ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ: ಕಷ್ಟದ ರಾಗಗಳ ಇಷ್ಟದ ಗುರು ದಿವಂಗತ ಪಂಡಿತ್ ರಾಜಶೇಖರ ಮನಸೂರ

ಅಕ್ಷರ ಗಾತ್ರ

ಕಷ್ಟದ ರಾಗಗಳನ್ನು ಸುಲಭವಾಗಿ ಹೇಳುತ್ತ, ಸಂಗೀತ ಕಲಿಕೆ ಕಬ್ಬಿಣದ ಕಡಲೆಯಲ್ಲ ಎಂದು ತಿಳಿಸಿದ ಪಂ. ರಾಜಶೇಖರ ಮನಸೂರ ಅಪ್ರತಿಮ ಸಂಗೀತ ಕಲಾವಿದರಾಗಿದ್ದರು. ಸಂಗೀತದ ಗಂಧ–ಗಾಳಿಯೂ ಇಲ್ಲದ ನನಗೆ ಸಂಗೀತ ಕಲಿಸಿದ ಮಹಾನ್‌ ಗುರು ಅವರು. ನಾನು ಅವರಲ್ಲಿ ಸಂಗೀತ ಕಲಿತಿದ್ದೇ ಒಂದು ಕಥೆ. ಅವರ ಬಳಿ ನಾನು ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದೆ. ಆ ವೇಳೆ, ಅವರ ತಂದೆ ಪಂಡಿತ್‌ ಮಲ್ಲಿಕಾರ್ಜುನ ಮನಸೂರ ಅವರ ‘ಮೈ ಜರ್ನಿ ಇನ್‌ ಮ್ಯೂಸಿಕ್‌’ ಆತ್ಮಕಥನವನ್ನು ಕನ್ನಡಕ್ಕೆ ಅನುವಾದಿಸುವ ಅವಕಾಶ ದೊರಕಿತ್ತು. ಅದನ್ನು ‘ರಸಯಾತ್ರೆ’ ಹೆಸರಲ್ಲಿ ಅನುವಾದಿಸಿದ್ದೆ.

ಅದಕ್ಕೆ ಪ್ರತಿಯಾಗಿ ಏನು ಬೇಕು ಎಂದು ಕೇಳಿದಾಗ, ‘ಅನುವಾದ ಮಾಡಲು ಅವಕಾಶ ನೀಡಿದ್ದೇ ನನ್ನ ಭಾಗ್ಯ’ ಎಂದಿದ್ದೆ. ‘ಅನುವಾದಿಸಿದ್ದಕ್ಕೆ ಪ್ರತಿಯಾಗಿ ನಾನೊಂದು ರಾಗ ಕಲಿಸುತ್ತೇನೆ’ ಎಂದು ಸಂಗೀತ ಕ್ಷೇತ್ರಕ್ಕೆ ಕರೆ ತಂದರು. ಆಗ ನನಗೆ 44 ವರ್ಷ.

ಸಂಗೀತ ಕಾರ್ಯಕ್ರಮ ಇದ್ದಾಗಲೆಲ್ಲ ಪಂ. ರಾಜಶೇಖರ ಅವರು ಧಾರವಾಡ, ಹುಬ್ಬಳ್ಳಿಗೆ ಬರುತ್ತಿದ್ದರು. ನಮ್ಮ ಮಾವನವರಿಗೆ ಪರಿಚಿತರು.ಹುಬ್ಬಳ್ಳಿಯಲ್ಲಿರುವ ನಮ್ಮ ಮನೆಯಲ್ಲಿಯೇ ತಂಗುತ್ತಿದ್ದರು. ಅವರು ಬಂದ ಸುದ್ದಿ ತಿಳಿದು ಸಂಗೀತಾಸಕ್ತರು ಮನೆಗೆ ಬಂದು ಅವರಲ್ಲಿ ಸಂಗೀತ ಕಲಿಯುತ್ತಿದ್ದರು. ಕ್ಲಿಷ್ಟಕರ ರಾಗಗಳನ್ನು ಸರಳವಾಗಿ, ಮನಮುಟ್ಟುವಂತೆ ಹಾಡುವ ಅವರ ಶೈಲಿ ನಿಜಕ್ಕೂ ಅದ್ಭುತ.

ತಂದೆಯಿಂದ ಕೇಳಿ, ಕೂತು ಅವರು ಸಂಗೀತವನ್ನು ಮನದಟ್ಟು ಮಾಡಿಕೊಂಡಿದ್ದರು. ಸಂಗೀತ ಹಾಡುವುದಷ್ಟೇ ಅಲ್ಲ, ಅದರ ಕುರಿತು ಚಿಂತನೆ, ಮನನ ಮಾಡುತ್ತಲೇ ಇರುತ್ತಿದ್ದರು. ರಾಗ, ಲಯ, ತಾಳಗಳ ಬಗ್ಗೆ ಗಹನವಾದ ಚಿಂತನೆ ಅವರೊಳಗೆ ಮೌನವಾಗಿಯೇ ನಡೆಯುತ್ತಿತ್ತು. ಹಾಗಾಗಿಯೇ ಅವರು ಮಾತಿಗಿಂತ ಮೌನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು.

ಸಂಗೀತದ ಮೂಲ ಅರಿತರೆ ಕಲಿಕೆಗೆ ಅನುಕೂಲವೆಂದು ಕೆಲವರು ಸಂಗೀತ ಕಲಿಸುವಾಗ ರಾಗ, ಧಾಟಿ, ಸಂವಾದಿ ಕುರಿತು ಪಾಠ ಮಾಡುತ್ತಾರೆ. ಆದರೆ, ನನ್ನ ಗುರುಗಳು ಎಂದಿಗೂ ಶಿಷ್ಯರಿಗೆ ಪಾಠ ಮಾಡಿಲ್ಲ. ಪ್ರಾಯೋಗಿಕ ಕಲಿಕೆ ಮೂಲಕ ಸಂಗೀತ‌ ಹೇಳಿಕೊಟ್ಟು, ಅದನ್ನು ಆಸ್ವಾದಿಸುತ್ತ ಕಲಿಯುವಂತೆ ಮಾಡುತ್ತಿದ್ದರು. ಉದಾಹರಣೆಗೆ ಶುದ್ಧ ಗಂಧಾರ, ತೀವ್ರ ಗಂಧಾರದ ಬಗ್ಗೆ ಹೇಳುವುದಕ್ಕಿಂತ, ಅದು ಎಷ್ಟರ ಮಟ್ಟಿಗೆ ಶುದ್ಧ, ತೀವ್ರತೆ ಇರಬೇಕು ಎನ್ನುವುದನ್ನು ಹಾಡಿಯೇ ತಿಳಿಸುತ್ತಿದ್ದರು. ಅವರು ಸ್ವರದ ವಜನ ತಿಳಿಸುವ ಕ್ರಮವನ್ನು ಎಂದಿಗೂ ಮರೆಯಲು‌ ಸಾಧ್ಯವಿಲ್ಲ.

ವೇದಿಕೆ ಮೇಲೆ ಹಾಡುವಂತೆಯೇ, ಮನೆಯಲ್ಲಿ ಹಾಗೂ ಶಿಷ್ಯರಿಗೆ ಕಲಿಸುವಾಗಲು ಅಷ್ಟೇ ಗಂಭೀರವಾಗಿ ಹಾಡುತ್ತಿದ್ದರು. ಸಂಗೀತ ಅವರ ನರ ನಾಡಿಗಳಲ್ಲಿ ಹಾಸು ಹೊಕ್ಕಾಗಿತ್ತು. ಅವರು ಕಲಿಸುವ ರೀತಿಯೇ ಆಪ್ತವಾಗಿರುತ್ತಿತ್ತು. ಜನಪ್ರಿಯತೆಗೆ ಹಾಡುತ್ತಿಯೋ, ಆತ್ಮತೃಪ್ತಿಗೋ ಎಂದು ಕೇಳುತ್ತಿದ್ದರು. ದೇವರನ್ನು ಸಂಗೀತದಲ್ಲಿ ಯಾವಾಗ ನೋಡುತ್ತಿಯೋ ಆವಾಗ ನಿನಗೆ ಸಂಗೀತ ಸಾಕ್ಷಾತ್ಕಾರ ಆಗುತ್ತದೆ ಎಂದು ಅವರು ಹೇಳಿರುವ ಮಾತು ಬಹುದೊಡ್ಡ ಜ್ಞಾನ.

ಜೈಪುರ್-ಅತ್ರೌಲಿ ಘರಾಣಾ ಸಂಗೀತದ ವಿಶೇಷವೆಂದರೆ ಅಪರೂಪದ, ಅಪ್ರಚಲಿತ ಹಾಗೂ ಸಂಕೀರ್ಣ ರಾಗಗಳ ಖಜಾನೆ. ಇಂಥ ರಾಗಗಳ ಕಲಿಕೆ ಕಠಿಣ ಎಂಬುದು ಅನೇಕರ ಅಭಿಪ್ರಾಯ. ಆದರೆ, ಗುರುಗಳು ಈ ಅನವಟ ರಾಗಗಳನ್ನು ಲೀಲಾಜಾಲವಾಗಿ ಸುಲಭ ಎನಿಸುವ ಹಾಗೆ ಕಲಿಸುತ್ತಿದ್ದರು. ಅವರೊಬ್ಬ ಮಾಂತ್ರಿಕನಂತೆ ಈ ರಾಗಗಳನ್ನು ಅರ್ಥ ಮಾಡಿಸಿ ಕಲಿಸುತ್ತಿದ್ದರು. ಸಂಕೀರ್ಣ ರಾಗಗಳನ್ನು ಹೊಸ ಮನುಷ್ಯರಂತೆ ನೋಡಬೇಕು ಎನ್ನುತ್ತಿದ್ದರು. ಜೋಡ್-ರಾಗ ಎನ್ನುವ ಶಬ್ದದ ಬಳಕೆ ಸರಿಯಾದದ್ದಲ್ಲ ಎಂದು ಅವರು ಅಭಿಪ್ರಾಯಪಡುತ್ತಿದ್ದರು. ಅದು ಎರಡು ರಾಗಗಳ‌ ಮಿಶ್ರಣ ಅಲ್ಲ, ಬದಲಾಗಿ ಅದ್ವಿತೀಯ ಸಂಯೋಗ. ಆ ರಾಗದ ಅಪ್ಪ-ಅಮ್ಮನ ಹುಡುಕಾಟ ವ್ಯರ್ಥ. ಈ ಸಂಯೋಗ ಪ್ರಕ್ರಿಯೆ ಹೊಸ ರಾಗದ ಹುಟ್ಟಿಗೆ ಕಾರಣವಾಗಿರುವುದರಿಂದ ಆ ಹೊಸರಾಗಕ್ಕೆ ಆ ವಿಶಿಷ್ಟ ಅನನ್ಯತೆಯನ್ನು ಕೊಟ್ಟಾಗ ಮಾತ್ರ ಅದು ಪ್ರಸ್ತುತಿಯಲ್ಲಿ ಅರಳುತ್ತದೆ ಎನ್ನುತ್ತಿದ್ದರು.

ಗುರುಗಳು ಒಮ್ಮೆ ಹೇಳಿದ ಕಥೆ. ಇಬ್ಬರು ಸಂಗೀತಗಾರರು ನಾ ಹೆಚ್ಚು, ತಾ ಹೆಚ್ಚು ಎಂದು ಜಗಳವಾಡಲು ಪ್ರಾರಂಭಿಸಿದರು. ಬಗೆಹರಿಯದಾದಾಗ ಶಿವನ ಬಳಿ ನಿರ್ಣಯಿಸಲು ಬೇಡಿಕೊಂಡರು. ಶಿವನು ಒಬ್ಬನನ್ನು ಎತ್ತಿ ತನ್ನ ಕಿವಿಯಲ್ಲಿ ಸಿಕ್ಕಿಸಿ, ಇನ್ನೊಬ್ಬನನ್ನು ತನ್ನ ಇನ್ನೊಂದು ಕಿವಿಯಲ್ಲಿ ಸಿಕ್ಕಿಸಿಕೊಂಡ. ಅವರಿಬ್ಬರೂ ಇನ್ನೂ ಶಿವನ ಕಿವಿಯಲ್ಲಿ ಹಾಡುತ್ತಲೇ ಇದ್ದಾರೆ ಎಂದು ಗುರುಗಳು ನಗುತ್ತ ಹೇಳುತ್ತಿದ್ದರು. ಇಂತಹ ಕತೆಯ‌ ಮೂಲಕ ಕಲಿಯಬೇಕಾದ್ದೇನೆಂದರೆ ಸಂಗೀತ ವಿದ್ಯೆ ಎಂಬುದು ಮಾಡುವ ಕೆಲಸ, ಮಾತಾಡುವವರದ್ದಲ್ಲ (ಏ ವಿದ್ಯಾ ಕರನೇವಾಲೋಂಕಾ ಕಾಮ್ ಹೈ,‌ ಬಾತ್ ಕರನೇವಾಲೋಂಕಾ ನಹೀ). ಸಾಧನೆ ಪ್ರಾರ್ಥನೆಯಂತೆ ನಿರಂತರವಾಗಿರಬೇಕು. ಘರಾಣಾದ ಪರಿಶುದ್ಧತೆಯನ್ನು ಉಳಿಸಿಕೊಳ್ಳಬೇಕು. ಬಂದಿಶ್‌ ಎನ್ನುವುದು ಬೀಜ ಮಂತ್ರ. ಪ್ರತಿ ಬಾರಿಯ ಪುನರಾವರ್ತನೆಯೂ ನಾದಬ್ರಹ್ಮನ ಹತ್ತಿರ ಕರೆದೊಯ್ಯುತ್ತದೆ ಎನ್ನುತ್ತಿದ್ದರು.

‘ಸಂಗೀತ ಕಲಾವಿದ ಎಂದಿಗೂ ಜನಪ್ರಿಯತೆ ಹಿಂದೆ ಹೋಗಬಾರದು. ಅವನು ರಾಗ, ಲಯ, ತಾಳಗಳ ಮೂಲಕ ಪ್ರಸ್ತುತಿಪಡಿಸುವ ಸಂಗೀತ ಸಹೃದಯರಿಗೆ ಆತ್ಮತೃಪ್ತಿ ನೀಡುವಂತಿರಬೇಕು. ಯಾವಾಗ ಕೇಳುಗ ತಲೆದೂಗುತ್ತಾನೋ ಅದೇ ಅವನಿಗೆ ಸಿಗುವ ಬಹುದೊಡ್ಡ ಸಮ್ಮಾನ’ ಎನ್ನುವ ಅವರ ಮಾತು ಕಿವಿಯಲ್ಲಿ ಈಗಲೂ ಅನುರಣಿಸುತ್ತದೆ. ಅವರು ಸಂಗೀತವಷ್ಟೇ ಅಲ್ಲ, ಶಿಷ್ಯರಿಗೆ ಬದುಕಿನ ಮೌಲ್ಯದ ಬಗ್ಗೆಯೂ ಸಾಕಷ್ಟು ಮಾರ್ಗದರ್ಶನ ನೀಡಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತ, ಎಲ್ಲರೊಂದಾಗಿರುತ್ತಿದ್ದರು.

ಜನಪ್ರಿಯವಲ್ಲದ ಗೌರಿ, ಬಸಂತಿ ಕಾನಡ ರಾಗಗಳನ್ನು ಕೇಳುಗರಿಗೆ ಉಣಬಡಿಸಬೇಕು ಎನ್ನುತ್ತಿದ್ದರು. ಈಗ ನಾದಗಳೊಂದಿಗೆ ಲೀನವಾಗಿದ್ದಾರೆ, ಅದೂ ನಮ್ಮನ್ನೆಲ್ಲ ಬಡವರನ್ನಾಗಿ ಮಾಡಿ.

ನಿರೂಪಣೆ: ನಾಗರಾಜ್‌ ಬಿ.ಎನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT