ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋತಿಗುಡ್ಡದಲ್ಲಿ ಹೊಸ್ತೋಟ ಮಂಜುನಾಥ ಭಾಗವತರ ‘ಅಶ್ವತ್ಥಧಾಮ’

Last Updated 5 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಮೋತಿಗುಡ್ಡವು ಉತ್ತರ ಕನ್ನಡದ ಅತಿ ಎತ್ತರದ ಶಿಖರ. ಸಮುದ್ರಮಟ್ಟಕ್ಕಿಂತ ಸುಮಾರು 3,200 ಅಡಿಗಳಷ್ಟು ಮೇಲಿರುವ ತುದಿಯೀಗ ‘ಅಶ್ವತ್ಥಧಾಮ’ವಾಗಿದೆ. ‘ಯಕ್ಷಋಷಿ’ ಎಂದೇ ಪ್ರಸಿದ್ಧರಾದ ಹೊಸ್ತೋಟ ಮಂಜುನಾಥ ಭಾಗವತ ಅವರ ನೆನಪಿಲ್ಲಿ ಈಗ ಚಿರಸ್ಥಾಯಿ ಆಗಿದೆ.

ಅಂಕೋಲಾ ತಾಲ್ಲೂಕಿನ ಈ ಗುಡ್ಡವು ಭಾಗವತರಿಗೆ ಅತ್ಯಂತ ನೆಚ್ಚಿನ ತಾಣವಾಗಿತ್ತು. ಹುಟ್ಟೂರು ಶಿರಸಿಯಾಗಿದ್ದರೂ ತಮ್ಮ ಜೀವನದ ಕೊನೆಯ 20 ವರ್ಷಗಳನ್ನು ಇಲ್ಲೇ ಕಳೆದಿದ್ದರು. ಇಲ್ಲೊಂದು ಎರಡು–ಮೂರು ಶತಮಾನಗಳಷ್ಟು ಹಳೆಯದಾದ ಅಶ್ವತ್ಥ ಮರವಿದೆ. ಅದರ ಕೆಳಗೆ ಕುಳಿತು ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ಇದೇ ಜಾಗದಲ್ಲಿ 250ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳನ್ನು ಬರೆದು ಸಾಂಸ್ಕೃತಿಕ ಪರಂಪರೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದರು.

ಸುತ್ತಲೂ ದಟ್ಟವಾದ ಕಾಡು ವ್ಯಾಪಿಸಿದೆ. ಶಿಖರಕ್ಕೆ ಬರಲು ರಸ್ತೆಯೂ ಅಷ್ಟೇ ದುರ್ಗಮವಾಗಿದೆ. ಆದರೂ ಅವರು ಅದೇ ಮಾರ್ಗದಲ್ಲಿ ಓಡಾಡುತ್ತಿದ್ದರು. ಒಮ್ಮೆಯೂ ಬೇಸರಿಸದೇ ಮಳೆ, ಬಿಸಿಲು, ಚಳಿ ಎಂದು ಭಾವಿಸದೇ ಬೆಟ್ಟವನ್ನು ಹತ್ತಿಳಿಯುತ್ತಿದ್ದರು. ದೈವದತ್ತವಾಗಿ ತಮಗೆ ಬಂದ ಕಲೆಯನ್ನು ಆಸಕ್ತರಿಗೆ ಧಾರೆ ಎರೆಯುತ್ತಿದ್ದರು. ಯಕ್ಷ ವಿಶ್ವಕೋಶ, ಅರ್ಥಗಾರಿಕೆ, ಕುಣಿತ, ಮದ್ದಳೆ, ಚಂಡೆ, ಮುಖವರ್ಣಿಕೆ, ರಂಗಸ್ಥಳ, ವೇಷಭೂಷಣ... ಹೀಗೆ ಯಕ್ಷಗಾನದ ಎಲ್ಲ ರಂಗಗಳನ್ನೂ ಮೈತುಂಬಿಕೊಂಡಿದ್ದರು. ಅದನ್ನೇ ಜೀವಿಸುತ್ತಿದ್ದರು.

2020ರ ಜನವರಿ 7ರಂದು ತಮ್ಮ 80ನೇ ವಯಸ್ಸಿನಲ್ಲಿ ಅವರು ನಿಧನರಾದ ಬಳಿಕ ಆ ತಾಣದ ಬಗ್ಗೆ, ಯಕ್ಷಗಾನದ ಮೇರು ಗುರುವಿನ ನೆನಪು ಶಾಶ್ವತಗೊಳಿಸುವ ಕುರಿತು ಅಭಿಮಾನಿಗಳಲ್ಲಿ ಚರ್ಚೆಗಳು ಶುರುವಾದವು. ಅಧಿಕೃತವಾಗಿ ಕೆಲಸಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಪರಿಸರ ಬರಹಗಾರ, ಭಾಗವತರ ಅಭಿಮಾನಿ ಶಿವಾನಂದ ಕಳವೆ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಕಾರವಾರದ ವಸಂತಕುಮಾರ ಕತಗಾಲ ಹಾಗೂ ಮೋತಿಗುಡ್ಡದ ಗ್ರಾಮಸ್ಥರು ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಂಡು ಕಾರ್ಯ ಪೂರ್ಣಗೊಳಿಸಿದರು. ಮಕರ ಸಂಕ್ರಾಂತಿಯ ದಿನವಾದ ಜ.14ರಂದು ಭಾಗವತರ ಪುಣ್ಯತಿಥಿಯೂ ಆಗಿತ್ತು. ಅಂದೇ ಈ ತಾಣವನ್ನು ಲೋಕಾರ್ಪಣೆ ಮಾಡಿದ್ದು ವಿಶೇಷವಾಗಿತ್ತು.

‘ಭಾಗವತರ ನೆನಪನ್ನು ಅಜರಾಮರವಾಗಿಸಲು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಶ್ವತ್ಥಧಾಮ ಅಭಿವೃದ್ಧಿಗೆ ಶಾಸಕಿ ರೂಪಾಲಿ ನಾಯ್ಕ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಊರಿನ ಜನತೆ, ಭಾಗವತರ ಅಭಿಮಾನಿಗಳ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ’ ಎನ್ನುತ್ತಾರೆ ಗ್ರಾಮಸ್ಥ ಭಾಸ್ಕರ ಹೆಗಡೆ.

‘ಅಶ್ವತ್ಥಧಾಮ’ದಲ್ಲಿ ಏನೇನಿದೆ?

‘ಅಶ್ವತ್ಥಧಾಮ’ವನ್ನು ಪ್ರವೇಶಿಸುತ್ತಿದ್ದಂತೆ ಹೊಸ್ತೋಟ ಮಂಜುನಾಥ ಭಾಗವತ ಅವರ ಅತ್ಯಾಕರ್ಷಕ ಪುತ್ಥಳಿ ಕಣ್ಮನ ಸೆಳೆಯುತ್ತದೆ. ಕಾರ್ಕಳದ ಪ್ರಸಿದ್ಧ ಶಿಲ್ಪಕಲಾ ಶಿಕ್ಷಕ ಗುಣವಂತೇಶ್ವರ ಭಟ್ ಇದರ ಶಿಲ್ಪಿ.

ಅದರ ಪಕ್ಕದಲ್ಲೇ ಇರುವ ಅಶ್ವತ್ಥ ಮರವು ಇಡೀ ಯಕ್ಷಗಾನ ರಂಗಕ್ಕೇ ‘ಆಮ್ಲಜನಕ’ ಪೂರೈಕೆಯ ಕೇಂದ್ರವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಅದರ ಕಟ್ಟೆಯನ್ನು ಸುಸಜ್ಜಿತಗೊಳಿಸಿ ಚಾವಣಿ ನಿರ್ಮಿಸಬೇಕು ಎನುವುದು ಭಾಗವತರ ಇಚ್ಛೆಯಾಗಿತ್ತು. ಆ ನಿಟ್ಟಿನಲ್ಲಿ ಅವರು ಪ್ರಯತ್ನವನ್ನೂ ಆರಂಭಿಸಿದ್ದರು. ಆದರೆ, ಅಷ್ಟರಲ್ಲಿ ಅವರು ನಿಧನರಾದರು. ಅವರ ಬಯಕೆಯಂತೆ ಕಾರ್ಯ ನಿರ್ವಹಿಸಿದ ಅಭಿಮಾನಿಗಳು, ಕಟ್ಟೆ ನಿರ್ಮಿಸಿ, ತಗಡಿನ ಚಾವಣಿ ಅಳವಡಿಸಿದ್ದಾರೆ.

ಸಮೀಪದಲ್ಲಿರುವ ಕುಟೀರವು ಮಂಜುನಾಥ ಭಾಗವತರಿಗೆ 20 ವರ್ಷ ಆಶ್ರಯ ನೀಡಿತ್ತು. ಅದನ್ನು ಅವರ ನೆನಪಿನಲ್ಲಿ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಅದರ ಗೋಡೆಗಳಿಗೆ ಬಣ್ಣ ಬಳಿದು, ಭಾಗವತರ ವಿವಿಧ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಕಲಾವಿದ ಸತೀಶ ಯಲ್ಲಾಪುರ ಹಾಗೂ ಸಂಗಡಿಗರು ಭಾಗವತರ ರೇಖಾಚಿತ್ರಗಳನ್ನು ಗೋಡೆಗಳಲ್ಲಿ ಬರೆದು ಕುಟೀರಕ್ಕೆ ಮತ್ತಷ್ಟು ರಂಗು ನೀಡಿದ್ದಾರೆ.

ಭಾಗವತರ ದೈನಂದಿನ ಬಳಕೆಯ ವಸ್ತುಗಳನ್ನು, ಅವರ ಹಸ್ತಪ್ರತಿಗಳನ್ನು ಕಾಪಿಡಲಾಗಿದೆ. ಅವರಿಗೆ ಸಂದಾಯವಾದಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದ ಅಕಾಡೆಮಿ ಪುರಸ್ಕಾರ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಪುರಸ್ಕಾರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಶ್ವತ್ಥ ಮರದ ಅಡಿಯಲ್ಲಿ ಭಾಗವತರು ಧ್ಯಾನ ಮಾಡಲು ನಿರ್ಮಿಸಿದ್ದ ಪೀಠವನ್ನು ಸುಸ್ಥಿತಿಗೆ ತರಲಾಗಿದೆ. ಅಶ್ವತ್ಥಧಾಮದ ಪ್ರದೇಶವನ್ನು ಸಮತಟ್ಟು ಮಾಡಲಾಗಿದೆ. ಭಾಗವತರ ಪರಿಚಯ, ಸಾಧನೆಯನ್ನು ಬಿಂಬಿಸುವ ಶಿಲಾಫಲಕವನ್ನೂ ಅಳವಡಿಸಲಾಗಿದೆ. ಈ ಎಲ್ಲ ಬದಲಾವಣೆಗಳ ಮೂಲಕ ಮೋತಿಗುಡ್ಡವೀಗ ಯಕ್ಷಗಾನಪ್ರಿಯರ ಪಾಲಿಗೆ ಆರಾಧನಾ ಸ್ಥಳವಾಗಿ ಮಾರ್ಪಟ್ಟಿದೆ.

ಎತ್ತರಕ್ಕೇರಿದಷ್ಟೂ ಸಣ್ಣವನೆಂಬ ಅರಿವು

‘ನೀವ್ಯಾಕೆ ಯಾವಾಗಲೂ ಎತ್ತರದ ಬೆಟ್ಟವೇರುತ್ತೀರಿ ಎಂದು ಮಂಜುನಾಥ ಭಾಗವತರಿಗೆ ಕೇಳಿದ್ದೆ. ಅದಕ್ಕವರು, ಗುಡ್ಡವನ್ನೇರಿದಾಗ ತಾನು ಎಷ್ಟು ಗಿಡ್ಡ ಎಂದು ಅರಿವಾಗುತ್ತದೆ ಎಂದಿದ್ದರು. ಮನುಷ್ಯ ಎಷ್ಟೇ ಮೇಲೇರಿದರೂ ತಾನೆಷ್ಟು ಸಣ್ಣವನು ಎಂಬುದನ್ನು ಮರೆಯಬಾರದು ಎಂಬುದು ಅವರ ಚಿಂತನೆಯಾಗಿತ್ತು ’ ಎಂದು ಅವರೊಂದಿಗಿನ ಒಡನಾಟದ ಸವಿಯನ್ನು ಹಂಚಿಕೊಂಡವರು ಶಿವಾನಂದ ಕಳವೆ.

‘ಮೋತಿಗುಡ್ಡದಂಥ ಜಾಗಗಳು ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. 175 ವರ್ಷಗಳ ಹಿಂದೆ ಅಲ್ಲಿಯ ಭೈರವೇಶ್ವರ ಭಟ್ ಎಂಬುವವರು ಅಶ್ವತ್ಥ ಮರಕ್ಕೆ ಉಪನಯನ ಮಾಡಿದ್ದರು. ಈಗ ಮರಕ್ಕೆ ಸುಮಾರು 230 ವರ್ಷಗಳಾಗಿವೆ. ಆ ಮರವಿರುವ ಕಾರಣ ನಾವೆಲ್ಲ ಅಲ್ಲಿ ಸೇರುತ್ತಿದ್ದೇವೆ. ಭಾಗವತರೂ ಆ ಮರದ ಕಾರಣದಿಂದಲೇ ಬರುತ್ತಿದ್ದರು. ಒಂದು ಮರ ಮತ್ತು ಮನುಷ್ಯನ ಒಡನಾಟ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಇದು ಉದಾಹರಣೆ’ ಎಂದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT