ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ‘ಹಡ್ಸನ್‌’ ಚರ್ಚ್‌

ಪರಂಪರೆ
Last Updated 23 ಡಿಸೆಂಬರ್ 2018, 19:51 IST
ಅಕ್ಷರ ಗಾತ್ರ

ಒಂದೆಡೆ ಬನ್ನಪ್ಪ ಪಾರ್ಕ್‌, ಇನ್ನೊಂದೆಡೆ ಕಬ್ಬನ್‌ ಉದ್ಯಾನ, ಸಮೀಪದಲ್ಲಿಯೇ ಕಂಠೀರವ ಕ್ರೀಡಾಂಗಣ ಹಾಗೂ ಕಾರ್ಪೋರೇಷನ್‌ ಕಚೇರಿಗೆ ಅಂಟಿಕೊಂಡಿರುವುದೇ ಹಡ್ಸನ್‌ ವೃತ್ತ. ಈ ವೃತ್ತಕ್ಕೆ ಹಡ್ಸನ್‌ ಹೆಸರು ಬರಲು ಅಲ್ಲಿರುವ ಹಡ್ಸನ್‌ ಚರ್ಚ್‌ ಕಾರಣ. ಇದು ನಗರದ ಪಾರಂಪರಿಕ ಚರ್ಚ್‌ಗಳಲ್ಲಿ ಒಂದು.

ಕ್ರಿ.ಶ 1904ರಲ್ಲಿ ಆರಂಭವಾದ ಈ ಚರ್ಚ್‌ಗೆ ಮಿಷನರಿ ಹಡ್ಸನ್‌ ಅವರ ಹೆಸರಿಡಲಾಗಿದೆ. ಶತಮಾನೋತ್ಸವ ಕಂಡಿರುವ ಈ ಚರ್ಚ್‌ 114 ವರ್ಷಗಳನ್ನು ಪೂರೈಸಿದೆ. ಇಲ್ಲಿ ಆರಾಧನೆ, ಪ್ರಾರ್ಥನೆ, ಗೀತ ಗಾಯನಗಳೆಲ್ಲವೂ ನಡೆಯುವುದು ಕನ್ನಡದಲ್ಲಿಯೇ ಎಂಬುದು ವಿಶೇಷ. ಕನ್ನಡ ಮಾತೃಭಾಷಿಕ ಕ್ರೈಸ್ತರೇ ಈ ಚರ್ಚ್‌ನ ಸದಸ್ಯರಾಗಿರುವುದು ವಿಶೇಷ. ಇದನ್ನು ಕನ್ನಡದ ಮಾತೃ ಚರ್ಚ್‌ ಎಂದೂ ಕರೆಯಲಾಗುತ್ತದೆ.

ಈ ಚರ್ಚ್‌ ನಿರ್ಮಾಣಕ್ಕೂ ಮೊದಲು ಇದರ ಸಮೀಪ ಕೆರೆ, ಹೊಲ, ತೋಟಗಳಿದ್ದವು. ಇಲ್ಲಿನ ಸುಮಾರು ಮೂರು ಎಕರೆ ಪ್ರದೇಶವನ್ನು 1900ರ ಜನವರಿ 19ರಂದು ₹ 2,000ಕ್ಕೆ ವೆಸ್ಲಿಯನ್‌ ಮಿಷನರಿ ಜೆ.ಎ.ವೇನ್ಸ್‌ ಖರೀದಿಸಿದರು. ಅಲ್ಲಿ ಸುಮಾರು ₹25 ಸಾವಿರ ವೆಚ್ಚದಲ್ಲಿ ಕ್ಲಾಸಿಕಲ್‌ ಮತ್ತು ಗಾಥಿಕ್‌ ವಾಸ್ತುಶಿಲ್ಪ ಮಾದರಿಯಲ್ಲಿ ಸರಳವೂ, ಸುಂದರವೂ ಆದ ಚರ್ಚ್‌ ಅನ್ನು ಕಲ್ಲುಗಳಿಂದ ನಿರ್ಮಿಸಲಾಯಿತು.

ಪ್ರಸಂಗ ಪೀಠ, ಪವಿತ್ರ ಭೋಜನದ ಮೇಜು, ಪಾರಾಯಣ ಪೀಠ ಇತ್ಯಾದಿ ತೇಗದ ಮರದ ಉಪಕರಣಗಳನ್ನು ಕರೂರಿನಿಂದ ತಂದಿದ್ದಾಗಿವೆ. ದೇವಾಲಯದ ಒಳಭಾಗದಲ್ಲಿ ಇರುವ ಅಮೃತಶಿಲೆಯ ಕಲ್ಲುಗಳನ್ನು ವೇಮ್ಸ್‌ ಅಮ್ಮನವರ ಜ್ಞಾಪಕಾರ್ಥವಾಗಿ ಹಾಕಿಸಲಾಗಿದೆ. ಚರ್ಚ್‌ನ ಗಂಟೆಗಾಗಿ ದಾನಿಯೊಬ್ಬರು ₹ 500 ದಾನ ನೀಡಿದ್ದರು. ಚರ್ಚ್‌ನಲ್ಲಿ ಉಪಯೋಗಿಸಲಾದ ಪ್ರಥಮ ‘ಆರ್ಗನ್‌’ ವಾದ್ಯವನ್ನು ಡಾರ್ಲಿಂಗ್‌ ಎಂಬ ಭಕ್ತರು ಕೊಡುಗೆಯಾಗಿ ನೀಡಿದ್ದರು ಎಂದು ಮಾಹಿತಿ ನೀಡುತ್ತಾರೆ ಹಡ್ಸನ್‌ ಸ್ಮಾರಕ ಚರ್ಚ್‌ನ ಗೌರವ ಕಾರ್ಯದರ್ಶಿ ಪಿ. ಸತೀಶ್‌.

ನಗರ್ತಪೇಟೆಯಿಂದ ಶಿಫ್ಟ್‌: ಕ್ರಿ.ಶ 1859ರಲ್ಲಿ ನಗರ್ತಪೇಟೆಯಲ್ಲಿ (ಹಿಂದಿನ ಗಾಣಿಗರಪೇಟೆ) ಕನ್ನಡ ಕ್ರೈಸ್ತರು ‘ಗುಡಿಹಟ್ಟಿ’ ಎಂಬ ಹೆಸರಿನ ಸಣ್ಣ ಆರಾಧನಾ ಕೇಂದ್ರ ಕಟ್ಟಿಕೊಂಡಿದ್ದರು. ಇಲ್ಲಿ ಆರಾಧನೆ ನಡೆಸುವಾಗ ಕೆಲವರಿಂದ ಅಡಚಣೆಗಳಾಗುತ್ತಿದ್ದವು. ಹೀಗಾಗಿ ಕೆಲ ಸಲ ಸೈನ್ಯದ ಕಾವಲಿನಲ್ಲಿ ಆರಾಧನೆಗಳು ನಡೆದಿದ್ದಿದೆ. ಇಲ್ಲಿ 45 ವರ್ಷಗಳವರೆಗೆ ಆರಾಧನೆ ನಡೆಯಿತು. ನಂತರ 1904ರಲ್ಲಿ ಹಡ್ಸನ್‌ ಚರ್ಚ್‌ಗೆ ಸ್ಥಳಾಂತರಗೊಂಡಿತು. ಈ ಚರ್ಚ್‌ ಅನ್ನು 1904ರ ಸೆಪ್ಟೆಂಬರ್ 25ರಂದು ಹಡ್ಸನ್‌ ಅವರ ಪುತ್ರಿ ಡಬ್ಲ್ಯು.ಎಚ್‌. ಥಾರ್ಪ್‌ ಉದ್ಘಾಟಿಸಿದರು.

ಮೂರು ಪ್ರವೇಶದ್ವಾರಗಳನ್ನು ಒಳಗೊಂಡಿರುವ ಇದು ಗೋಪುರವನ್ನೂ ಹೊಂದಿದೆ. ಬಾಗಿಲುಗಳ ಮೇಲೆ ವರ್ಣರಂಜಿತ ಗಾಜಿದೆ. ಇಲ್ಲಿನ ಕಿಟಕಿ ಗಾಜುಗಳಿಗೆ ಲಂಡನ್ನಿನ ಕಲಾವಿದರು ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ರಚಿಸಿದ್ದಾರೆ. ಆಕಾಶ
ದಿಂದ ವೀಕ್ಷಿಸಿದರೆ ಚರ್ಚ್‌ ಶಿಲುಬೆಯಾಕಾರದಲ್ಲಿ ಕಂಗೊಳಿಸುತ್ತದೆ.

ಚರ್ಚ್‌ನಲ್ಲಿ ಪ್ರತಿ ಶುಕ್ರವಾರ ಮತ್ತು ಭಾನುವಾರ ಆರಾಧನೆ, ಪ್ರಾರ್ಥನೆ, ಪೂಜಾ ಕಾರ್ಯಗಳು ನಡೆಯುತ್ತವೆ. 2,500 ಕುಟುಂಬಗಳು ಚರ್ಚ್‌ನ ಸದಸ್ಯ ಕುಟುಂಬಗಳಾಗಿವೆ. ಗುಡ್‌ಫ್ರೈಡೆ, ಇಸ್ಟರ್ನ್‌, ಹಾರ್ವೆಸ್ಟ್‌ ಡೆ, ವೈಟ್‌ ಕ್ರಿಸ್‌ಮಸ್‌, ಕ್ರಿಸ್‌ಮಸ್‌, ಚರ್ಚ್‌ನ ವಾರ್ಷಿಕೋತ್ಸವವನ್ನು ಇಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ಕನ್ನಡದ ಭಜನಾ ಮಂಡಳಿಯೇ ಇದ್ದು, ಅದರಲ್ಲಿ 35 ಸದಸ್ಯರಿದ್ದಾರೆ.

ಸಾಮಾಜಿಕ ಕಾರ್ಯಗಳು: ‌ ಕನ್ನಡದ ಮಾತೃ ಚರ್ಚ್‌ ಎಂಬ ಹಿರಿಮೆ ಹೊಂದಿರುವ ಈ ಚರ್ಚ್‌ ಇತರ ಕೆಲ ಕನ್ನಡದ ಚರ್ಚ್‌ಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದೆ. ಅಲ್ಲದೆ 65 ವಿಧವೆಯರಿಗೆ ಮಾಸಿಕ ಪಿಂಚಣಿ ಒದಗಿಸುತ್ತಿದೆ. ಜತೆಗೆ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ನೆರವು, ಆರೋಗ್ಯ ಸಮಸ್ಯೆಯಿಂದ ನರಳುತ್ತಿರುವ ಬಡವರಿಗೆ ಅಗತ್ಯ ಚಿಕಿತ್ಸೆಯನ್ನು ಚರ್ಚ್‌ ನೀಡುತ್ತಿದೆ.

ಕ್ರಿಸ್‌ಮಸ್‌ ಸಂದರ್ಭದಲ್ಲಿ 150ರಿಂದ 200 ಬಡ ಕುಟುಂಬಕ್ಕೆ ಬಟ್ಟೆ, ಬರೆ, ಉಡುಗೊರೆಯನ್ನು ನೀಡಲಾಗುತ್ತದೆ. ಪುಟಾಣಿ ಮಕ್ಕಳಿಗೆ ಬೊಂಬೆಗಳನ್ನು ನೀಡಲಾಗುತ್ತದೆ. ಸುಗ್ಗಿಹಬ್ಬ ಮತ್ತು ವೈಟ್‌ ಕ್ರಿಸ್‌ಮಸ್‌ ಅನ್ನು ವಿಶೇಷವಾಗಿ ಆಚರಿಸಿ ಸಂಭ್ರಮಿಸಲಾಗುತ್ತದೆ.

ಹಡ್ಸನ್‌ ಕುರಿತು

ಇಂಗ್ಲೆಂಡಿನ ಮಿಷನರಿ ಜೋಶಾಯ ಹಡ್ಸನ್‌ ಭಾರತಕ್ಕೆ ಬಂದದ್ದು 1864ರಲ್ಲಿ. ಮದ್ರಾಸಿನ ಮೂಲಕ ಬೆಂಗಳೂರಿಗೆ ಬಂದಾಗ ಅವರಿಗಿನ್ನೂ 24 ವರ್ಷ. ಅಲ್ಲಿಂದ 33 ವರ್ಷ ಅವರು ಕರ್ನಾಟಕದ ಜನರ ಮತ್ತು ಕನ್ನಡದ ಸೇವೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲ ಕ್ರಾಂತಿಕಾರಿ ಕೆಲಸಗಳು ಹಡ್ಸನ್‌ ಅವರಿಂದ ಆಗಿವೆ. ಆಗ ಮೈಸೂರು, ಬೆಂಗಳೂರಿನಲ್ಲಿ ವಿದ್ಯಾ ಸಂಸ್ಥೆಗಳಿದ್ದರೂ ಅವೆಲ್ಲಾ ಮದ್ರಾಸ್‌ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದವು. ಹಾಗಾಗಿ ಪರೀಕ್ಷೆಗಾಗಿ ಮದ್ರಾಸಿಗೆ ಹೋಗಬೇಕಾಗಿತ್ತು. ಇದನ್ನು ತಪ್ಪಿಸಿ, ಮೈಸೂರು ರಾಜ್ಯದಲ್ಲಿಯೇ ಪರೀಕ್ಷೆಗಳನ್ನು ನಡೆಸಲು ಇವರು ಏರ್ಪಾಡು ಮಾಡಿದರು.

ಇವರು ಹೆಣ್ಣು ಮಕ್ಕಳಿಗಾಗಿ ಬೆಂಗಳೂರಿನ ಸಿದ್ದೀಕಟ್ಟೆ ಬಳಿ (ಕೆ.ಆರ್‌. ಮಾರ್ಕೆಟ್‌) ಬಾಲಕಿಯರ ಪಾಠಶಾಲೆ ಆರಂಭಿಸಿದರು. ಅಲ್ಲಿ 354 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದರು. ಶಿವಮೊಗ್ಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರವನ್ನು ಆರಂಭಿಸಿದ ಕೀರ್ತಿ ಹಡ್ಸನ್‌ ಅವರಿಗೆ ಸಲ್ಲುತ್ತದೆ. ಮೈಸೂರಿನಲ್ಲಿ ಹಾರ್ಡ್ವಿಕ್‌ ಕಾಲೇಜು (ಈಗ ಹಾರ್ಡ್ವಿಕ್‌ ಹೈಸ್ಕೂಲ್‌) ಸ್ಥಾಪನೆ ಸೇರಿದಂತೆ ಹಲವು ಮಹತ್ವದ ಕಾರ್ಯಗಳನ್ನು ಅವರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT