೋರಂಜನೆಯಾದರೂ ಅದನ್ನು ತೊಟ್ಟ ವೇಷಧಾರಿಯ ಶ್ರಮ ನಿಜಕ್ಕೂ ಶ್ಲಾಘನೀಯ. ಸುಮಾರು 35 ರಿಂದ 40 ಕೆ.ಜಿ ಭಾರದ ಆಕಾರವನ್ನು ಧರಿಸಿದ ಮೇಲೆ ಉಸಿರಾಟಕ್ಕಾಗಿ ಮೂಗಿನ ಭಾಗ ಹೊರತುಪಡಿಸಿ ಉಳಿದೆಲ್ಲಾ ಭಾಗಗಳು ಮುಚ್ಚಲ್ಪಡುತ್ತವೆ. ಈ ದೈತ್ಯ ವೇಷದಲ್ಲಿ, ತಾನೇನು ಕಷ್ಟಪಟ್ಟರೂ ಕಲಾಭಿಮಾನಿಗಳು ಒಂದಿನಿತು ನಿರಾಶೆಗೊಳಗಾಗದಂತೆ ನೋಡಿಕೊಳ್ಳುವುದು ಕಲಾಧರ್ಮವೆಂದು ಭಾವಿಸಿರುವ ದೀಪಕ್ ಶೆಟ್ಟಿ, ಪ್ರತಿ ಭಾರಿಯೂ ಹೊಸ ಹೊಸ ಆಕೃತಿಗಳಿಗೆ ಜೀವ ತುಂಬುತ್ತಿದ್ದಾರೆ. ಇವರ ಬಾಹುಬಲಿ, ಕಲಕೋಶೊ, ಗಬ್ಬರ್‍ಸಿಂಗ್‍ಹಂತಹ ವೇಷಗಳು ಅಪಾರ ಜನಮನ್ನಣೆಗೆ ಪಾತ್ರವಾಗಿವೆ.

ಕಿಕ್ಕೇರಿದ ಜನಸಂದಣಿಯ ಮಧ್ಯೆ ಒಮ್ಮೆಲೇ ಪ್ರತ್ಯಕ್ಷವಾಗುವ ದೈತ್ಯಾಕಾರದ ವೇಷಗಳು ನಮ್ಮನ್ನು ಕನಸೋ ನನಸೋ ಎಂಬಂತೆ ನಿಬ್ಬೆರೆಗಾಗಿಸುತ್ತವೆ. ಇತ್ತೀಚಿನ ಆಳ್ವಾಸ್ ವಿರಾಸತ್‍ನಲ್ಲಿ ಧರಿಸಿದ್ದ ಕಿಂಗಕಾಂಗ್ ಗೊರಿಲ್ಲಾ ವೇಷ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು. ಸಂಕೋಲೆಯಲ್ಲಿ ಬಿಗಿದ ಗೊರಿಲ್ಲಾ ವೇಷಧಾರಿ ನಾಲ್ಕು ಜನ ಬೌನ್ಸರ್‍ಗಳ ಜೊತೆ ವೇದಿಕೆಗೆ ಬಂದು ನೃತ್ಯ ಮಾಡುವ 2 ನಿಮಿಷ 8 ಸೆಕೆಂಡ್‍ನ ಈ ದೃಶ್ಯವನ್ನು ಸುಮಾರು 2.40 ಕೋಟಿಗೆ ಹೆಚ್ಚು ಜನರು ಕರಾವಳಿಯ ವೆಬ್‌ನ್ಯೂಸ್ ಪೋರ್ಟಲ್‍ನ ಯುಟ್ಯೂಬ್ ಚಾನೆಲ್‍ನಲ್ಲಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ತುಳು, ಕನ್ನಡ, ಹಿಂದಿ, ಭಾಷೆಯ ಚಿತ್ರಗಳಲ್ಲಿ ನಟಿಸುವ ದೀಪಕ್ ರೈ, 23ಕ್ಕೂ ಅಧಿಕ ಚಿತ್ರಗಳಲ್ಲಿ ಖಳನಾಯಕ, ಹಾಸ್ಯನಟನಾಗಿ ಮಿಂಚಿ ತನ್ನ ಪ್ರತಿಭೆಯನ್ನು ನಟನಾ ಕ್ಷೇತ್ರದಲ್ಲೂ ಅನಾವರಣಗೊಳಿಸಿದ್ದಾರೆ.

ಕುದ್ರೋಳಿಯ ದಸರಾದಂತಹ ಪ್ರಸಿದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಟ್ಯಾಬ್ಲೋ ಯಜ್ಞೇಶ್ವರ ಬರ್ಕೆ ಇವರ ಮಾರ್ಗದರ್ಶನದೊಂದಿಗೆ ಸುಮಾರು 4 ಲಕ್ಷ ವೆಚ್ಚದಲ್ಲಿ ಕಿಂಗ್ ಕಾಂಗ್ ಗೊರಿಲ್ಲಾ ವೇಷಭೂಷಣ ತಯಾರಿಸಿ ಪ್ರದರ್ಶನ ನೀಡಿದ್ದಾರೆ. ಮಾತ್ರವಲ್ಲದೇ ಮುಂಬೈ, ತಮಿಳುನಾಡು, ಕೇರಳ, ಕರ್ನಾಟಕದ್ಯಂತ ಮೆಚ್ಚಗೆಯ ಕಲಾವಿದನಾಗಿ ತುಳುನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಔನತ್ಯಕ್ಕೇರಿಸಿದ್ದಾರೆ. ದೀಪಕ್ ಶೆಟ್ಟಿ ಕೇವಲ ಸ್ವಂತ ಲಾಭಕ್ಕಾಗಿ ದುಡಿಯುವವರಲ್ಲ. ತಾನು ಸಂಪಾದಿಸಿದ ಆರ್ಥಿಕ ಸಂಪತ್ತನ್ನು ಬೇರೆ ಬೇರೆ ಸಮಾಜಮುಖಿ ಕೈಂಕರ್ಯಗಳಿಗೋಸ್ಕರ ವಿನಿಯೋಗಿಸುತ್ತಿದ್ದಾರೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT