ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೇರಿಕೆ ಎಂದರೆ ದೇಸಿ ಭಾಷೆಗಳ ಸಾವು

Last Updated 22 ಸೆಪ್ಟೆಂಬರ್ 2019, 6:31 IST
ಅಕ್ಷರ ಗಾತ್ರ

ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಿದ ಪ್ರಸಿದ್ಧ ಕಾಲೇಜೊಂದರಲ್ಲಿ ಹಿಂದಿ ಪಾಠಮಾಡುವ ಸಹಾಯಕ ಪ್ರಾಧ್ಯಾಪಕರೊಬ್ಬರು ಈಚೆಗೆ ಸಿಕ್ಕಾಗ ‘ಸಾಬ್ಜೀ, ಏ ಕನ್ನಡ್ ಕಹಾಂಕಿ ಭಾಷಾ ಹೈ’ ಎಂದು ಕೇಳಿ ನನ್ನನ್ನು ತಬ್ಬಿಬ್ಬುಗೊಳಿಸಿದರು. ನಾನವರಿಗೆ ದಕ್ಷಿಣ ಭಾರತದ ಭೂಪಟವನ್ನು ತೋರಿಸಿ ಅಲ್ಲಿನ ಮುಖ್ಯಭಾಷೆಗಳ ಬಗ್ಗೆ ಹೇಳಿದೆ. ‘ನಮಗೆ ಇವನ್ನೆಲ್ಲ ಇಲ್ಲಿ ಯಾರೂ ಹೇಳುವುದಿಲ್ಲ, ಶಾಲೆಯಲ್ಲೂ ನಾವು ಕಲಿತಿಲ್ಲ’ ಎಂದು ಅವರು ಬೇಸರ ಪಟ್ಟುಕೊಂಡರು.

ತ್ರಿಭಾಷಾ ಸೂತ್ರದಡಿಯಲ್ಲಿ ಉತ್ತರ ಭಾರತದ ಯಾರೂ ದಕ್ಷಿಣ ಭಾರತದ ಭಾಷೆಯನ್ನು ಕಲಿತೇ ಇಲ್ಲ. ತಮಿಳುನಾಡು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡೇ ಇಲ್ಲ. ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡು ಏನು ಸಾಧಿಸಿತು? ತಮಿಳುನಾಡು ಏನು ಕಳೆದುಕೊಂಡಿತು? ಉತ್ತರ ಭಾರತೀಯರು ಯಾಕೆ ದಕ್ಷಿಣ ಭಾರತದ ಭಾಷೆಗಳನ್ನು ಕಲಿಯುವುದೇ ಇಲ್ಲ, ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಮೊದಲು ಕೇಳಿಕೊಳ್ಳಬೇಕು. ಆನಂತರ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವುದರ ಮೂಲಕ ರಾಷ್ಟ್ರೀಯ ಐಕ್ಯತೆ ಸಾಧಿಸುವುದರ ಬಗ್ಗೆ ಮಾತಾಡಬೆಕು.

ಆದರೆ, ಇಂದಿನ ಭಾರತದಲ್ಲಿ ಅಂಥ ಸಂವಾದಗಳಿಗೆ ಎಡೆಯೇ ಇಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎಯು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ನಾವು ನೋಡುತ್ತಿದ್ದಂತೇ ಹಿಂದಿ ಭಾಷೆಯ ಬಳಕೆ ತೀವ್ರವಾಗಿದೆ. ಹಿಂದಿ ಭಾಷೆಯನ್ನು ಬಳಸಬೇಕೆಂದು ಆದೇಶಿಸುವ ಸುತ್ತೋಲೆಗಳು, ಕಚೇರಿ ಟಿಪ್ಪಣಿಗಳು ಮತ್ತು ಆದೇಶಗಳು ದೇಶದಾದ್ಯಂತ ಓಡಾಡುತ್ತಿವೆ. ಇದರ ಪರಿಣಾಮವಾಗಿ ಹೆಚ್ಚು ಸದ್ದು ಮಾಡದೆ ಅನೇಕ ಕಡೆಗಳಲ್ಲಿ ಹಿಂದಿ ಬಳಕೆಗೆ ಬಂದಿದೆ. ಉದಾಹರಣೆಗೆ, ಡಿಮಾನಿಟೈಸೇಶನ್ ನಂತರ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಹೊಸ ನೋಟುಗಳ ಮೇಲೆ ಗಾಂಧೀ ಚಿತ್ರದ ಸನಿಹ ದೇವನಾಗರಿಯಲ್ಲಿ ರೂಪಾಯಿಯ ಮೌಲ್ಯವನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಹಿಂದೀ ಭಾಷೆಯನ್ನು ವ್ಯಾಪಕವಾಗಿ ಬಳಸಲಾಗಿದೆ.

ಕೇಂದ್ರೀಯ ಶಾಲೆಗಳು ಮತ್ತು ಸಿಬಿಎಸ್‌ಸಿ ಶಾಲೆಗಳಲ್ಲಿ 10ನೇ ತರಗತಿವರೆಗೆ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವ ಪ್ರಯತ್ನಕ್ಕೆ 2017ರಲ್ಲಿ ರಾಷ್ಟ್ರಪತಿಯವರು ಸಮ್ಮತಿ ಸೂಚಿಸಿದ್ದಾರೆ. ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‍ಯು) ನನಗೆ ಈಚಿನವರೆಗೂ ಇಂಗ್ಲಿಷ್ ಭಾಷೆಯಲ್ಲಿ ವೇತನ ಪತ್ರ ಬರುತ್ತಿದ್ದು ಈಗ ಅದು ಹಿಂದಿಗೆ ಬದಲಾಗಿದೆ. ಬ್ಯಾಂಕ್, ಅಂಚೆ ಕಛೇರಿ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ರಕ್ಷಣಾ ಇಲಾಖೆ - ಹೀಗೆ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಎಲ್ಲ ಕಡೆಯೂ ಹಿಂದಿಯು ವ್ಯಾಪಕವಾಗಿ ಬೇರುಬಿಟ್ಟಿದೆ. 2015ರಿಂದ ಕೇಂದ್ರ ಸರಕಾರ ಜಾರಿಗೆ ತಂದ ಎಲ್ಲ ಯೋಜನೆಗಳ ಹೆಸರುಗಳೂ ಹಿಂದಿಯಲ್ಲಿ ಇವೆ. ಉದಾಹರಣೆಗೆ-ಅಟಲ್ ಪೆನ್ಷನ್‌ ಯೋಜನಾ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ, ಪ್ರಧಾನ ಮಂತ್ರಿ ಭೀಮ್ ಸುರಕ್ಷಾ ಯೋಜನಾ, ಜನ್‍ಧನ್‍ ಯೋಜನಾ ಇತ್ಯಾದಿ.

ಕೇಂದ್ರ ಸರಕಾರ ಹಿಂದಿ ಅನುಷ್ಠಾನದ ವಿಷಯದಲ್ಲಿ ಸಾಕಷ್ಟು ಉದಾರವಾಗಿಯೇ ಹಣ ಖರ್ಚು ಮಾಡುತ್ತಿದೆ. 2009-12ರ ಅವಧಿಯಲ್ಲಿ 349 ಕೋಟಿ ರೂಪಾಯಿ ಖರ್ಚು ಮಾಡಿದರೆ, 2018ರಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‍ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿದರೆ, ಅದಕ್ಕೆ 400 ಕೋಟಿ ರೂಪಾಯಿ ವೆಚ್ಚ ಮಾಡಲು ಸಿದ್ಧ ಎಂದು ಘೋಷಿಸಿದ್ದರು. ವಿದೇಶಗಳಲ್ಲಿ ಹಿಂದಿ ಭಾಷೆಯನ್ನು ಅಭಿವೃದ್ಧಿಗೊಳಿಸಲು 2017-18ರಲ್ಲಿ 43.48 ಕೋಟಿ ರೂಪಾಯಿ ವ್ಯಯಿಸಲಾಗಿದೆ. 2018-19ರಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಕಲಿಸುವ ಅಧ್ಯಾಪಕರಿಗಾಗಿ 50 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.

ಸಂವಿಧಾನದಲ್ಲಿ ನಮೂದಿಸಿದ ಪ್ರಕಾರವೇ ಕೇಂದ್ರ ಸರಕಾರವು ತನ್ನ ಅಧಿಕೃತ ವ್ಯವಹಾರಗಳನ್ನು ಈಗ ಬಹುತೇಕ ಹಿಂದಿಯಲ್ಲಿ ನಡೆಸುತ್ತಿದೆ. ನೆಹರೂ ಮತ್ತು ಶಾಸ್ತ್ರಿಯವರು ನೀಡಿದ್ದ ಆಶ್ವಾಸನೆಯ ಪ್ರಕಾರ ಹಿಂದಿಯ ಜೊತೆಗಿದ್ದ ಇಂಗ್ಲಿಷನ್ನು ಅದು ಬಹುತೇಕವಾಗಿ ಕೈಬಿಟ್ಟಿದೆ. ಇವತ್ತಿನ ಕೇಂದ್ರ ಸರಕಾರದಲ್ಲಿರುವ ಬಹುತೇಕ ಮಂತ್ರಿಗಳಿಗೆ ಹಾಗೂ ಉತ್ತರ ಭಾರತದ ಬಹುತೇಕ ರಾಜ್ಯಗಳ ಮಂತ್ರಿಗಳಿಗೆ ಇಂಗ್ಲಿಷ್ ಬರುವುದಿಲ್ಲವಾದ್ದರಿಂದ ಈ ನಡೆಯು ಅವರಿಗೆ ವರದಾನವಾಗಿದೆ. ಈ ಒಟ್ಟು ಬೆಳವಣಿಗೆಗಳು ಹಿಂದಿಯೇತರ ರಾಜ್ಯಗಳ ಜನರಿಗೆ ಹಿಂದಿ ಹೇರಿಕೆಯಂತೆ ಕಾಣುತ್ತದೆ. ಆದರೆ ಕೇಂದ್ರ ಸರಕಾರವು ಇದು ಹಿಂದಿ ಹೇರಿಕೆಯಲ್ಲವೆಂದೂ ಸಂವಿಧಾನವೇ ನೀಡಿದ ಅನುಮತಿಯ ಪ್ರಕಾರ ಹಿಂದಿಯ ಅನುಷ್ಠಾನವೆಂದೂ ವಾದಿಸುತ್ತಿದೆ.

ಇಡೀ ಉತ್ತರ ಭಾರತ ಇವತ್ತು ಹಿಂದಿಯ ಪರವಾಗಿ ನಿಂತಿರುವುದಕ್ಕೆ ಅದರದ್ದೇ ಆದ ಐತಿಹಾಸಿಕ ಕಾರಣಗಳಿವೆ. ಚೂರುಚೂರಾಗಿದ್ದ ಕರ್ನಾಟಕದ ಬೇರೆ ಬೇರೆ ಭಾಗಗಳು ಏಕೀಕರಣದ ಸಂದರ್ಭದಲ್ಲಿ ಒಂದಾದಂತೆ, 126ಕ್ಕೂ ಹೆಚ್ಚು ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳ ನಡುವೆ ಹಂಚಿ ಹೋಗಿದ್ದ ಉತ್ತರ ಭಾರತವು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಒಂದು ಸಾಮಾನ್ಯ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬೆಳೆಸಿಕೊಂಡಿತು. ಈ ಬೆಳವಣಿಗೆಗೆ ಉತ್ತರ ಭಾರತದ ಪತ್ರಿಕೋದ್ಯಮ ನೀಡಿದ ಕೊಡುಗೆ ಬಹಳ ದೊಡ್ಡದು. ಬನಾರಸ್‌ ಅಕ್ಬರ್, ಸುಧಾಕರ್‌ ತತ್ವ ಬೋಧಿನಿ, ಸರಸ್ವತಿ, ಮಿತ್ರ ಮೊದಲಾದ ಹಿಂದಿ ಪತ್ರಿಕೆಗಳು ಹಾಗೂ ಲೇಖಕ-ಸಂಪಾದಕರಾದ ಮಹಾವೀರ ಪ್ರಸಾದ್ ದ್ವಿವೇದಿ, ಬಾಲಮುಕುಂದ ಗುಪ್ತಾ, ಅಂಬಿಕಾಪ್ರಸಾದ ಬಾಜಪೇಯಿ, ಚೋಟೆರಾಂ ಶುಕ್ಲಾ ಮೊದಲಾದವರು ಉಪಭಾಷೆಗಳನ್ನು ಹಿಂದಿಕ್ಕಿ ಸಾಮಾನ್ಯ ಹಿಂದಿಯನ್ನು ಎಲ್ಲರಿಗೂ ಒಪ್ಪಿಗೆಯಾಗುವಂತೆ ಬೆಳೆಸಿದರು.

ಸ್ವಾತಂತ್ರ್ಯ ಪೂರ್ವದ ಹಿಂದಿ ಲೇಖಕರಾದ ಜೈಶಂಕರ್ ಪ್ರಸಾದ್, ಸುಮಿತ್ರಾನಂದನ್ ಪಂತ್, ರಾಮಧಾರಿ ಸಿಂಗ್ ದಿನಕರ್, ಮೈಥಿಲಿ ಶರಣ್‌ ಗುಪ್ತ, ಮಕನ್‌ಲಾಲ್‍ ಚತುರ್ವೇದಿ, ಭರತೇಂದು ಹರಿಶ್ಚಂದ್ರ, ಮಹಾದೇವಿ ವರ್ಮ, ಮೊದಲಾದವರು ಆಧುನಿಕ ಹಿಂದಿಯನ್ನು ರೂಪಿಸಿದ ಶಕ್ತಿಶಾಲಿ ಲೇಖಕರು. ಇದರಿಂದಾಗಿ ಹಿಂದಿ ಪೂರ್ವಯುಗದ ಬೃಜ್, ಅವಧಿ, ರಾಜಸ್ಥಾನಿ, ಬಘೇಲಿ, ಭೋಜಪುರಿ, ಬುಂದೇಲಿ, ಮೈಥಿಲಿ, ಛತ್ತೀಸ್‍ಗರಿ, ಗರ್ವಾಲಿ, ಹರ್ಯಾನ್ವಿ, ಕನೌಜಿ, ಕುಮೌನಿ, ಮಗಧಿ, ಮಾರ್ವಾರಿ ಮೊದಲಾದ ಸುಂದರ ಭಾಷೆಗಳು ದುರ್ಬಲವಾಗುತ್ತಾ ಹೋದವು. ಜೊತೆಗೆ ಮೊಘಲರ ಕಾಲದಲ್ಲಿ ಶಕ್ತಿಶಾಲಿ ಭಾಷೆಯಾಗಿದ್ದ ಪರ್ಷಿಯನ್ ಕಳೆಗುಂದಿತು.

ಸ್ವಾತಂತ್ರ್ಯ ಚಳುವಳಿಗೆ ಬಹುದೊಡ್ಡ ಕೊಡುಗೆ ನೀಡಿದ್ದ ಉರ್ದು ಕೂಡಾ ಹಿಂದೆ ಬಿತ್ತು. ಭಾರತ ವಿಭಜನೆಯ ಸಂದರ್ಭದಲ್ಲಿ ಕಾಣಿಸಿಕೊಂಡ ಕೋಮುವಾದವು ಹಿಂದಿ ಮತ್ತು ಉರ್ದುಗಳ ನಡುವಣ ಕಂದಕವನ್ನು ಇನ್ನಷ್ಟು ಹೆಚ್ಚು ಮಾಡಿತು. ಉತ್ತರ ಭಾರತದ ಬಹುತೇಕ ಜನರು ಮಾತಾಡುತ್ತಿದ್ದ ಉರ್ದುವನ್ನು ಮುಸ್ಲಿಮರ ಭಾಷೆಯೆಂದು ಬಿಂಬಿಸುವಲ್ಲಿ ಕೋಮುವಾದಿಗಳು ಯಶಸ್ವಿಯಾದರು. ಉರ್ದುವಿನ ಪ್ರಸಿದ್ಧ ಲೇಖಕರಾದ ಬಿ.ಎಸ್‍.ಜೈನ್‍ ಜವಾಹರ್, ಅಮೀರ್‌ಚಂದ್, ಭಗವಾನ್‍ ದಾಸ್‍ ಎಜಾಜ್, ಸೋಹನ್‍ ರಾಹಿ, ಇಂದ್ರ ಮೋಹನ್ ದೀಪಕ್‍ ಕುಮಾರ್, ಆಶಾ ಪ್ರಭಾತ್, ಕಾಮಿನಿ ದೇವಿ, ರಾಜಿಂದರ್ ನಾಥ್, ಜಯಂತ ಪರಮಾರ್ ಮೊದಲಾದವರು ಮುಸ್ಲಿಮರಲ್ಲ ಎಂಬುದನ್ನು ಮರೆಯಬಾರದು.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಹಿಂದಿಯು ಸಂಸ್ಕೃತದ ಕಡೆಗೆ ಹೆಚ್ಚು ವಾಲುತ್ತಿದ್ದಂತೆ ಅದು ಉರ್ದುವಿನ ಸಂಬಂಧವನ್ನು ಬಹುತೇಕ ಕಡಿದುಕೊಂಡಿತು, ಜೊತೆಗೆ ಕೋಮುವಾದದೊಂದಿಗೆ ತನ್ನನ್ನು ಜೋಡಿಸಿಕೊಂಡಿತು. ಸ್ವತಂತ್ರ ಭಾರತದಲ್ಲಿ ದೆಹಲಿಯ ಅಧಿಕಾರ ಕೇಂದ್ರಕ್ಕೆ ಹತ್ತಿರವಾದ ಹಿಂದಿಯು ಮುಂದೆ ವಿಸ್ತರಿಸುತ್ತಾ ಹೋಯಿತು. ಕೇಂದ್ರದ ಮಂತ್ರಿಗಳನ್ನು, ಅಧಿಕಾರಿಗಳನ್ನು ಓಲೈಸಲು ಹಿಂದಿಯೇತರರೂ ಹಿಂದಿ ಕಲಿಯಲಾರಂಭಿಸಿದರು. ಬಾಲಿವುಡ್ ಸಿನಿಮಾಗಳು, ಟಿವಿ ಚಾನೆಲ್‌ಗಳು ಹಿಂದಿಯನ್ನು ಜನಪ್ರಿಯಗೊಳಿಸಿದುವು. ಕಳೆದ ಜನಗಣತಿ (2011) ಪ್ರಕಾರ ಹಿಂದಿಯನ್ನು 52.83 ಕೋಟಿ ಜನ ತಮ್ಮ ತಾಯ್ನುಡಿಯಾಗಿ ಅಂಗೀಕರಿಸಿದ್ದು, ಇದು ಒಟ್ಟು ಭಾರತೀಯ ಭಾಷೆಗಳ ಶೇಕಡ 43.63ರಷ್ಟು ಆಗಿದ್ದು ಪ್ರಥಮ ಸ್ಥಾನದಲ್ಲಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿರುವ ಹಿಂದಿಯು ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸುವುದು ಅಸಹಜವೇನಲ್ಲ.

ಆದರೆ ಈ ವಿಷಯದಲ್ಲಿ ಕಾಂಗ್ರೆಸ್‍ ಎಚ್ಚರದ ಹೆಜ್ಜೆ ಇಡುತ್ತಲೇ ಬಂದಿತ್ತು. 1921ರಷ್ಟು ಹಿಂದೆಯೇ ರಾಷ್ಟ್ರೀಯ ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳ ಬಗ್ಗೆ ಯೋಚಿಸಿತ್ತು. ಆ ಹೊತ್ತಿಗೇ ಹಿಂದಿ ಭಾಷಿಕರು ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕೆಂಬ ಒತ್ತಡ ಹೇರುತ್ತಿದ್ದರಾದರೂ ದಕ್ಷಿಣ ಭಾರತದ ವಿವಿಧ ಭಾಷಿಕರ ಹಾಗೂ ಉತ್ತರ ಪೂರ್ವದ ಪ್ರತಿನಿಧಿಗಳ ಪ್ರತಿಭಟನೆಯಿಂದಾಗಿ ಹಿಂದಿ ರಾಷ್ಟ್ರೀಯ ಭಾಷೆಯಾಗದೇ ಉಳಿಯಿತು.

ಕಾಂಗ್ರೆಸ್‍ ಇಂಗ್ಲಿಷನ್ನು ತಾತ್ಕಾಲಿಕವಾಗಿಯಾದರೂ ಒಪ್ಪಿಕೊಳ್ಳಬೇಕಾಯಿತು.

ಸಂವಿಧಾನವನ್ನು ಬರೆಯುವಾಗ ಡಾ. ಅಂಬೇಡ್ಕರ್‍ ಅವರಿಗೆ ಭಾಷೆಯ ವಿಷಯದಲ್ಲಿ ಸಾಕಷ್ಟು ಗೊಂದಲವಿತ್ತು. ರಾಷ್ಟ್ರವಾದಿಯಾಗಿದ್ದ ಅವರು ಭಾಷಾವಾರು ಪ್ರಾಂತ್ಯಗಳ ಪರವಾಗಿಯೇ ಇದ್ದರು. ‘ಭಾಷಾವಾರು ಪ್ರಾಂತ್ಯಗಳ ರಚನೆಯು ಉಂಟು ಮಾಡಬಹುದಾದ ಅಪಾಯಗಳಿಗಿಂತ, ಅವುಗಳನ್ನು ರಚಿಸದೇ ಇದ್ದರೆ ಉಂಟಾಗುವ ಅಪಾಯಗಳು ಅಧಿಕ’ ಎಂದು ಅವರು 1955ರಲ್ಲಿ ಹೇಳಿದ್ದರು. ಆದರೆ ಬಹಳ ಕಷ್ಟಪಟ್ಟು ಜೋಡಿಸಿದ ಭಾರತವು ಭಾಷಾ ಕಾರಣವಾಗಿ ಮತ್ತೆ ಒಡೆದು ಹೋಗಬಾರದೆಂದು ಅವರು ಗಟ್ಟಿಯಾಗಿ ನಂಬಿದ್ದರು. ಹಾಗಾಗಿ ಅವರು ಕೇಂದ್ರದ ವ್ಯವಹಾರಗಳು ಹಿಂದಿಯಲ್ಲಿ ಇರುವುದಕ್ಕೆ (ಆರ್ಟಿಕಲ್ 343) ಸಹಮತ ವ್ಯಕ್ತಪಡಿಸಿದರು. ಆರ್ಟಿಕಲ್ 351ರಲ್ಲಿ ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಬೆಳೆಸಲೂ ಸೂಚಿಸಿದರು. ಆದರೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಅವರು ಯಾವತ್ತೂ ಘೋಷಿಸಲಿಲ್ಲ. ಬದಲು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಯಾದ ಎಲ್ಲ ಭಾಷೆಗಳೂ ಸಮಾನ ಎಂದು ಅವರು ಘೋಷಿಸಿದರು.

ಸಮಸ್ಯೆಯ ಜಟಿಲತೆಯ ಅರಿವಿದ್ದ ನೆಹರೂ 1965ರ ತನಕ ಹಿಂದಿ ಮತ್ತು ಇಂಗ್ಲಿಷ್ ಬಳಕೆಯಲ್ಲಿರುತ್ತದೆ ಎಂದು ಹೇಳಿ, ದಕ್ಷಿಣದವರು ಆಗಾಗ ಬೀಸುತ್ತಿದ್ದ ದೊಣ್ಣೆಯಿಂದ ಪಾರಾದರು. 1965ರ ಗಡುವು ತೀರುವ ಹೊತ್ತಿಗೆ ಇಂಗ್ಲಿಷ್ ಹೋಗಿ ಹಿಂದಿ ರಾಷ್ಟ್ರ ಭಾಷೆಯಾಗಿ ಬಿಡುತ್ತದೆ ಎಂದು ಭಾವಿಸಿದ ತಮಿಳುನಾಡು ಹಿಂದಿಯ ವಿರುದ್ಧ ಹೋರಾಟ ಆರಂಭಿಸಿದಾಗ, ಈ ಹೋರಾಟವು ಇತರ ರಾಜ್ಯಗಳಿಗೆ ಹಬ್ಬಿಬಿಡಬಹುದೆಂಬ ಭಯದಿಂದ ಆಗ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ನೆಹರೂ ಅವರನ್ನು ಉಲ್ಲೇಖಿಸಿ, ಜನ ಬಯಸುವವರೆಗೆ ಹಿಂದಿಯೊಡನೆ ಇಂಗ್ಲಿಷ್‍ ಕೂಡಾ ಇರುತ್ತದೆ ಎಂದು ಹೇಳಿ ಹೋರಾಟವನ್ನು ತಣ್ಣಗೆ ಮಾಡಿದರು. ಕಾಂಗ್ರೆಸ್‍ ಕೂಡಾ ಇದಕ್ಕೆ ತನ್ನ ಸಹಮತ ಪ್ರಕಟಿಸಿತು. ಆದರೂ ಕೇಂದ್ರ ಸರಕಾರವು ಹಿಂದಿಯನ್ನು ಬೆಳೆಸುವ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾಣತನದಿಂದ ಮುಂದುವರಿಸುತ್ತಲೇ ಬಂದಿದೆ.

ಆಗೊಮ್ಮೆ ಈಗೊಮ್ಮೆ ಅದರ ಕಾರ್ಯಸೂಚಿಗಳು ಬಹಿರಂಗಕ್ಕೆ ಬಂದಾಗ ಪ್ರಕಟವಾಗುವ ಪ್ರತಿಭಟನೆಗಳನ್ನು ಅದು ಗಂಭೀರವಾಗಿ ವಿಶ್ಲೇಷಿಸಿ ಬದಲೀ ದಾರಿಗಳನ್ನು ಕಂಡುಕೊಳ್ಳುತ್ತಿದೆ. ಈ ನಡುವೆ ಹಿಂದಿಯನ್ನು ಭಾರತದ ರಾಷ್ಟ್ರ ಭಾಷೆಯನ್ನಾಗಿ ಮಾಡಿ, ಅದು ಭಾರತವನ್ನು ಪ್ರತಿನಿಧಿಸುವ ಏಕೈಕ ಭಾಷೆಯಾಗಿ ಹೊರಹೊಮ್ಮಬೇಕು ಎಂದು ಗೃಹ ಸಚಿವರು ಹೇಳಿದ್ದಾರೆ. ಹೀಗೆ ಮಾಡಿದರೆ ಅದು ಭಾರತದ ಐಕ್ಯತೆಯನ್ನು ಸಾಧಿಸುತ್ತದೆ ಎಂದೂ ಅವರು ಭಾವಿಸಿದ್ದಾರೆ.

‘ಒಂದು ದೇಶ, ಒಂದು ಭಾಷೆ’ ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯ ವಾಕ್ಯವೂ ಆಗಿದ್ದು, ಬಹುಶಃ 2025ಕ್ಕೆ ಅದು ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುವ ಹೊತ್ತಿಗೆ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡುವುದು ಇವರೆಲ್ಲರ ಗುರಿ ಎಂದು ತೋರುತ್ತದೆ. ಕೇಂದ್ರ ಸರಕಾರದ ಇವತ್ತಿನ ಧೋರಣೆಗಳನ್ನು ನೋಡಿದರೆ ಈ ಕೆಲಸ ಅವರಿಗೆ ಅಸಾಧ್ಯವಾದದ್ದೇನೂ ಅಲ್ಲ. ಕನ್ನಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಜನಪ್ರತಿನಿಧಿಗಳನೇಕರು ಕನ್ನಡವನ್ನೇ ಬಲಿಗೊಟ್ಟು ಹಿಂದಿಯ ಪರವಾಗಿ ನಿಲ್ಲುತ್ತಿರುವುದು, ಹಾಗೂ ಕೇಂದ್ರ ಸರಕಾರಕ್ಕೆ ಹೆದರಿ ಪತರಗುಟ್ಟುವುದನ್ನು ಗಮನಿಸಿದರೆ, ಈ ಕೆಲಸ ಇನ್ನೂ ಬೇಗ ಆಗಬಹುದೆಂದು ತೋರುತ್ತದೆ.

ಒಂದು ವೇಳೆ ಹಿಂದಿ ರಾಷ್ಟ್ರಭಾಷೆಯಾದರೆ ಸಹಜವಾಗಿಯೇ 2011ರ ಜನಗಣತಿಯಲ್ಲಿ ದಾಖಲಾಗಿರುವ 19,569 ತಾಯ್ನುಡಿಗಳು ಕೀಳರಿಮೆಯಿಂದ ನರಳಿ ನಿಧಾನವಾಗಿ ಸಾಯುತ್ತವೆ. ಇದರಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ 40 ಭಾಷೆಗಳಿವೆ, ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ 60 ಭಾಷೆಗಳಿವೆ, ಹತ್ತು ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ 122 ಭಾಷೆಗಳಿವೆ. ಸಂವಿಧಾನದ ಮನ್ನಣೆ ಪಡೆಯಲು ಹೋರಾಡುತ್ತಿರುವ ಭಾಷೆಗಳ ಸಂಖ್ಯೆ 99. ಈ ಭಾಷೆಗಳನ್ನು ಸಬಲೀಕರಣಗೊಳಿಸಲು ಕೇಂದ್ರದ ಹತ್ತಿರಯಾವ ಯೋಜನೆಗಳೂ ಇಲ್ಲ.

ಮಾನ್ಯ ಗೃಹಮಂತ್ರಿಗಳಿಗೆ ಅದರ ಕಡೆಗೆ ಗಮನಕೊಡಲು ಸಮಯವೂ ಇಲ್ಲ. ಜನರೂ ಕೂಡಾ ಭಾಷೆಗಳ ಸಾವಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲವಾಗಿರುವುದರಿಂದ ಸರಕಾರಕ್ಕೆ ಭಾಷೆಗಳೊಡನೆ ಚೆಲ್ಲಾಟವಾಡುವುದು ಸುಲಭವಾಗಿದೆ. 2011ರ ಜನಗಣತಿಯಲ್ಲಿ ಸಂಸ್ಕೃತವನ್ನು ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ 24,821 ಆಗಿದ್ದರೂ ಕೇಂದ್ರ ಸರಕಾರದ ಭಾಷಾ ಸಂಬಂಧಿ ಯೋಜನೆಗಳಲ್ಲಿ ಸಂಸ್ಕೃತಕ್ಕೆ ಪ್ರಥಮ ಸ್ಥಾನ ಲಭಿಸುತ್ತದೆ. ಆದರೆ, 50 ಲಕ್ಷಕ್ಕೂ ಹೆಚ್ಚು ಜನ ಮಾತಾಡುವ ತುಳುವನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಲು ಮನಸಿಲ್ಲ. ಎಲ್ಲ ಭಾಷೆಗಳು ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿ ಬಂದರೆ, ಹಿಂದಿ ಗೃಹ ಇಲಾಖೆಯಡಿಯಲ್ಲಿದೆ. ನಿಜಕ್ಕೂ ಇದೊಂದು ಭಯಾನಕ ಸನ್ನಿವೇಶ. ಭಾಷೆಗಳು ಮತ್ತು ಅದರೊಂದಿಗೇ ಬೆಳೆದು ಬಂದಿರುವ ತತ್ವಶಾಸ್ತ್ರಗಳು ಸಾವಿನತ್ತ ಹೆಜ್ಜೆ ಹಾಕುತ್ತಿರುವ ಕರುಣಾಜನಕ ಸ್ಥಿತಿಯಿದು.

ಹಿಂದಿಯೇತರ ರಾಜ್ಯಗಳೆಲ್ಲ ಒಂದಾಗಿ, ರಾಷ್ಟ್ರಿಯ ವೇದಿಕೆಯೊಂದನ್ನು ಕಟ್ಟಿಕೊಂಡು, ಹಿಂದಿ ಹೇರಿಕೆಯ ವಿರುದ್ಧ ಹೋರಾಡುತ್ತಲೇ, ರಾಷ್ಟ್ರಿಯ ಭಾಷಾ ನೀತಿಯೊಂದನ್ನು ರೂಪಿಸಿಕೊಳ್ಳಲು ಸಮರ್ಥರಾದರೆ ಭಾರತಕ್ಕೊಂದು ಭವಿಷ್ಯವಿದೆ.

ಹಿಂದಿ ಹೇರಿಕೆಗೆ ಸಂಬಂಧಿಸಿದ ಮತ್ತಷ್ಟು ಲೇಖನಗಳನ್ನು ಓದಲುHindi Impositionಮೇಲೆ ಕ್ಲಿಕ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT