ಆಧುನಿಕತೆಯ ಮೋಡಿಗೆ ಮಂಕಾಗದು ಸೀರೆ!

6

ಆಧುನಿಕತೆಯ ಮೋಡಿಗೆ ಮಂಕಾಗದು ಸೀರೆ!

Published:
Updated:
Deccan Herald

ಸೀರೆಗೆ ಎಷ್ಟೇ ಆಧುನಿಕ ರೂಪ ಕೊಟ್ಟರೂ ಅದರ ಸೊಗಡು, ಸೊಬಗು ಬದಲಾಗೋದಿಲ್ಲ ಬಿಡ್ರೀ’ ಎಂದರು ಗೌರಂಗ್ ಷಾ. ಹಾಫ್‌ ಸೀರೆ, ಧೋತಿ ಸೀರೆ, ಪ್ಯಾಂಟ್‌ ಸೀರೆಗಳು ಈಗ ಎಲ್ಲರ ಮೆಚ್ಚುಗೆ ಗಳಿಸಿರಬಹುದು. ಆದರೆ ಸಾಂಪ್ರದಾಯಿಕ ರೀತಿಯಲ್ಲಿ ಸೀರೆ ಉಟ್ಟ ಹೆಣ್ಣುಮಗಳೇ ಎಲ್ಲರ ಗಮನ ಸೆಳೆಯುವುದು ಎಂದು ಅವರು ವಾದಿಸಿದರು.

ಹೈದರಾಬಾದ್‌ ಮೂಲದ ಗೌರಂಗ್‌, ಖಾದಿ ಮತ್ತು ಜಾಮ್ದಾನಿ ವಿನ್ಯಾಸಗಳಿಂದ ವಿಶ್ವವಿಖ್ಯಾತಿ ಪಡೆದ ವಸ್ತ್ರ ವಿನ್ಯಾಸಕ. ಸೀರೆ ಮತ್ತು ಖಾದಿಯಲ್ಲಿ ಅವರು ಮಾಡಿರುವ ಪ್ರಯೋಗಗಳೂ ಅನೇಕ.

‘ಫ್ಯಾಷನ್‌ ಮತ್ತು ಟ್ರೆಂಡ್‌ ಹೆಸರಿನಲ್ಲಿ ಪ್ರತಿಯೊಂದು ಉಡುಗೆಯೂ ಹೊಸ ರೂಪ ಪಡೆದು ಅದಕ್ಕೊಂದು ಹೆಸರು ಲಗತ್ತಿಸಿಕೊಂಡು ಗ್ರಾಹಕರನ್ನು ಸೆಳೆಯುತ್ತದೆ. ಈ ಟ್ರೆಂಡ್‌ನಿಂದ ಸೀರೆಗಳೂ ಹೊರತಾಗಿಲ್ಲ. ಎಷ್ಟೇ ಮಾರ್ಪಾಡು
ಗಳನ್ನು ಮಾಡಿದರೂ ತನ್ನ ಮೂಲ ಸೊಬಗನ್ನು ಕಳೆದುಕೊಳ್ಳದ, ಮಂಕಾಗದ ಉಡುಪು ಸೀರೆ ಮಾತ್ರ’ ಎಂಬುದು ಅವರ ಪ್ರತಿಪಾದನೆ.

ಸೀರೆ ಸಾವಿರಾರು ವರ್ಷಗಳಷ್ಟು ಹಿಂದಿನದು. ಭಾರತೀಯ ಇತಿಹಾಸ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಸೀರೆಯ ನಂಟು ಅಷ್ಟು ಸುಲಭವಾಗಿ ಸಡಿಲವಾಗದು. ಜಗತ್ತಿನ ಯಾವುದೇ ಮೂಲೆಗೆ ಹೋಗಿ, ಭಾರತೀಯ ಶೈಲಿಯಲ್ಲಿ ಸೀರೆ ಉಟ್ಟ ಹೆಣ್ಣುಮಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗಿಬಿಡುತ್ತಾಳೆ. ವಿದೇಶಿ ವಸ್ತ್ರ ಸಂಸ್ಕೃತಿ ನಮ್ಮನ್ನು ಸೆಳೆದರೂ ಸೀರೆಗೆ ಮರುಳಾಗಾದವರು, ಮನಸೋಲದವರು ಇದ್ದಾರೆಯೇ ಎಂದು ಗೌರಂಗ್‌ ತಮ್ಮ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಗೌರಂಗ್‌ ಷಾ  1999ರಲ್ಲಿ ಪದವಿ ಮುಗಿಸಿದ ಬಳಿಕ ಹೈದರಾಬಾದ್‌ನಲ್ಲಿ ತನ್ನ ತಂದೆಯ ಸೀರೆ ಮಳಿಗೆಯನ್ನು ನೋಡಿಕೊಳ್ಳುತ್ತಿದ್ದರು. ಆಗ, ರೇಷ್ಮೆ ಮತ್ತು ಇತರ ಸೀರೆಗಳಿಗೆ ಮ್ಯಾಚಿಂಗ್ ರವಿಕೆ ಕಣಕ್ಕಾಗಿ ಗ್ರಾಹಕರು ಪರದಾಡುವುದನ್ನು ಗಮನಿಸಿದ್ದರಂತೆ. ಅಲ್ಲದೆ, ಆಕರ್ಷಕವಲ್ಲದ ಬಣ್ಣ ಮತ್ತು ವಿನ್ಯಾಸಗಳಿಂದಾಗಿ ಉಪ್ಪಡ ರೇಷ್ಮೆ ಸೀರೆಗಳನ್ನು ಗ್ರಾಹಕರು ನಿರಾಕರಿಸುತ್ತಿದ್ದುದನ್ನೂ ಗಮನಿಸಿ ಉಪ್ಪಡ ಸೀರೆಯಲ್ಲೇ ಹೊಸ ಪ್ರಯೋಗ ಮಾಡಿ ಗೆದ್ದವರು. ವಸ್ತ್ರ ವಿನ್ಯಾಸವನ್ನು ಅಕಾಡೆಮಿಕ್‌ ಆಗಿ ಕಲಿಯದಿದ್ದರೂ ಗೌರಂಗ್‌, ವಿಶ್ವದ ಅತಿ ಬೇಡಿಕೆಯ ಭಾರತೀಯ ವಸ್ತ್ರ ವಿನ್ಯಾಸಕರಾಗಿ ಬೆಳೆದಿದ್ದಾರೆ. ಖಾದಿ, ರೇಷ್ಮೆ ಮತ್ತು ಜಾಮ್ದಾನಿ ವಿನ್ಯಾಸಗಳಲ್ಲಿ ಮಾಸ್ಟರ್‌ಪೀಸ್‌ಗಳನ್ನು ನೀಡಿದವರು ಅವರು. 

ರಾಜಾ ರವಿವರ್ಮ ಅವರ ಕಲಾಕೃತಿಗಳನ್ನು ಆಧರಿಸಿ ಜಾಮ್ದಾನಿ ನೇಯ್ಗೆಯಲ್ಲಿ ಅವರು ಸಿದ್ಧಪಡಿಸಿದ ಖಾದಿ ಸೀರೆಗಳ ಪ್ರದರ್ಶನಕ್ಕಾಗಿ ಗಾಂಧಿ ಜಯಂತಿ ದಿನ ಗೌರಂಗ್‌ ಬೆಂಗಳೂರಿಗೆ ಬಂದಿದ್ದರು. ರಾಜಾ ರವಿವರ್ಮ ಹೆರಿಟೇಜ್‌ ಪ್ರತಿಷ್ಠಾನ ಮತ್ತು ಅಭಿರಾಜ್‌ ಬಲ್ಡೋಟಾ ಫೌಂಡೇಶನ್‌, ಗೂಗಲ್‌ ಆರ್ಟ್ಸ್‌ ಆ್ಯಂಡ್‌ ಕಲ್ಚರ್‌ ಜೊತೆಗೆ ಕೈಗೆತ್ತಿಕೊಂಡಿರುವ ವಿಭಿನ್ನ ಯೋಜನೆ ‘ಖಾದಿ–ಎ– ಕ್ಯಾನ್ವಾಸ್‌’ಗಾಗಿ ಗೌರಂಗ್‌ 30 ಸೀರೆಗಳನ್ನು ಸಿದ್ಧಪಡಿಸಲಿದ್ದಾರೆ. 300 ಕೌಂಟ್‌ನ ಖಾದಿ ಸೀರೆಗಳು ನೈಸರ್ಗಿಕ ಬಣ್ಣ ಮತ್ತು ಸಾಂಪ್ರದಾಯಿಕ ಜಾಮ್ದಾನಿ ನೇಯ್ಗೆಯಲ್ಲಿ ರವಿವರ್ಮನ ಕಲಾಕೃತಿಗಳನ್ನು ಹೊತ್ತು ಸಿದ್ಧಗೊಳ್ಳಲಿವೆ. ದೇಶದ ನಾನಾ ಭಾಗದಿಂದ ಹೆಕ್ಕಿ ಒಗ್ಗೂಡಿಸಿರುವ 150 ಮಂದಿ ನೇಯ್ಗೆ ಮತ್ತು ಕೈಮಗ್ಗ ಕುಶಲಕರ್ಮಿಗಳು ಈ ಸೀರೆಗಳ ತಯಾರಿಗಾಗಿ ಶ್ರಮಿಸಲಿದ್ದಾರೆ.

ತಮ್ಮ ವಸ್ತ್ರ ವಿನ್ಯಾಸ ಕೌಶಲಕ್ಕೆ ‘ಖಾದಿ ಎ ಕ್ಯಾನ್ವಾಸ್‌’ ಯೋಜನೆ ದೊಡ್ಡ ಸವಾಲು ಎಂಬ ಎಚ್ಚರದೊಂದಿಗೇ ಮೂರು ಸೀರೆಗಳನ್ನು ಗೌರಂಗ್ ಸಿದ್ಧಪಡಿಸಿದ್ದಾರೆ. ಆದರೆ ಸೀರೆ ವಿನ್ಯಾಸ ಮತ್ತು ಅದನ್ನುಡುವ ಸೊಬಗಿಗೆ ಮನಸೋತಿರುವ ತನಗೆ ಬಯಸದೇ ಬಂದ ಭಾಗ್ಯ ಇದು ಎಂದು ಹೆಮ್ಮೆಯಿಂದ ಬೀಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !